ಖರ್ಗೆ: ಅನುಭವ ಮೂಲದ ರಾಜಕಾರಣ

Update: 2024-04-29 11:51 GMT

ಕಳೆದ ಒಂದು ಒಂದೂವರೆ ತಿಂಗಳಿಂದ ಭಾರತ ಬಹುವಾಗಿ ಚರ್ಚೆಗೊಳಗಾಗುತ್ತಿದೆ. ಇದಕ್ಕೆ ಕಾರಣ ಚುನಾವಣೆ. ಚುನಾವಣೆಯೆಂದರೆ ಆಗಬೇಕಾದದ್ದು ದೇಶದ ಔನ್ನತ್ಯವನ್ನು ಸಾರುವ, ದೇಶವನ್ನು ಸರ್ವ ನೆಲೆಗಳಲ್ಲಿಯೂ ಅಭಿವೃದ್ಧಿಯತ್ತ ಕೊಂಡೊಯ್ಯಬಲ್ಲವರು ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವುದು. ಅದಕ್ಕಾಗಿ ಮತದಾರರಿಗೆ ತಮ್ಮ ಪ್ರಣಾಳಿಕೆಗಳನ್ನು ಮನವರಿಕೆ ಮಾಡುವುದು. ಇದು ಸ್ವಾತಂತ್ರ್ಯೋತ್ತರ ಕಾಲದಿಂದಲೂ ನಡೆದು ಬಂದ ಸಂಪ್ರದಾಯ. ಆದರೆ ಕಳೆದ ಒಂದು ದಶಕದಲ್ಲಿ ಈ ಬಗೆಯಲ್ಲಿ ಚುನಾವಣೆ ನಡೆಯುತ್ತಿಲ್ಲ. ಜನರನ್ನು ಭಾವನಾತ್ಮಕವಾಗಿ ಬದಲಾಯಿಸಿ ವಂಚಿಸಲಾಗುತ್ತಿದೆ. ಯಾಕೆ ಈ ಭಾವುಕತೆಯ ಬಗ್ಗೆ ಮಾತನಾಡಬೇಕಾಗಿ ಬಂದಿದೆಯೆಂದರೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಈ ಪರಿಯಲ್ಲಿ ಜನರ ಭಾವನೆಗಳೊಂದಿಗೆ ಆಟವಾಡುವ ಪ್ರಕ್ರಿಯೆ ನಡೆದಿರಲೇ ಇಲ್ಲ. ಆದರೆ ಈ ಸಂದರ್ಭದಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದದ್ದೆಂದರೆ ಈ ಭಾವುಕತೆಗೆ ಬಹುಮುಖಗಳಿವೆ ಎನ್ನುವುದು. ಇಂತಹ ಬಹುಮುಖಗಳನ್ನು ಅರಿಯಬೇಕಾದರೆ ಆ ಭಾವುಕತೆಯ ಭಾಷೆಯನ್ನು ಅರಿಯಬೇಕಾಗಿದೆ.

ಐವತ್ತೈದು ವರ್ಷಗಳ ಕಾಲ ದೇಶವನ್ನಾಳಿದ ಪಕ್ಷಗಳದ್ದು ಶೂನ್ಯ ಸಾಧನೆಯೆಂದು, ಅಧಿಕಾರವನ್ನು ನೀಡಿದರೆ ಐದು ವರ್ಷದಲ್ಲಿಯೇ ಐವತ್ತು ವರ್ಷಗಳಷ್ಟು ಸಾಧನೆಯನ್ನು ಮಾಡುತ್ತೇನೆಂಬ ಭ್ರಮಾತ್ಮಕತೆಯನ್ನು ತುಂಬಿ ಅಧಿಕಾರಕ್ಕೆ ಬಂದವರು ಕಳೆದ ಒಂದು ದಶಕದಲ್ಲಿ ಭಾವನಾತ್ಮಕತೆಯನ್ನೇ ತಮ್ಮ ಬಂಡವಾಳವನ್ನಾಗಿಸಿ ಕೊಂಡಿದ್ದಾರೆ. ಕೆಲವರಂತೂ ಮೊಸಳೆ ಕಣ್ಣೀರಿನ ಮೂಲಕ ಜನರನ್ನು ಭಾವುಕ ನೆಲೆಯಲ್ಲಿ ಹಿಡಿದಿಡಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಡೊಂಗಿ ಭಾವುಕತೆಯನ್ನು ನೋಡಿದಾಗ ಸಹಜವಾಗಿಯೇ ಭಾವುಕತೆಯು ಬೆಲೆಯನ್ನು ಕಳೆದುಕೊಳ್ಳುತ್ತದೆ. ಹೀಗಾಗಿಯೇ ಇಂದು ಭಾವುಕತೆ ಎನ್ನುವುದು ಸರಿಯಾದ ಕ್ರಮದಲ್ಲಿ ಗ್ರಹಿಸಲಾಗುತ್ತಿಲ್ಲ. ಆದರೆ ಅಂತಹ ಭಾವುಕತೆಗೆ ಇನ್ನೊಂದು ಮುಖವೂ ಇದೆ ಎನ್ನುವುದನ್ನೂ ಮರೆಯಬಾರದು. ಏಕೆಂದರೆ ಭಾವುಕತೆಯ ಅರ್ಥದ ಸ್ತರಗಳು ಬಹುರೂಪತೆಯಿಂದ ಕೂಡಿದವುಗಳು. ಇದೆಲ್ಲವನ್ನೂ ಹೇಳಿಲಿಕ್ಕೆ ಕಾರಣವೂ ಇದೆ. ಅದೆಂದರೆ ಕೆಲ ದಿನಗಳ ಹಿಂದೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಅಧ್ಯಕ್ಷರು, ಇಂಡಿಯಾದ ಸಂಚಾಲಕರಾದ ಮಲ್ಲಿಕಾರ್ಜುನ ಖರ್ಗೆಯವರು ನುಡಿದ ಭಾವುಕ ನುಡಿಗಳು. ಅವರ ಭಾವುಕದ ನುಡಿಗಳನ್ನು ಮೇಲೆ ಹೇಳಿದಂತಹ ಭಾವುಕತೆಗಿಂತ ಭಿನ್ನವಾಗಿ ನೋಡಬೇಕಾಗಿದೆ. ಮೊದಲಿಗೆ ಅವರು ಹೇಳಿದ ಮಾತನ್ನು ನೋಡೋಣ, “ನಾನು ಕಳೆದ ಐವತ್ತು ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ನಿರಂತರ ಜನಸೇವೆ ಮಾಡುತ್ತ ಬಂದಿದ್ದೇನೆ. ತಾವುಗಳು ಕೇಳಿದರೂ ಕೇಳದಿದ್ದರೂ ಕಲ್ಯಾಣ ಕರ್ನಾಟಕವನ್ನೊಳ ಗೊಂಡಂತೆ ಕರ್ನಾಟಕದಾದ್ಯಂತ ಅಭಿವೃದ್ಧಿ ಕೆಲಸ ಮಾಡಿಕೊಂಡು ಬಂದವನು. ತಮ್ಮ ಅಮೂಲ್ಯ ಮತವನ್ನು ನೀಡುವ ಮೂಲಕ ಆಶೀರ್ವಾದ ಮಾಡಿ ರಾಧಾಕೃಷ್ಣ ಅವರನ್ನು ಗೆಲ್ಲಿಸಬೇಕು. ತಾವು ಹಾಗೆ ಮಾಡದಿದ್ದರೆ ನಾನು ನಿಮ್ಮ ಹೃದಯದಲ್ಲಿ ಇಲ್ಲವೆಂದು ತಿಳಿಯುತ್ತೇನೆ. ಅಥವಾ ನಿಮ್ಮ ಹೃದಯವನ್ನು ಗೆಲ್ಲಲು ನನ್ನಿಂದ ಇಲ್ಲಿಯವರೆಗೆ ಸಾಧ್ಯವಾಗಲಿಲ್ಲವೆಂದು ಭಾವಿಸುತ್ತೇನೆ. ಮತವನ್ನು ನೀಡದಿದ್ದರೂ ಪರವಾಗಿಲ್ಲ. ಕೊನೆ ಪಕ್ಷ ನಾನು ಸತ್ತ ಮೇಲೆ ಮಣ್ಣಿಗಾದರೂ ಬನ್ನಿ, ಸುಟ್ಟರೆ ಮೇಣದ ಬತ್ತಿ ಹಚ್ಚಿ, ಹÇಳಿದರೆ ಮಣ್ಣಾದರು ಹಾಕಲು ಕೋರುತ್ತೇನೆ. ಮಣ್ಣಿಗೆ ನೀವೆಲ್ಲ ಬಂದುದನ್ನು ನೋಡಿ ಎಷ್ಟು ಜನರು ಬಂದಿದ್ದಾರಪ್ಪ ಎಂಥ ಒಳ್ಳೆಯವನಿದ್ದ ಎನ್ನುವುದು ಉಳಿದವರಿಗೆ ಗೊತ್ತಾಗಲಿ” ಎಂದು ಅವರು ಕಲಬುರಗಿ ಜಿಲ್ಲೆಯ ಅಫಜಲಪುರದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತ ಹೇಳಿದ್ದು.

ಈಗ ಮತ್ತೆ ಭಾವುಕತೆಯ ವಿಚಾರದತ್ತ ಹೊರಳೋಣ. ಖರ್ಗೆಯವರ ಈ ಮೇಲಿನ ಮಾತುಗಳು ಒಳಗೊಂಡಿರುವ ಭಾವಕ್ಕೂ, ಅದಕ್ಕು ಮುನ್ನ ಹೇಳಿದ ಭಾವಕ್ಕೂ ತುಂಬಾ ವ್ಯತ್ಯಾಸವಿದೆ. ಖರ್ಗೆಯವರದ್ದು ಅಂತಃಕರಣದಿಂದ ಕೂಡಿದ ಮಮಕಾರದ ಭಾವುಕತೆ. ಮುಕ್ತ ಸಮಾಜದಲ್ಲಿ ಎಲ್ಲಾ ಭಾವನೆಗಳಿಗೂ ಸಮಾನ ಅರ್ಥಗಳಿರುತ್ತವೆ ಎನ್ನುವುದನ್ನು ಮೊದಲು ಅರ್ಥಮಾಡಿಕೊಂಡಾಗಲೇ ಇಂತಹ ಭಾವುಕತೆಯ ಹಿಂದಿನ ಭಾವವು ಅರ್ಥವಾಗಬಲ್ಲುದು. ಖರ್ಗೆಯವರ ಭಾವವು ಕೇವಲ ಮತವನ್ನು ಮಾತ್ರ ಪಡೆಯುವುದಾಗಿರಲಿಲ್ಲ. ಅರ್ಧ ಶತಮಾನಗಳಿಂದ ಈ ಪ್ರದೇಶದ ಅಭಿವೃದ್ಧಿಗಾಗಿ ಅವರು ದುಡಿದ ಬೆವರಿನ ಭಾಗದಂತಿತ್ತು. ಇಷ್ಟು ವರ್ಷಗಳ ಕಾಲ ಮುಗ್ಧ ಬದುಕನ್ನು ಅರ್ಥೈಸಿಕೊಂಡು ಅದರ ಏಳ್ಗೆಗಾಗಿ ಶ್ರಮಿಸಿದ್ದಕ್ಕಾಗಿ ಕೇಳಿದ ಪೋತ್ಸಾಹದಂತಹದ್ದು. ಯಾವುದೇ ಒಬ್ಬ ವ್ಯಕ್ತಿ ಒಂದು ಪ್ರದೇಶದ ಜನರ ಸರ್ವಾಂಗೀಣ ಪ್ರಗತಿಗಾಗಿ ತನ್ನ ಶಕ್ತ್ಯಾನುಸಾರ ಶ್ರಮಿಸುತ್ತಿದ್ದಾನೆಂದರೆ ಆತನಿಗೆ ಒಂದಷ್ಟಾದರೂ ಪೋತ್ಸಾಹ ಬೇಕು. ಅಂತಹ ಪೋತ್ಸಾಹ ಆತನಿಗೆ ಮಗದಷ್ಟು ಬಲ ತುಂಬುತ್ತದೆ. ಅದನ್ನೇ ಖರ್ಗೆಯವರ ಭಾವದಲ್ಲಿ ಕಾಣಬಹುದಾಗಿದೆ.

ಇಂತಹ ಭಾವ ಅವರಲ್ಲಿ ಮೂಡಿದುದು ಇಂದು ನಿನೆಯದಲ್ಲ. ಅದಕ್ಕೆ ದಶಕಗಳ ಚರಿತ್ರೆಯಿದೆ. ಇಂಥದೊಂದು ಬಹು ದೊಡ್ಡ ಯಾನದಲ್ಲಿ ಅಕ್ಷರವಂಚಿತ ಲೋಕದ ನೋವು-ನಲಿವು ಬಡತನ-ಸಿರಿತನ, ಮಾನ-ಅಪಮಾನ ಎಲ್ಲವನ್ನು ಎದುರಿಸಿದ್ದಾರೆ. ಬುದ್ಧ-ಬಸವ-ಅಂಬೇಡ್ಕರ್ ಚಿಂತನೆಗಳನ್ನೇ ಬದುಕಾಗಿಸಿಕೊಂಡ ಖರ್ಗೆ ಯವರು, ಇತರರೂ ಬದುಕಾಗಿಸಿಕೊಳ್ಳಲು ಪ್ರೇರಣೆಯನ್ನು ನೀಡಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವದ ಗುಣದಿಂದ ಬೆಳೆದ ಖರ್ಗೆಯವರು ಬಹುದೊಡ್ಡ ರಾಜಕೀಯ ಇತಿಹಾಸವಿರುವ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷದ ಅಧ್ಯಕ್ಷರಾಗಿರುವುದು ಎಂಥವರು ಹೆಮ್ಮೆ ಪಡುವಂತಹದ್ದು. ಕಳೆದ ಹದಿನೈದು ವರ್ಷಗಳಿಂದ, ಪ್ರಜಾಪ್ರಭುತ್ವ, ಸಂವಿಧಾನದ ರಕ್ಷಣೆಯಲ್ಲಿ ಜೀವ ಒತ್ತೆಯಿಟ್ಟು ಹಗಲು ರಾತ್ರಿಯೆನ್ನದೆ ದುಡಿಯುತ್ತಿದ್ದಾರೆ. ಲೋಕಸಭೆ-ರಾಜ್ಯಸಭೆ ಎರಡೂ ಸದನಗಳಲ್ಲಿ ಮಾತಾಡಿದ್ದು ಕೇಳಿದವರಿಗೆ, ಶ್ರಮ ಪಟ್ಟಿದ್ದು ನೋಡಿದವರಿಗೆ ಇದು ಮನವರಿಕೆಯಾದೀತು. ಸಂವಿಧಾನಬದ್ಧವಾಗಿ ಚುನಾಯಿತರಾದವರನೇಕರು ‘ಸಂವಿಧಾನ ಬದಲಾವಣೆಗಾಗಿಯೇ ನಾವು ಬಂದದ್ದು, ಮೀಸಲಾತಿ ರದ್ದು ಮಾಡುತ್ತೇವೆ’ ಎಂದು ಹೇಳುವವರ ವಿರುದ್ದ ಖರ್ಗೆಯವರು ಕೆಂಡಾಮಂಡಲಗೊಂಡು ಮಾತಾಡಿದ್ದು ಗಮನಿಸಿದರೆ ಎಂಥವರೂ ಮೈರೋಮಾಂಚನಗೊಳ್ಳುವಂತೆ ಮಾಡಿದೆ.

ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವವಹಿಸಿ ವಿರೋಧ ಪಕ್ಷದಲ್ಲಿದ್ದು ಮಾತಾಡಿದ ಘಟನೆಯೊಂದು ನೆನಪಿಸುವುದು ಮುಖ್ಯವೆಂದು ಭಾವಿಸಿದ್ದೇನೆ. ದೇಶಬಿಟ್ಟು ಹೋದವರ ಬಗ್ಗೆ ಆಳುವ ಪಕ್ಷದವರು ತುಚ್ಚವಾಗಿ ಮಾತನಾಡುತ್ತ ‘ಬಾಬಾಸಾಹೇಬ್ ಭಾಗನಾ ಚಹಾತೇತೆ’ ಎಂದು ಮತಾಂಧರು ಹೇಳಿದಾಗ, ‘ಬಾಬಾಸಾಹೇಬರು ಓಡಿ ಹೋಗುವವರಲ್ಲ, ಅವರು ಇಲ್ಲಿಯ ಮೂಲ ನಿವಾಸಿಗಳು, ಅವರು ಮೂಲ ಭಾರತೀಯರಾಗಿದ್ದರು, ಹಮ್ ಮೂಲ ಭಾರತೀಯ ಹೈ ಆಪ್ ಬಹಾರಸೆ ಹೈ, ನೀವೆಲ್ಲ ಹೊರಗಿನವರು’ ಎಂದು ಘರ್ಜಿಸಿದಾಗ ಲೋಕಸಭೆಗೆ ಲೋಕಸಭೆಯೇ ಬೆಚ್ಚಿಬಿದ್ದಿತ್ತು. ಇದರಿಂದ ಗೊತ್ತಾಗುತ್ತದೆ ಖರ್ಗೆ ಎಂದರೆ ದೇಶಾಭಿಮಾನಿ, ಖರ್ಗೆ ಎಂದರೆ ಅಭಿವೃದ್ಧಿ, ಖರ್ಗೆ ಎಂದರೆ ಶಿಕ್ಷಣ, ಖರ್ಗೆ ಎಂದರೆ ಸ್ವಾಭಿಮಾನ, ಖರ್ಗೆ ಎಂದರೆ ಒಬ್ಬ ಶ್ರೇಷ್ಠ ಅಂಬೇಡ್ಕರ್‍ವಾದಿ, ಬುದ್ಧ-ಬಸವ-ಅಂಬೇಡ್ಕರ್ ಚಿಂತನೆಗಳಿಂದ ಯರಕಹೊಯ್ದು ಸಿದ್ಧಗೊಂಡಿರುವ ವ್ಯಕ್ತಿತ್ವ ಖರ್ಗೆಯವರದು. ಅಂಬೇಡ್ಕರ್ ಎಂದರೆ ಇಲ್ಲಿ ಕೇವಲ ಅಂಬೇಡ್ಕರಲ್ಲ. ಅಂಬೇಡ್ಕರ್ ಒಡಲಲ್ಲಿ ಬುದ್ಧ-ಬಸವರೂ ಸೇರಿಕೊಳ್ಳುತ್ತಾರೆ. ಸಂವಿಧಾನ ನಿಷ್ಠರಾಗಿ ದೇಶವಾಸಿಗಳ ಹಿತವನ್ನು ಕಾಪಾಡಿದ, ಕಾಪಾಡುತ್ತಿರುವ ಖರ್ಗೆ ಅವರು ಹುಟ್ಟಿ ಬೆಳೆದ ನೆಲದಲ್ಲಿ ಬುದ್ಧ-ಬಸವ-ಅಂಬೇಡ್ಕರ್ ಸಮ್ಮಿಳಿತಗೊಂಡಿದ್ದಾರೆ. ಇಲ್ಲಿಯೇ ಜೈನ-ಬೌದ್ಧ, ಸಿಕ್ಖ್-ಇಸಾಯಿಗಳು ಬದುಕಿದ್ದಾರೆ. ಇಂಥ ಬಹುದೊಡ್ಡ ಪರಂಪರೆಯ ನೆಲದಿಂದ ಬಂದ ಖರ್ಗೆಯವರು ಒಬ್ಬ ಶ್ರೇಷ್ಠ ಪೇಟ್ರಿಯಾಟ್ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ.

ಮಲ್ಲಿಕಾರ್ಜುನ ಖರ್ಗೆ ಎಂದರೆ ಅಭಿವೃದ್ಧಿ:

ಮಲ್ಲಿಕಾರ್ಜುನ ಖರ್ಗೆಯವರು ಶಿಕ್ಷಣ-ಸಂಘಟನೆ-ಹೋರಾಟದಲ್ಲಿ ಮಿಂದೆದ್ದವರು. ಕ್ರೀಡಾ ಪಟುವಾಗಿ, ನ್ಯಾಯವಾದಿಯಾಗಿ ಆರ್‍ಪಿಐ, ಭೀಮಸೇನೆಗಳಲ್ಲಿ ಅಲ್ಪಕಾಲ ದುಡಿದರು. ಜನರ ಬದುಕು ಸುಂದರಗೊಳಿಸ ಬೇಕಾದರೆ ಅಧಿಕಾರ ಮುಖ್ಯವೆಂದು, ಇಂದಿರಾಜಿ, ದೇವರಾಜ ಅರಸು ಅವರನ್ನು ಆದರ್ಶ ಮಾಡಿಕೊಂಡು ಕಾಂಗ್ರೆಸ್ ಪಕ್ಷ ಸೇರುವ ಮೂಲಕ ಶಾಸಕರಾಗುತ್ತಾರೆ. ಬಸವನಗರದಲ್ಲಿ ಕನಿಷ್ಠ ರಾತ್ರಿ ಶಾಲೆಯೊಂದಾದರೂ ತೆರೆಯ ಬೇಕೆಂದು ಹಿರಿ-ಕಿರಿಯರನ್ನು, ವಾರಿಗೆಯವರನ್ನು ಕರೆದುಕೊಂಡು ಮಣ್ಣಿನ ಕೋಣಿ ನಿರ್ಮಿಸಿದ ಖರ್ಗೆಯವರು ಅದರಲ್ಲಿ ಶಾಲೆ ಪ್ರಾರಂಭ ಮಾಡಲು ಪ್ರಯತ್ನಿಸಿದರು. ಆದರೆ ಅದರಲ್ಲಿ ತೃಪ್ತಿಕರವಾದ ಫಲ ಸಿಗಲಿಲ್ಲ. ಶಾಸಕರಾದ ತಕ್ಷಣ ಶಾಲೆ ಪ್ರಾರಂಭ ಮಾಡುವ ಕನಸು ಹೊತ್ತು ಸರಕಾರದ ಶಿಕ್ಷಣ ಮಂತ್ರಿಗೆ ಭೇಟಿಯಾಗಿ ಶಾಲೆ ಪ್ರಾರಂಭ ಮಾಡಲು ವಿನಂತಿಸುತ್ತಾರೆ. ವಿಪರೀತ ನಿಯಮ ಪಾಲನೆಗಳಿಂದ ಅದು ಕೈಗೂಡುವುದಿಲ್ಲ. ಶಾಸಕನಾಗಿ ಹಣ ಮಾಡಲು ಬಂದಿಲ್ಲ, ಸಮಾಜ ಸೇವೆ ಮಾಡಲು ಶಾಲೆ ಪ್ರಾರಂಭಿಸಬೇಕೆಂದಿದ್ದೇವೆ. ಸಾಧ್ಯವಾದರೆ ಅನುಮತಿ ಕೊಡಿ ಇಲ್ಲದಿದ್ದರೆ ಬಿಡಿ ಎಂದು ಎದ್ದು ಬರುತ್ತಾರೆ. ಕೊನೆಗೂ ಮಂತ್ರಿಗಳ ಮನ ಕರಗಿ ಶಾಲೆ ಪ್ರಾರಂಭಿಸಲು ಅನು ಮತಿಸುತ್ತಾರೆ. ಶಾಲೆ ಪ್ರಾರಂಭೋತ್ಸವದ ಹಿಂದಿನ ದಿನವೇ ಪ್ರಾಥಮಿಕ ಶಿಕ್ಷಣ ಮಂತ್ರಿಯಾಗುವಂತೆ ಅರಸರಿಂದ ಆಹ್ವಾನ ಬರುತ್ತದೆ, ಹಾಗೆ ಮಂತ್ರಿಯಾದ ಖರ್ಗೆಯವರು ಶಿಕ್ಷಣ ಕ್ಷೇತ್ರದಲ್ಲಿ ಬಹು ದೊಡ್ಡ ಕ್ರಾಂತಿ ಮಾಡಿದರು. ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಲು ಇದ್ದ ಸರಕಾರಿ ತೊಡುಕುಗಳನ್ನು ಸಡಿಲಗೊಳಿಸಿದ್ದರಿಂದ ರಾಜ್ಯದಾದ್ಯಂತ ದಲಿತ-ಹಿಂದುಳಿದವರು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದರು. ದೇವರಾಜ ಅರಸರ ಸಹಕಾರದಿಂದ ತಮ್ಮ ಇಲಾಖೆಯಲ್ಲಿ ಬಾಕಿ ಉಳಿದಿದ್ದ ಬ್ಯಾಕ್‍ಲಾಗ್ ಹÅದ್ದೆಗಳನ್ನು ತುಂಬಲು ಚಾಲನೆ ಕೊಟ್ಟರು. ಆ ಕಾಲದಲ್ಲಿಯೇ 18 ಸಾವಿರ ಶಿಕ್ಷಕರನ್ನು ನೇಮಕ ಮಾಡಿದರು. ನಾನ್ ಮ್ಯಾಟ್ರಿಕ್ ಇದ್ದವರನ್ನು ಶಿಕ್ಷಕರನ್ನಾಗಿ ಮಾಡಿದ್ದಲ್ಲದೆ ಅವರಿಗೆ ಶಿಕ್ಷಕ ತರಬೇತಿ ನೀಡಿ ಪ್ರೋತ್ಸಾಹಿಸಿದರು. ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು ಬಿಸಿಲಿದೆ ಎಂದು ತಿಳಿದು ಎಪ್ರಿಲ್-ಮೇ ತಿಂಗಳಲ್ಲಿ ಶಾಲಾ ಕಾಲೇಜುಗಳ ಸಮಯ ಬದಲಾವಣೆ ಮಾಡಿದರು. ಊಳುವವನೇ ಭೂಮಿ ಒಡೆಯ ಕಾನೂನು ಜಾರಿಗೆ ತಂದರು.

ಖರ್ಗೆ ಸಾಹೇಬರು ಏನು ಮಾಡಿದ್ದಾರೆ ಎನ್ನುವವರಿಗೆ ಹೇಳಬೇಕು ಗುಲಬರ್ಗಾ ವಿಶ್ವವಿದ್ಯಾಲಯ ಪ್ರಾರಂಭಮಾಡುವಲ್ಲಿ ಶ್ರಮಿಸಿದ್ದಾರೆ. ಜಿಲ್ಲಾ ವಿಜ್ಞಾನ ಕೇಂದ್ರ ತಂದಿದ್ದಾರೆ. ಕನ್ನಡ ವಿಶ್ವವಿದ್ಯಾಲಯ ಪ್ರಾರಂಭವೇನೊ ಆಯಿತು. ತಿಂಗಳುಗಳ ಕಾಲ ಓಡಾಡಿದರೂ ಜಮೀನು ಸ್ವಾಧೀನ ಸಾಧ್ಯವಾಗಲಿಲ್ಲ. ಅದನ್ನು ಕಡಿಮೆ ಹಣದಲ್ಲಿ ಅತೀ ಕಡಿಮೆ ಅವಧಿಯಲ್ಲಿ ಜಮೀನ ಸ್ವಾಧೀನ ಪಡಿಸಿಕೊಳ್ಳುವಂತೆ ಆದೇಶ ಮಾಡಿದ್ದು ಖರ್ಗೆಯವರು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿ ಡಾ. ಚಂದ್ರಶೇಖರ್ ಕಂಬಾರ ಅವರೇ ಹೇಳಿದ್ದಾರೆ. ನೂರಾರು ಸರಕಾರಿ ಇಲಾಖೆಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ತಂದಿದ್ದಾರೆ. ಕೇಂದ್ರ ಕಾರ್ಮಿಕ ಸಚಿವರಾಗಿದ್ದಾಗ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪಿಸಿದರು. ವಿಮಾನ ನಿಲ್ದಾಣವಾಗಲು ಖರ್ಗೆಯವರು ಕಾರಣರು, ರೈಲು ಬೋಗಿಗಳ ಸಿದ್ದತಾ ಕಾರ್ಖಾನೆ, ಕಲಬುರಗಿ-ಬೀದರ ನಡುವೆ ರೈಲು ಪ್ರಾರಂಭ, ಬೃಹತ್ತಾದ ಇಎಸ್‍ಐ ಆಸ್ಪತ್ರೆಯನ್ನು ಕಲಬುರಗಿಗೆ ತಂದರು. ಪೊಲೀಸ್ ಟ್ರೈನಿಂಗ್ ಸೆಂಟರ್ ಇವುಗಳಲ್ಲದೆ ಕೇಂದ್ರ ಸರಕಾರದ ಪೆನ್ಸೆನ್ ಕಛೇರಿ ಕಲಬುರಗಿಗೆ ತಂದಿದ್ದಾರೆ. ರೈಲ್ವೆ ಮಂತ್ರಿ ಯಾಗಿ ದೇಶದಾದ್ಯಂತ ನೂರಾರು ರೈಲು ಓಡಿಸಲು ಅನುಮತಿಸಿದ್ದಾರೆ. ಕಲಬುರಗಿ, ಬೀದರದಿಂದ ಬೆಂಗಳೂರಿಗೆ ವಿಶೇಷ ರೈಲು, ಹೈದ್ರಾಬಾದ್ ಕಲಬುರಗಿ ಮೂಲಕ ಹುಬ್ಬಳಿ-ಧಾರವಾಡ ಸಂಪರ್ಕ ರೈಲು ಓಡಿಸಲು ಅನುಮತಿಸಿ ಈ ಪ್ರದೇಶದ ವ್ಯಾಪಾರ ವಹಿವಾಟು ಹೆಚ್ಚಿಸಲು ಶ್ರಮಿಸಿದ್ದಾರೆ.

ಹೈದ್ರಾಬಾದ ಕರ್ನಾಟಕಕ್ಕೆ 371 (ಜೆ):

ಮಹಾರಾಷ್ಟ್ರ-ತೆಲಂಗಾಣ ಮುಂತಾದ ರಾಜ್ಯಗಳಿಗೆ ವಿಶಿಷ್ಟ ಸ್ಥಾನ-ಮಾನಗಳನ್ನು ಸಂವಿಧಾನದ ಮೂಲಕ ದೊರಕಿಸಿ ಕೊಡಲಾಗಿತ್ತು. ಅದರಂತೆ ಹೈದ್ರಾಬಾದ್ ಕರ್ನಾಟಕದಲ್ಲಿ ವಿಶೇಷ ಸ್ಥಾನ-ಮಾನಕ್ಕಾಗಿ ಸುಮಾರು ಎರಡ್ಮೂರು ದಶಕಗಳಿಂದ ಜನ ಚಳವಳಿ ನಡೆದರೂ ಯಾರೂ 371 (ಜೆ) ಕಾನೂನು ಜಾರಿಗೆ ತರಲು ಪ್ರಯತ್ನಿ ಸಿರಲಿಲ್ಲ. ಮಲ್ಲಿಕಾರ್ಜುನ ಖರ್ಗೆಯವರು ಕೇಂದ್ರದಲ್ಲಿ ಸಚಿವರಾಗುತ್ತಿದ್ದಂತೆ ವಿಶೇಷ ಸ್ಥಾನ-ಮಾನ ಪಡೆಯುವುದಕ್ಕೆ ಜೀವ ಬಂದಿತು. ಹಟವಾದಿ, ಅಭಿವೃದ್ಧಿಯ ಹರಿಕಾರ ಖರ್ಗೆಯವರು ವಿರೋಧ ಪಕ್ಷದವರನ್ನು ಸ್ವಪಕ್ಷೀಯರನ್ನು, ಯುಪಿಎ ಆಡಳಿತದ ಬೆಂಬಲಿತ ಅಂಗ ಪಕ್ಷದ ಎಲ್ಲರನ್ನು ಭೇಟಿಯಾಗಿ ಅವರೆಲ್ಲರಿಗೂ ವಿಶೇಷ ಸ್ಥಾನ-ಮಾನದ ಅಗತ್ಯತೆಯನ್ನು ಮನವರಿಕೆ ಮಾಡಿ ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಮೂಲಕ ಹೈದ್ರಾಬಾದ್ ಕರ್ನಾಟಕದ ಜನರ ಬಹÅದಿನಗಳ ಕನಸನ್ನು ನನಸು ಮಾಡುವಲ್ಲಿ ಪ್ರಧಾನ ಪಾತ್ರ ವಹಿಸಿದವರು ಖರ್ಗೆಯವರು. ಪ್ರಸ್ತುತ ವಿಶೇಷ ಸ್ಥಾನ-ಮಾನ ಜಾರಿಯಾಗಿರುವುದರಿಂದ ಎರಡು ಸಾವಿರಕ್ಕಿಂತ ಹೆಚ್ಚು ವೈದ್ಯಕೀಯ ಶೀಟುಗಳು ಕಲ್ಯಾಣ ಕರ್ನಾಟಕ ದವರಿಗೆ ದೊರೆಯುತ್ತಿವೆ. ಮೊದಲು 200 ಸೀಟುಗಳು ಸಿಗುವುದು ದುರ್ಲಭವಾಗಿತ್ತು. ಈಗ ನಾಲ್ಕು ಸಾವಿರಕ್ಕೂ ಹೆಚ್ಚು ಇಂಜಿನೀಯರಿಂಗ್ ಸೀಟುಗಳು ದೊರೆಯುತ್ತಿವೆ. ಈ ಮೊದಲು ನಾಲ್ಕು ನೂರು ಸೀಟುಗಳು ಸಿಗುವುದು ದುರ್ಲಭವಾಗಿತ್ತು. ಯಾವುದೇ ಸರಕಾರಿ ನೌಕರಿಗಳಲ್ಲಿ ಕಲ್ಯಾಣನೆಲದವರಿಗೆ 70ಕೂ ಹೆಚ್ಚು ದೊರೆತರೆ, ಇನ್ನುಳಿದ ಪ್ರದೇಶದಗಳಲ್ಲಿ ಸರಕಾರಿ, ಅರೆಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಸಿಟುಗಳು ಮೀಸಲಿವೆ. ನೌಕರಿಯಲ್ಲಿ ಮೀಸಲು ಜಾರಿ ಯಾಗಿದೆ. ಹಾಗಂತ ಈ ಕಾನೂನು ಜಾರಿಯಾಗಲು ನಾನೊಬ್ಬನೇ ಕಾರಣನಲ್ಲ. ಈ ಪ್ರದೇಶದ ಹೋರಾಟಗಾರರ ಶ್ರಮವೂ ಇಲ್ಲದಿಲ್ಲವೆಂದು ಖರ್ಗೆಯವರೇ ಮರೆಯದೆ ಹೇಳುತ್ತಾರೆ. ಇದು ಅವರ ಮುತ್ಸದ್ದಿತನ ವೆಂದೇ ಹೇಳಬೇಕು. ಖರ್ಗೆಯವರ ಜೀವನ ಕಥನ ಬರೆಯಲು ಅವರನ್ನು ಕಾಣಲು ದೆಹಲಿಗೆ ಹೋಗಬೇಕಾಗಿ ಬಂತು. ಖರ್ಗೆಯವರನ್ನು ಕಂಡಾಗ ಸಂವಿಧಾನದ ಪುಸ್ತಕ ತೆರೆದು 371 (ಜೆ) ಅಡಕ ಗೊಂಡಿರುವ ಪುಟ ತೋರಿಸಿ ‘ಬಾಬಾಸಾಹೇಬರ ಸಂವಿಧಾನ ಇರುವವರೆಗೆ ನಾನು ಮಾಡಿದ ಕೆಲಸ ಶಾಸ್ವತವಾಗಿ ಇರುತ್ತದೆ ನೋಡು’ ಎಂದು ಮಗುವಿನಂತೆ ನನಗೆ ತೋರಿ ಸಿದರು. ಆಗ ಅಲ್ಲಿದ್ದವರ ಕಣ್ಣು ಒದ್ದೆಯಾಗಿದ್ದವು.

ಗುರುಮಿಠಕಲ್ ಕ್ಷೇತ್ರದ ಅಭಿವೃದ್ಧಿ ಮಾಡಿದ್ದನ್ನು ಕಣ್ಣಾರೆ ಕಂಡಿದ್ದೇವೆ. ನಾವು ವಿದ್ಯಾರ್ಥಿಗಳಾಗಿದ್ದಾಗ ಕ್ಷೇತ್ರ ಅಭಿವೃದ್ಧಿ ಮಾಡುವ ನಾಯಕರೆಂದರೆ ಬಂಗಾರಪ್ಪ-ಖರ್ಗೆ ಎಂದು ಜನರಾಡಿದ್ದು ಕೇಳಿದ್ದೇವೆ. ಸೊರಬದ ಅಭಿವೃದ್ಧಿಗೆ ಬಂಗಾರಪ್ಪ, ಗುರುಮಠಕಲ್ ಅಭಿವೃದ್ಧಿಗೆ ಖರ್ಗೆ, ಈ ಇಬ್ಬರ ಬಗ್ಗೆ ಹೊಗಳಿದ್ದು ಕೇಳಿದ್ದೇವೆ. ಲಂಕೇಶ ರವಿ ಬೆಳಗೆರಿಯವರು ಗುರುಮಠಕಲ್ ಕ್ಷೇತ್ರದ ಜನರಿಗೆ ಖರ್ಗೆ ತಂದ ಸೌಲಭ್ಯಗಳು ಬಳಸಿಕೊಳ್ಳುವ ಸಮಯ ವಿಲ್ಲವೆಂದು ಅವರ ಪತ್ರಿಕೆಗಳಲ್ಲಿ ಬರೆದದ್ದು ಓದಿದ್ದೇವೆ. ಅಭಿವೃದ್ಧಿಯ ಹರಿಕಾರರಾಗಿ ರಾಜಕೀಯವನ್ನು ಸೇವೆ ಯಂದು ದುಡಿದ ಖರ್ಗೆಯವರು ಎಂದೂ ಜಾತಿ-ಧರ್ಮಧಾರಿತ ರಾಜಕೀಯ ಮಾಡಿದ್ದು ಚರಿತ್ರೆಯಲ್ಲಿ ಧಾಖಲಾಗಿಲ್ಲವೆನ್ನುವುದು ವಿಶೇಷವಾಗಿದೆ.

ಬಾಬಾಸಾಹೇಬರು ಸ್ಥಾಪಿಸಿದ್ದು ಪೀಪಲ್ಸ ಎಜ್ಯುಕೇಷನ್ ಸೊಸಾಯಿಟಿ. ಅದರಂತೆ ಖರ್ಗೆಯವರು ಕರ್ನಾಟಕ ಫೀಪಲ್ಸ್ ಶಿಕ್ಷಣ ಸಂಸ್ಥೆ ಪ್ರಾರಂಭಮಾಡಿ ಕಳೆದ ಮೂವತ್ತು-ನಲ್ವತ್ತು ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರದಾಸೋಹ ಮಾಡಿದ್ದಾರೆ. ತಮ್ಮ ಶಿಕ್ಷಣ ಸಂಸ್ಥೆ ಶಾಲಾ ಕಾಲೇಜುಗಳಿಗೆ ಬುದ್ಧ, ಆನಂದ, ಸಿದ್ಧಾರ್ಥ, ಅಂಬೇಡ್ಕರ್, ಶಾಮಸುಂದರ್ ಮುಂತಾದ ಮಹನೀಯರ ಹೆಸರು ಇಡುವ ಮೂಲಕ ಬಹುದೊಡ್ಡ ಕ್ರಾಂತಿ ಮಾಡಿದ್ದಾರೆ. ಅವರೆಲ್ಲರ ತತ್ವ ಆದರ್ಶಗಳನ್ನು ಬಿತ್ತುವ ಮೂಲಕ ದೇಶದ ಏಕತೆ ಸಮಗ್ರತೆಯನ್ನು ಬೆಂಬಲಿ ಸಿದ್ದಾರೆ. ಜಗತ್ತಿನ ಶಾಂತಿಗಾಗಿ ಶ್ರಮಿಸಿದ ಬುದ್ಧನನ್ನು ಬಾಬಾಸಾಹೇಬರು ಮರಳಿ ಭಾರತಕ್ಕೆ ತಂದರು. ಅದೇ ರೀತಿ ಖರ್ಗೆಯವರು ಬೃಹತ್ತಾದ ಬುದ್ಧ ವಿಹಾರ ನಿರ್ಮಿಸಿ ಗುಡಿಯಿಂದ ಹೊರಗಿರುವ ಬಹುದೊಡ್ಡ ಸಮುದಾಯ ಕ್ಕೊಂದು ಆರಾಧನಾಕೇಂದ್ರವಾಗಿ ಪರಿವರ್ತಿಸಿದರು. ಸಿದ್ದಾರ್ಥ ಬುದ್ಧವಿಹಾರದ ಅಡಿಯಲ್ಲಿ ಅಂತಾರಾಷ್ಟ್ರೀಯ ಪಾಲಿ ಮತ್ತು ಸಂಸ್ಕøತ ತೌಲನಿಕ ಅಧ್ಯಯನ ಕೇಂದ್ರವನ್ನು ಸ್ಥಾಪನೆ ಮಾಡಿದ ಕೀರ್ತಿ ಖರ್ಗೆಯವರಿಗೆ ಸಲ್ಲುತ್ತದೆ. ಈ ಸಂಸ್ಥೆಯ ಅಡಿಯಲ್ಲಿ ಬುದ್ಧ ಮತ್ತು ಆತನ ಧಮ್ಮ, ಕನ್ನಡ ಪಾಲಿ ನಿಘಂಟು ಈತರಹದ ಅನೇಕ ಮಹತ್ವದ ಗ್ರಂಥಗಳ ಪ್ರಕಟಣೆ ಕಾಯಕ ನಡೆದಿದೆ. ಮಲ್ಲೇಪುರಂ ಜಿ. ವೆಂಕಟೇಶ, ಜಗದೀಶ ಕೊಪ್ಪ ಮುಂತಾದ ವಿದ್ವಾಂಸರು ಶ್ರಮಿಸುತ್ತಿದ್ದಾರೆ. ಬುದ್ಧ ವಿಹಾರವನ್ನು ಹಣ ಮಾಡಲು ಕಟ್ಟಿಲ್ಲ, ಮೌಢ್ಯತೆ ಬಿತ್ತಲು ನಿರ್ಮಿಸಿಲ್ಲ. ಜಗತ್ತಿಗೆ ಶಾಂತಿ ಸಾರಿದ ಬುದ್ಧನ ತತ್ವಗಳು ಜನರು ಪುನರಪಿ ಅನುಸರಿಸಲಿ ಎಂದು ವಿಹಾರ ನಿರ್ಮಿಸಲು ಶ್ರಮಿಸಿದ್ದೇನೆ ಎಂದು ಹೇಳಿದ್ದು ಕಿವಿಯಾರೆ ಕೇಳಿಸಿ ಕೊಂಡಿದ್ದೇನೆ.

ರಾಜ್ಯ, ರಾಷ್ಟ ಮಟ್ಟದಲ್ಲಿ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ದುಡಿಮೆ ಮಾಡಿ ಸಾಧಿಸಿದ ಸಾಧಕನನ್ನೂ ಕಲಬುರಗಿಯ ಮತದಾರರು ಕಳೆದ ಬಾರಿ ಸೋಲಿಸಿದರು. ಸೋಲು-ಗೆಲುವು ಪ್ರಜಾಪ್ರಭುತ್ವದ ಸೌಂದರ್ಯ ಹೌದು! ಹಾಗಂತ ಅಭಿವೃದ್ಧಿ ಮಾಡಿದವರನ್ನೇ ಸೋಲಿಸುವುದೆ! ಅಭಿವೃದ್ಧಿ ಮಾಡದ, ಜನರಿಗಾಗಿ ದುಡಿಯದವರನ್ನು ಗೆಲಿಸಿದ್ದು ಯಾವ ನ್ಯಾಯ? ನಾನು ಏನೆಲ್ಲ ಮಾಡಿರುವೆ ಅಷ್ಟಕ್ಕೂ ನಿಮ್ಮ ಹೃದಯದಲ್ಲಿ ಇಲ್ಲವೆಂದರೆ ಮತ ಹಾಕಬೇಡಿ. ಕಳೆದ ಐವತ್ತು ವರ್ಷಗಳಿಂದ ನಿರಂತರ ಜನರಿಗಾಗಿ ದುಡಿದ್ದೇನೆ, ಅದಕ್ಕಾಗಿ ಕನಿಷ್ಟಪಕ್ಷ ನನ್ನ ಮಣ್ಣಿಗಾದರು ಬನ್ನಿ ಎಂದು ನೊಂದು ನುಡಿದ ಮಾತದು. ನಾವು ನೋಡಿದ ಹಾಗೆ ಖರ್ಗೆ ಅವರು ಕಣ್ಣೀರು ಹಾಕಿದ್ದು ಗುರುಮಠಕಲ್ ಕ್ಷೇತ್ರ ಬಿಟ್ಟು ಬರುವಾಗ, ಕಂಬಾಲಪಲ್ಲಿ ದಹನವಾದಾಗ, ಧರ್ಮಸಿಂಗ್ ಅವರು ನಿಧನ ಹೊಂದಿದಾಗ ಮಾತ್ರ. ಖರ್ಗೆಯವರಿ ನೋಡಲು ಕಾಣುವುದೇ ಬೇರೆ, ಇರುವುದೇ ಬೇರೆ. ಅಜಾನುಬಾಹು ಮನುಷ್ಯನ ಒಳಗಡೆ ಅಷ್ಟೇ ಆಳೆತ್ತರದ ಪ್ರೀತಿ-ಮಮತೆ ಇರುವುದು ಅವರ ಹತ್ತಿರ ಇದ್ದವರಿಗೆ ಮಾತ್ರ ಗೊತ್ತಾಗುತ್ತದೆ. ಖರ್ಗೆಯವರು ಕೇವಲ ರಾಜಕಾರಣಿಯಲ್ಲ. ಅವರೊಬ್ಬ ಶಿಕ್ಷಣ ತಜ್ಞ, ರಾಜ ನೀತಿತಜ್ಞ, ಸಮಾಜ ವಿಜ್ಞಾನಿ, ಕಾನೂನು ಪಂಡಿತರಾಗಿದ್ದಾರೆ. ಕನ್ನಡ, ಉರ್ದು, ಹಿಂದಿ, ಇಂಗ್ಲಿಷ್, ಮರಾಠಿ ಭಾಷೆ ಗಳನ್ನು ಬಲ್ಲವರಾಗಿದ್ದಾರೆ. ಖರ್ಗೆಯವರ ಕಣ್ಣೀರು ಹಾಕಿದರು ಎಂದಾಗ ನನಗೆ ನೆನಪಾಗುವುದು ಬಾಬಾಸಾಹೇಬರ ಬದುಕು. ಮಕ್ಕಳನ್ನು ಹಾಗೂ ಹೆಂಡತಿಯನ್ನು ಕಳಕೊಂಡಾಗ, ಬರೋಡಾ ಮಹಾರಾಜರ ಆಸ್ಥಾನದಲ್ಲಿ ಕೆಲಸ ಮಾಡುವಾಗ ಬಾಡಿಗೆ ಮನೆಯಿಂದ ಹೊರಹಾಕಿದಾಗ ದುಃಖಿಸಿದರು ಎನ್ನುವುದನ್ನು ಓದಿದ್ದೇವೆ. ಒಮ್ಮೆ ಬಾಬಾ ಸಾಹೇಬರು ಮನೆಯಲ್ಲಿ ಹೇರಳವಾಗಿ ದುಃಖಿಸುತ್ತಿದ್ದರಂತೆ. ಆಗ ರತ್ತು ಕೇಳಿದರಂತೆ ಸಾಹೇಬ್ ತಾವು ಎಂದೂ ದುಃಖಿಸಿದವರಲ್ಲ ಈಗೇಕೆ ಈ ಪರಿಯಾಗಿ ದುಃಖಿಸುತ್ತಿದ್ದೀರಿ? ಎಂದು. ‘ನೋಡು ರತ್ತು ಹೋರಾಟವೆಂಬ ರಥ ಎಳೆದು ತಂದು ಇಲ್ಲಿ ನಿಲ್ಲಿಸಿದ್ದೇನೆ. ನಮ್ಮವರಿಗೆ ಹೇಳು, ಎಳೆಯುವ ಶಕ್ತಿಯಿದ್ದರೆ ಹೋರಾಟದ ರಥ ಎಳೆಯಲಿ, ಆಗದಿದ್ದರೆ ಅದನ್ನು ಅಲ್ಲೇ ಇರುವಂತೆ ಬಿಡಲು ಹೇಳು ಆದರೆ, ಹಿಂದೆ ತಳ್ಳುವ ಕೆಲಸ ಮಾಡಬಾರದು’ ಎಂದರಂತೆ. ಅದೇ ರೀತಿ ಖರ್ಗೆಯವರ ಭಾವದಲ್ಲೂ ಅದೇ ಅಡಗಿದೆ. ಮತದ ಮಹತ್ವ ಶೋಷಿತ ದಮನಿತ ಜನ ಅರ್ಥ ಮಾಡಿಕೊಳ್ಳುತ್ತಿಲ್ಲ. ಅದನ್ನು ಅರ್ಥೈಸಲು ಅವರ ಹೃದಯ ಮಿಡಿದಿದೆ ಎಂದು ಯಾಕೆ ಭಾವಿಸಬಾರದು?

ಸಂವಿಧಾನವನ್ನು ಬದಲಾಯಿಸುವವರ ಜೊತೆಗೆ ಇರುವ ಶೋಷಿತ ಸಮುದಾಯ ತಮ್ಮ ಅಮೂಲ್ಯ ಮತವನ್ನು ಅವರಿಗೇ ನೀಡುವ ಮೂಲಕ ತಮ್ಮ ಹಕ್ಕನ್ನು, ಮೀಸಲಾತಿಯನ್ನು ಕಳೆದುಕೊಳ್ಳಲು ಕಾರಣರಾಗುತ್ತಿದ್ದಾರೆ. ಇದೆಂಥ ವಿಪರ್ಯಾಸ. ಸಂವಿದಾನ ಜಾರಿಗೆ ಮಾಡಿದ ಸಂದರ್ಭದಲ್ಲಿ ಬಾಬಾಸಾಹೇಬರು ಲೋಕಸಭೆಗೆ ಹೋಗುತ್ತಿರಬೇಕಾದರೆ ಆಕಾಲದ ನಾಯಕರಾದ ಜಿ.ಬಿ. ಕೃಪಲಾನಿ ಎದುರಾಗುತ್ತಾರೆ. ಬಾಬಾಸಾಹೇಬರು ಹರ್ಷ ಚಿತ್ತರಾಗಿರುವುದನ್ನು ಕಂಡು ‘ಏನ್ ಅಂಬೇಡ್ಕರ್ ಇಂದು ತುಂಬಾ ಹರ್ಷಚಿತ್ತರಾಗಿದ್ದೀರಿ, ಇದಕ್ಕೆಲ್ಲ ಏನು ಕಾರಣ’ ಎಂದು ಕೇಳಿದರಂತೆ. ಆಗ ಬಾಬಾಸಾಹೇಬರು ‘ನೋಡಿ ಕೃಪಲಾನಿಯವರೆ ಭಾರತೀಯ ಪರಂಪರೆಯಲ್ಲಿ ರಾಜಾ ರಾಣಿಯ ಹೊಟ್ಟೆಯಿಂದ ಹುಟ್ಟಿ ಬರುತ್ತಿದ್ದ. ಆದರೀಗ ನಾನು ಅದನ್ನು ಬದಲಿಸಿದ್ದೇನೆ. ಈಗ ರಾಜಾ ಮತಪೆಟ್ಟಿಗೆ ಯಿಂದ ಹುಟ್ಟುತ್ತಿದ್ದಾನೆ. ಸಾಮಾನ್ಯ ಪ್ರಜೆ ತನ್ನ ಅಧಿಕಾರ ಚಲಾಯಿಸುವ ಮೂಲಕ ಸ್ವತಂತ್ರ ನಿರ್ಧಾರ ತೆಗೆದು ಕೊಳ್ಳುವ ಹಕ್ಕು ಪಡೆದಿದ್ದಾನೆ’ ಎಂದು ಹೇಳಿದರು. ಹೌದು ಅಂಬೇಡ್ಕರ್ ನೀವೇನೊ ಸಂವಿದಾನ ರಚಿಸಿ ಕಾನೂನು ತಂದಿದ್ದೀರಿ ನಿಜ. ನಿಮಗ ಗೊತ್ತಿಲ್ಲ. ನಿಮ್ಮ ಜನ ಆಸೆಬುರುಕರು, ಮಾರಾಟಕ್ಕೆ ಯೋಗ್ಯರು; ಅವರನ್ನು ನಾವು ಖರೀದಿ ಮಾಡಿ ನಮ್ಮ ಸರಕಾರ ರಚಿಸಿ ನಮ್ಮ ಉದ್ದೇಶಗಳನ್ನು ಸಾಧಿಸಿಕೊಳ್ಳುತ್ತೇವೆ’ ಎಂದರಂತೆ. ‘ಹೌದು ನನ್ನ ಜನ ಆಸೆ ಬುರುಕರು, ಹಸಿವಿನಿಂದ ಬಳಲಿದವರು ಹೌದು, ಅವರು ಮಾರಾಟವಾಗುವುದು ನಿಜ, ಆದರೆ ಯಾವತ್ತು ನನ್ನ ಜನ ಮತದ ಮಹತ್ವ ಅರ್ಥ ಮಾಡಿಕೊಳ್ಳುತ್ತಾರೊ ಆವತ್ತು ನೀವೆಲ್ಲ ಬೀದಿ ಮೇಲೆ ಇರುತ್ತಿರಿ ಎಂಬ ನಂಬಿಕೆ ನನಗಿದೆ’ ಎಂದು ಅಂಬೇಡ್ಕರ್ ನುಡಿದಿದ್ದರು.

ಮಲ್ಲಿಕಾರ್ಜುನ ಖರ್ಗೆಯವರು ಕೆಲವೇ ಕೆಲವು ಹಿರಿಯ ರಾಜಕಾರಣಿಗಳಲ್ಲಿ ಒಬ್ಬರು. ದೇಶದ, ಶೋಷಿತರ-ಮಹಿಳೆಯರ, ಕಾರ್ಮಿಕರ ಈ ಮುಂತಾದವರ ಹಿತಕ್ಕಾಗಿ ಹಗಲಿರುಳು ಚಿಂತಿಸುವ ಹಿರಿಯ ಜೀವ. ಮತದ ಮಹತ್ವ ಅರಿತು ಆ ಮೂಲಕ ಸಂವಿಧಾನ ಉಳಿಸಿಕೊಳ್ಳಬೇಕು. ಸಂವಿಧಾನ ಉಳಿದರೆ, ಪ್ರಜಾಪ್ರಭುತ್ವ ಉಳಿಯುತ್ತದೆ. ಪ್ರಜಾಪ್ರಭುತ್ವ ಗಟ್ಟಿಯಾದರೆ ನಿಮ್ಮೆಲ್ಲರ ಬದುಕು ಹಸನಾಗುತ್ತದೆ ಎಂಬುದನ್ನು ಭಾವುಕರಾಗಿ ಹೇಳಿದರಲ್ಲಿ ತಪ್ಪೇನಿದೆ! ಪ್ರಜಾಪ್ರಭುತ್ವದ ಭಾರತವೆಂದರೆ ಅದು ಸರ್ವಜನಾಂಗದ ಶಾಂತಿಯ ತೋಟ. ಆ ತೋಟದ ಶಾಂತಿ ಭಂಗಾಗದೆ ಇರಬೇಕೆಂದರೆ ಪ್ರಜಾಪ್ರಭುತ್ವ ಶಾಸ್ವತವಾಗಿ ಉಳಿಯಬೇಕು. ಪ್ರಜಾಪ್ರಭುತ್ವ ಗಟ್ಟಿಯಾಗಿ ನಿಂತು ಕೊಳ್ಳಬೇಕೆಂದರೆ, ಧರ್ಮಾಂಧತೆ-ಮತಾಂಧತೆ ತೊಲಗಿಸಲು ಪ್ರಜೆಗಳು ತಮ್ಮ ಹಕ್ಕಗಳನ್ನು ಸರಿಯಾದ ರೀತಿಯಲ್ಲಿ ಬಳಸಬೇಕೆಂಬ ಭಾವವೇ ಖರ್ಗೆಯವರನ್ನು ಕಣ್ಣು ಒದ್ದೆಯಾಗುವಂತೆ ಮಾಡಿರಬೇಕಲ್ಲ!.

ಈ ಹಿನ್ನೆಯಲ್ಲಿ ನೋಡಿದಾಗ ಇಂದು ಭಾರತದಲ್ಲಿ ಚಾಲ್ತಿಯಲ್ಲಿರುವ ವಂಚಕ ಭಾವುಕತೆಗಿಂತ ಖರ್ಗೆಯವರ ಖರೇ ಖರೇ ಕಾಳಜಿಯ ಭಾವುಕತೆಯ ಮಹತ್ವದ ಅರಿವಾಗಬಲ್ಲದು. ಖರ್ಗೆಯವರ ಭಾವುಕತೆ ವ್ಯಕ್ತಿಗತವಾದುದಲ್ಲ. ಅದು ಅಸಂಖ್ಯಾತ ದನಿಗಳ ಪ್ರತೀಕವಾದುದು. ಹೀಗಾಗಿಯೇ ಖರ್ಗೆಯವರ ಭಾವುಕತೆಯನ್ನು ಅವರ ಬದುಕಿನ ಹಿನ್ನೆಲೆಯಲ್ಲಿ ಗ್ರಹಿಸಬೇಕೇ ಹೊರತು. ನಿನ್ನೆ ಮೊನ್ನೆ ಮುಂಚೂಣಿಗೆ ಬಂದ ತಳಬುಡವಿಲ್ಲದ ಭಾವುಕತೆಯಂತೆ ಭಾವಿಸಬಾರದು. ಏಕೆಂದರೆ ಖರ್ಗೆಯವರ ಭಾವುಕತೆಗೆ ಅಪಾರ ಅನುಭವದ ಮೂಲವಿದೆ, ನೋವಿನ ನೆಲೆಯೂ ಇದೆ; ಬಹುತ್ವದ ಭಾರತ ಕಟ್ಟಬೇಕೆಂಬ ಪ್ರಬಲ ಆಕಾಂಕ್ಷೆಯಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ಪ್ರೊ. ಎಚ್.ಟಿ. ಪೋತೆ

contributor

Similar News