×
Ad

ಶೇರ್ ಅಲಿ- ವೈಸರಾಯ್ ಮೇಯೋನ ಹತ್ಯೆಗೈದ ಕ್ರಾಂತಿಕಾರಿ: ಇವರಾರೂ ಕ್ಷಮೆ ಯಾಚಿಸಲಿಲ್ಲ!

ಕರಿನೀರಿನ ಕಠಿಣ ಶಿಕ್ಷೆ ಅನುಭವಿಸಿದ ಕ್ರಾಂತಿಕಾರಿಗಳು!

Update: 2025-12-07 13:00 IST

ಭಾಗ - 5

ಬ್ರಿಟಿಷ್ ವಿರುದ್ಧದ ಹೋರಾಟಗಲ್ಲಿ ಬ್ರಿಟಿಷ್‌ಅಧಿಕಾರಿಗಳ ಹತ್ಯೆ ಆರಂಭಿಕ ಕ್ರಾಂತಿಕಾರಿ ಚಟುವಟಿಕೆಗಳ ಮಹತ್ತರ ತಂತ್ರ. ದಮನಕಾರಿ ಬ್ರಿಟಿಷ್ ಅಧಿಕಾರಿಗಳ ಹತ್ಯೆಯ ಮೂಲಕ ವಸಾಹತುಶಾಹಿ ಆಡಳಿತಕ್ಕೆ ಭೀತಿ ಹುಟ್ಟಿಸುವ ತಂತ್ರ ಇದು.

ಖುದಿರಾಮ್ ಬೋಸ್, ಭಗತ್‌ಸಿಂಗ್ ಸಹಿತ ಹಲವಾರು ಕ್ರಾಂತಿಕಾರಿಗಳು ಗಲ್ಲಿಗೇರಿದ್ದು ಈ ಕೃತ್ಯಗಳ ಮೂಲಕ.

ಭಾರತದ ಅತ್ಯುಚ್ಚ ವಸಾಹತುಶಾಹಿ ಅಧಿಕಾರಿಯಾಗಿದ್ದ ವೈಸರಾಯ್ ಹತ್ಯೆಯ ಪ್ರಯತ್ನಗಳೂ ನಡೆದಿದ್ದವು. ಇರ್ವಿನ್ ಕೊಲೆ ಸಂಚು ಕೂಡಾ ಇದರಲ್ಲೊಂದು. ಆದರೆ ಭಾರತದ ವೈಸರಾಯ್ ಒಬ್ಬರು ಕೊಲೆಯಾದ ಪ್ರಕರಣದ ಬಗ್ಗೆ ಬಹುತೇಕರಿಗೆ ಗೊತ್ತಿರಲಾರದು. ಲಾರ್ಡ್ ಮೇಯೋ 1860-70ರ ಅವಧಿಯಲ್ಲಿ ಭಾರತದ ವೈಸರಾಯ್ ಆಗಿದ್ದವರು. ಬಲು ದಮನಕಾರಿ ಪ್ರವೃತ್ತಿಯ ಮನುಷ್ಯ ಕೂಡಾ.

ಈ ಮೇಯೋ ಅಂಡಮಾನ್‌ನ ಸ್ಥಿತಿ-ಗತಿ ಬಗ್ಗೆ ಇನ್‌ಸ್ಪೆಕ್ಷನ್ ನಡೆಸಲು ಅಂಡಮಾನಿಗೆ ಹೋಗಿದ್ದ. ಮುಸ್ಸಂಜೆ ಜನರು ನೋಡನೋಡುತ್ತಿದ್ದಂತೆ ಅನಾಮಿಕನಂತಿದ್ದ ವ್ಯಕ್ತಿಯೊಬ್ಬ ಹಠಾತ್ತಾಗಿ ನುಗ್ಗಿ ಮೇಯೋಗೆ ಹಿಂದಿನಿಂದ ಇರಿದ. ಆ ಗಾಬರಿಯಲ್ಲಿ ಅಲ್ಲಿದ್ದ ದೊಂದಿ ಬೆಳಕೂ ಆರಿ ಹೋಗಿ, ಅಂತೂ ಈ ದಾಳಿಕೋರನನ್ನು ಸೆರೆ ಹಿಡಿಯಲಾಯಿತು. ಆದರೆ ಆಳವಾಗಿ ಗಾಯವಾಗಿದ್ದ ಮೇಯೋ ಅಲ್ಲೇ ಕೊನೆ ಉಸಿರೆಳೆದ.

ಯಾರು ಈ ದಾಳಿ ನಡೆಸಿದ್ದು?

ನಾವು ಮರೆತ ಕ್ರಾಂತಿಕಾರಿಗಳಲ್ಲಿ ಈತನೂ ಒಬ್ಬ. ಶೇರ್ ಅಲಿ ಈ ಕ್ರಾಂತಿಕಾರಿ. ಮೂಲತಃ ಜಮ್ರೂದ್ ಕಣಿವೆಯ ಅಫ್ರಿದಿ ಕುಲಕ್ಕೆ ಸೇರಿದ್ದ ಈತ ಬ್ರಿಟಿಷ್ ಸೇವೆಯಲ್ಲೇ ಇದ್ದವನು. ಪೇಶಾವರದಲ್ಲಿದ್ದಾಗ ಕುಲ ವೈಷಮ್ಯದ ಹಿನ್ನೆಲೆಯಲ್ಲಿ ತನ್ನ ಎದುರಾಳಿಯೊಬ್ಬನನ್ನು ಹತ್ಯೆಗೈದಿದ್ದಕ್ಕಾಗಿ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಅಂಡಮಾನ್‌ಗೆ ಕಳಿಸಲಾಯಿತು.

ಅಂಡಮಾನ್‌ನಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಾ ಬಹುತೇಕ ಸಾದಾ ಸೀದವಾಗಿ ಇದ್ದ ಕಾರಣ ಬ್ರಿಟಿಷರು ಈತನಿಗೆ ಕ್ಷೌರಿಕನ ಕೆಲಸ ಕೊಟ್ಟಿದ್ದರು.

ಶೇರ್ ಅಲಿ ಮೆಯೋ ಬರುವುದು ಗೊತ್ತಾಗಿ ಆತನ ಹತ್ಯೆಗೆ ಕಾದು ಕೂತಿದ್ದ ಎನ್ನುವುದನ್ನು ಬ್ರಿಟಿಷರು ಬಿಡಿ ಸರೀಕ ಕೈದಿಗಳೂ ಊಹಿಸರಲಿಲ್ಲ.

ಹತ್ಯೆಯ ಮುನ್ನಾ ದಿನ ಆತ ಸಹ ಕೈದಿಗಳಿಗೆ ಸಿಹಿ ನೀಡಿ, ‘‘ನಾಳೆ ದಿನ ನಾನೊಂದು ಒಳ್ಳೆಯ ಕೆಲಸ ಮಾಡುವವನಿದ್ದೇನೆ. ನಿಮ್ಮ ಹರಕೆ ಬೇಕು’’ ಎಂದಿದ್ದ.

ಮಾರನೇ ದಿನ ಅಂದರೆ ಫೆಬ್ರವರಿ 8, 1872ರಂದು ಮೇಯೋ ಅಂಡಮಾನಿಗೆ ಬಂದು ಇನ್‌ಸ್ಪೆಕ್ಷನ್‌ಮುಗಿಸಿ ಮುಸ್ಸಂಜೆ ಹಡಗು ಹತ್ತುವ ವೇಳೆಗೆ ಶೇರ್ ಅಲಿ ಹಠಾತ್‌ಎರಗಿ ಚಾಕುವಿನಿಂದ ಇರಿದು, ಈ ಆಳ ಗಾಯದಿಂದಾಗಿ ಮೇಯೋ ಕೊನೆ ಉಸಿರೆಳೆದ.

ಶೇರ್ ಅಲಿಯನ್ನು ಬಂಧಿಸಲಾಯಿತು.

ಆತ ನಿರಾಳವಾಗಿದ್ದ. ಈತನಿಗೆ ಕುಮ್ಮಕ್ಕು ಇತ್ತೋ ಸಹಚರರು ಇದ್ದಾರೋ ಎಂದು ಬ್ರಿಟಿಷರು ಇನ್ನಿಲ್ಲದ ತನಿಖೆ ಮಾಡಿದ್ದರು.

ಆದರೆ ಯಾವ ಪುರಾವೆಗಳೂ ದೊರಕಲಿಲ್ಲ. ಒಂದು ತಿಂಗಳ ವಿಚಾರಣೆಯ ಬಳಿಕ ಶೇರ್ ಅಲಿಯನ್ನು 1872ರ ಮಾರ್ಚ್ 11ರಂದು ಗಲ್ಲಿಗೇರಿಸಲಾಯಿತು.

ಆತನಲ್ಲಿ ಕೇಳಿದರೆ ‘‘ದೇವರು ಹೇಳಿದ, ಕೊಂದೆ. ದೇಶದ ಶತ್ರುವನ್ನು ಕೊಂದೆ’’ ಎಂದಷ್ಟೇ ಹೇಳಿದ್ದ.

1971ರಲ್ಲಿ ಕೋಲ್ಕತಾದ ಕುಖ್ಯಾತ ನ್ಯಾಯಾಧೀಶ ಜಸ್ಟಿಸ್ ನಾರ್ಮನ್ ಅವರನ್ನು ಅಬ್ದುಲ್ಲಾ ಎಂಬ ಕ್ರಾಂತಿಕಾರಿ ಹತ್ಯೆ ಮಾಡಿದ್ದ. ಈ ಹತ್ಯೆಯ ಸಂಗತಿ ತಿಂಗಳುಗಳ ಬಳಿಕ ಶೇರ್‌ಅಲಿಗೂ ತಲುಪಿತ್ತು.

‘‘ನನ್ನ ಸಹೋದರನ ಕೃತ್ಯ ನನ್ನಲ್ಲೂ ಇದನ್ನು ಮಾಡಲು ಪ್ರೇರೇಪಿಸಿತು’’ ಎಂದು ಶೇರ್ ಅಲಿ ಹೇಳಿದ್ದ ಎಂಬ ವರದಿಗಳಿವೆ.

ಮುಸ್ಲಿಮ್ ಕ್ರಾಂತಿಕಾರಿಗಳ ಈ ಕೃತ್ಯಗಳು ನಮ್ಮನ್ನೆಲ್ಲಾ ಬಡಿದೆಬ್ಬಿಸಿದ್ದವು ಎಂದು ಮನ್ಮಥ ನಾಥ ಗುಪ್ತಾ, ಬಿಪಿನ್‌ಚಂದ್ರ ಪಾಲ್ ಹೇಳಿದ್ದಾರೆ.

ಈ ಕ್ರಾಂತಿಕಾರಿ ಚಟುವಟಿಕೆಗಳನ್ನು ವಹಾಬಿ ಅಭಿಯಾನದ ಕೆಲಸ ಎಂದು ಬ್ರಿಟಿಷ್ ಸರಕಾರ ಬಣ್ಣಿಸಿತು. ಮೂಲತಃ ಧಾರ್ಮಿಕ ವ್ಯವಹಾರ, ವಸಾಹತು ಶಾಹಿ ವಿರುದ್ಧ ಅಲ್ಲ ಎಂದು ಬಿಂಬಿಸುವುದು ಇದರ ಉದ್ದೇಶವಾಗಿತ್ತು.

ಈ ಮೇಯೋ ನೆನಪಲ್ಲಿ ಬೆಂಗಳೂರಲ್ಲೂ ಒಂದು ಹಾಲ್ ಇದೆ!! ಆದರೆ ಈತನನ್ನು ವಸಾಹತುಶಾಹಿ ದಮನದ ಪ್ರತಿನಿಧಿ ಎಂದು ಬಗೆದು ಹತ್ಯೆಗೈದ ಕ್ರಾಂತಿಕಾರಿಯ ಹೆಸರು ಎಲ್ಲೂ ಇಲ್ಲ!

ಇಂತಹ ನೂರಾರು ಕ್ರಾಂತಿಕಾರಿಗಳನ್ನು ವ್ಯವಸ್ಥಿತವಾಗಿ ಅವರ ಧರ್ಮದ ಕಾರಣಕ್ಕೆ ಮರೆಗೆ ಸರಿಸಲಾಗಿದೆ, ಅಥವಾ ಅಳಿಸಿ ಹಾಕಲಾಗಿದೆ. ರಾಮಪ್ರಸಾದ್ ಬಿಸ್ಮಿಲ್ ಸಂಗಾತಿಯಾಗಿದ್ದ ಕಾರಣ ಅಷ್ಫಾಕುಲ್ಲಾರಂಥವರನ್ನು ಏನೂ ಮಾಡಲಾಗದೆ ಉಳಿಸಿಕೊಳ್ಳಲಾಗಿದೆ ಅನ್ನಿಸುತ್ತೆ!!

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸುರೇಶ್ ಕಂಜರ್ಪಣೆ

contributor

Similar News