ಗುಣಮಟ್ಟದ ಆರೋಗ್ಯಕ್ಕಾಗಿ ಡಿಜಿಟಲ್ ಉಪವಾಸವಿರಲಿ...
Photo Credit: AI
ಪ್ರಸ್ತುತ ವಿಶ್ವದಲ್ಲಿರುವ ಪ್ರತಿಯೊಂದು ಕ್ಷೇತ್ರಗಳಲ್ಲಿನ ತಂತ್ರಜ್ಞಾನಗಳ ವೇಗವನ್ನು ಗಮನಿಸಿದರೆ, ಮಾನವನ ಬಯಕೆ, ಸಂಶೋಧನೆ ಹಾಗೂ ಸಾಧನೆಗಳು ಎಲ್ಲಿಯವರೆಗೆ ಹೋಗಿ ನಿಲ್ಲುತ್ತವೆ ಹಾಗೂ ಭವಿಷ್ಯದಲ್ಲಿ ತಂತ್ರಜ್ಞಾನಗಳಿಂದ ಇನ್ನೂ ಏನೆಲ್ಲ ಸೃಷ್ಟಿಯಾಗಬಹುದು ಎಂಬುದು ಅಗೋಚರವಾಗಿದೆ. ಬದಲಾವಣೆಯು ಜಗದ ನಿಯಮ ಎಂಬಂತೆ ಅಭಿವೃದ್ಧಿಗೋಸ್ಕರ ನವನವೀನ ತಂತ್ರಜ್ಞಾನಗಳ ಸಂಶೋಧನೆ ಮತ್ತು ಬಳಕೆಗಳು ಕಾಲಕಾಲಕ್ಕೆ ಅನ್ವಯವಾಗುತ್ತಿರಬೇಕು ಎಂಬುದು ಸ್ಪಷ್ಟ ನಿಲುವು. ಕೆಲವು ವರ್ಷಗಳ ಹಿಂದೆ ಸೃಷ್ಟಿಯಾಗಿದ್ದ ಮಾನವ ತದ್ರೂಪಿ ರೋಬೊಟ್ ತಂತ್ರಜ್ಞಾನವು ಜಗತ್ತನ್ನು ನಿಬ್ಬೆರಗಾಗಿಸಿತ್ತು. ರೋಬೊಟ್ನಿಂದ ನಿಗದಿತ ಕೆಲಸಗಳು ಸ್ವಯಂಚಾಲಿತವಾಗಿ ನಡೆಯುವುದನ್ನು ಕಂಡು ವಿಶ್ವವು ಮೂಕವಿಸ್ಮಯವಾಗಿತ್ತು. ಅದರಂತೆ ಇತ್ತೀಚೆಗೆ ಸದ್ದು ಮಾಡುತ್ತಿರುವ ಎಐನಿಂದ ಏನೆಲ್ಲ ಸಾಧ್ಯ ಎಂಬುದನ್ನು ಅರಿಯಲಾಗುತ್ತಿದೆ.
ಪ್ರಸ್ತುತ ದಿನಮಾನದಲ್ಲಿ ಗುಣಮಟ್ಟದ ಶಿಕ್ಷಣ, ವ್ಯಾಪಾರ, ಸಂವಹನ, ಮನರಂಜನೆ ಮತ್ತು ಉದ್ಯೋಗಾವಕಾಶಕ್ಕಾಗಿ ಡಿಜಿಟಲ್ ತಂತ್ರಜ್ಞಾನ ಅವಶ್ಯಕವಾಗಿರುವುದು ಸುಳ್ಳೇನಲ್ಲ. ಆದರೆ ಈ ಡಿಜಿಟಲ್ ತಂತ್ರಜ್ಞಾನದಿಂದ ಹಲವಾರು ಅಪಾಯಕಾರಿ ಘಟನೆಗಳು ಸೃಷ್ಟಿಯಾಗುತ್ತಿರುವುದನ್ನು ಅಲ್ಲಗಳೆಯುವಂತಿಲ್ಲ. ಅವುಗಳಲ್ಲಿ ಪ್ರಮುಖವಾದುದೆಂದರೆ ಮೋಸ, ವಂಚನೆ, ಕಟ್ಟುಕಥೆ, ಸುಳ್ಳು ಮಾಹಿತಿಗಳು ಸೇರಿವೆ. ಇದಲ್ಲದೆ ಉತ್ತಮ ಭವಿತವ್ಯವನ್ನು ನಿರ್ಮಿಸಿಕೊಳ್ಳಬೇಕಾದ ಯುವಸಮೂಹವು ದಿನದ ಬಹುತೇಕ ಸಮಯವನ್ನು ಮೊಬೈಲ್, ಟಿ.ವಿ., ಲ್ಯಾಪ್ಟಾಪ್ ಮತ್ತು ಕಂಪ್ಯೂಟರ್ಗಳೊಂದಿಗೆ ಕಳೆಯುತ್ತಿರುವುದು ಅತ್ಯಂತ ಅಪಾಯಕಾರಿಯಾದ ಬೆಳವಣಿಗೆಯಾಗಿದೆ.
ಹಿಂದೆಲ್ಲಾ ಜಗತ್ತು ಕಡಿಮೆ ಜನಸಂಖ್ಯೆಯನ್ನು ಹೊಂದಿತ್ತು. ಆಗ ಆಸೆಗಳಿಲ್ಲದ ಆಶಾವಾದಿ ಮನೋಭಾವದ ಮನುಕುಲವು ಜೀವಂತವಾಗಿತ್ತು. ದಿನಕಳೆದಂತೆ ಜನಸಂಖ್ಯೆಯು ಹೆಚ್ಚಳವಾಯಿತು, ಪ್ರತಿಯೊಬ್ಬರಲ್ಲಿ ಆಸೆಗಳೊಂದಿಗೆ ದುರಾಸೆ ಮತ್ತು ನಿರಾಸೆಗಳು ನಿರೀಕ್ಷೆ ಮೀರಿ ಬೆಳೆದವು. ಬದುಕಿಗೆ ಬೇಕಾಗಿರುವ ಉತ್ತಮ ಮತ್ತು ಕಪಟ ವಿದ್ಯೆಗಳು ಸೃಷ್ಟಿಯಾದವು. ಆಗ ತಾನೇ ಅಂಬೆಗಾಲಿಡುತ್ತ ಆಗಮಿಸುತ್ತಿದ್ದ ಡಿಜಿಟಲ್ ಪ್ರಪಂಚವು ಇವುಗಳಿಗೆ ಬೆಂಬಲವಾಗಿ ಬೆಳೆಯಲು ಪ್ರಾರಂಭಿಸಿತು. ದಿನಕಳೆದಂತೆ ಇಂಟರ್ನೆಟ್, ಸಾಮಾಜಿಕ ಜಾಲತಾಣ, ಆನ್ಲೈನ್ ಗೇಮಿಂಗ್ ಮತ್ತು ಕೃತಕ ಬುದ್ಧಿಮತ್ತೆಗಳೆಂಬ ಈ ಡಿಜಿಟಲ್ ಪ್ರಪಂಚವು ಅವಶ್ಯಕ ಬದಲಾವಣೆಗಳೊಂದಿಗೆ ಬಹುವೇಗವಾಗಿ ಗಟ್ಟಿಯಾದ ನೆಲೆಯನ್ನು ಕಂಡುಕೊಂಡಿರುವುದು ಇತಿಹಾಸವಾಗಿದೆ.
ಪ್ರಸ್ತುತ ಪ್ರಪಂಚದಲ್ಲಿ ಬಹುನಿರೀಕ್ಷಿತ ಮತ್ತು ಅನಿರೀಕ್ಷಿತ ವ್ಯವಹಾರ, ವಹಿವಾಟುಗಳ ಒತ್ತಡದಿಂದ ಡಿಜಿಟಲ್ ಬಳಕೆಯು ನಿರಂತರವಾಗಿ, ವೇಗವಾಗಿ ಹಾಗೂ ಅನಿವಾರ್ಯವಾಗಿರುವುದು ಗಮನಾರ್ಹ. ಹೀಗೆ ನಿರಂತರ ಬಳಕೆಯ ಡಿಜಿಟಲ್ ಪ್ರಪಂಚವು ಮನುಕುಲದ ಆರೋಗ್ಯದ ಮೇಲೆ ಅಪಾಯಕಾರಿಯಾದ ಹಂತವನ್ನು ತಂದೊಡ್ಡಿದೆ. ಬದುಕಿನಲ್ಲಿ ಬರುವ ತಂತ್ರಜ್ಞಾನಗಳು ಮನುಕುಲದ ಆರೋಗ್ಯಕ್ಕೆ ಸಹಕಾರಿಯಾಗಿರಬೇಕೇ ವಿನಃ ವಿನಾಶಕ್ಕೆ ಕಾರಣವಾಗಬಾರದು. ಇಂದು ಡಿಜಿಟಲ್ ತಂತ್ರಜ್ಞಾನದ ಮೂಲಕ ವಿಶ್ವದಲ್ಲಿನ ಯಾವುದೇ ಮೂಲೆಯಲ್ಲಿನ ಮಾಹಿತಿಯನ್ನು ಕ್ಷಣಮಾತ್ರದಲ್ಲಿ ಪಡೆಯಬಹುದಾಗಿದೆ. ಜೊತೆಗೆ ಪ್ರತಿಯೊಂದು ಕ್ಷೇತ್ರಗಳಲ್ಲಿ ಪೈಪೋಟಿ ಹೆಚ್ಚಾಗುತ್ತಿದೆ. ಇವೆಲ್ಲ ಬೆಳವಣಿಗೆಗಳಿಂದ ಡಿಜಿಟಲ್ ಪ್ರಪಂಚವು ಮನುಕುಲದ ಬದುಕಿಗೆ ಅವಶ್ಯವಾಗಿರುವುದರಿಂದ, ಮನುಕುಲವು ಇದರಿಂದ ಹೊರಬರಲಾರದಷ್ಟು ಆಳದಲ್ಲಿ ಸಿಲುಕಿದೆ.
ದಿನನಿತ್ಯ ಡಿಜಿಟಲ್ ಬಳಕೆಯಿಂದ ದೈಹಿಕವಾಗಿ ಮತ್ತು ಮಾನಸಿಕ ಉದ್ವೇಗದಿಂದ ಆರೋಗ್ಯ ಹದಗೆಡುತ್ತಿದೆ. ಏಕಾಗ್ರತೆ ಕೊರತೆ, ಆತಂಕ, ಖಿನ್ನತೆ, ಸಾಮಾಜಿಕ ಪ್ರತ್ಯೇಕತೆ, ಸ್ಥೂಲಕಾಯ, ದೈಹಿಕ ನಿಷ್ಕ್ರಿಯತೆ, ನಿದ್ರಾಹೀನತೆ, ಕಣ್ಣು ಉರಿ, ಘಂಟೆಗಳ ಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದು, ಡೇಟಾಗಳ ಸಂಯೋಜನೆಯಿಂದ ಒತ್ತಡ, ಸಮಯಾನುಸಾರ ಆಹಾರ ಸೇವಿಸದಿರುವುದು, ಅವಸರಕ್ಕಾಗಿ ಹಸಿವಾದಾಗ ಏನಾದರೂ ತಿನ್ನುವುದು, ವಿಶ್ರಾಂತರಹಿತ ಕಾರ್ಯ ಸೇರಿದಂತೆ ಹಲವು ಅನಾರೋಗ್ಯಕರ ಬೆಳವಣಿಗೆಗಳನ್ನು ದಿನನಿತ್ಯ ಎದುರಿಸಲಾಗುತ್ತಿದೆ. ಇದೆಲ್ಲ ನಿಜವಾದರೂ ಈಗಿನ ಕಾಲಘಟ್ಟದಲ್ಲಿ ಡಿಜಿಟಲ್ ವ್ಯವಸ್ಥೆಯಿಂದ ದೂರವಿರುವುದು ಸಾಧ್ಯವೆ? ಖಂಡಿತವಾಗಿಯೂ ಸಾಧ್ಯವಿಲ್ಲ. ದೂರವಾದರೆ ವೈಯಕ್ತಿಕ ಬದುಕಿನಲ್ಲಿ ಹಲವಷ್ಟನ್ನು ಕಳೆದುಕೊಳ್ಳುತ್ತೇವೆ ಎಂಬ ಭಯದಿಂದ ದಿನಪೂರ್ತಿ ಇದರೊಂದಿಗೆ ಕಾಲ ಕಳೆಯಲೇ ಬೇಕಾದ ಪರಿಸ್ಥಿತಿ ಎದುರಾಗಿದೆ.
ಆದ್ದರಿಂದ ಡಿಜಿಟಲ್ ಪ್ರಪಂಚದಿಂದ ನಮ್ಮನ್ನು ಒಂದಿಷ್ಟಾದರೂ ನಿಯಂತ್ರಿಸಿ ಕೊಳ್ಳಲು ಯುವಜನತೆ ಮುಂದಾಗಬೇಕಿದೆ ಅದು ಹೇಗೆಂದರೆ:
* ಅವಶ್ಯಕ ಮಾನವಶಕ್ತಿಯನ್ನು ಬಳಸಿಕೊಂಡು ವಾರದಲ್ಲಿ ಕನಿಷ್ಠ ಒಂದು ದಿನ ಡಿಜಿಟಲ್ ಪ್ರಪಂಚದಿಂದ ದೂರವಿರಬೇಕು.
* ಗಂಟೆಗೊಮ್ಮೆ ಐದು ನಿಮಿಷ ಕಣ್ಣು ಮುಚ್ಚಬೇಕು, ಕುಳಿತಿರುವ ಭಂಗಿ ಮತ್ತು ಟಿ.ವಿ., ಕಂಪ್ಯೂಟರ್ ಪರದೆಯು ನೇರವಾಗಿರಬೇಕು.
* ನಿರಂತರವಾಗಿ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳಬಾರದು, ಪ್ರತೀ ಗಂಟೆಗೊಮ್ಮೆ ಎದ್ದು ಐದು ನಿಮಿಷ ತಿರುಗಾಡಬೇಕು.
* ಪ್ರತಿಯೊಂದಕ್ಕೂ ಡಿಜಿಟಲ್ ಮೇಲೆ ಅವಲಂಬಿತವಾಗಬಾರದು, ಹಾರ್ಡ್ಕಾಫಿ ಲಭ್ಯವಿದ್ದಲ್ಲಿ ಅವುಗಳನ್ನು ಪರಿಶೀಲಿಸಬೇಕು.
* ಸಾಮಾಜಿಕ ಜಾಲತಾಣಗಳಿಗೆ ನಿರ್ದಿಷ್ಟ ಸಮಯ ನಿಗದಿಪಡಿಸಬೇಕು.
* ನಿದ್ರಾ ಸಮಯದ ಕನಿಷ್ಠ ಒಂದು ಗಂಟೆ ಮೊದಲಿಗೆ ಮೊಬೈಲ್, ಕಂಪ್ಯೂಟರ್ನಿಂದ ದೂರವಾಗಬೇಕು, ಈ ಒಂದು ಗಂಟೆ ಸಮಯದಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬಹುದು.
* ಅವಶ್ಯವಿರುವ ಸಣ್ಣ-ಪುಟ್ಟ ದೈಹಿಕ ಕೆಲಸಗಳನ್ನು ಸ್ವತಃ ನಿರ್ವಹಿಸುತ್ತಿರಬೇಕು. ಸಾಧ್ಯವಾದಷ್ಟು ಮತ್ತೊಬ್ಬರ ಮೇಲೆ ಅವಲಂಬಿತವಾಗಬಾರದು.
*ನಿಯಮಿತವಾಗಿ ದೈಹಿಕ ವ್ಯಾಯಾಮ ಅವಶ್ಯ.
ಹೀಗೆ ಡಿಜಿಟಲ್ ವ್ಯವಸ್ಥೆಯೊಂದಿಗೆ ಆರೋಗ್ಯಕರ ಸಂಬಂಧವಿರಿಸಿಕೊಂಡರೆ ನಮ್ಮ ಬದುಕನ್ನೂ ಹೆಚ್ಚು ಆರೋಗ್ಯವಾಗಿರಿಸಿಕೊಳ್ಳಬಹುದು.