ನಾಲ್ಕು ವರ್ಷಗಳಲ್ಲಿ ರಾಜ್ಯಾದ್ಯಂತ 65 ಸಾವಿರಕ್ಕೂ ಅಧಿಕ ಸೈಬರ್ ಅಪರಾಧ ಪ್ರಕರಣ ದಾಖಲು

2,912 ಮಂದಿ ಆರೋಪಿಗಳ ಬಂಧನ, 3,746 ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಕೆ

Update: 2026-08-03 07:32 IST

ಸಾಂದರ್ಭಿಕ ಚಿತ್ರ (AI)

ಬೆಂಗಳೂರು : ಸೈಬರ್ ಅಪರಾಧಗಳ ಕುರಿತಾಗಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ನಿರಂತರವಾಗಿ ಅರಿವು ಮೂಡಿಸುತ್ತಿದ್ದರೂ, ನಾಲ್ಕು ವರ್ಷಗಳಲ್ಲಿ ರಾಜ್ಯಾದ್ಯಂತ 65 ಸಾವಿರಕ್ಕೂ ಅಧಿಕ ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಶೇ.60.54ರಷ್ಟು ಸೈಬರ್ ಕ್ರೈಮ್ ಪ್ರಕರಣಗಳು 5 ಲಕ್ಷ ರೂ. ಗಿಂತ ಹೆಚ್ಚಿನ ಮೊತ್ತವನ್ನು ಕಳೆದುಕೊಂಡ ಪ್ರಕರಣಗಳಾಗಿವೆ.

ರಾಜ್ಯಾದ್ಯಂತ 45 ಸೈಬರ್ ಕ್ರೈಮ್ ಪೊಲೀಸ್ ಠಾಣೆಗಳಿದ್ದು, ನಾಲ್ಕು ವರ್ಷಗಳಿಂದ ಈ ಠಾಣೆಗಳಲ್ಲಿ 65,736 ಸೈಬರ್ ಕ್ರೈಮ್ ಪ್ರಕರಣಗಳು ದಾಖಲಾಗಿವೆ. 5 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತವನ್ನು ಕಳೆದುಕೊಂಡ 39,800 ಪ್ರಕರಣಗಳು ದಾಖಲಾಗಿದ್ದು, ಉಳಿದ 25,936 ಪ್ರಕರಣಗಳಲ್ಲಿ ಸಾರ್ವಜನಿಕರು 5 ಲಕ್ಷ ರೂ.ಗಿಂತ ಕಡಿಮೆ ಹಣವನ್ನು ಕಳೆದುಕೊಂಡಿದ್ದಾರೆ. ಸೈಬರ್ ಕ್ರೈಮ್‌ನಲ್ಲಿ ಭಾಗಿಯಾದ 2,912 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಒಟ್ಟು 3,746 ಚಾರ್ಜ್‌ಶೀಟ್‌ಗಳನ್ನು ಸಂಬಂಧಪಟ್ಟ ನ್ಯಾಯಾಲಯಗಳಿಗೆ ಸಲ್ಲಿಕೆ ಮಾಡಿದ್ದಾರೆ.

2023ರಲ್ಲಿ 22,255 ಸೈಬರ್ ಅಪರಾಧಗಳು ದಾಖಲಾಗಿದ್ದು, 1,098 ಆರೋಪಿಗಳನ್ನು ಬಂಧಿಸಲಾಗಿದೆ. 1,704 ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. 2024ರಲ್ಲಿ 22,483 ಸೈಬರ್ ಅಪರಾಧಗಳು ದಾಖಲಾಗಿದ್ದು, 1,036 ಆರೋಪಿಗಳನ್ನು ಬಂಧಿಸಲಾಗಿದೆ. 1,339 ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. 2025ರಲ್ಲಿ 14,899 ಸೈಬರ್ ಅಪರಾಧಗಳು ದಾಖಲಾಗಿದ್ದು, 761 ಆರೋಪಿಗಳನ್ನು ಬಂಧಿಸಲಾಗಿದೆ. 761 ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. 2026ರ ಜೂನ್ ಅಂತ್ಯದ ವೇಳೆಗೆ 6,099 ಸೈಬರ್ ಅಪರಾಧಗಳು ದಾಖಲಾಗಿದ್ದು, 17 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. 2 ಚಾರ್ಜ್ ಶೀಟ್‌ಗಳು ಸಲ್ಲಿಕೆಯಾಗಿವೆ.

ಬೆಂಗಳೂರು ಜಿಲ್ಲೆಯಲ್ಲಿ 52,519 ಸೈಬರ್ ಅಪರಾಧ ಪ್ರಕರಣ ದಾಖಲಾಗಿದ್ದರೆ, ಮೈಸೂರು ಜಿಲ್ಲೆಯಲ್ಲಿ 1,018, ಧಾರವಾಡ ಜಿಲ್ಲೆಯಲ್ಲಿ 1,203, ದಕ್ಷಿಣ ಕನ್ನಡದಲ್ಲಿ 976, ಉತ್ತರ ಕನ್ನಡ ಜಿಲ್ಲೆಯಲ್ಲಿ 306, ಉಡುಪಿ 626, ಬೆಳಗಾವಿ ಜಿಲ್ಲೆಯಲ್ಲಿ 677, ಕಲಬುರಗಿ 304, ಬೆಂಗಳೂರು ದಕ್ಷಿಣ ಜಿಲ್ಲೆ(ರಾಮನಗರ) 688, ಕೋಲಾರ ಜಿಲ್ಲೆಯಲ್ಲಿ 5,72 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ.

ತುಮಕೂರು ಜಿಲ್ಲೆಯಲ್ಲಿ 892 ಸೈಬರ್ ಅಪರಾಧ ಪ್ರಕರಣ ದಾಖಲಾಗಿದ್ದರೆ, ಚಿಕ್ಕಬಳ್ಳಾಪುರ 801, ಮಂಡ್ಯ 277, ಹಾಸನ ಜಿಲ್ಲೆಯಲ್ಲಿ 394, ಚಾಮರಾಜನಗರ 128, ಕೊಡಗು ಜಿಲ್ಲೆಯಲ್ಲಿ 317, ಚಿಕ್ಕಮಗಳೂರು 350, ದಾವಣಗೆರೆ 409, ಚಿತ್ರದುರ್ಗ 265, ಹಾವೇರಿ 407, ವಿಜಯಪುರ ಜಿಲ್ಲೆಯಲ್ಲಿ 722, ಬಾಗಲಕೋಟೆ 228, ಗದಗ 250, ಬೀದರ್ ಜಿಲ್ಲೆಯಲ್ಲಿ 149, ಯಾದಗಿರಿ 85, ರಾಯಚೂರು 110, ಕೊಪ್ಪಳ 114, ಬಳ್ಳಾರಿ 337, ವಿಜಯನಗರ 722, ಶಿವಮೊಗ್ಗ ಜಿಲ್ಲೆಯಲ್ಲಿ 441 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ.

ಬೆಂಗಳೂರು ನಗರದಲ್ಲೇ ಶೇ.76.95ರಷ್ಟು ಸೈಬರ್ ಅಪರಾಧ ಪ್ರಕರಣ ದಾಖಲು

2023ರಿಂದ 2026ರ ಜೂನ್ ಅಂತ್ಯದವರೆಗೆ ಬೆಂಗಳೂರವೊಂದರಲ್ಲೇ 50,589 ಸೈಬರ್ ಅಪರಾಧ ಪ್ರಕರಣ ದಾಖಲಾಗಿದೆ. ಒಟ್ಟು ಪ್ರಕರಣಗಳಲ್ಲಿ ಶೇ.79ರಷ್ಟು ಪ್ರಕರಣಗಳು ಬೆಂಗಳೂರಿನಲ್ಲಿಯೇ ದಾಖಲಾಗಿವೆ. ಉಳಿದಂತೆ ಮೈಸೂರು ನಗರದಲ್ಲಿ 805, ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ 1,005, ಮಂಗಳೂರು ನಗರದಲ್ಲಿ 610, ಬೆಳಗಾವಿ ನಗರದಲ್ಲಿ 346, ಕಲಬುರಗಿ ನಗರದಲ್ಲಿ 178, ಕೋಲಾರ ನಗರದಲ್ಲಿ 240, ಕೆ.ಜಿ.ಎಫ್‌ನಲ್ಲಿ 332 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ.

876 ನಕಲಿ ಸೈಬರ್ ಕ್ರೈಮ್ ಪ್ರಕರಣಗಳು ಪತ್ತೆ

65,736 ಸೈಬರ್ ಕ್ರೈಮ್ ಪ್ರಕರಣಗಳಲ್ಲಿ 876 ಪ್ರಕರಣಗಳು ನಕಲಿ ಪ್ರಕರಣಗಳೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. 2023ರಲ್ಲಿ 388, 2024ರಲ್ಲಿ 324, 2025ರಲ್ಲಿ 164 ನಕಲಿ ಸೈಬರ್ ಕ್ರೈಮ್ ಪ್ರಕರಣಗಳು ಪತ್ತೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಅನಿಲ್

contributor

Similar News