ಬೀದರ್: ಒಬ್ಬರೇ ಕಷ್ಟಪಟ್ಟು ಬಾವಿ ತೋಡಿ, ಒಂದೂವರೆ ಎಕರೆ ಬರಡು ಭೂಮಿಯಲ್ಲಿ ಸಾವಿರಾರು ಗಿಡ-ಮರಗಳನ್ನು ಬೆಳೆಸುತ್ತಿರುವ ಎಂ.ಟೆಕ್ ಪದವೀಧರರೊಬ್ಬರು, ಭವಿಷ್ಯದಲ್ಲಿ ಕೋಟ್ಯಂತರ ರೂಪಾಯಿ ಆದಾಯ ಗಳಿಸುವ ನಿರೀಕ್ಷೆಯಲ್ಲಿ ಕೃಷಿ ಕಾಯಕ ಮುಂದುವರಿಸಿದ್ದಾರೆ.

ಔರಾದ್ ತಾಲೂಕಿನ ಕೌಠಾ (ಬಿ) ಗ್ರಾಮದ ಸೂರ್ಯಕಾಂತ್ ಕೋಳಿ ಅವರೇ ಈ ಸಾಧಕ ರೈತ. ಬಡ ಕುಟುಂಬದಿಂದ ಬಂದ ಸೂರ್ಯಕಾಂತ್ ಅವರಿಗೆ ಓದಿನ ಬಗ್ಗೆ ಅಪಾರ ಆಸಕ್ತಿ. ಬಡತನದ ನಡುವೆಯೇ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ ಅವರು, ಬಳಿಕ ಆರ್ಥಿಕ ನೆರವಿಗಾಗಿ ಕೆಲ ವರ್ಷ ಪುಣೆಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿದರು.

2017ರಲ್ಲಿ ಮೆಷಿನ್ ಡಿಸೈನ್‌ನಲ್ಲಿ ಎಂ.ಟೆಕ್ ಪದವಿ ಪಡೆದ ಅವರು, ಬಳಿಕ ಹೈದರಾಬಾದ್ ನ ‘ಟುಡಿ ರಾಮರೆಡ್ಡಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್’ ಕಾಲೇಜಿನಲ್ಲಿ ಎರಡು ವರ್ಷ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದರು. ಉತ್ತಮ ಬೇಡಿಕೆ ಮತ್ತು ಸಂಬಳವಿದ್ದರೂ ಉದ್ಯೋಗದಲ್ಲಿ ತೃಪ್ತಿ ಸಿಗಲಿಲ್ಲ. ಪರಿಸರದ ಬಗ್ಗೆ ಆಸಕ್ತಿ ಹಾಗೂ ಕೃಷಿಯ ಮೇಲಿನ ಒಲವು ಅವರನ್ನು ಕೃಷಿಯತ್ತ ಸೆಳೆಯಿತು. ಹೀಗಾಗಿ ಉದ್ಯೋಗ ತೊರೆದು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಹೈದರಾಬಾದಿನಿಂದ ಉದ್ಯೋಗ ತೊರೆದು ಗ್ರಾಮಕ್ಕೆ ಮರಳಿದ ಸೂರ್ಯಕಾಂತ್, 2021ರ ಡಿಸೆಂಬರ್‌ನಲ್ಲಿ ತಮ್ಮ ಹೊಲದಲ್ಲಿ ಒಬ್ಬರೇ ಬಾವಿ ತೋಡಲು ಆರಂಭಿಸಿದರು. ಬಾವಿಯಲ್ಲಿ ನೀರು ಸಿಗದಿದ್ದರೂ ಮಳೆಗಾಲದಲ್ಲಿ ನೀರು ಸಂಗ್ರಹವಾದರೆ ಸಾಕು. ಬೇಸಿಗೆಯಲ್ಲಿ ಸೈಕಲ್‌ನಲ್ಲಿ ನೀರು ತಂದಾದರೂ ಗಿಡಗಳನ್ನು ಬೆಳೆಸಬೇಕು ಎಂದು ನಿರ್ಧರಿಸಿದ್ದರು.

ಸುಮಾರು 6ರಿಂದ 7 ತಿಂಗಳು ಸತತವಾಗಿ ಬಾವಿ ತೋಡಿದ ಬಳಿಕ 14 ಅಡಿ ಆಳದಲ್ಲಿ ಸ್ವಲ್ಪ ನೀರು ದೊರೆಯಿತು. ಬಳಿಕ 16 ಅಡಿ ಆಳದವರೆಗೆ ಬಾವಿ ತೋಡಿದರು. ಇದೀಗ ಎಲ್ಲ ಋತುಗಳಲ್ಲಿಯೂ ಬಾವಿಯಲ್ಲಿ ನೀರು ಲಭ್ಯವಿದೆ.

‘‘ನಮ್ಮ ಜಮೀನಿನಲ್ಲಿ ಯಾವುದೇ ರೀತಿಯ ನೀರಾವರಿ ವ್ಯವಸ್ಥೆ ಇರಲಿಲ್ಲ. ಸಂಪೂರ್ಣ ಬರಡು ಭೂಮಿಯಾಗಿತ್ತು. ನಾನು ಬಾವಿ ತೋಡಲು ಆರಂಭಿಸಿದಾಗ ಕೆಲವರು ನನ್ನನ್ನು ಹುಚ್ಚ ಎಂದು ಕರೆಯುತ್ತಿದ್ದರು. ಆದರೆ, ಅವರ ಮಾತಿಗೆ ನಾನು ಕಿವಿಗೊಡಲಿಲ್ಲ. ಜನರ ಆ ಮಾತುಗಳೇ ನನಗೆ ಮತ್ತಷ್ಟು ಪ್ರೇರಣೆ ನೀಡಿದವು. ಎಷ್ಟೋ ವಿಜ್ಞಾನಿಗಳನ್ನೂ ಜನರು ಹುಚ್ಚರೆಂದು ಕರೆದಿರುವುದು ನನಗೆ ಗೊತ್ತಿದೆ. ಅಂದು ನನ್ನನ್ನು ಹುಚ್ಚನೆಂದು ಕರೆದವರೇ ಇಂದು ನಾನು ತೋಡಿದ ಬಾವಿಯ ನೀರು ಕುಡಿಯುತ್ತಿದ್ದಾರೆ. ಅವಮಾನ ಮಾಡಿದವರೇ ಇಂದು ನನ್ನನ್ನು ಹೊಗಳುತ್ತಿದ್ದಾರೆ. ಇದು ನನಗೆ ಹೆಮ್ಮೆ ತಂದಿದೆ’’ ಎಂದು ಸೂರ್ಯಕಾಂತ್ ಹರ್ಷ ವ್ಯಕ್ತಪಡಿಸುತ್ತಾರೆ.

ಒಂದೂವರೆ ಎಕರೆ ಭೂಮಿಯಲ್ಲಿ 2 ಸಾವಿರಕ್ಕೂ ಹೆಚ್ಚು ಗಿಡ: ಒಂದೂವರೆ ಎಕರೆ ಭೂಮಿಯಲ್ಲಿ ಸೂರ್ಯಕಾಂತ್ ಅವರು ಸುಮಾರು 2 ಸಾವಿರಕ್ಕೂ ಹೆಚ್ಚು ಬೆಲೆಬಾಳುವ ಗಿಡ, ಮರ ಹಾಗೂ ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ.

ಅವರ ತೋಟದಲ್ಲಿ 350 ಶ್ರೀಗಂಧ, 400 ಹೆಬ್ಬೇವು, 200 ಸಿಲ್ವರ್ ಓಕ್, 200 ಮಹಾಗನಿ, 150 ಸಾಗವಾನಿ, 100 ಬಿದಿರು, 100 ರಕ್ತಚಂದನ, 20 ಜೀವಂತ ಬೇಲಿ ಗಿಡಗಳು, 250 ಮಾವು, 60 ನಿಂಬೆ, 40 ಸೀತಾಫಲ, 10 ಸಪೋಟ, 60 ದಾಳಿಂಬೆ, 65 ಹುಣಸೆ, 2 ನೆಲ್ಲಿಕಾಯಿ, 26 ನೇರಳೆ, 22 ನುಗ್ಗೆ, 40 ಕರಿಬೇವು, 22 ಗೋಡಂಬಿ, 80 ಪೇರಳೆ (ಜಾಪುಳಕಾಯಿ), 11 ಅಂಜೂರ ಸೇರಿದಂತೆ ಹಲವು ಬಗೆಯ ಗಿಡ-ಮರಗಳಿವೆ.

ಇವುಗಳ ಮೂಲಕ ಮುಂದಿನ ವರ್ಷಗಳಲ್ಲಿ ಕೋಟ್ಯಂತರ ರೂಪಾಯಿ ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದಾರೆ.

ಹೆಬ್ಬೇವಿನ ಗಿಡಗಳನ್ನು ನೆಟ್ಟು ಸುಮಾರು ಎರಡು ವರ್ಷಗಳಾಗಿವೆ. ಅವು ಏಳು ವರ್ಷಕ್ಕೆ ಕಟಾವಿಗೆ ಬರುತ್ತವೆ. ಕಂಪನಿಯವರೇ ಬಂದು ಹೆಬ್ಬೇವಿನ ಮರಗಳನ್ನು ಕಟಾವು ಮಾಡಿಕೊಂಡು ಹೋಗುತ್ತಾರೆ. ಇದರಿಂದ ಲಕ್ಷಾಂತರ ರೂಪಾಯಿ ಆದಾಯ ಗಳಿಸಬಹುದು ಎಂದು ರೈತ ಸೂರ್ಯಕಾಂತ್ ಹೇಳುತ್ತಾರೆ.

ಸಿಲ್ವರ್ ಓಕ್ ಮರಗಳು ಸುಮಾರು 70 ಅಡಿ ಎತ್ತರದವರೆಗೆ ಬೆಳೆಯುತ್ತವೆ. ಬೇಸಿಗೆಯಲ್ಲಿ ಉಷ್ಣಾಂಶ ವನ್ನು ನಿಯಂತ್ರಿಸುವುದರೊಂದಿಗೆ ಮಣ್ಣಿನ ತೇವಾಂಶ ಕಾಪಾಡಲು ಇವು ಸಹಕಾರಿಯಾಗುತ್ತವೆ. ಹೀಗಾಗಿ ಹೆಚ್ಚಿ ನ ಬಿಸಿಲಿನ ಸಂದರ್ಭದಲ್ಲಿಯೂ ಇತರ ಗಿಡ-ಮರಗಳಿಗೆ ಅನುಕೂಲವಾಗುತ್ತದೆ ಎಂದು ಅವರು ವಿವರಿಸುತ್ತಾರೆ.

ಅರಣ್ಯ ಇಲಾಖೆಯಿಂದ ಒಂದು ಗಿಡಕ್ಕೆ ರೂ.80ರಂತೆ ಶ್ರೀಗಂಧದ ಸಸಿಗಳನ್ನು ಖರೀದಿಸಿ ತಂದಿರುವುದಾಗಿ ಸೂರ್ಯಕಾಂತ್ ತಿಳಿಸಿದ್ದಾರೆ. ಗಿಡಗಳ ಪೋಷಣೆಗಾಗಿ ಇಲಾಖೆಯಿಂದಲೇ ವಾರ್ಷಿಕ ನೆರವು ದೊರೆಯುತ್ತದೆ. ಸಸಿಗಳನ್ನು ನೆಟ್ಟ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಆರು ತಿಂಗಳಿಗೊಮ್ಮೆ ಬಂದು ಪರಿಶೀಲನೆ ನಡೆಸುತ್ತಾರೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದಲ್ಲಿ ಶ್ರೀಗಂಧಕ್ಕೆ ಉತ್ತಮ ಬೇಡಿಕೆ ಇದ್ದು, 15 ವರ್ಷಗಳ ಬಳಿಕ ಒಂದು ಶ್ರೀಗಂಧದ ಮರದಿಂದ ಸುಮಾರು 4ರಿಂದ 5 ಲಕ್ಷ ರೂ. ಆದಾಯ ಗಳಿಸಬಹುದು ಎಂದು ಅವರು ನಿರೀಕ್ಷಿಸಿದ್ದಾರೆ. ಶ್ರೀಗಂಧವನ್ನು ಮೈಸೂರು ಸ್ಯಾಂಡಲ್ ಸೋಪು ಸೇರಿದಂತೆ ವಿವಿಧ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ರಕ್ತಚಂದನಕ್ಕೂ ಬೇಡಿಕೆ ಹೆಚ್ಚಿದೆ. ಬಲಿತ ಒಂದು ರಕ್ತಚಂದನ ಮರವು 4ರಿಂದ 5 ಲಕ್ಷ ರೂ.ವರೆಗೆ ಬೆಲೆ ಬಾಳಬಹುದು. ಸುಮಾರು 20 ವರ್ಷಗಳಲ್ಲಿ ಕಟಾವಿಗೆ ಬರುವ ಈ ಮರಗಳನ್ನು ಜೋಪಾನ ಮಾಡುವುದು ಅತ್ಯಂತ ಮುಖ್ಯ ಎಂದು ಸೂರ್ಯಕಾಂತ್ ಹೇಳುತ್ತಾರೆ.

ಕೊಡದಿಂದ ನೀರುಣಿಸಿ ಬೆಳೆಸಿದರು 900 ಗಿಡ

ಕೃಷಿ ಆರಂಭಿಸಿದ ಸಂದರ್ಭದಲ್ಲಿ ಸೂರ್ಯಕಾಂತ್ ಅವರು ಸುಮಾರು 900 ಗಿಡಗಳಿಗೆ ಪ್ರತಿದಿನ ಕೊಡಗಳಿಂದಲೇ ನೀರುಣಿಸುತ್ತಿದ್ದರು. ಗಿಡ, ಮರ ಹಾಗೂ ಹುಲ್ಲಿಗೆ ಯಾವುದೇ ರಾಸಾಯನಿಕ ಔಷಧಿ ಬಳಸಲಿಲ್ಲ. ಹೊಲದಲ್ಲಿನ ಹುಲ್ಲನ್ನೂ ಸಂಪೂರ್ಣವಾಗಿ ತೆಗೆಯಲಿಲ್ಲ.

‘‘ಹುಲ್ಲು ಇದ್ದರೆ ಮಣ್ಣಿನ ತೇವಾಂಶ ಉಳಿಯುತ್ತದೆ. ಹೀಗಾಗಿ ಮಳೆ ಇಲ್ಲದಿದ್ದರೂ ಗಿಡಗಳಿಗೆ ಹೆಚ್ಚಿನ ಸಮಸ್ಯೆಯಾಗುವುದಿಲ್ಲ. ಹೆಚ್ಚಾಗಿ ಬೆಳೆದ ಹುಲ್ಲನ್ನು ಗ್ರಾಮದ ರೈತರು ತಮ್ಮ ದನ-ಕರುಗಳಿಗೆ ತೆಗೆದುಕೊಂಡು ಹೋಗುತ್ತಾರೆ. ಒಣಗಿದ ಹುಲ್ಲು ಗೊಬ್ಬರವಾಗಿಯೂ ಬಳಕೆಯಾಗುತ್ತದೆ’’ ಎಂದು ಅವರು ಹೇಳುತ್ತಾರೆ.

ಇದೀಗ ಹೊಲದಲ್ಲಿರುವ ಹುಲ್ಲನ್ನು ತೆಗೆದು ಆ ಜಾಗದಲ್ಲಿ ತರಕಾರಿ ಬೆಳೆಯುವುದರ ಜೊತೆಗೆ ಕೋಳಿ ಮತ್ತು ಆಡು ಸಾಕಾಣಿಕೆ ಮಾಡುವ ಯೋಜನೆಯನ್ನೂ ಅವರು ಹೊಂದಿದ್ದಾರೆ. ಇದರಿಂದ ಬೇರೆಡೆ ಕೂಲಿ ಕೆಲಸಕ್ಕೆ ಹೋಗುವ ಅಗತ್ಯವಿಲ್ಲದೆ ತಮ್ಮ ಹೊಲದಲ್ಲಿಯೇ ದುಡಿದು ಆದಾಯ ಗಳಿಸಬಹುದು ಎಂಬುದು ಅವರ ಅಭಿಪ್ರಾಯ.

ಕೃಷಿಗೆ ಹೊಸದಾಗಿ ಬರುತ್ತಿರುವವರು ಒಂದು ಎಕರೆ ಭೂಮಿಯಲ್ಲಿಯೇ ಸುಮಾರು 300 ಶ್ರೀಗಂಧದ ಗಿಡಗಳ ಜೊತೆಗೆ ವಿವಿಧ ಹಣ್ಣಿನ ಗಿಡಗಳನ್ನು ಬೆಳೆಸಬಹುದು. ಒಂದು ಹಣ್ಣಿನ 6 ಗಿಡಗಳಂತೆ ಸುಮಾರು 50 ಬಗೆಯ ಒಟ್ಟು 300 ಹಣ್ಣಿನ ಗಿಡಗಳನ್ನು ಹಾಗೂ ಶ್ರೀಗಂಧದ 300 ಗಿಡ ಸೇರಿ 600 ಗಿಡಗಳನ್ನು ಒಂದು ಎಕರೆಯಲ್ಲಿ ಬೆಳೆಸಬಹುದು. ವಿವಿಧ ಋತುಗಳಲ್ಲಿ ಹಣ್ಣುಗಳನ್ನು ಪಡೆದು ಆದಾಯ ಗಳಿಸಬಹುದು. ಇದರ ಜೊತೆಗೆ ತರಕಾರಿ ಬೆಳೆದರೆ ತಿಂಗಳಿಗೆ 60ರಿಂದ 70 ಸಾವಿರ ರೂ.ವರೆಗೆ ಆದಾಯ ಗಳಿಸುವ ಅವಕಾಶವಿದೆ. ಒಂದು ಎಕರೆ ಜಮೀನಿನಲ್ಲಿ ಸ್ವಲ್ಪ ನೀರಾವರಿ ಸೌಲಭ್ಯವಿದ್ದರೂ ಉತ್ತಮ ಆದಾಯ ಗಳಿಸಬಹುದು ಎಂದು ಸೂರ್ಯಕಾಂತ್ ಹೇಳುತ್ತಾರೆ.

ಆದರೆ, ಮರಗಳನ್ನು ನೆಟ್ಟು ತಕ್ಷಣ ಆದಾಯ ನಿರೀಕ್ಷಿಸಲು ಸಾಧ್ಯವಿಲ್ಲ. ಅವು ಬೆಳೆಯುವವರೆಗೆ ತಾಳ್ಮೆ ಇರಬೇಕು. 10ರಿಂದ 15 ವರ್ಷಗಳ ನಂತರ ಕೋಟ್ಯಧಿಪತಿಯಾಗುವ ಅವಕಾಶವೂ ಇದೆ’’ ಎಂದು ಅವರು ರೈತರಿಗೆ ಸಲಹೆ ನೀಡುತ್ತಾರೆ.

 

ಪ್ರಶಸ್ತಿಗಳ ಗರಿ

ಸೂರ್ಯಕಾಂತ್ ಅವರಿಗೆ ಕೃಷಿ ಇಲಾಖೆಯಿಂದ ‘ಆತ್ಮ ಪ್ರಶಸ್ತಿ’, ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದಿಂದ ‘ರೈತ ಸೇವಾ ರತ್ನ ಪ್ರಶಸ್ತಿ’ ಹಾಗೂ ಕೇತಕಿ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದಿಂದ ‘ಕನ್ನಡ ಸೇವಾ ರತ್ನ ಪ್ರಶಸ್ತಿ’ ಲಭಿಸಿವೆ.

‘ಬೆಳಕಿನ ತೆನೆ’ಯಲ್ಲಿ ಸೂರ್ಯಕಾಂತ್

ಸಿದ್ಧು ಸತ್ಯಣ್ಣವರ ಅವರ ‘ಬೆಳಕಿನ ತೆನೆ-ನೋವುಂಡು ಬೆಳಕು ಕಂಡವರ ಕಥನಗಳು’ ಕೃತಿಯಲ್ಲಿ ಸೂರ್ಯಕಾಂತ್ ಅವರ ಕುರಿತ ಲೇಖನವೂ ಪ್ರಕಟವಾಗಿದೆ. ‘ನೌಕರಿ ಬಿಟ್ಟ ಎಂ.ಟೆಕ್ ಪದವೀಧರ ಬಾವಿ ತೋಡಿದ; ಸೂರ್ಯಕಾಂತ್’ ಎಂಬ ಶೀರ್ಷಿಕೆಯಲ್ಲಿ ಅವರ ಕೃಷಿ ಸಾಧನೆಯನ್ನು ದಾಖಲಿಸಲಾಗಿದೆ.

ಯುವಕರು ಉದ್ಯೋಗ ಸಿಗದೆ ಆತ್ಮಹತ್ಯೆ ಮಾಡಿಕೊಳ್ಳಬಾರದು. ಜೀವನದಲ್ಲಿ ಸೋಲು ಶಾಶ್ವತವಾಗಿ ಇರುವುದಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಕೃಷಿ ಮಾಡಿ ಕೋಟ್ಯಾಧೀಶರಾಗಬಹುದಾಗಿದೆ. ಜೀವನದಲ್ಲಿ ತಾಳ್ಮೆ ತುಂಬಾ ಮುಖ್ಯ. ಹಾಗಾಗಿ ಯುವಜನತೆ ಜೀವನದಲ್ಲಿ ತಾಳ್ಮೆಯಿಂದ ಹೆಜ್ಜೆ ಇಟ್ಟರೆ ಯಶಸ್ಸು ಖಂಡಿತವಾಗಿಯು ಸಿಗುತ್ತದೆ. ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸರಿಯಾದ ರೀತಿಯಲ್ಲಿ ದಾರಿ ತೋರಿಸುವ ಕೆಲಸವಾಗಬೇಕಿದೆ.

-ಸೂರ್ಯಕಾಂತ್, ರೈತ,

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಚಿತ್ರಶೇನ ಫುಲೆ

contributor