ಅಳಿವಿನಂಚಿನಲ್ಲಿ ʼಕೊರಗʼ ಸಮುದಾಯ

Update: 2024-02-04 06:49 GMT
Editor : jafar sadik | Byline : ಸತ್ಯಾ ಕೆ.

ಮಂಗಳೂರು: ತೀವ್ರವಾಗಿ ಅಳಿವಿನಂಚಿನಲ್ಲಿರುವ ಪ್ರಮುಖ ಬುಡಕಟ್ಟು ಸಮುದಾಯವಾಗಿ ಕೇಂದ್ರ ಸರಕಾರದಿಂದ ಗುರುತಿಸಲಾಗಿರುವ, ಕರ್ನಾಟಕದ ತುಳುನಾಡಿನ ಮೂಲ ನಿವಾಸಿಗಳಾಗಿರುವ ‘ಕೊರಗ’ ಸಮುದಾಯದಲ್ಲಿ ಮರಣ ಪ್ರಮಾಣ ಹೆಚ್ಚಾಗುತ್ತಿರುವಂತೆಯೇ ಜನನ ಪ್ರಮಾಣ ತೀವ್ರ ಪ್ರಮಾಣದಲ್ಲಿ ಕುಸಿತ ಕಾಣುತ್ತಿದೆ. ಅಪೌಷ್ಟಿಕತೆ, ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಈ ಸಮುದಾಯದ ಸಮಗ್ರ ಅಧ್ಯಯನದ ಕೊರತೆಯಿಂದಾಗಿ ಸೂಕ್ತ ಪರಿಹಾರೋಪಾಯಗಳೂ ಮರೀಚಿಕೆಯಾಗಿವೆ.

ಅಂದಾಜಿನ ಪ್ರಕಾರ ಕೊರಗ ಸಮುದಾಯದ ಜನರು ಕರ್ನಾಟದ ಉಡುಪಿ, ದ.ಕ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬೆರಳೆಣಿಕೆಯ ಕುಟುಂಬಗಳು ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಯಲ್ಲಿದ್ದು, ಒಟ್ಟು ಸುಮಾರು 14,000ದಷ್ಟು ಜನಸಂಖ್ಯೆಯನ್ನು ಹೊಂದಿರುವುದಾಗಿ ಹೇಳಲಾಗುತ್ತಿದೆ. ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ (ಐಟಿಡಿಪಿ) ಇಲಾಖೆಯ ಪ್ರಕಾರ 2011ರ ಜನಸಂಖ್ಯೆಯ ಆಧಾರದಲ್ಲಿ ದ.ಕ. ಜಿಲ್ಲೆಯಲ್ಲಿ 4,858, ಉಡುಪಿ ಜಿಲ್ಲೆಯಲ್ಲಿ 9,000 ಕೊರಗರಿದ್ದರು. ಆದರೆ 2021ರ ಅಂಕಿಅಂಶಗಳ ಪ್ರಕಾರ ದ.ಕ.ದಲ್ಲಿ ಅದು 4,300ಕ್ಕೆ ಇಳಿಕೆಯಾಗಿದೆ. ಉಡುಪಿಯಲ್ಲಿ ಅದು ಸುಮಾರು 8,500ರಷ್ಟು ಎನ್ನಲಾಗಿದೆ.

ಕೊರಗರ ಬದುಕಿನ ಬಗ್ಗೆ 1993ರಲ್ಲಿ ಡಾ.ಮುಹಮ್ಮದ್ ಪೀರ್ ನಡೆಸಿದ ಅಧ್ಯಯನದ ಬಳಿಕ ಕೊರಗರ ಸ್ಥಿತಿಗತಿ, ಸಾಮಾಜಿಕ, ರಾಜಕೀಯ ಅಧ್ಯಯನ ಸರಕಾರ ಮಟ್ಟದಿಂದ ಆಗಿಲ್ಲ. ಅಷ್ಟೇ ಯಾಕೆ, ಕೊರಗರ ಜನಸಂಖ್ಯೆಯ ನಿಖರ ಅಂಕಿಅಂಶವೂ ಲಭ್ಯವಿಲ್ಲ.

ಸಮುದಾಯದ ಮುಖಂಡರ ಪ್ರಕಾರ ದ.ಕ. ಜಿಲ್ಲೆಯಲ್ಲಿ 2020ರಿಂದ 2023ರ ಅವಧಿಯಲ್ಲಿ 110 ಮಂದಿ ಮೃತಪಟ್ಟಿದ್ದರೆ, ಸಮುದಾಯದಲ್ಲಿ ಜನನ ಆಗಿರುವ ಸಂಖ್ಯೆ 40 ಮಾತ್ರ.

ನಾಲ್ವರು ಪಿಎಚ್‌ಡಿ ಪದವೀಧರರು

ಅಸ್ಪಶ್ಯರಿಗೂ ಅಸ್ಪಶ್ಯ ವರ್ಗವಾಗಿ ಉಳಿದ, ಅಜಲು ಎಂಬ ಹೀನ ಆಚರಣೆ (ಪ್ರಸಕ್ತ ನಿಷೇಧಿಸಲ್ಪಟ್ಟಿದೆ)ಯ ಬಲಿಪಶುವಾಗಿದ್ದ ಕೊರಗ ಸಮುದಾಯವನ್ನು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಮೂಲಕ ಶೈಕ್ಷಣಿಕವಾಗಿ ಮೇಲೆತ್ತುವ ಪ್ರಯತ್ನ ನಡೆದಿದೆ. ಸಮುದಾಯದಲ್ಲಿ ಈವರೆಗೆ ನಾಲ್ವರು (ಡಾ.ಬಾಬು ಬೆಳ್ತಂಗಡಿ, ಡಾ.ಸಬಿತಾ, ಡಾ.ದಿನಕರ್, ಡಾ.ಕಲಾವತಿ) ಪಿಎಚ್‌ಡಿ ಪದವಿ ಪಡೆದಿದ್ದು, ಮೂವರು ಅಧ್ಯಯನ ನಡೆಸುತ್ತಿದ್ದಾರೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸುಮಾರು 40 ಮಂದಿ ಸ್ನಾತಕೋತ್ತರ ಪದವೀಧರರು ಸೇರಿದಂತೆ ಸುಮಾರು 140 ಪದವೀಧರರಿದ್ದಾರೆ. ಆದರೆ ಇವರಲ್ಲಿ ಉದ್ಯೋಗದಲ್ಲಿರುವುದು ಶೇ.7ರಷ್ಟು ಮಂದಿ ಮಾತ್ರ. ಎಸೆಸೆಲ್ಸಿ, ಪಿಯುಸಿ ಬಳಿಕ ಶಿಕ್ಷಣ ಮುಂದುವರಿಸಲು ಆಸಕ್ತಿಯೇ ಕಡಿಮೆ ಎನ್ನುತ್ತಾರೆ ಮಂಗಳೂರು ವಿವಿಯ ಸಹಾಯಕ ಪ್ರಾಧ್ಯಾಪಕಿ ಡಾ.ಸಬಿತಾ.

ನಿರುದ್ಯೋಗ ಭತ್ತೆಯ ಉತ್ತೇಜನ

ಕೊರಗ ಜನಾಂಗದ ವಿದ್ಯಾವಂತ ನಿರುದ್ಯೋಗಿಗಳಿಗೆ ಭತ್ತೆ ನೀಡುವ ಮೂಲಕ ಪ್ರೋತ್ಸಾಹ ನೀಡುವ ಕಾರ್ಯವನ್ನೂ ರಾಜ್ಯ ಸರಕಾರ ನಡೆಸುತ್ತಿದೆ. ದ.ಕ. ಜಿಲ್ಲೆಯಲ್ಲಿ 2018ರಿಂದ 2023ನೇ ಸಾಲಿನವರೆಗೆ 171 ಮಂದಿ ಈ ಭತ್ತೆಯ ಪ್ರಯೋಜನ ಪಡೆದಿದ್ದಾರೆ. ಐಟಿಡಿಪಿ ಇಲಾಖೆಯ ಮಾಹಿತಿಯಂತೆ ಈ ಅವಧಿಯಲ್ಲಿ ಎಸೆಸೆಲ್ಸಿ ಉತ್ತೀರ್ಣರಾದವರಿಗೆ ತಲಾ 2,000 ರೂ.ನಂತೆ 68 ಮಂದಿ, ಪಿಯುಸಿ ಉತ್ತೀರ್ಣರಾದವರಿಗೆ ತಲಾ 2,500 ರೂ.ನಂತೆ 61 ಮಂದಿ, ಪದವಿ ಪೂರೈಸಿದವರಿಗೆ ತಲಾ 3,500 ರೂ.ನಂತೆ 30 ಮಂದಿ, ಸ್ನಾತಕೋತ್ತರ ಪದವಿ ಪೂರೈಸಿದ 12 ಮಂದಿಗೆ ತಲಾ 4,500 ರೂ.ನಂತೆ ನಿರುದ್ಯೋಗಿ ಜೀವನ ಭತ್ತೆ ವಿತರಿಸಲಾಗಿದೆ.

2023-24ನೇ ಸಾಲಿನಲ್ಲಿ ಎಸೆಸೆಲ್ಸಿ ಉತ್ತೀರ್ಣ 23 ಮಂದಿ, ಪಿಯುಸಿ ಉತ್ತೀರ್ಣ 14, ಪದವಿ ಪಡೆದ 8 ಮಂದಿ ಹಾಗೂ ಸ್ನಾತಕೋತ್ತರ ಪದವೀಧರರು 6 ಮಂದಿ ಸೇರಿ 51 ಮಂದಿ ಈ ಭತ್ತೆಯನ್ನು ಪಡೆಯುತ್ತಿದ್ದಾರೆ.

ಬೆಂಬಿಡದೆ ಕಾಡುವ ಅಪೌಷ್ಟಿಕತೆ, ರಕ್ತಹೀನತೆ

ಸಮುದಾಯವನ್ನು ಅಪೌಷ್ಟಿಕತೆ, ರಕ್ತಹೀನತೆ, ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಬಹುವಾಗಿ ಕಾಡುತ್ತಿರುವುದಾಗಿ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ ತಂಡವು ಕಳೆದ ವರ್ಷ ಉಡುಪಿಯಲ್ಲಿ ನಡೆಸಿರುವ ಪ್ರಾಯೋಗಿಕ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿದೆ.

ಸಮುದಾಯದ ಅತೀ ದೊಡ್ಡ ಸಮಸ್ಯೆಯಾದ ಅಪೌಷ್ಟಿಕತೆಯನ್ನು ನೀಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದಿಂದ ಪೌಷ್ಟಿಕ ಆಹಾರ ಸರಬರಾಜು ಮಾಡಲಾಗುತ್ತಿದೆ. 2008ರಿಂದ ವರ್ಷದ ಆರು ತಿಂಗಳು ಐಟಿಡಿಪಿ ಇಲಾಖೆ ಮೂಲಕ ಕೊರಗ ಸಮುದಾಯದ ಕುಟುಂಬಗಳಿಗೆ ಒದಗಿಸಲಾಗುತ್ತಿರುವ ಪೌಷ್ಟಿಕ ಆಹಾರವನ್ನು ವರ್ಷಪೂರ್ತಿ ಒದಗಿಸಲು ನೂತನ ರಾಜ್ಯ ಸರಕಾರ ನಿರ್ಧರಿಸಿದೆ. ಸಮುದಾಯದ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಯೋಜನೆ ಉತ್ತಮವಾಗಿದೆ. ಇದರಿಂದ ಸಾಕಷ್ಟು ಪ್ರಯೋಜನವೂ ಆಗಿದೆ. ಆದರೆ, ಪೌಷ್ಟಿಕ ಆಹಾರ ಬಳಕೆಯ ಬಗ್ಗೆ ಸಮುದಾಯಕ್ಕೆ ಸಮರ್ಪಕ ಜಾಗೃತಿಯ ಅಗತ್ಯವಿದೆ ಎನ್ನುತ್ತಾರೆ ಸಮುದಾಯದ ಮುಖಂಡರು.

‘ನಮ್ಮಲ್ಲಿ ಬೆಳಗ್ಗಿನ ಉಪಾಹಾರ ಪದ್ಧತಿ ಎಂಬುದೇ ಚಾಲ್ತಿಯಲ್ಲಿಲ್ಲ. ಬಹುತೇಕವಾಗಿ ಕಾಡಂಚಿನಲ್ಲೇ ವಾಸವಾಗಿದ್ದ ನಮ್ಮ ಪೂರ್ವಜರು ಮನೆಗಳಲ್ಲಿ ಅಡುಗೆ ಮಾಡುವ ಸಂಪ್ರದಾಯದಿಂದ ದೂರವಿದ್ದವರು. ಅಜಲು ಪದ್ಧತಿಯ ಮೂಲಕ ನೀಡಲಾಗುತ್ತಿದ್ದ ಆಹಾರವನ್ನು ಒಣಗಿಸಿ ಶೇಖರಿಸಿಟ್ಟು, ಕಾಡಿನಲ್ಲಿ ಸಿಕ್ಕಿದ ಆಹಾರವನ್ನು ತಿಂದು ಜೀವನ ಸಾಗಿಸುತ್ತಿದ್ದವರು. ಕಳೆದ ಮೂರ್ನಾಲ್ಕು ದಶಕಗಳಿಂದೀಚೆಗೆ ನಗರ ಪ್ರದೇಶಗಳಲ್ಲಿ ನೆಲೆಸಿರುವ ಸಮುದಾಯದ ಜನರಲ್ಲಿ ಬೆಳಗ್ಗೆ, ಮಧ್ಯಾಹ್ನ, ರಾತ್ರಿಯ ಊಟೋಪಾಹಾರದ ರೂಢಿಯಾಗಿದ್ದರೂ, ಕಾಡಂಚಿನಲ್ಲಿರುವ ಕುಟುಂಬಗಳು ಬೆಳಗ್ಗಿನ ಉಪಾಹಾರದ ಬಗ್ಗೆ ಹೆಚ್ಚಿನ ಆಸಕ್ತಿಹೊಂದಿಲ್ಲ. ಜೋಳ, ರಾಗಿ, ಹೆಸರು ಕಾಳು ಮೊದಲಾದ ಪೌಷ್ಟಿಕ ಆಹಾರವನ್ನು ಉಪಯೋಗಿಸುವುದನ್ನು ಅರಿತಿಲ್ಲ ಎನ್ನುತ್ತಾರೆ ಡಾ.ಸಬಿತಾ.

ದೇಶದಲ್ಲಿ ಗುರುತಿಸಲಾಗಿರುವ 75 ದುರ್ಬಲ ಬುಡಕಟ್ಟು ಗುಂಪು(ಪಿವಿಟಿಜಿ)ಗಳಲ್ಲಿ ರಾಜ್ಯದ ಜೇನುಕುರುಬ ಹಾಗೂ ಕೊರಗ ಸಮುದಾಯವೂ ಸೇರಿದೆ. ಕೇಂದ್ರ ಸರಕಾರವು ತನ್ನ 2023-24 ರ ಬಜೆಟ್ ಭಾಷಣದಲ್ಲಿ ಘೋಷಿಸಿದಂತೆ, ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಗುಂಪುಗಳ (ಪಿವಿಟಿಜಿ) ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸಲು, ಅಭಿವೃದ್ಧಿ ಮಿಷನ್‌ನ ಪ್ರಧಾನ ಮಂತ್ರಿ ಪಿವಿಟಿಜಿಗೆ ಚಾಲನೆ ನೀಡಲಾಗಿದೆ. ಇದು ಸುರಕ್ಷಿತ ವಸತಿ, ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯ, ಶಿಕ್ಷಣ, ಆರೋಗ್ಯ ಮತ್ತು ಪೋಷಣೆ, ರಸ್ತೆ ಮತ್ತು ದೂರಸಂಪರ್ಕ ಮತ್ತು ಸುಸ್ಥಿರ ಜೀವನೋಪಾಯದ ಅವಕಾಶಗಳಂತಹ ಮೂಲಭೂತ ಸೌಲಭ್ಯಗಳನ್ನು ಈ ದುರ್ಬಲ ಗುಂಪಿನ ಕುಟುಂಬಗಳಿಗೆ ಒದಗಿಸುವ ಉದ್ದೇಶದಿಂದ ಕೂಡಿದೆ. ಮೂರು ವರ್ಷಗಳಲ್ಲಿ ಈ ಯೋಜನೆ ಅನುಷ್ಠಾನದ ಗುರಿ ಹೊಂದಲಾಗಿದ್ದು, ದ.ಕ. ಜಿಲ್ಲೆಯಲ್ಲಿ ಈ ಬಗ್ಗೆ ಸರ್ವೇ ಕಾರ್ಯ ನಡೆಯುತ್ತಿದೆ.

2011ರ ಜನಗಣತಿ ಅಂಕಿಅಂಶಗಳ ಆಧಾರದಲ್ಲಿ ಕುಟುಂಬಗಳನ್ನು ಆಧರಿಸಿ ಪ್ರಸಕ್ತ ರಾಜ್ಯ ಸರಕಾರದಿಂದ ಮಲೆಕುಡಿಯ ಹಾಗೂ ಕೊರಗ ಸಮುದಾಯಕ್ಕೆ ಪೌಷ್ಟಿಕ ಆಹಾರವನ್ನು ವಿತರಿಸಲಾಗುತ್ತಿದೆ. ಸುಮಾರು 10,000ದಷ್ಟು ಕೊರಗ ಸಮುದಾಯದವರಿದ್ದು, ಅದೀಗ 9,000ಕ್ಕೆ ಇಳಿಕೆಯಾಗಿದೆ. ಸುಮಾರು 2,000ದಷ್ಟು ಮಲೆಕುಡಿಯರು ಇರುವುದಾಗಿ ಅಂದಾಜಿಸಲಾಗಿದೆ. ಕೊರಗ ಸಮುದಾಯದ ಜನರ ಜೀವಿತಾವಧಿ ಕಡಿಮೆಯಾಗಿರುವುದು ಹಾಗೂ ಜನನ ಸಂಖ್ಯೆ ಕುಸಿತವಾಗಿರುವುದು ಕಂಡುಬರುತ್ತಿದೆ.

 ದೂದ್‌ ಪೀರ್, ಐಟಿಡಿಪಿ ಅಧಿಕಾರಿ, ಉಡುಪಿ

ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (ಪಿಎಂ ಜನ್‌ಮನ್)ದಡಿ ದ.ಕ. ಜಿಲ್ಲೆಯಲ್ಲೂ ಸಮೀಕ್ಷೆ ನಡೆಸಲಾಗುತ್ತಿದೆ. ಶೇ. 90ರಷ್ಟು ಸಮೀಕ್ಷೆ ಕಾರ್ಯ ಮುಗಿದಿದ್ದು, ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದೆ. ಜಿಲ್ಲೆಯಲ್ಲಿ ಮಲೆಕುಡಿಯ ಹಾಗೂ ಕೊರಗ ಕುಟುಂಬಗಳಿಗೆ ಆರು ತಿಂಗಳಿಗೆ ವಿತರಿಸುತ್ತಿದ್ದ ಪೌಷ್ಟಿಕ ಆಹಾರವನ್ನು ನೂತನ ರಾಜ್ಯ ಸರಕಾರ ವರ್ಷವಿಡೀ ಪೂರೈಸಲು ಆದೇಶಿಸಿದೆ. ಅದರಂತೆ ಕ್ರಮ ವಹಿಸಲಾಗಿದೆ.

 ಶಿವಕುಮಾರ್, ಐಟಿಡಿಪಿ ಅಧಿಕಾರಿ, ದ.ಕ.

ಟಿ.ಬಿ ಕಾಯಿಲೆ, ಬಂಜೆತನ, ಅಪೌಷ್ಟಿಕತೆ ಮೊದಲಾದ ಆರೋಗ್ಯ ಸಮಸ್ಯೆಗಳು ನಮ್ಮ ಸಮುದಾಯವನ್ನು ಹಿಂದಿನಿಂದಲೂ ಕಾಡುತ್ತಾ ಬರುತ್ತಿದೆ. ಸಮುದಾಯದ ಸಮಗ್ರ ಅಧ್ಯಯನದ ಜತೆಗೆ ವಂಶಾವಳಿ ಸಮಸ್ಯೆ(ಜೆನೆಟಿಕ್) ಬಗ್ಗೆ ಕೂಲಂಕಶ ಅಧ್ಯಯನದ ಅಗತ್ಯವಿದೆ. ಜತೆಗೆ ಸಮುದಾಯದ ದೀರ್ಘಾವಧಿಯ ಬೇಡಿಕೆಯಾದ, ದ.ಕ. ಜಿಲ್ಲೆಯಲ್ಲಿ ಇನ್ನೂ ಸಮರ್ಪಕವಾಗಿ ಈಡೇರದ ಕೊರಗರ ಭೂಮಿಯ ಹಕ್ಕನ್ನು ಈಡೇರಿಸಬೇಕಾಗಿದೆ.

 ಸುಂದರ ಕೊರಗ, ಅಧ್ಯಕ್ಷರು, ದ.ಕ. ಜಿಲ್ಲಾ ಕೊರಗ ಸಂಘ

ಕೇರಳ ಮಾದರಿ ಬುಡಕಟ್ಟು ಪುನರ್ವಸತಿ ಕಾರ್ಯಗತವಾಗಲಿ: ಡಾ.ಸಬಿತಾ ಗುಂಡ್ಮಿ

ಕೇರಳದಲ್ಲಿ ಬುಡಕಟ್ಟು ಸಮು ದಾಯಗಳಿಗೆ ಅರಲಂ ಬುಡಕಟ್ಟು ಪುನರ್ವಸತಿ ಯೋಜನೆಯು ರಚನಾತ್ಮಕ ಅಭಿವೃದ್ಧಿ ಕಾರ್ಯಕ್ರಮವನ್ನು ರೂಪಿಸಿದೆ. ಇಲ್ಲಿಗೆ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ- ಕೇರಳ ನೇತೃತ್ವದ ನಮ್ಮ ತಂಡ ಭೇಟಿ ನೀಡಿ ಪರಿಶೀಲಿಸಿದೆ. ಕೇರಳದಲ್ಲಿ ಆ ಯೋಜನೆಯನ್ನು ಅನುಷ್ಠಾನ ಮಾಡುವ ಅಧಿಕಾರಿಗಳು ಮತ್ತು ಪುನರ್ವಸತಿಯ ಬುಡಕಟ್ಟು ನಿವಾಸಿಗಳ ಅಭಿಪ್ರಾಯದಂತೆ 2014ರಲ್ಲಿ ಅನುಷ್ಠಾನಗೊಂಡ ಏಶ್ಯದಲ್ಲೇ ಅತ್ಯಂತ ದೊಡ್ಡ ಪುನರ್ವಸತಿ ಯೋಜನೆ ಇದಾಗಿದೆ. 2014ರಿಂದ 2018ರ ವರೆಗೆ ಸುಮಾರು 9 ಬುಡಕಟ್ಟು ಸಮುದಾಯ ಗಳನ್ನು ಗುರುತಿಸಲಾಗಿತ್ತು.

ಉದ್ಯೋಗ ರಹಿತ, ಜಾಗ ರಹಿತ ಮತ್ತು ಅರಣ್ಯ ಮೂಲ ಬುಡಕಟ್ಟುಗಳ ಸಾಮಾಜಿಕ ಮತ್ತು ಆರ್ಥಿಕವಾಗಿ ಅಭಿವೃದ್ಧಿಗಾಗಿ ಸುಮಾರು 7,000 ಎಕರೆ ಭೂಮಿಯನ್ನು ಕೇಂದ್ರ ಸರಕಾರದಿಂದ ಖರೀದಿಸಲಾಯಿತು. ಸುಮಾರು 3,500 ಎಕರೆ ಭೂಮಿಯಲ್ಲಿ 1,500ಕ್ಕೂ ಅಧಿಕ ಬುಡಕಟ್ಟು ಕುಟುಂಬಗಳಿಗೆ ತಲಾ ಒಂದು ಎಕರೆ ಹಂಚಿಕೆ. ಮನೆ, ನೀರು, ಇತರ ಮೂಲಭೂತ ಸೌಕರ್ಯಗಳನ್ನು ಒದಗಿಸಿದೆ. ಜೊತೆಗೆ ಸಮುದಾಯವಾಗಿ ಬದುಕಲು ಶಾಲೆ, ಕಾಲೇಜು, ಅರೋಗ್ಯ ಕೇಂದ್ರ, ಸಮುದಾಯ ಭವನ ನಿರ್ಮಿಸಿ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿ ಗೆ ಪೂರಕವಾದ ವಾತಾವರಣ ಕಲ್ಪಿಸಿದೆ. ಉಳಿದ 3,500 ಎಕರೆ ಜಮೀನನ್ನು ಆರ್ಥಿಕ ಚಟುವಟಿಕೆಗೆ ಮೀಸಲಿಟ್ಟು ಅದರಲ್ಲಿ ಆ ಒಂಭತ್ತು ಬುಡಕಟ್ಟು ಸಮುದಾಯಗಳಿಗೆ ಔದ್ಯೋಗಿಕ ಭದ್ರತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪುನರ್ವಸತಿ ಕೇಂದ್ರದ ಪ್ರತೀ ಮನೆಯ ಇಬ್ಬರಿಗೆ ಉದ್ಯೋಗ ನೀಡಲಾಗಿದೆ. ಕೃಷಿಯಿಂದ ಉತ್ಪತ್ತಿಯಾದ ಉತ್ಪನ್ನಗಳಿಗೆ ತಕ್ಕ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಎಕರೆಗಟ್ಟಲೆ ಭೂಮಿ ಮತ್ತು ಹಣಕಾಸಿನ ನೆರವು ನೀಡುವ ಕರ್ನಾಟಕ ಸರಕಾರ ಕೂಡ ಬುಡಕಟ್ಟು ಪರವಾಗಿ ಕೇರಳ ಮಾದರಿ ಅಭಿವೃದ್ಧಿ ಕಾರ್ಯ ಕೈಗೊಂಡು ರಾಜ್ಯದ ದುರ್ಬಲ ಬುಡಕಟ್ಟು ಸಮುದಾಯಗಳನ್ನು ಸಂರಕ್ಷಿಸುವ ಕಾರ್ಯ ಮಾಡಬೇಕು ಎಂದು ಮಂಗಳೂರು ವಿವಿಯ ಸಹಾಯಕ ಪ್ರಾಧ್ಯಾಪಕಿ ಡಾ.ಸಬಿತಾ ಗುಂಡ್ಮಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಸತ್ಯಾ ಕೆ.

contributor

Similar News