ರಸ್ತೆ ಕಾಮಗಾರಿ ವಿಳಂಬ: ಧೂಳು, ಟ್ರಾಫಿಕ್‌ನಿಂದ ಜನರ ಪರದಾಟ
ಜಲ್ಲಿಕಲ್ಲಿನ ಮಧ್ಯೆ ಜೀವ ಕೈಯಲ್ಲಿ ಹಿಡಿದು ಸಂಚಾರ
ಕಂಪ್ಲಿ: ಪಟ್ಟಣದ ವಾಲ್ಮೀಕಿ ವೃತ್ತದಿಂದ ಸಕ್ಕರೆ ಕಾರ್ಖಾನೆ ಬಳಿಯ ಸ್ವಾಗತ ಕಮಾನು ವರೆಗೆ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ವಾಹನ ಸವಾರರು ಹಾಗೂ ಸುತ್ತಮುತ್ತಲಿನ ಅಂಗಡಿ ಮಾಲೀಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಇಲ್ಲಿನ ವಾಲ್ಮೀಕಿ ವೃತ್ತದಲ್ಲಿ ಅಪೆಂಡಿಕ್ಸ್ -ಇ 5054 ಯೋಜನೆಯಡಿ ಸುಮಾರು 6.70 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಚಾಲನೆ ನೀಡಲಾಗಿತ್ತು. ರಸ್ತೆ ವಿಸ್ತರಣಾ ಕಾಮಗಾರಿ 10 ತಿಂಗಳ ಹಿಂದೆಯೇ ಪ್ರಾರಂಭಗೊಂಡರೂ ಸುಮಾರು 3-4 ಕಿ.ಮೀ. ರಸ್ತೆ ಅಭಿವೃದ್ಧಿ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿದ್ದು, ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಆದರೆ ಹತ್ತು ತಿಂಗಳು ಕಳೆದರೂ ಕಾಮಗಾರಿ ಇನ್ನೂ ಪೂರ್ಣಗೊಳ್ಳದೇ ಇರುವುದು ಹಲವು ಅನುಮಾನಗಳಿಗೂ ಕಾರತಣವಾಗಿದೆ.
ರಸ್ತೆಯನ್ನು ಅಗೆದು ಜಲ್ಲಿಕಲ್ಲು ಹಾಸಿರುವುದರಿಂದ ವಾಹನ ಸಂಚಾರ ದುಸ್ತರವಾಗಿದೆ. ರಸ್ತೆಯ ಮೇಲೆ ಚಲ್ಲಾಪಿಲ್ಲಿಯಾಗಿ ಬಿದ್ದಿರುವ ಕಲ್ಲುಗಳಿಂದ ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರೊಂದಿಗೆ, ಧೂಳಿನ ಕಾಟದಿಂದಲೂ ಸಾರ್ವಜನಿಕರು ಹಾಗೂ ವ್ಯಾಪಾರಿಗಳು ಹೈರಾಣಾಗಿದ್ದಾರೆ.
ಇಲ್ಲಿನ ರಸ್ತೆ ಮೂಲಕ ಎಂಡಿಕ್ಯಾಂಪಿಗೆ ಹಾಗೂ ರಸ್ತೆಯ ಅಕ್ಕಪಕ್ಕದಲ್ಲಿರುವ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಧೂಳಿನ ನಡುವೆ ಜೀವದ ಭಯದಲ್ಲಿ ತೆರಳುತ್ತಿದ್ದಾರೆ. ಅಲ್ಲದೆ ಪರಿಸರದಲ್ಲಿ ಧೂಳು ಹೆಚ್ಚಾಗಿರುವುದರಿಂದ ಉಸಿರಾಟ ಸಂಬಂಧಿತ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಆತಂಕವೂ ವ್ಯಕ್ತವಾಗಿದೆ. ಶುಭ್ರ ವಸ್ತ್ರಗಳಿಗೆ ಇಲ್ಲಿನ ಧೂಳು ಅಂಟಿ ಕೂರುವುದರಿಂದ ಶುಭ ಸಮಾರಂಭಗಳಿಗೆ ೀ ರಸ್ತೆಯ ಮೂಲಕ ಹೋಗಬೇಕಾದವರೂ ಹಿಂದೆ ಮುಂದೆ ನೋಡುವಂತಾಗಿದೆ. ಧೂಳು ನಿಯಂತ್ರಣಕ್ಕೆಂದು ಬೇಕಾಬಿಟ್ಟಿ ನೀರು ಹಾಕುವುದರಿಂದ ರಸ್ತೆ ಕೆಸರು ಮಯವಾಗಿಯೂ ಮಾರ್ಪಾಡಾಗುತ್ತಿದೆ.
ಅಪೂರ್ಣ ಕಾಮಗಾರಿ: ಕಂಪ್ಲಿ-ಕೋಟೆಯಿಂದ ಹೊಸ ಬಸ್ ನಿಲ್ದಾಣವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಈಗಾಗಲೇ ಮುಗಿಯುವ ಹಂತಕ್ಕೆ ಬಂದಿತ್ತಾದರೂ, ಇಲ್ಲಿನ ಗಂಗಾವತಿ ರಸ್ತೆಯ ವರಸಿದ್ದಿ ವಿನಾಯಕ ದೇವಸ್ಥಾನ ಮುಂಭಾಗದ ರಸ್ತೆಯ ಕಿರು ಸೇತುವೆ ಕಾಮಗಾರಿ ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದ ಸ್ಥಗಿತಗೊಂಡಿತ್ತು. ಆದರೆ, ಇತ್ತೀಚೆಗೆ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತಸ್ಥಳದಲ್ಲಿ ಕಿರು ಸೇತುವೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕಾಮಗಾರಿ ಆರಂಭಗೊಂಡಿದೆಯಾದರೂ, ಆಮೆಗತಿಯಲ್ಲಿ ಕೆಲಸ ನಡೆಯುತ್ತಿರುವುದು ಸವಾರರ, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಕಾಮಗಾರಿಗೆ ವೇಗ ನೀಡಿ, ಕಿರು ಸೇತುವೆ ಪೂರ್ಣಗೊಳಿಸಿ, ಮುಂದಿನ ಕಾಮಗಾರಿಗೆ ಅನುವು ಮಾಡಿಕೊಟ್ಟರೆ ಸವಾರರು ನಿಟ್ಟುಸಿರು ಬಿಡಲಿದ್ದಾರೆ.
ಇಲ್ಲಿನ ಪರ್ಯಾಯ ರಸ್ತೆಯಲ್ಲಿ ಭಾರೀ ವಾಹನಗಳು ಸಿಲುಕಿಕೊಳ್ಳುತ್ತಿರುವುದರಿಂದ ಟ್ರಾಫಿಕ್ ಜಾಮ್ ಸಮಸ್ಯೆಯೂ ಉಂಟಾಗುತ್ತಿದೆ. ಆದ್ದರಿಂದ ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕಂಪ್ಲಿ ವಾಲ್ಮೀಕಿ ವೃತ್ತದಿಂದ ಸಕ್ಕರೆ ಕಾರ್ಖಾನೆವರೆಗಿನ ರಸ್ತೆ ಕಾಮಗಾರಿಗೆ ವೇಗ ನೀಡುವಂತೆ ಗುತ್ತಿಗೆದಾರರಿಗೆ ತಿಳಿಸಲಾಗುವುದು. ಗಂಗಾವತಿ ರಸ್ತೆಯ ಕಿರು ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಆದಷ್ಟು ಬೇಗ ರಸ್ತೆ ಕಾಮಗಾರಿಗೆ ಪೂರ್ಣಗೊಳಿಸಲು ಸೂಕ್ತ ಕ್ರಮವಹಿಸಲಾಗುವುದು.
-ಆನಂದ, ಜೆಇ
ಲೋಕೋಪಯೋಗಿ ಇಲಾಖೆ
ರಸ್ತೆ ಕಾಮಗಾರಿಯಿಂದ ಏಳುವ ಧೂಳಿನಲ್ಲಿ ಸಿಲಿಕಾ ಮತ್ತು ಸೂಕ್ಷ್ಮ ಕಣಗಳು ಇರುತ್ತವೆ. ಇವುಗಳನ್ನು ಉಸಿರಾಡುವುದರಿಂದ ಅಸ್ತಮಾ, ಸಿಒಪಿಡಿ ಮತ್ತು ಬ್ರಾಂಕೈಟಿಸ್ ಉಲ್ಬಣಗೊಳ್ಳಬಹುದು. ದೀರ್ಘಕಾಲದ ಕೆಮ್ಮು ಮತ್ತು ಎದೆ ಬಿಗಿತ ಉಂಟಾಗಬಹುದು. ಶ್ವಾಸಕೋಶದ ಸೋಂಕುಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ.
-ಡಾ. ಭರತ್ ಪದ್ಮಶಾಲಿ ಬಿ.ಎಸ್.
ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿ ಪಾಲಿ ಕ್ಲಿನಿಕ್, ಕಂಪ್ಲಿ
ಸ್ಥಳೀಯ ಶಾಸಕರು ಅನುದಾನ ತಂದು ರಸ್ತೆ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಆದರೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಕಾಮಗಾರಿಗೆ ವೇಗ ನೀಡಿ ಶೀಘ್ರ ಪೂರ್ಣಗೊಳಿಸಬೇಕು.
-ಜಿ.ಎಸ್.ಯಲ್ಲಪ್ಪ
ತಾಲೂಕಾಧ್ಯಕ್ಷ, ಬಿವಿಎಂ ಆರ್ಮಿ ಸಂಘಟನೆ, ಕಂಪ್ಲಿ