×
Ad

ವೈದಿಕ ಸಾಹಿತ್ಯ ಬಯಲು: ಗೋವು ನಿಜವಾಗಿಯೂ ಬ್ರಾಹ್ಮಣರ ಮಾತೆಯೇ?

Update: 2025-12-07 12:05 IST

    ಇಂದು ಬ್ರಾಹ್ಮಣರು ತಮ್ಮನ್ನು ಶುದ್ಧ ಸಸ್ಯಾಹಾರಿಗಳು ಮತ್ತು ಶುದ್ಧ ಚಾರಿತ್ರ್ಯವಂತರು ಎಂದು ಬಿಂಬಿಸಿಕೊಂಡರೂ, ಹಿಂದಿನ ಕಾಲದಲ್ಲಿ ಅವರ ಆಹಾರ ಪದ್ಧತಿ ಮತ್ತು ಅಭ್ಯಾಸಗಳ ವಿವರ ಅವರ ಪೂರ್ವಜರು ಬರೆದ ಪುಸ್ತಕಗಳಲ್ಲಿ ಇನ್ನೂ ಲಭ್ಯವಿದೆ. ಈ ಗ್ರಂಥಗಳು ಬ್ರಾಹ್ಮಣರು ಹಿಂದಿನ ಕಾಲದಲ್ಲಿ ಮಾಂಸಾಹಾರಿಗಳಾಗಿದ್ದರು ಎನ್ನುವುದಕ್ಕೆ ದಾಖಲೆ ಒದಗಿಸುತ್ತವೆ, ಮಾತ್ರವಲ್ಲ ಇಂದು ಅವರು ಪವಿತ್ರವೆಂದು ಪರಿಗಣಿಸುವ ಹಸುವನ್ನು ಮತ್ತು ಅದರ ಎಳೆ ಕರುಗಳನ್ನು ತಿನ್ನುತ್ತಿದ್ದರು ಎನ್ನುವುದನ್ನು ಎತ್ತಿ ತೋರಿಸುತ್ತವೆ.

ಸುಮಾರು 2,000 ವರ್ಷಗಳ ಹಿಂದೆ ಬ್ರಾಹ್ಮಣರು ಭಾರತೀಯ ಉಪಖಂಡದಲ್ಲಿ ಜಾತಿ ವ್ಯವಸ್ಥೆಯನ್ನು ಹುಟ್ಟುಹಾಕಲು ಪ್ರಾರಂಭಿಸಿದರು. ಏಕೆಂದರೆ, ವರ್ಣ ವ್ಯವಸ್ಥೆಯ ಉಚ್ಛ್ರಾಯ ಕಾಲದಲ್ಲಿಯೇ ಕ್ಷತ್ರಿಯರಾದ ಮಹಾವೀರ ಮತ್ತು ಗೌತಮ ಬುದ್ಧ ವೈದಿಕ ಧರ್ಮದ ವಿರುದ್ಧ ತಿರುಗಿ ಬಿದ್ದಿದ್ದರು. ಕೇವಲ ನಾಲ್ಕು ವರ್ಣಗಳಲ್ಲಿ ಭಾರತಿಯ ಬಹುಜನರನ್ನು ಒಡೆದರೂ ವೈದಿಕರು ಪ್ರತಿರೋಧವನ್ನು ಎದುರಿಸಬೇಕಾಯಿತು. ಭವಿಷ್ಯತ್ತಿನಲ್ಲಿ ಬಹುಜನರನ್ನು ಸಂಘಟಿತರಾಗುವುದನ್ನು ತಡೆಯಲು ಅವರನ್ನು ಅನೇಕ ಜಾತಿಗಳಲ್ಲಿ ವಿಘಟಿಸುವುದು ವೈದಿಕರಿಗೆ ಅನಿವಾರ್ಯವಾಗಿತ್ತು. ಹಾಗಾದರೆ ಮಾತ್ರ ಭಾರತೀಯ ಸಮಾಜದ ಮೇಲೆ ವೈದಿಕರ ಹಿಡಿತ ಬಿಗಿಗೊಳ್ಳುವುದೆಂಬುದು ಅವರು ಬಲವಾಗಿ ನಂಬಿದ್ದರು. ಜಾತಿ ವ್ಯವಸ್ಥೆಯ ಮೇಲ್ಭಾಗದಲ್ಲಿ ಯಾವ ಜಾತಿಗಳನ್ನು ಇಡಬೇಕು ಮತ್ತು ಕೆಳಮಟ್ಟದಲ್ಲಿ ಯಾವ್ಯಾವ ಜಾತಿಗಳನ್ನು ಇರಿಸಬೇಕು ಎಂಬುದಕ್ಕೆ ಬ್ರಾಹ್ಮಣರು ವಿವಿಧ ಮಾನದಂಡಗಳನ್ನು ನಿಗದಿಪಡಿಸಿದರು. ಜಾತಿ ವ್ಯವಸ್ಥೆಯಲ್ಲಿ ಸಂಪತ್ತು ಮತ್ತು ಅಧಿಕಾರ ಹೊಂದಿರುವವರಿಗೆ ಬ್ರಾಹ್ಮಣರು ಉನ್ನತ ಸ್ಥಾನಮಾನವನ್ನು ನೀಡಿದರು, ಆದರೆ ಬ್ರಾಹ್ಮಣವಾದಿ ವ್ಯವಸ್ಥೆಯನ್ನು ಬಲವಾಗಿ ವಿರೋಧಿಸುವವರನ್ನು ಅಸ್ಪಶ್ಯ ಜಾತಿಗೆ ತಳ್ಳಲಾಯಿತು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ತಮ್ಮ ‘ಭಾರತದಲ್ಲಿ ಜಾತಿಗಳು’, ‘ಅಸ್ಪಶ್ಯರು ಮೊದಲು ಯಾರು?’ ಮತ್ತು ‘ಜಾತಿ ವ್ಯವಸ್ಥೆಯ ನಾಶ’ ಎಂಬ ಪುಸ್ತಕಗಳಲ್ಲಿ ಇದರ ಬಗ್ಗೆ ವಿಸ್ತಾರವಾಗಿ ಹೇಳಿದ್ದಾರೆ. ಜಾತಿ ವ್ಯವಸ್ಥೆಯ ಉನ್ನತ ಸ್ಥಾನದಲ್ಲಿ ತಮ್ಮನ್ನು ಸ್ಥಾಪಿಸಿಕೊಳ್ಳಲು ಬ್ರಾಹ್ಮಣರು ಸಸ್ಯಾಹಾರವನ್ನು ಮಾನದಂಡವನ್ನಾಗಿ ಮಾಡಿಕೊಂಡಿದ್ದರು.

ಅದಕ್ಕೂ ಮೊದಲು ವರ್ಣ ವ್ಯವಸ್ಥೆಯ ಕಾಲಘಟ್ಟದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರಿಗಳ ನಡುವೆ ಹೆಚ್ಚಿನ ಮಟ್ಟದ ತಾರತಮ್ಯವಿರಲಿಲ್ಲ. ವರ್ಣ ವ್ಯವಸ್ಥೆಯನ್ನು ಪ್ರತಿಪಾದಿಸಿದ ವೇದಗಳೇ ಮಾಂಸಾಹಾರವನ್ನು ಉತ್ತೇಜಿಸುತ್ತಿದ್ದವು. ವೇದಗಳನ್ನು ಪ್ರಮಾಣವಾಗಿ ನಂಬುವ ಬ್ರಾಹ್ಮಣರೇ ಮಾಂಸಾಹಾರಿಗಳಾಗಿದ್ದರು. ಬುದ್ಧನ ಅಹಿಂಸಾ ಮಾರ್ಗ ಭಾರತದಲ್ಲಿ ಹೋಮ ಹವನಗಳ ಹೆಸರಿನಲ್ಲಿ ನಡೆಯುವ ಪ್ರಾಣಿಬಲಿ, ಗೋವುಗಳ ಮಾರಣ ಹೋಮ ಹಾಗೂ ಆರ್ಯ ಬ್ರಾಹ್ಮಣರ ಗೋಮಾಂಸ ಸೇವನೆಗೆ ತಡೆಯನ್ನು ಒಡ್ಡಿತು. ಆ ಕಾರಣದಿಂದ ಬ್ರಾಹ್ಮಣರು ಮಾಂಸಾಹಾರ ತ್ಯಜಿಸುವಂತಾಯಿತು. ಬ್ರಾಹ್ಮಣರು ಮೂಲತಃ ಬೌದ್ಧ ಸನ್ಯಾಸಿಗಳಿಂದ ಸಸ್ಯಾಹಾರವನ್ನು ಯಥಾವತ್ ನಕಲು ಮಾಡಿದರು ಎಂಬುದು ಇಲ್ಲಿ ಗಮನಾರ್ಹ. ಆರ್ಯ ಬ್ರಾಹ್ಮಣರು ಬೌದ್ಧರಿಂದ ಅನೇಕ ಬಗೆಯ ಆಚರಣೆ, ಧರ್ಮ ಲಾಂಛನ, ಸಿದ್ಧಾಂತಗಳನ್ನು ಕದ್ದರು, ಅದರಲ್ಲಿ ಸಸ್ಯಾಹಾರವೂ ಒಂದು. ಸನಾತನ ಎಂದು ಶಬ್ದವೂ ಸೇರಿದಂತೆ ಆರ್ಯ ಬ್ರಾಹ್ಮಣ ಧರ್ಮವು ಬೌದ್ಧರಿಂದ ಕದ್ದ ಅನೇಕ ವಸ್ತುಗಳು, ಆಚರಣೆಗಳು, ಪ್ರತಿಮೆಗಳು, ಮಂದಿರಗಳು, ಸಿದ್ಧಾಂತಗಳು, ಜಾತಕ ಕತೆಗಳ ಮೇಲೆ ನಿರ್ಮಿತವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹೋಮ, ಹವನಗಳ ಸಂದರ್ಭದಲ್ಲಿ ಕೊಡಲಾಗುತ್ತಿದ್ದ ಗೋವಧೆ ಮತ್ತು ಅವುಗಳ ಮಾಂಸ ಭಕ್ಷಣೆ ಬ್ರಾಹ್ಮಣರ ವೇದಗಳಲ್ಲಿ ಪ್ರಸ್ತಾಪವಾಗಿದೆ. ಬ್ರಾಹ್ಮಣರಲ್ಲಿ ಕೆಲವರು ಸಾಂಕೇತಿಕವಾಗಿ ಈಗಲೂ ಹಿಟ್ಟಿನ ಹಸುವನ್ನು ಬಲಿಕೊಟ್ಟು ಅದನ್ನು ಹಬ್ಬದ ಅಡುಗೆಯಲ್ಲಿ ಬೆರೆಸಿ ಭಕ್ಷಿಸುತ್ತಾರೆ.

ಇಂದು ಬ್ರಾಹ್ಮಣರು ತಮ್ಮನ್ನು ಶುದ್ಧ ಸಸ್ಯಾಹಾರಿಗಳು ಮತ್ತು ಶುದ್ಧ ಚಾರಿತ್ರ್ಯವಂತರು ಎಂದು ಬಿಂಬಿಸಿಕೊಂಡರೂ, ಹಿಂದಿನ ಕಾಲದಲ್ಲಿ ಅವರ ಆಹಾರ ಪದ್ಧತಿ ಮತ್ತು ಅಭ್ಯಾಸಗಳ ವಿವರ ಅವರ ಪೂರ್ವಜರು ಬರೆದ ಪುಸ್ತಕಗಳಲ್ಲಿ ಇನ್ನೂ ಲಭ್ಯವಿದೆ. ಈ ಗ್ರಂಥಗಳು ಬ್ರಾಹ್ಮಣರು ಹಿಂದಿನ ಕಾಲದಲ್ಲಿ ಮಾಂಸಾಹಾರಿಗಳಾಗಿದ್ದರು ಎನ್ನುವುದಕ್ಕೆ ದಾಖಲೆ ಒದಗಿಸುತ್ತವೆ, ಮಾತ್ರವಲ್ಲ ಇಂದು ಅವರು ಪವಿತ್ರವೆಂದು ಪರಿಗಣಿಸುವ ಹಸುವನ್ನು ಮತ್ತು ಅದರ ಎಳೆ ಕರುಗಳನ್ನು ತಿನ್ನುತ್ತಿದ್ದರು ಎನ್ನುವುದನ್ನು ಎತ್ತಿ ತೋರಿಸುತ್ತವೆ. ಅವರಲ್ಲಿ ಕೆಲವರು ಇಂದಿಗೂ ಕದ್ದು ಮುಚ್ಚಿ ಮಾಂಸ ಸೇವಿಸುವುದನ್ನು ನಿಲ್ಲಿಸಲಿಲ್ಲ. ಪ್ರಾಚ್ಯ ಶಾಸ್ತ್ರಜ್ಞ ಶರದ್ ಪಾಟೀಲ್ ತಮ್ಮ ಒಂದು ಗ್ರಂಥದಲ್ಲಿ, ಕ್ರಿ.ಶ. 1,000 ವರ್ಷಗಳ ತನಕ ಬ್ರಾಹ್ಮಣರು ಗೋಮಾಂಸವನ್ನು ತಿನ್ನುತ್ತಿದ್ದರು ಎಂದು ಬರೆಯುತ್ತಾರೆ. ಭವಭೂತಿ ಎನ್ನುವ ಕವಿ ಏಳನೇ ಶತಮಾನದಲ್ಲಿ ತನ್ನ ‘ಮಹಾವೀರ ಚರಿತ’ ಸಂಸ್ಕೃತ ನಾಟಕ ಕೃತಿಯಲ್ಲಿ ‘‘ಜನಕ ರಾಜನು ಪರಶುರಾಮನಿಗೆ ಆತಿಥ್ಯ ನೀಡಿದಾಗ ಎರಡು ವರ್ಷದ ಎಳೆ ಕರುವಿನ ಮಾಂಸವನ್ನು ಬೇಯಿಸಿ ತಿನ್ನಿಸಿದ್ದ’’ ಎಂದು ಬರೆದಿದ್ದಾನೆ ಎಂದು ಶರದ್ ಪಾಟೀಲ್ ತಮ್ಮ ‘ಕೃತಿ ಶಿವಾಜಿಯ ಹಿಂದೂ ಸ್ವರಾಜ್ಯದ ನಿಜವಾದ ಶತ್ರು ಯಾರು: ಮಹಮ್ಮದೀಯರೋ ಅಥವಾ ಬ್ರಾಹ್ಮಣರೋ?’, ಪುಟ 121ರಲ್ಲಿ ಉಲ್ಲೇಖಿಸಿದ್ದಾರೆ. ಭವಭೂತಿ ತನ್ನ ನಾಟಕದ ದೃಶ್ಯದಲ್ಲಿ ಜನಕನಲ್ಲಿ ಹೇಳುತ್ತಾನೆ: ‘‘ಭೋ ಭೋ: ಶುದ್ಯಮಾತಿಥ್ಯ ವಿಧಿಯತಾಮ್.

ದ್ವಿವತ್ಸ ವತ್ಸರೀ ದೀಯಾತಾಂ ಪಚ್ಯತಾಂ.’’ ಅರ್ಥ: ಸರಿ, ಆತಿಥ್ಯಕ್ಕೆ ಬೇಗ ವ್ಯವಸ್ಥೆ ಮಾಡಿ. ಎರಡು ವರ್ಷದ ಕರುವನ್ನು ತಂದು ಬೇಯಿಸಿ (ಮಹಾವೀರಚರಿತಂ, 3ನೇ ಅಂಕ).

ಇಷ್ಟೇ ಅಲ್ಲ, ‘ಋಗ್ವೇದ’ವು ವೇದಗಳಲ್ಲಿ ಮೊದಲನೆಯದು, ಇದನ್ನು ಬ್ರಾಹ್ಮಣರು ಅಪೌರುಷೇಯವೆಂದು ಮತ್ತು ಭೂಮಿಯ ಮೇಲಿನ ಅತ್ಯಂತ ಪವಿತ್ರ ಗ್ರಂಥವೆಂದು ಪರಿಗಣಿಸುತ್ತಾರೆ. ಋಗ್ವೇದದಲ್ಲಿ ಗೋಮಾಂಸದ ಬಗ್ಗೆ ಹೇಳಲಾಗಿದೆ,

‘‘ಉಕ್ಷಣೋಂ ಹಿ ಮೇ ಪಂಚದಂಶ್ ಸಾಂಕ ಪಂಚಂತಿ: ವಿಷ್ಟ್ತಿಮ್. ಉತಾಹಮದಿಮ್ ಪಿವ ಇದುಭಾ ಕುಕ್ಷಿ ಪ್ರಣತಿ ಮೇ ವಿಶ್ವಸ್ಮಾದ್ರಿಂದ್ರ’’ ಅರ್ಥ: ಇಂದ್ರಾಣಿಯಿಂದ ಪ್ರೇರಿತನಾಗಿ ಬಲಿದಾನಗೈದ ಬಲಿಪಶು, ನನಗಾಗಿ (ಇಂದ್ರ) 15-30 ಎತ್ತುಗಳನ್ನು ವಧಿಸಿ ಅಡುಗೆ ಮಾಡುತ್ತಾನೆ, ಅದನ್ನು ತಿಂದು ನಾನು ಬಲಶಾಲಿ ಮತ್ತು ದಪ್ಪನಾಗುತ್ತೇನೆ. ಅವು ನನ್ನ ರಕ್ತನಾಳಗಳನ್ನು ಸೋಮರಸದಿಂದ (ಮದ್ಯ) ತುಂಬುತ್ತವೆ.

(ಋಗ್ವೇದ, 10-86-14). ಋಗ್ವೇದದಲ್ಲಿ ಈ ಕೆಳಗಿನ ಉಲ್ಲೇಖಗಳನ್ನು ನೋಡಿ,

‘‘ಆಂದ್ರಿನಾತೇ ಮಂದಿನ ಇಂದ್ರ ತ್ರಯನ್ಸುನ್ಬಂತಿ,

ಸೋಮಾನ ಪಿವಸಿತ್ವ ಮೇಷ,

ಪಂಚಂತಿ ತೆ ವಶಂ ಅತ್ಸಿ ತೇಷಮ್‌|

ಪ್ರಶೇನ್ ಯನ್ಮಧವನ್ ಹುಯ್ ಮಾನ್’’.

ಅರ್ಥ: ಓ ಇಂದ್ರ! ತಿನ್ನುವ ಬಯಕೆಯಿಂದ ನಿನಗಾಗಿ ಯಜ್ಞ ಮಾಡಿದಾಗ, ಆತಿಥೇಯನು ಬೇಗನೆ ಸೋಮರಸವನ್ನು ಸಿದ್ಧಪಡಿಸುತ್ತಾನೆ. ನೀನು ಅದನ್ನು ಕುಡಿಯುತ್ತೀಯ. ಆತಿಥೇಯನು ಎತ್ತನ್ನು ಬೇಯಿಸುತ್ತಾನೆ ಮತ್ತು ನೀನು ಅದನ್ನು ತಿನ್ನುತ್ತೀಯ.

(ಋಗ್ವೇದ, 10-28-3). ಮೇಲಿನ ಋಗ್ವೇದದ ಶ್ಲೋಕಗಳು ಆರ್ಯ ಬ್ರಾಹ್ಮಣರಿಂದ, ಅಂದರೆ ದೇವತೆಗಳ ರಾಜ ಇಂದ್ರನಿಂದ ಬಂದಿವೆ. ಅವು ಇಂದ್ರನಿಗೆ ಎತ್ತುಗಳು ಮತ್ತು ಮದ್ಯವನ್ನು ಅರ್ಪಿಸುವುದನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತವೆ.

ವ್ಯಾಸನು ಮಹಾಭಾರತದಲ್ಲಿ ಬರೆಯುತ್ತಾನೆ,

‘‘ರಾಜ್ಞೋ ಮಹಾಂಸೇ ಪೂರ್ವಾ ರಂತಿದೇವಸ್ಯ ವೈದ್ವಿಜಃ ದ್ವೈಸಹಸ್ರ ತು ವಾದ್ಯತೇ ಪಶೂನಾಮನ್ವಹಂ ತದಾ॥ ಅಹನ್ಯಹಾನಿ ವದ್ಯತೇ ದ್ವೈಸಹಸ್ರೆ ಗ್ರಾಮಾ ತಥಾ

ಸಮಾಂಶಂ ದದಾತೋ ಹನ್ನಂ ರಂತಿದೇವಸ್ಯ ನಿತ್ಯಃ: ಅತುಲ ಕೀರ್ತಿರ್ಭವನ್ನುಪ್ಸ್ತ ದ್ವಿಜಸತ್ತಮ್.’’ ಅರ್ಥ: ರಾಜ ರಂತಿದೇವನ ಅಡುಗೆಮನೆಯಲ್ಲಿ ಪ್ರತಿದಿನ ಎರಡು ಸಾವಿರ ಗೋವುಗಳನ್ನು ವಧಿಸಲಾಗುತ್ತಿತ್ತು. ಮಾಂಸ ಸೇರಿದಂತೆ ಬೇರೆ ಆಹಾರನ್ನು ದಾನ ಮಾಡುವುದರಿಂದಾಗಿ ರಾಜ ರಂತಿದೇವನು ಅನುಪಮ ಖ್ಯಾತಿಯನ್ನು ಗಳಿಸಿದನು.

(ಮಹಾಭಾರತ, ವನ ಪರ್ವ, ಅಧ್ಯಾಯ 208, ಶ್ಲೋಕಗಳು 810). ಮಹಾಭಾರತದ ಕೆಳಗಿನ ಪದ್ಯವನ್ನು ನೋಡಿ, ‘‘ಮಹಾನದಿ ಚರ್ಮರಾಶೆರು ತ್ಕ್ಲೆದತ್ ಸಂಸ್ರಜೆ ಯತ: ತತಶ್ಚರ್ಮನ್ವತಿತ್ಯೇವಂ ವಿಖ್ಯಾತಾ ಸ ಮಹಾನದಿ.’’ ಅರ್ಥ: ರಾಜ ರಂತಿದೇವನು ಹಸುಗಳ ಚರ್ಮವನ್ನು ಸುಲಿದನು. ಆ ಚರ್ಮಗಳಿಂದ ಹರಿಯುವ ರಕ್ತದ ಹನಿಗಳಿಂದ ಒಂದು ದೊಡ್ಡ ನದಿ ರೂಪುಗೊಂಡಿತು, ಅದನ್ನು ಚರ್ಮಣ್ವತಿ ಎಂದು ಕರೆಯಲಾಗುತ್ತದೆ.

(ಶಾಂತಿಪರ್ವ: ಅಧ್ಯಾಯ 29, ಶ್ಲೋಕ 123). ಮಹಾಭಾರತದ ಮೇಲಿನ ಶ್ಲೋಕಗಳು ಬ್ರಾಹ್ಮಣರು ಗೋಮಾಂಸ ತಿನ್ನುವುದನ್ನು ನಿಷಿದ್ಧವೆಂದು ಪರಿಗಣಿಸಿರಲಿಲ್ಲ, ಬದಲಿಗೆ ಅತಿಥಿಗಳನ್ನು ಸತ್ಕರಿಸಲು ಅವರ ಮುಖ್ಯ ಆಹಾರಗಳ ಪಟ್ಟಿಯಲ್ಲಿ (ಮೆನು) ಗೋಮಾಂಸ ಸ್ಥಾನ ಪಡೆದಿತ್ತು ಮತ್ತು ಅವರು ಅದನ್ನು ಬಹಳ ಸಂತೋಷದಿಂದ ಬೇಯಿಸುತ್ತಿದ್ದರು ಎಂಬುದನ್ನು ಋಗ್ವೇದವು ನಿಸ್ಸಂದೇಹವಾಗಿ ಸ್ಪಷ್ಟಪಡಿಸುತ್ತವೆ.

ಕಾಶ್ಮೀರದಲ್ಲಿ, ಶೈವ ಮತ್ತು ತಾಂತ್ರಿಕ ಸಂಪ್ರದಾಯಗಳನ್ನು ಅನುಸರಿಸುವ ಬ್ರಾಹ್ಮಣರು ಬ್ರಿಟಿಷರ ಅವಧಿಯವರೆಗೆ ವ್ಯಾಪಕವಾಗಿ ಗೋಮಾಂಸವನ್ನು ತಿನ್ನುತ್ತಿದ್ದರು. ಬಂಗಾಳದಲ್ಲಿ (ವಿಶೇಷವಾಗಿ ಹಿಂದಿನ ಬಂಗಾಳ, ಈಗ ಬಾಂಗ್ಲಾದೇಶದಲ್ಲಿಯೂ ಸಹ) ಅನೇಕ ಬ್ರಾಹ್ಮಣರು ಗೋಮಾಂಸವನ್ನು ತಿನ್ನುತ್ತಾರೆ. ಶ್ಯಾಮಚರಣ್ ದಾಸ್ ಮತ್ತು ರಜನಿಕಾಂತ್ ಸೇನ್ ಅವರಂತಹ ಪ್ರಸಿದ್ಧ ಬಂಗಾಳಿ ಬ್ರಾಹ್ಮಣರು ಗೋಮಾಂಸ ತಿನ್ನುತ್ತಿದ್ದರು. ಇಂದಿಗೂ ಸಹ, ಹಳೆಯ ಶಾಕ್ತ ಸಂಪ್ರದಾಯಗಳನ್ನು ಹೊಂದಿರುವ ಕೋಲ್ಕತಾದ ಕೆಲವು ಬ್ರಾಹ್ಮಣ ಕುಟುಂಬಗಳಲ್ಲಿ ಗೋಮಾಂಸವನ್ನು ತಿನ್ನಲಾಗುತ್ತದೆ. ಅಸ್ಸಾಂ, ಒಡಿಶಾ ಮತ್ತು ಮಹಾರಾಷ್ಟ್ರಗಳಲ್ಲಿ ಕೆಲವು ತಾಂತ್ರಿಕ ಬ್ರಾಹ್ಮಣರು ಹಸುಗಳನ್ನು ಬಲಿ ನೀಡಿ ಗೋಮಾಂಸವನ್ನು ತಿನ್ನುತ್ತಿದ್ದರು (ವಿಶೇಷವಾಗಿ ದುರ್ಗಾ ಪೂಜೆ ಮತ್ತು ಕಾಳಿ ಪೂಜೆ ಹಾಗೂ ಯಜ್ಞಗಳ ಸಮಯದಲ್ಲಿ) ಎಂಬುದರ ಐತಿಹಾಸಿಕ ದಾಖಲೆಗಳಿವೆ. ವಿದೇಶಗಳಲ್ಲಿ ವಾಸಿಸುವ ಅನೇಕ ಬ್ರಾಹ್ಮಣರು ಇನ್ನೂ ಗೋಮಾಂಸವನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ ಮತ್ತು ಅಂತಹ ವಿಷಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುತ್ತಾರೆ. ಋಗ್ವೇದದಲ್ಲಿ ಹಸುಗಳ ರಕ್ಷಣೆ, ಸಾಕಣೆ, ಪಾಲನೆ, ಅವುಗಳಿಗೆ ಉತ್ತಮ ಮೇವು ನೀಡುವುದು ಮತ್ತು ಹಸುಗಳು ಕೃಷಿ ಕಾರ್ಯಗಳಿಗಾಗಿ ಉತ್ತಮ ಎತ್ತುಗಳನ್ನು ಒದಗಿಸುತ್ತವೆ ಎನ್ನುವ ವಿಷಯ ಕುರಿತು ಅನೇಕ ಶ್ಲೋಕಗಳನ್ನು ಒಳಗೊಂಡಿದೆ.

ಹಸುಗಳ ಕುರಿತು ಕಥೆಗಳನ್ನು ಸೃಷ್ಟಿಸಿದವರು ಮಹಿಳೆಯರು ಎಂದು ಶರದ್ ಪಾಟೀಲ್ ತಮ್ಮ ಕೃತಿಯಲ್ಲಿ ಹೇಳುತ್ತಾರೆ. ಪ್ರಪಂಚದಾದ್ಯಂತ ಮಹಿಳೆಯರು ಕೃಷಿಯನ್ನು ಕಂಡುಹಿಡಿದರು ಎಂದು ಇತಿಹಾಸ ಸಂಶೋಧಕರು ಸಾಬೀತುಪಡಿಸಿದ್ದಾರೆ ಎನ್ನುತ್ತಾರೆ ಪಾಟೀಲ್. ‘‘ಹಸುಗಳು ಮತ್ತು ಎತ್ತುಗಳು ಕೃಷಿಗೆ ಬಹಳ ಉಪಯುಕ್ತ ಪ್ರಾಣಿಗಳಾಗಿದ್ದವು. ಹಸು ರೈತರಿಗೆ ಹಾಲು ನೀಡುತ್ತಿತ್ತು, ಕೃಷಿಗೆ ಎತ್ತುಗಳನ್ನು ಒದಗಿಸುತ್ತಿತ್ತು, ಮಲ ಮತ್ತು ಮೂತ್ರದ ರೂಪದಲ್ಲಿ ಗೊಬ್ಬರವನ್ನು ಒದಗಿಸುತ್ತಿತ್ತು, ಆದ್ದರಿಂದ ಆರ್ಯ ಬ್ರಾಹ್ಮಣರು ಹಸುವನ್ನು ಪ್ರೀತಿಸುವುದು ಸಹಜ, ಆದರೆ, ನನ್ನ ಪ್ರಶ್ನೆ ಏನೆಂದರೆ, ರೈತರು ಮತ್ತು ಕಾರ್ಮಿಕರ ಶ್ರಮದಿಂದ ಆಹಾರವನ್ನು ಪಡೆದ ಸಾವಿರಾರು ತಲೆಮಾರುಗಳ ಜನರು, ಕಡಲೆಕಾಯಿ ಬೀಜಗಳು ನೆಲದಡಿಯಲ್ಲಿ ಬೆಳೆಯುತ್ತವೋ ಅಥವಾ ನೆಲದ ಮೇಲೆ ಬೆಳೆಯುತ್ತವೆಯೋ ಎಂದು ತಿಳಿಯದ ಬ್ರಾಹ್ಮಣರಿಗೂ ಮತ್ತು ಕೃಷಿಗೂ ಸಂಬಂಧವೇನು, ‘ಹಾಲು ಯಾರು ಉತ್ಪಾದಿಸುತ್ತಾರೆ ಮತ್ತು ಎಲ್ಲಿ ಉತ್ಪಾದಿಸಲಾಗುತ್ತೆ?’ ಎಂದು ಕೇಳಿದರೆ ಇಂದಿನ ಬ್ರಾಹ್ಮಣ ಪೀಳಿಗೆ ‘ಹಾಲು ಮಾರುವ ಗೌಳಿ’ ಎಂದು ಉತ್ತರಿಸುತ್ತಾರೆ. ಹಸುವಿಗೂ ಬ್ರಾಹ್ಮಣರಿಗೂ ಸಂಬಂಧವೇನು?’’ ಎಂಬುದು ಶರದ್ ಪಾಟೀಲ್‌ರ ಪ್ರಶ್ನೆ. ಶರದ್ ಪಾಟೀಲ್ ಮುಂದುವರಿದು ಹೀಗೆ ಪ್ರಶ್ನಿಸುತ್ತಾರೆ: ‘‘ಇತಿಹಾಸದ ವಿಪರ್ಯಾಸವೆಂದರೆ ಗೋವುಗಳ ಬಗ್ಗೆ ಗೌರವವಿಲ್ಲದ ಜನರು ಇಂದು ಅದೇ ಗೋವುಗಳ ಹೆಸರಿನಲ್ಲಿ ದೇಶಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ಇತಿಹಾಸದ ಕುರಿತು ನಮ್ಮ ಅಜ್ಞಾನವೇ ಇದಕ್ಕೆಲ್ಲಾ ಕಾರಣ ಎಂಬುದನ್ನು ನಾವು ಅರಿತುಕೊಳ್ಳಬೇಕು.

ಇತಿಹಾಸದ ಅಜ್ಞಾನದ ಜೊತೆಯಲ್ಲಿ ನಮಗೆ ವರ್ತಮಾನದ ಬಗ್ಗೆ ಕೂಡ ಏನೂ ಗೊತ್ತಿಲ್ಲ. ಗೋಹತ್ಯೆಗೆ ಮುಸ್ಲಿಮರು ಮತ್ತು ದಲಿತರು ಕಾರಣ ಎಂದು ಇಂದಿನ ಹಿಂದುತ್ವವಾದಿ ಬ್ರಾಹ್ಮಣರು ಆರೋಪಿಸುತ್ತಾರೆ. ಈ ವಿಷಯದಲ್ಲಿ ನಾವು ಸತ್ಯ ಸಂಗತಿಗಳನ್ನು ಪರಿಶೀಲಿಸಬೇಕು’’ ಎನ್ನುತ್ತಾರೆ ಶರದ್ ಪಾಟೀಲ್. ಇಂದು ದೇಶದಲ್ಲಿ ಗೋಮಾಂಸ ರಫ್ತು ಮಾಡುವ ಪ್ರಮುಖ ಹತ್ತು ಸಂಸ್ಥೆಗಳು ಮತ್ತು ಅವುಗಳ ಮಾಲಕರು ಹಿಂದೂಗಳೇ ಆಗಿದ್ದಾರೆ ಎನ್ನುವ ಸಂಗತಿಯನ್ನು ಪಾಟೀಲರು ಒತ್ತಿ ಹೇಳುತ್ತಾ ಆ ಪಟ್ಟಿ ಕೊಡುತ್ತಾರೆ:

1. ಆಲ್ ಕಬೀರ್ ಎಕ್ಸ್‌ಪೋರ್ಟ್ ಪ್ರೈ. ಲಿ., (ಮಾಲಕ: ಸತೀಶ್ ಶಾಬರವಾಲ್ ಮತ್ತು ಅತುಲ್ ಶಾಬರವಾಲ್),

2. ಅರೇಬಿಯನ್ ಎಕ್ಸ್‌ಪೋರ್ಟ್ ಪ್ರೈ. ಲಿ., (ಮಾಲಕ: ಸುನೀಲ್ ಕಪೂರ್),

3. ಎಂಕೆಆರ್ ಫ್ರೋಜನ್ ಫುಡ್ ಎಕ್ಸ್‌ಪೋರ್ಟ್ ಪ್ರೈ. ಲಿ. (ಮಾಲಿಕ: ಮದನ್ ಅಬೋಟ್),

4. ಆಲ್ ನೂರ್ ಎಕ್ಸ್‌ಪೋರ್ಟ್ ಪ್ರೈ. ಲಿ., (ಮಾಲಕ: ಸುನೀಲ್ ಸೂದ್ ಮತ್ತು ಅಜೇಯ್ ಸೂದ್).

ಬ್ರಾಹ್ಮಣರು ಹಿಂದಿನ ಕಾಲದಲ್ಲಿ ಗೋಮಾಂಸ ತಿನ್ನುತ್ತಿದ್ದರು ಎಂದು ಅವರ ಧರ್ಮ ಗ್ರಂಥಗಳನ್ನು ಉಲ್ಲೇಖಿಸಿ ಸ್ವಾಮಿ ವಿವೇಕಾನಂದರೂ ಸಹ ಮಾತನಾಡಿದ್ದಾರೆ. ಅವರ ಮಾತುಗಳು ರಾಮಕೃಷ್ಣ ಮಿಷನ್ ಪ್ರಕಟಿಸಿರುವ ವಿವೇಕಾನಂದರ ಕೃತಿ ಶ್ರೇಣಿಯಲ್ಲಿ ನೋಡಬಹುದು. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಸಹ ‘‘...ಹೊಲೆಯರ ಹೊಟ್ಟೆಯಲ್ಲಿ ವಿಪ್ರರು ಹುಟ್ಟಿ ಗೋಮಾಂಸ ತಿಂದರೆನ್ನುವುದಕ್ಕೆ ಇದೇ ದೃಷ್ಟ...’’ ಎಂದಿದ್ದಾರೆ. ಆದರೆ, ವಿಪರ್ಯಾಸದ ಸಂಗತಿ ಎಂದರೆ ಇಂದು ದೇಶದ ಜನರಿಗೆ ಗೋವಿನ ಶ್ರೇಷ್ಠತೆಯನ್ನು ಸಾರುವ ಮತ್ತು ಅದನ್ನು ತಮ್ಮ ತಾಯಿಯೆಂದು ಪೂಜಿಸಲು ಆದೇಶಿಸುವ ಈ ಗೋಭಕ್ತರು, ಗೋರಕ್ಷಕರೆನಿಸಿಕೊಳ್ಳುವವರು ಮತ್ತು ಹಿಂದೂ ಧರ್ಮದ ಸ್ವಯಂ ಘೋಷಿತ ರಕ್ಷಕರೆನಿಸಿಕೊಳ್ಳುವವರ ಹಲ್ಲುಗಳನ್ನು ಒಮ್ಮೆ ಪರಿಶೀಲಿಸಬೇಕು, ಇವರ ಪೂರ್ವಜರ ಹಲ್ಲುಗಳು ಗೋಮಾಂಸವನ್ನು ಕಡಿದು ತಿಂದಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು: ‘‘ಒಂದು ರಾಷ್ಟ್ರ, ಒಂದು ಸಮಾಜ ಮತ್ತು ದೇಶದ ಇತಿಹಾಸವನ್ನು ಮರೆತ ವ್ಯಕ್ತಿ; ಆ ರಾಷ್ಟ್ರ, ಆ ಸಮಾಜ ಮತ್ತು ಆ ವ್ಯಕ್ತಿ ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಿಲ್ಲ’’ ಎನ್ನುತ್ತಾರೆ. ಆದ್ದರಿಂದ, ನಾವು ನಮ್ಮ ನಿಜವಾದ ಇತಿಹಾಸವನ್ನು ಮತ್ತೊಮ್ಮೆ ನಮ್ಮ ಕಣ್ಣುಗಳನ್ನು ತೆರೆದು ಓದಬೇಕು, ಚಿಂತಿಸಬೇಕು ಮತ್ತು ಅದರ ಕುರಿತು ಸಮಾಜದಲ್ಲಿ ಜಾಗೃತಿಯನ್ನು ಮೂಡಿಸಬೇಕು. ಇತಿಹಾಸವನ್ನು ತಿರುಚಿ ಇಂದಿನ ಪೀಳಿಗೆಯನ್ನು ದಾರಿ ತಪ್ಪಿಸಲಾಗುತ್ತಿದೆ. ಇಂದು ಸಂತೋಷದಿಂದ ಗೋಮಯ ತಿಂದು ಗೋಮೂತ್ರ ಕುಡಿಯುವ ಜನರು ಅಂದು ಅದೇ ಗೋವನ್ನು ಕೊಂದು ಸಂತೋಷದಿಂದ ಸೇವಿಸುತ್ತಿದ್ದರು ಎನ್ನವ ನೈಜ ಇತಿಹಾಸವನ್ನು ಎಲ್ಲರೂ ಓದಿ, ಜನರಿಗೆ ತಿಳಿಸಬೇಕು.

ಉಲ್ಲೇಖ ಪಟ್ಟಿ:

1. ಶಿವಾಜಿಯ ಹಿಂದೂ ಸ್ವರಾಜ್ಯದ ನಿಜವಾದ ಶತ್ರು ಯಾರು: ಮಹಮ್ಮದೀಯರು ಅಥವಾ ಬ್ರಾಹ್ಮಣರು?, ಲೇಖಕರು, ಕಾಂ. ಶರದ್ ಪಾಟೀಲ್.

2. ಮಹಾವೀರ ಚರಿತಂ, ಭವಭೂತಿ ವಿರಚಿತ ನಾಟಕ.

3. ಋಗ್ವೇದ.

4. ಮಹಾಭಾರತ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ಜೆ.ಎಸ್. ಪಾಟೀಲ

contributor

Similar News