ಅವಕಾಶವಾದಿ ನಿತೀಶ್ ಎನ್‌ಡಿಎ ದಡ ಮುಟ್ಟಿಸುವರೇ?

Update: 2024-04-25 06:23 GMT

2015ರ ವಿಧಾನಸಭೆ ಚುನಾವಣೆ ಸಂದರ್ಭ. ನಾನಾಗ ದಿಲ್ಲಿಯಲ್ಲಿದ್ದೆ. ಚುನಾವಣೆ ಸಮೀಕ್ಷೆಗೆ ಅಲ್ಲಿಗೆ ಹೋಗುವ ಅವಕಾಶ ಒದಗಿತು.ಸುಮಾರು ಒಂದು ತಿಂಗಳು ಪ್ರವಾಸ ಮಾಡಿ ಸರಣಿ ವಿಶ್ಲೇಷಣೆಗಳನ್ನು ಬರೆದೆ.243 ಸದಸ್ಯ ಬಲದ ವಿಧಾನಸಭೆಯಲ್ಲಿಆರ್‌ಜೆಡಿ 80 ಸ್ಥಾಗಳನ್ನು ಗೆದ್ದು ದೊಡ್ಡ ಪಕ್ಷವಾಯಿತು.ಜೆಡಿಯು 71,ಕಾಂಗ್ರೆಸ್ 27 ಮತ್ತು ಬಿಜೆಪಿ 53 ಸ್ಥಾನಗಳನ್ನು ಪಡೆದವು.ಆರ್‌ಜೆಡಿ ಹಾಗೂ ಕಾಂಗ್ರೆಸ್ ಬೆಂಬಲದಿಂದ ನಿತೀಶ್ ಸರಕಾರ ರಚಿಸಿದರು.

ಇದಕ್ಕೂ ಮುನ್ನ, 2014ರಲ್ಲಿ ಲೋಕಸಭೆಗೂ ಚುನಾವಣೆ ನಡೆಯಿತು.ಕೇಂದ್ರದಲ್ಲಿ 10 ವರ್ಷ ಅಧಿಕಾರ ನಡೆಸಿದ್ದ ಯುಪಿಎ ಸೋತು,ನರೇಂದ್ರ ಮೋದಿ ಅವರ ಎನ್‌ಡಿಎ ಸರಕಾರ ಗದ್ದುಗೆ ಏರಿತು..ದೇಶದ ಕೆಲವು ರಾಜ್ಯಗಳ ಜತೆ ಬಿಹಾರದಲ್ಲೂ ಬದಲಾವಣೆ ಗಾಳಿ ಬೀಸಿತು. ಮೋದಿ ಅವರಿಗೆ ಬಿಜೆಪಿ ನಾಯಕತ್ವ ಕೊಟ್ಟಿದ್ದನ್ನು ವಿರೋಧಿಸಿ 2013ರಲ್ಲೇ ನಿತೀಶ್ ಎನ್‌ಡಿಎಯಿಂದ ಹೊರ ಬಂದು ಆರ್‌ಜೆಡಿ- ಕಾಂಗ್ರೆಸ್ ಜತೆ ಸೇರಿದರು.

ಆದರೆ, ಮತದಾರರು ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷ ತಿರಸ್ಕರಿಸಿ,ಬಿಜೆಪಿಗೆ ಮಣೆ ಹಾಕಿದರು.ಒಟ್ಟು 40 ಸ್ಥಾನಗಳಲ್ಲಿ ಬಿಜೆಪಿ 22 ಸ್ಥಾನಗಳನ್ನು ಪಡೆದರೆ,ನಿತೀಶ್ ಅವರ ಪಕ್ಷಕ್ಕೆ ಸಿಕ್ಕಿದ್ದು ಬರೀ 2 ಸ್ಥಾನ.ಆರ್‌ಜೆಡಿ 4, ಕಾಂಗ್ರೆಸ್ 2, ಆರ್‌ಎಲ್‌ಎಸ್‌ಪಿ 3 ಹಾಗೂ ಎಲ್‌ಜೆಪಿ 6 ಕ್ಷೇತ್ರಗಳಲ್ಲಿ ಗೆದ್ದವು. 2019ರ ಚುನಾವಣೆಯಲ್ಲೂ ಹೆಚ್ಚುಕಡಿಮೆ ಯುಪಿಎ ಮುಖಭಂಗ ಅನುಭವಿಸಿತು.

ಬಿಹಾರ ರಾಜಕಾರಣ ಅರ್ಥ ಮಾಡಿಕೊಳ್ಳಬೇಕಾದರೆ ನಾಲ್ಕಾರು ಚುನಾವಣೆಗಳನ್ನು ವಿಶ್ಲೇಷಿಸಬೇಕು.ರಾಜಕೀಯ ಪಕ್ಷಗಳ ಇತಿಹಾಸ ಕೆದಕಬೇಕು.1990ರ ಬಳಿಕ ಆ ರಾಜ್ಯ ಯಾವ ಪಕ್ಷಗಳತ್ತ ಹೊರಳಿದೆ ಎಂದು ಗಮನಿಸಬೇಕು. ಕಳೆದ ಮೂರು ದಶಕಗಳಲ್ಲಿ ಬಿಹಾರದ ಜನ ಆಗಾಗ ಲಾಲು ಪ್ರಸಾದ್ ಅವರ ಆರ್‌ಜೆಡಿ ಮತ್ತು ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷಗಳನ್ನು ಸಂಪೂರ್ಣವಾಗಿ ಅಲ್ಲದಿದ್ದರೂ, ಉಳಿದ ಪಕ್ಷಗಳಿಗಿಂತ ಹೆಚ್ಚು ಬೆಂಬಲಿಸುತ್ತಾ ಬಂದಿದ್ದಾರೆ.ಇವೆರಡೂ ಪಕ್ಷಗಳು ಬೇರೆ ಬೇರೆ ಪಕ್ಷಗಳ ಆಶ್ರಯದಲ್ಲಿ ಸರಕಾರ ಮಾಡಿವೆ. 2014ರ ಲೋಕಸಭೆ ಚುನಾವಣೆ ಬಳಿಕ ಇಲ್ಲಿ ಬಿಜೆಪಿ ಪ್ರಾಬಲ್ಯವಿದೆ.

ಲಾಲು ಪ್ರಸಾದ್ ಮತ್ತು ನಿತೀಶ್ ಕುಮಾರ್ ಇಬ್ಬರೂ ಒಂದೇ ಗರಡಿಯಲ್ಲಿ ಪಳಗಿದವರು.ಸಮಾಜವಾದಿ ಚಳವಳಿಯ ನೇತಾರರಾದ ಡಾ.ರಾಮಮನೋಹರ ಲೋಹಿಯಾ ಹಾಗೂ ಜಯಪ್ರಕಾಶ್ ನಾರಾಯಣ್ ಅವರ ವಿಚಾರಗಳಿಂದ ಪ್ರಭಾವಿತರಾದವರು.ಇಂದಿರಾಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿ ವಿರೋಧಿಸಿದವರು.ಮುಂದೆ, ರಾಜಕೀಯ ಅಧಿಕಾರ ಬಂದ ಬಳಿಕ ಬದಲಾಗಿದ್ದು ಬೇರೆ ವಿಚಾರ. ಲಾಲು ಕುಟುಂಬ ರಾಜಕಾರಣದ ಚಕ್ರವ್ಯೆಹದಲ್ಲಿ ಸಿಕ್ಕಿಕೊಂಡರು. ‘ಮೇವು ಹಗರಣ’ದ ಉರುಳು ಕೊರಳಿಗೆ ಸುತ್ತಿಕೊಂಡು ಜೈಲಿಗೂ ಹೋಗಿ ಬಂದರು. ಯುಪಿಎ ಸರಕಾರದಲ್ಲಿ ರೈಲ್ವೆ ಸಚಿವರಾಗಿದ್ದಾಗ ‘ಉದ್ಯೋಗಕ್ಕಾಗಿ ಫಲಾನುಭವಿಗಳಿಂದ ಜಮೀನು ಬರೆಸಿಕೊಂಡ ಆರೋಪ’ಕ್ಕೂ ಒಳಗಾಗಿ ವಿಚಾರಣೆ ಎದುರಿಸುತ್ತಿದ್ದಾರೆ.

ನಿತೀಶ್ ಕುಮಾರ್ ಅಧಿಕಾರಕ್ಕೆ ಜೋತುಬಿದ್ದು ‘ಅವಕಾಶವಾದಿ ರಾಜಕಾರಣ’ ಮಾಡುತ್ತಿದ್ದಾರೆ.ಪದೇ ಪದೇಮಿತ್ರ ಪಕ್ಷಗಳನ್ನು ಬದಲಿಸುತ್ತಿದ್ದಾರೆ. ಒಮ್ಮೆ ಯುಪಿಎ, ಮತ್ತೊಮ್ಮೆ ಎನ್‌ಡಿಎ ಜತೆ ಸೇರುತ್ತಿದ್ದಾರೆ. 2020ರ ವಿಧಾನಸಭೆ ಚುನಾವಣೆಯನ್ನು ಎನ್‌ಡಿಎ ಜತೆ ಎದುರಿಸಿ, ಅಧಿಕಾರಕ್ಕೇರಿದ್ದ ಜೆಡಿಯು ನಾಯಕ ಎರಡೇ ವರ್ಷದಲ್ಲಿ ಮೈತ್ರಿ ತ್ಯಜಿಸಿ, ಆರ್‌ಜೆಡಿ ಹಾಗೂ ಕಾಂಗ್ರೆಸ್ ಜತೆ ಅಧಿಕಾರ ಹಂಚಿಕೊಂಡರು. ಅವರ ಸರಕಾರದಲ್ಲಿ ಲಾಲು ಅವರ ಪುತ್ರ ತೇಜಸ್ವಿ ಯಾದವ್ ಉಪ ಮುಖ್ಯಮಂತ್ರಿಯಾದರು.

17 ತಿಂಗಳಲ್ಲಿ ಈ ಸಂಬಂಧ ಕಡಿದುಕೊಂಡು ಪುನಃ ಎನ್‌ಡಿಎಗೆ ಮರಳಿದ್ದಾರೆ. ಮುಖ್ಯಮಂತ್ರಿಯವರ ಅವಕಾಶವಾದಿ ರಾಜಕಾರಣ ಬಿಹಾರಾದ್ಯಂತ ಚರ್ಚೆಯಾಗುತ್ತಿದೆ. ಈಗ ಅವರನ್ನು ಜನ ‘ಪಲ್ಟೂರಾಮ್’ ಎಂದು ಲೇವಡಿ ಮಾಡುತ್ತಿದ್ದಾರೆ.

ಬಿಹಾರದಲ್ಲಿ 1990ರಿಂದ ಸತತ 15 ವರ್ಷ ಅಧಿಕಾರ ನಡೆಸಿದ ಲಾಲು ಅವರ ಪಕ್ಷವನ್ನು ಮತದಾರರು 2005ರಲ್ಲಿ ಕಿತ್ತೊಗೆದರು. ಅದೇ ವರ್ಷ ಫೆಬ್ರವರಿಯಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದೆ, ಸರಕಾರ ಮಾಡುವುದು ಕಷ್ಟವಾದ್ದರಿಂದ ಅಕ್ಟೋಬರ್-ನವೆಂಬರ್‌ನಲ್ಲಿ ಮತ್ತೆ ಮತದಾನ ನಡೆಯಿತು. ಬಳಿಕಎನ್‌ಡಿಎ ಜತೆ ಸೇರಿ ಜೆಡಿಯು ಅಧಿಕಾರ ಹಿಡಿಯಿತು. 2010ರಲ್ಲೂ ಮೈತ್ರಿ ಮುಂದುವರಿಯಿತು. 2014ರಲ್ಲಿ ಆರ್‌ಜೆಡಿ, ಕಾಂಗ್ರೆಸ್ ಒಳಗೊಂಡಿದ್ದ ಯುಪಿಎ ತೆಕ್ಕೆಗೆ ನಿತೀಶ್ ಕುಮಾರ್ ಜಿಗಿದರು. ಮುಖ್ಯಮಂತ್ರಿ ಆರಂಭದಿಂದಲೂ ಅವಕಾಶವಾದಿ ರಾಜಕಾರಣದ ಸುಳಿವು ನೀಡಿದ್ದರೂ ಜನಪ್ರಿಯ ನಾಯಕರಾಗಿದ್ದರು. ಇವರು ಮೋದಿಗೆ ಪರ್ಯಾಯ ನಾಯಕರಾಗಬಹುದು ಎಂದು ಜನ ನಿರೀಕ್ಷಿಸಿದ್ದರು. ಮೇಲಿಂದ ಮೇಲೆ ರಾಜಕೀಯ ನಿಲುವು ಬದಲಿಸದಿದ್ದರೆ ಇಷ್ಟು ಹೊತ್ತಿಗೆ ರಾಷ್ಟ್ರ ರಾಜಕಾರಣದಲ್ಲಿ ಮಿಂಚುತ್ತಿದ್ದರೇನೊ? ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿ ಆಗುತ್ತಿದ್ದರೇನೊ ಆದರೆ, ಸಿಕ್ಕ ಅವಕಾಶ ಹಾಳುಮಾಡಿಕೊಂಡರು.

ಎನ್‌ಡಿಎಗೆ ಪ್ರತಿಯಾಗಿ ಕಾಂಗ್ರೆಸ್ ಮತ್ತಿತರ ವಿರೋಧ ಪಕ್ಷಗಳು ಮಾಡಿಕೊಂಡಿರುವ ‘ಇಂಡಿಯಾ’ ಮೈತ್ರಿ ಕೂಟದ ಸಂಚಾಲಕತ್ವ ಸಿಗಲಿಲ್ಲವೆಂದು ಅಸಮಾಧಾನಗೊಂಡು ಇತ್ತೀಚೆಗೆ ನಿತೀಶ್ ಹೊರಹೋಗಿದ್ದಾರೆ. ಇದೊಂದೇ ಕಾರಣಕ್ಕೆ ಎನ್‌ಡಿಎಗೆ ಮರು ಸೇರ್ಪಡೆ ಯಾದರೆಂದು ಹೇಳಲಾಗದು. ಬೆಳೆಯುತ್ತಿರುವ ತೇಜಸ್ವಿ ಅವರ ‘ಪಾಪ್ಯೂಲಾರಟಿ’ಯೂ ಇದರ ಹಿಂದಿರಬಹುದು.

ವಿಪರ್ಯಾಸವೆಂದರೆ ಇದೇ ಇರಬಹುದು. ಮೋದಿ ಅವರಿಗಿಂತ ಯಾವುದರಲ್ಲೂ ಕಡಿಮೆ ಇಲ್ಲದ ನಿತೀಶ್, ಪ್ರಧಾನಿ ಮುಂದೆ ನಡು ಬಗ್ಗಿಸಿದರು. ಅವರ ನಾಯಕತ್ವದಲ್ಲೇ ಚುನಾವಣೆಗೆ ಹೋಗುತ್ತಿದ್ದಾರೆ. ಲೋಕಸಭೆ ಚುನಾವಣೆ ಬಿಹಾರದಲ್ಲಿ ಏಳು ಹಂತದಲ್ಲಿ ನಡೆಯಲಿದ್ದು, ಬಿಜೆಪಿ 17, ಜೆಡಿಯು 16, ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ 5, ಮಾಜಿ ಮುಖ್ಯಮಂತ್ರಿ ಜಿತನ್‌ರಾಂ ಮಾಂಝಿ ಅವರ ಹಿಂದೂಸ್ತಾನ್ ಅವಾಮಿ ಮೋರ್ಚಾ (ಎಚ್‌ಎಎಂ) ಹಾಗೂ ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಸಮತಾ ಪಾರ್ಟಿ (ಆರ್‌ಎಲ್‌ಎಸ್‌ಪಿ) ತಲಾ ಒಂದು ಕ್ಷೇತ್ರಗಳಲ್ಲಿ ಕಣಕ್ಕಿಳಿದಿವೆ.

ಇನ್ನೊಂದೆಡೆ, ‘ಇಂಡಿಯಾ’ ಮೈತ್ರಿಕೂಟದ ಪಾಲುದಾರ ಪಕ್ಷಗಳಾದ ಆರ್‌ಜೆಡಿ 26, ಕಾಂಗ್ರೆಸ್ 9, ಎಡ ಪಕ್ಷಗಳು ಐದು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿವೆ. ಆರ್‌ಜೆಡಿ ತನ್ನದೇ ಕೋಟಾದಲ್ಲಿ ಮೂರು ಕ್ಷೇತ್ರಗಳನ್ನು‘ವಿಐಪಿ’ ಪಕ್ಷಕ್ಕೆ ಬಿಟ್ಟುಕೊಟ್ಟಿದೆ. ಬಿಹಾರದಲ್ಲಿ ಅನೇಕ ನದಿಗಳು ಹರಿಯುತ್ತಿದ್ದು ಕೆಲವು ಭಾಗಗಳಲ್ಲಿ ಮೀನುಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವಿಐಪಿ ಅವರದೇ ಪಕ್ಷ ಹೀಗಾಗಿ, 3 ಕ್ಷೇತ್ರ ಕೊಡಲಾಗಿದೆ.

ನಿತೀಶ್ ಕುಮಾರ್ ಪದೇ ಪದೇ ರಾಜಕೀಯ ಬಣ್ಣ ಬದಲಿಸುತ್ತಿರುವುದರಿಂದ ಅವರನ್ನು ಮತದಾರರು ನಂಬುವುದು ಕಷ್ಟ. ಏಕೆಂದರೆ, ಬಿಹಾರದಲ್ಲಿ ನಿತೀಶ್ ಅವರ ವಿಶ್ವಾಸಾರ್ಹತೆ ಕುಗ್ಗಿದೆ. ಅವರ ಸರಕಾರದ ಕಾರ್ಯಕ್ಷಮತೆಯೂ ಹೇಳಿಕೊಳ್ಳುವಂತಿಲ್ಲ. ಆದರೆ, ಮಹಿಳೆಯರ ಪರವಾದ ಕಾರ್ಯಕ್ರಮಗಳು ನಿತೀಶ್ ಅವರ ರಕ್ಷಣೆಗೆ ಬರಬಹುದು. ಸರಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೂ ಸಮಾನ ಪಾಲು ಸಿಕ್ಕಿರುವುದು ಜೆಡಿಯುಗೆ ಅನುಕೂಲವಾಗ ಬಹುದು. ಪಂಚಾಯತ್‌ಗಳಲ್ಲಿ ಮಹಿಳೆಯರಿಗೆ ಸೂಕ್ತ ಅವಕಾಶ ದೊರೆತಿದೆ. ಶಿಕ್ಷಣ, ಪೊಲೀಸ್, ಆರೋಗ್ಯ ಸೇರಿದಂತೆ ಅನೇಕ ಸರಕಾರಿ ಇಲಾಖೆಗಳಲ್ಲಿ ಆಗಿರುವ ಸುಮಾರು 2 ಲಕ್ಷ ನೇಮಕಾತಿಗಳ ಲಾಭ ಪಡೆಯಲು ಆರ್‌ಜೆಡಿ ಮತ್ತು ಜೆಡಿಯು ಕಿತ್ತಾಡುತ್ತಿವೆ. ಲಾಲು ಹಗರಣಗಳನ್ನು ಚುನಾವಣೆಯ ಪ್ರಮುಖ ಅಸ್ತ್ರವಾಗಿ ಎನ್‌ಡಿಎ ಬಳಸುತ್ತಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಮೋದಿ ಅವರ ವರ್ಚಸ್ಸನ್ನೇ ನಿತೀಶ್ ಅವಲಂಬಿಸಿದ್ದಾರೆ. ಹಿಂದಿನ ಎರಡು ಚುನಾವಣೆಗಳಿಗೆ ಹೋಲಿಸಿದರೆ ಪ್ರಧಾನಿ ಜನಪ್ರಿಯತೆಯ ಗ್ರಾಫ್ ಕೊಂಚ ಇಳಿದಂತೆ ಕಾಣುತ್ತಿದ್ದರೂ, ಅಯೋಧ್ಯೆ ರಾಮನ ಬಲವನ್ನು ಎನ್‌ಡಿಎ ನೆಚ್ಚಿಕೊಂಡಿದೆ. ಬಿಹಾರದಲ್ಲಿ ಎನ್‌ಡಿಎ ನಾಯಕರು ವ್ಯಾಪಕ ಪ್ರಚಾರ ಮಾಡುತ್ತಿದ್ದಾರೆ. ನಿತೀಶ್ ಪುನಃ ಮರಳಿರುವುದರಿಂದ ರಾಜಕೀಯ ಶಕ್ತಿ ಹೆಚ್ಚಬಹುದು ಎಂದು ಬಿಜೆಪಿ ಭಾವಿಸಿದೆ. ಅವರೊಟ್ಟಿಗೆ ಚಿರಾಗ್ ಪಾಸ್ವಾನ್, ಮಾಂಝಿ ಮತ್ತು ಕುಶ್ವಾಹ

ಅವರಿಂದ ದಲಿತರು, ಹಿಂದುಳಿದವರು ಮತ್ತು ಅತೀ ಹಿಂದುಳಿದವರೂ ಬೆಂಬಲಿಸಬಹುದು ಎಂದು ನಿರೀಕ್ಷಿಸಿದೆ. ಶೇಕಡಾವಾರು ಮತ ಪ್ರಮಾಣ ಗಮನಿಸಿದರೆ ಬಿಜೆಪಿ

ಶೇ. 20, ಜೆಡಿಯು ಶೇ. 15, ಎಲ್‌ಜೆಪಿ ಶೇ. 3- 4, ಎಚ್‌ಎಎಂ ಶೇ. 3 ಹಾಗೂ ಆರ್‌ಎಲ್‌ಎಸ್‌ಪಿಗೂ ಅಲ್ಪಸ್ವಲ್ಪ ಮತಗಳಿವೆ.. ಅತ್ತ ಕಡೆ, ಆರ್‌ಜೆಡಿಯೂ ಶೇ. 20, ಕಾಂಗ್ರೆಸ್ ಶೇ. 8, ಎಡ ಪಕ್ಷಗಳು ಶೇ. 5 ಹಾಗೂ ವಿಐಪಿ ಪಕ್ಷ

ಶೇ. 3ರಷ್ಟು ಮತ ಬ್ಯಾಂಕ್ ಹೊಂದಿವೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 17, ಜೆಡಿಯು 16, ಎಲ್‌ಜೆಪಿ 06 ಮತ್ತು ಕಾಂಗ್ರೆಸ್ 1 ಸ್ಥಾನ ಗೆದ್ದಿವೆ. ಆರ್‌ಜೆಡಿಗೆ ಶೇ. 15.36 ರಷ್ಟು ಮತಗಳು ಬಿದ್ದರೂ ಸೀಟುಗಳಾಗಿ ಪರಿವರ್ತನೆ

ಗೊಂಡಿಲ್ಲ.

ಲಾಲು ಪ್ರಸಾದ್ ಅವರ ಆರು ಮಕ್ಕಳು ರಾಜಕಾರಣದಲ್ಲಿದ್ದರೂ ಆರ್‌ಜೆಡಿಗೆ ತೇಜಸ್ವಿ ಯಾದವ್ ಅವರೇ ಆಸರೆ. ಕೋವಿಡ್ ಬಳಿಕ ನಡೆದ ವಿಧಾನಸಭೆ ಚುನಾವಣೆಯಲ್ಲಿ (2020) ಏಕಾಂಗಿಯಾಗಿ ಪಕ್ಷಕ್ಕೆ 75 ಸ್ಥಾನ ಗಿಟ್ಟಿಸಿಕೊಟ್ಟಿದ್ದಾರೆ. ಶಾಸಕರ ಬಲಾಬಲದ ದೃಷ್ಟಿಯಿಂದಲೂ ಅತ್ಯಂತ ದೊಡ್ಡ ಪಕ್ಷವಾಗಿದೆ. ಒಂದು ಸ್ಥಾನ ಕಡಿಮೆ ಪಡೆದಿರುವ ಬಿಜೆಪಿ ಎರಡನೇ ಸ್ಥಾನಕ್ಕಿಳಿದಿದೆ. ಜೆಡಿಯು 43, ಕಾಂಗ್ರೆಸ್ 19, ಎಲ್‌ಜೆಪಿ 1 ಸ್ಥಾನ ಪಡೆದಿವೆ. ಎಡ ಪಕ್ಷಗಳು 16 ಸ್ಥಾನಗಳನ್ನು ಗಳಿಸಿವೆ. ಉಳಿದ ಸ್ಥಾನಗಳು ಪಕ್ಷೇತರರ ಪಾಲಾಗಿವೆ.

ಲೋಕಸಭೆ ಚುನಾವಣೆಯಲ್ಲೂ ತೇಜಸ್ವಿಯವರ ಮೇಲೆ ದೊಡ್ಡ ಜವಾಬ್ದಾರಿ ಇದೆ. 17 ತಿಂಗಳ ತಮ್ಮ ಆಡಳಿತವನ್ನೇ ಜನರ ಮುಂದಿಡುತ್ತಿದ್ದಾರೆ ತೇಜಸ್ವಿ. ಲಾಲು ಅವರನ್ನು ಪ್ರಚಾರದಿಂದ ದೂರವಿಡುವ ಮೂಲಕ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ. ಆರ್‌ಜೆಡಿಗಿರುವ ಕೆಲವು ಅಡೆತಡೆಗಳೆಂದರೆ, ಮಿತ್ರ ಪಕ್ಷಗಳ ನಡುವೆ ಸೀಟು ಹಂಚಿಕೆ ಸರಿಯಾಗಿ ಆಗಿಲ್ಲ. ಕಾಂಗ್ರೆಸ್‌ಗೆ ಬಿಟ್ಟಿರುವ 9 ಕ್ಷೇತ್ರಗಳಲ್ಲಿ ಕಟಿಯಾರ್ ಮತ್ತು ಕಿಷನ್‌ಗಂಜ್ ಮಾತ್ರವೇ ಸುರಕ್ಷಿತ ಕ್ಷೇತ್ರಗಳು. ತಮ್ಮ ಪಕ್ಷದಲ್ಲೇ ಅನೇಕ ನಿಷ್ಠಾವಂತರಿಗೆ ತೇಜಸ್ವಿ ಟಿಕೆಟ್ ಕೊಡದೆ, ಅಪ್ರಾಮಾಣಿಕರನ್ನು ಕಣಕ್ಕಿಳಿಸಿದ್ದಾರೆ ಎಂಬ ಅಸಮಾಧಾನವಿದೆ.

ಲಾಲು ಕುಟುಂಬದ ಸದಸ್ಯರು ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತಿದ್ದಾರೆ. ಯಾದವರು ಹಾಗೂ ಮುಸ್ಲಿಮರ ಮತಗಳನ್ನು ಇಂಡಿಯಾ ಮೈತ್ರಿಕೂಟ ಸಂಪೂರ್ಣ ನಂಬಿಕೊಂಡಿದೆ. ಇದರೊಟ್ಟಿಗೆ ಇತರ ಹಿಂದುಳಿದ ವರ್ಗ ಮತ್ತು ಅತೀ ಹಿಂದುಳಿದ ವರ್ಗಗಳ ಮತಗಳೂ ಬರಬಹುದು ಎನ್ನುವ ಲೆಕ್ಕಾಚಾರ ಅದಕ್ಕಿದೆ. ಎಂದಿನಂತೆ ಮೇಲ್ವರ್ಗ, ಕುರ್ಮಿ, ಕುಶ್ವಾಹ, ದಲಿತ ಮತಗಳ ಹೆಚ್ಚಿನ ಪಾಲು ಎನ್‌ಡಿಎಗೆ ಹೋಗಬಹುದು.

ಭೂಮಿಹಾರ್ ಸಮುದಾಯದ ಮುಖಂಡ,

ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ನಾಯಕ ಕನ್ಹಯ್ಯ ಕುಮಾರ್ ಬಿಹಾರ ಚುನಾವಣೆ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದಂತೆ ಆರ್‌ಜೆಡಿ ನೋಡಿಕೊಂಡಿದೆ. ಅಲ್ಲಿಂದ ಅವರು ಸ್ಪರ್ಧಿಸದಂತೆಯೂ ಮಾಡಿದೆ.

ಅವರೀಗ ದಿಲ್ಲಿಯಿಂದ ಲೋಕಸಭೆಗೆ ಸ್ಪರ್ಧಿಸಿದ್ದಾರೆ. ಒಟ್ಟಾರೆ ರಾಜ್ಯ ರಾಜಕೀಯ ಚಿತ್ರಣ ಗಮನಿಸಿದರೆ 2014 ಹಾಗೂ 2019ರ ಫಲಿತಾಂಶ ಪುನರಾವರ್ತನೆ ಆಗುವುದೇ ಅಥವಾ ತೇಜಸ್ವಿ ಅವರ ಬೆಂಬಲದಲ್ಲಿ ಇಂಡಿಯಾ ಮೈತ್ರಿಕೂಟ ಪರ್ಯಾಯ ಶಕ್ತಿ ಆಗುವುದೇ ಎಂಬುದನ್ನು ಚುನಾವಣೆ ತೀರ್ಮಾನಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಹೊನಕೆರೆ ನಂಜುಂಡೇಗೌಡ

contributor

Similar News