ಎಂಎಲ್‌ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿದ್ದೇನು?
ದುಷ್ಟನೊಬ್ಬನನ್ನು ಮಣಿಸಲು ತಾನೇ ದುಷ್ಟನಾಗಬಾರದು. ಕಳ್ಳನೊಬ್ಬನಿಂದ ತನ್ನ ವಸ್ತುವನ್ನು ಮರಳಿ ಪಡೆಯಬೇಕೇ ಹೊರತು ಆತನಿಂದ ಅದನ್ನು ಕದಿಯಬಾರದು. ಈ ನೀತಿ ಪಾಠವನ್ನು ಅಳವಡಿಸಿಕೊಳ್ಳಲು ರಾಜಕೀಯ ಪಕ್ಷಗಳಿಗೆ ಕಿಂಚಿತ್ತೂ ಮನಸ್ಸಿಲ್ಲ. ಇಷ್ಟು ದಿನ ಬೇರೆ ಪಕ್ಷದ ಶಾಸಕರು ಹಾಗೂ ಸಂಸದರನ್ನು ಖರೀದಿ ಮಾಡುವ ಮೂಲಕ ಬಿಜೆಪಿ ಪ್ರಜಾಪ್ರಭುತ್ವದ ಕುತ್ತಿಗೆಯ ಮೇಲೆ ಕಾಲಿಟ್ಟು ತುಳಿಯುತ್ತಿದೆ, ಸಂವಿಧಾನ ಅಪಾಯದಲ್ಲಿದೆ ಎಂದು ಹೇಳುತ್ತಿದ್ದ ಕಾಂಗ್ರೆಸ್ ರಾಜ್ಯ ವಿಧಾನ ಸಭೆಯಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಮಾಡಿದ್ದೇನು?
ಕಾಂಗ್ರೆಸ್ ಬಳಿ ಇದ್ದದ್ದು ತನ್ನ 135, ಇಬ್ಬರು ಪಕ್ಷೇತರರು, ಸರ್ವೋದಯ ಕರ್ನಾಟಕ ಪಕ್ಷದ (ಚುನಾವಣಾ ಪೂರ್ವ ಮೈತ್ರಿ ಇತ್ತು) ಓರ್ವ ಶಾಸಕ ಸೇರಿ ಒಟ್ಟು 138 ಮತಗಳು. ಇಷ್ಟೇ ಮತಗಳಿಂದ ಐದೂ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬಹುದಿತ್ತು (ಕಾಂಗ್ರೆಸ್ ಶಾಸಕರು ಅಡ್ಡ ಮತದಾನ ಮಾಡಿದ್ದರೆ ಮಾತ್ರ ಸೋಲಾಗುತ್ತಿತ್ತು). ಇಷ್ಟೇ ಮತಗಳಿಂದ ಗೆದ್ದಿದ್ದರೆ ನೈತಿಕವಾಗಿ ಬೀಗಬಹುದಿತ್ತು. ಆದರೆ ಅದು ಪಡೆದದ್ದು 151 ಮತಗಳನ್ನು. ಹೆಚ್ಚುವರಿಯಾಗಿ 13 ಮತಗಳನ್ನು ಪಡೆಯುವ ಅಗತ್ಯವೇ ಇರಲಿಲ್ಲ. ಆದರೂ ಇದು ಬಲಪ್ರದರ್ಶನ ಮಾಡಲು ಸಿಕ್ಕ ಅವಕಾಶ ಎಂದು ಪರಿಗಣಿಸಿದ ‘ಮಹಾನಾಯಕರು’ ತಮ್ಮದಲ್ಲದ ಮತಗಳಿಗೂ ಕೈ ಹಾಕಿದರು. ಅವರೊಂದಿಗೆ ಶತಾಯಗತಾಯ ಮಂತ್ರಿಯಾಗಲೇಬೇಕು ಎಂದು ಪ್ರಯತ್ನಿಸುತ್ತಿರುವ ನಾಯಕರೊಬ್ಬರು ಕೈ ಜೋಡಿಸಿದರು.
ಗೆಲ್ಲುವುದಷ್ಟೇ ಗೊತ್ತಿದ್ದರೆ ಸಾಲದು. ಹೇಗೆ ಗೆಲ್ಲಬೇಕು ಎನ್ನುವುದು ಕೂಡ ಗೊತ್ತಿರಬೇಕು. ಗೆದ್ದವರೆಲ್ಲಾ ಇತಿಹಾಸದ ಪುಟಗಳಲ್ಲಿ ಉಳಿದಿಲ್ಲ. ಸೋತವರೆಲ್ಲಾ ಮರೆಯಾಗಿಬಿಟ್ಟಿಲ್ಲ. ಸುಲಭವಾಗಿ ಗೆದ್ದು ಸರಳವಾಗಿ ಸಂಭ್ರಮಿಸಬಹುದಿತ್ತು. ಹೊಟ್ಟೆ ತುಂಬಿದ ನಂತರವೂ ಊಟ ಮಾಡುವ ದುರಾಸೆ-ದುರಭ್ಯಾಸಗಳಿಂದ ತಕ್ಷಣಕ್ಕೆ ಏನೂ ಆಗದಿರಬಹುದು. ಮುಂದೊಂದು ದಿನ ಆರೋಗ್ಯ ಕೆಡುವುದು ಗ್ಯಾರಂಟಿ. ಅಡ್ಡಮತದಾನದ ವಿಷಯದಲ್ಲೂ ಸಂಖ್ಯೆಗಳ ಮೂಲಕ ಗೆದ್ದಿರುವ ಕಾಂಗ್ರೆಸ್ ನೈತಿಕವಾಗಿ ಸೋತಿದೆ.
ಅದರಲ್ಲೂ ವಿಧಾನ ಪರಿಷತ್ ಚುನಾವಣಾ ಗೆಲುವನ್ನು ಕಾಂಗ್ರೆಸ್ ವ್ಯಾಖ್ಯಾನಿಸಿದ ರೀತಿ ಅದಕ್ಕೂ ಬಿಜೆಪಿಗೂ ವ್ಯತ್ಯಾಸ ಇಲ್ಲ ಎನ್ನುವುದನ್ನು ಇನ್ನಷ್ಟು ಸ್ಪಷ್ಟವಾಗಿ ತಿಳಿಸಿದೆ. ರಾಜ್ಯದಲ್ಲಿ ಯಾವುದೇ ಸಾಂವಿಧಾನಿಕ ಹುದ್ದೆ ಹೊಂದಿಲ್ಲದಿದ್ದರೂ ಫಲಿತಾಂಶ ಬಂದ ಬಳಿಕ ವಿಧಾನಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಪತ್ರಿಕಾಗೋಷ್ಠಿ ನಡೆಸಿದ್ದು ಅನೈತಿಕ. ಸರಕಾರದ ಜನಪರ ನಿಲುವುಗಳನ್ನು ಮೆಚ್ಚಿಕೊಂಡು ಇತರ ಪಕ್ಷದ ಶಾಸಕರು ಕಾಂಗ್ರೆಸಿಗೆ ಮತ ಹಾಕಿದ್ದಾರೆ ಎಂದು ಹೇಳಿದ್ದು ಶುದ್ಧ ಆತ್ಮವಂಚನೆ.
ಯಾರಾದರೂ ಪತ್ರಕರ್ತರು ಜಾರ್ಖಂಡ್ ರಾಜ್ಯಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟದ ಸಿಪಿಐ(ಎಂಎಲ್) ಮತ್ತು ಆರ್‌ಜೆಡಿ ಶಾಸಕರು ಬಿಜೆಪಿ ಅಭ್ಯರ್ಥಿಗೆ ಅಡ್ಡಮತದಾನ ಮಾಡಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿದ್ದಾರೆ. ಹಾಗಾದರೆ ಅವರು ಅಲ್ಲಿನ ಜೆಎಂಎಂ ಮತ್ತು ಕಾಂಗ್ರೆಸ್ ಮೈತ್ರಿ ಸರಕಾರದ ಕಾರ್ಯವೈಖರಿ ಸರಿ ಇಲ್ಲ ಎಂದು ನಿರ್ಧರಿಸಿ ಬಿಜೆಪಿಯನ್ನು ಬೆಂಬಲಿಸಿದರೆ? ಅಲ್ಲಿನ ನಿಮ್ಮ ಮೈತ್ರಿ ಸರಕಾರ ಜನಪರವಾಗಿಲ್ಲವೇ ಎಂದು ಪ್ರಶ್ನೆ ಮಾಡಿದ್ದರೆ ಸುರ್ಜೆವಾಲಾ ಏನು ಉತ್ತರಿಸುತ್ತಿದ್ದರು?
ಹಿಂದಿನಿಂದಲೂ ಕಾಂಗ್ರೆಸ್ ಇಂಥ ತಪ್ಪುಗಳನ್ನು ಮಾಡುವ ಮೂಲಕ ಬಿಜೆಪಿಗೆ ಇನ್ನೂ ದೊಡ್ಡ ತಪ್ಪುಗಳನ್ನು ಮಾಡಿಯೂ ಸಮರ್ಥಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದೆ. ಕಾಂಗ್ರೆಸ್ ಮಾಡಿರುವ ತಪ್ಪುಗಳೇ ತಾನು ತಪ್ಪು ಮಾಡಲು ಪರವಾನಿಗೆ ಎಂದು ಪರಿಗಣಿಸಿರುವ ಬಿಜೆಪಿ ಸಿಗುವ ಯಾವ ಅವಕಾಶವನ್ನು ಬಿಡದೆ ಅಸಾಂವಿಧಾನಿಕ ನಡೆಗಳನ್ನು ಇಡುತ್ತಿದೆ.
ಬಿಜೆಪಿ ತಾನೆಷ್ಟೇ ಶಿಸ್ತಿನ ಪಕ್ಷ ಎಂದು ಹೇಳಿಕೊಂಡರೂ ಸೈದ್ಧಾಂತಿಕ ಅಧಃಪತನದಿಂದ ಹಿಡಿದು ಭ್ರಷ್ಟಾಚಾರ, ವಂಶಪಾರಂಪರ್ಯ ರಾಜಕಾರಣದವರೆಗೆ ಬರಬರುತ್ತಾ ಕಾಂಗ್ರೆಸ್ ಆಗುತ್ತಿದೆ. ಇದೀಗ ಕಾಂಗ್ರೆಸ್ ಕೂಡ ಬಿಜೆಪಿಯಾಗುತ್ತಿದೆ. ಅಡ್ಡಮತದಾನ ಪ್ರಜಾಪ್ರಭುತ್ವಕ್ಕೆ ಮಾಡುವ ಅಪಚಾರ. ಮೊದಲು ಆಪರೇಷನ್ ಕಮಲ ಮಾಡಿ ಸರಕಾರವನ್ನು ಉರುಳಿಸುತ್ತಿದ್ದ ಹಾಗೂ ಸರಕಾರವನ್ನು ರಚಿಸುತ್ತಿದ್ದ ಬಿಜೆಪಿ ಅಡ್ಡಮತದಾನದ ಮೂಲಕವೂ ರಾಜಕೀಯ ಅಸ್ಥಿರತೆ ಸೃಷ್ಟಿಸಿ ತನ್ನ ಬೇಳೆಬೇಯಿಸಿಕೊಳ್ಳುತ್ತಿದೆ.
ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಬಿಜೆಪಿಯ ದುರ್ನಡತೆಯನ್ನು ಖಂಡಿಸುವ ಕಾಂಗ್ರೆಸ್ ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಶಾಸಕರು ಮಾಡಿದ ಅಡ್ಡಮತದಾನವನ್ನು ಸ್ವಾಗತಿಸಿದೆ. ಕಾಂಗ್ರೆಸ್ ನಡೆಗೆ ಸಮರ್ಥನೆಗಳೇ ಇಲ್ಲ. ಆದರೂ ರಣದೀಪ್ ಸಿಂಗ್ ಸುರ್ಜೆವಾಲಾ ಥರದವರು ನಿರ್ಲಜ್ಜೆಯಿಂದ ಇದೇ ಮುಂದಿನ ಚುನಾವಣೆಗೂ ದಿಕ್ಸೂಚಿ ಎಂದು ಅಪ್ರಬುದ್ದ ಹೇಳಿಕೆ ನೀಡುತ್ತಾರೆ.
ಎಲ್ಲೆಲ್ಲೂ ಅಪನಂಬಿಕೆ!
ರಾಜ್ಯದ ಮೂರೂ ಪಕ್ಷಗಳಲ್ಲೂ ಅಪನಂಬಿಕೆ ಮನೆ ಮಾಡಿದೆ. ನಿಜಕ್ಕೂ ತನ್ನೆಲ್ಲಾ ಶಾಸಕರ ಮೇಲೆ ನಂಬಿಕೆ ಇದ್ದರೆ ಕಾಂಗ್ರೆಸ್ ಬೇರೆ ಪಕ್ಷಗಳಿಂದ ಅಡ್ಡಮತಗಳನ್ನು ಹಾಕಿಸಿಕೊಳ್ಳುವ ಪ್ರಮೇಯವೇ ಇರುತ್ತಿರಲಿಲ್ಲ. ಯಾರು ಏನೇ ಹೇಳಿದರೂ ಕಾಂಗ್ರೆಸ್ ನಾಯಕರಿಗೆ ತಮ್ಮದೇ ಕೆಲ ಶಾಸಕರ ಮೇಲೆ ಗುಮಾನಿ ಇತ್ತು ಎನ್ನುವುದು ದಿಟ. ತಮ್ಮವರು ಕೈಕೊಟ್ಟರೆ ಬೇರೆಯವರು ಕೈಹಿಡಿಯಲಿ ಎಂದೇ ಬೇರೆಯವರ ಮತ ಕಸಿಯುವ ರಣತಂತ್ರವನ್ನು ರೂಪಿಸಲಾಗಿತ್ತು.
ನಾಯಕರಿಟ್ಟಿದ್ದ ‘ನಂಬಿಕೆ’ಯನ್ನು ಕೆಲ ಕಾಂಗ್ರೆಸ್ ಶಾಸಕರು ಉಳಿಸಿಕೊಳ್ಳುತ್ತಿದ್ದರೇನೋ? ಆದರೆ ಜನಪ್ರಿಯ ನಾಯಕ ಎನ್ನುವುದರಲ್ಲಿ ಯಾವ್ಯಾವ ಅನುಮಾನ ಇಲ್ಲದಿದ್ದರೂ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿರುವುದು, ದಾವಣಗೆರೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದರೆಂದು ನಸೀರ್ ಅಹಮದ್, ಅಬ್ದುಲ್ ಜಬ್ಬಾರ್ ಮತ್ತಿತರರನ್ನು ಕಿತ್ತು ಹಾಕಿರುವುದು, ನಾನೇ ಮುಸ್ಲಿಮರ ಏಕಮೇವ ನಾಯಕ ಎಂದು ಬೀಗುತ್ತಿದ್ದ ಝಮೀರ್ ಅಹಮದ್ ಖಾನ್ ಅವರನ್ನು ಮೊದಲ ಸುತ್ತಿನಲ್ಲಿ ಸಂಪುಟಕ್ಕೆ ಸೇರಿಸಿಕೊಳ್ಳದೆ ‘ಬೆಂಚು ಕಾಯುವಂತೆ’ ಹೇಳಿರುವುದು, ಸಿದ್ದರಾಮಯ್ಯ ನಂತರ ನಾನೇ ನಿಜವಾದ ಅಹಿಂದ ನಾಯಕ ಎಂದು ಹೇಳಿಕೊಳ್ಳುತ್ತಿದ್ದ ಎಚ್.ಸಿ. ಮಹದೇವಪ್ಪಗೆ ‘ಸ್ವಲ್ಪ ತಡೆಯಿರಿ’ ಎಂದು ಸೂಚಿಸಿರುವುದು, ಒಂದು ಕಾಲದ ಮುಖ್ಯಮಂತ್ರಿ ಅಭ್ಯರ್ಥಿ ಎಚ್.ಕೆ. ಪಾಟೀಲ್ ಅವರಿಗೂ ‘ಸಾಕು’ ಎಂಬ ಸಂದೇಶ ಕೊಟ್ಟಿರುವುದು, ರಾಮಲಿಂಗಾ ರೆಡ್ಡಿ ರಾಜೀನಾಮೆ ಹಿಂಪಡೆಯಲು ಒಪ್ಪದಿದ್ದಾಗ ‘ಜಾಸ್ತಿ ಒತ್ತಾಯ ಮಾಡಬೇಡಿ, ಅಂಗೀಕರಿಸಿ’ ಎಂದು ಹೂಂಕರಿಸಿರುವುದು, ನೇರವಾಗಿ ರಾಹುಲ್ ಗಾಂಧಿ ಜೊತೆ ಮಾತನಾಡಿಯೇ ಸಮಸ್ಯೆ ಬಗೆಹರಿಸಿಕೊಳ್ಳಲು ಹೊರಟಿದ್ದ ಕೃಷ್ಣಬೈರೆಗೌಡರ ಖಾತೆ ಸಮಸ್ಯೆ ಕಗ್ಗಂಟಾಗಿಯೇ ಉಳಿದಿರುವುದು ಕಾಂಗ್ರೆಸ್ ಹೈಕಮಾಂಡ್ ಕಠಿಣ ನಿರ್ಧಾರ ತೆಗೆದುಕೊಳ್ಳಬಲ್ಲದು ಎನ್ನುವುದಕ್ಕೆ ಸಿಕ್ಕಿರುವ ಉದಾಹರಣೆಗಳು. ಈ ಬೆಳವಣಿಗೆಗಳು ಕೆಲ ಶಾಸಕರ ಕೈಗಳನ್ನು ಕಟ್ಟಿಹಾಕಿವೆ. ಜೊತೆಗೆ ಸಂಪುಟ ವಿಸ್ತರಣೆ ಕೂಡ ಬಾಕಿ ಇರುವುದರಿಂದ ಕೆಲವರಿಗೆ ‘ಆತ್ಮಸಾಕ್ಷಿ’ ನೆನಪಾಗಿಲ್ಲ.
ರಾಷ್ಟ್ರೀಯ ಬಿಜೆಪಿ ಪ್ರಾದೇಶಿಕ ಪಕ್ಷಗಳನ್ನು ಹುಡುಕಿ ಹುಡುಕಿ ಆಪೋಶನ ತೆಗೆದುಕೊಳ್ಳುತ್ತಿರುವ ಹೊತ್ತಿನಲ್ಲೇ ರಾಜ್ಯ ಬಿಜೆಪಿ ಸ್ಥಿತಿ ಚಿಂತಾಜನಕವಾಗಿದೆ. ಸದ್ಯದ ಬಿಜೆಪಿಯ ಸ್ಥಿತಿಯನ್ನು ಒಂದೇ ಮಾತಿನಲ್ಲಿ ಹೇಳಬೇಕಾದ ಪರಿಸ್ಥಿತಿ ಬಂದರೆ ಧಾರಾಳವಾಗಿ ಅಪನಂಬಿಕೆ ಎಂದು ಹೇಳಿಬಿಡಬಹುದು. ರಾಜ್ಯ ಬಿಜೆಪಿಯಲ್ಲಿ ನಾನಾ ರೀತಿಯ ಅಪನಂಬಿಕೆಯ ಸಮಸ್ಯೆ ಕಾಡುತ್ತಿದೆ.
ವಿಜಯೇಂದ್ರ ಮೇಲೆ ಆರ್. ಅಶೋಕ್‌ಗೆ ವಿಶ್ವಾಸವಿಲ್ಲ. ಅಶೋಕ್ಮೇಲೆ ವಿಜಯೇಂದ್ರಗೆ ವಿಶ್ವಾಸವಿಲ್ಲ. ಇವರಿಬ್ಬರ ಮೇಲೆ ಉಳಿದವರಿಗೆ ವಿಶ್ವಾಸವಿಲ್ಲ. ವಿಜಯೇಂದ್ರ ಬಗ್ಗೆ ಹಿರಿಯರಿಗೆ ಸಮಾಧಾನವಿಲ್ಲ. ಕಿರಿಯರು ಅಶೋಕ್ ಬಳಿ ಹೋಗುತ್ತಿಲ್ಲ. ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿಯನ್ನು ಅಶೋಕ್ ಮರೆತಿದ್ದಾರೆ. ವಿಧಾನಸೌಧದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿ ಇದೆ ಎನ್ನುವುದು ವಿಜಯೇಂದ್ರಗೆ ಗೊತ್ತೇ ಇಲ್ಲ. ಇವರ ನಡುವೆ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ಹೀಗೆ ನಾಯಕರು ಮತ್ತು ಶಾಸಕರ ನಡುವೆ ನಂಬಿಕೆ ಇಲ್ಲದಿರುವುದರಿಂದಲೇ 29 ಮತಗಳನ್ನು ಹಂಚಿಕೆ ಮಾಡಬೇಕಾಗಿದ್ದ ಜಾಗದಲ್ಲಿ 30 ಮತಗಳನ್ನು ಹಂಚಿಕೆ ಮಾಡಿದ್ದು. ಒಟ್ಟಿನಲ್ಲಿ ಎಲ್ಲರೂ ನಾವು ಹೇಳಿದವರಿಗೆ ಮತ ಹಾಕುವುದಿಲ್ಲ ಎಂದು ರಾಜ್ಯ ಬಿಜೆಪಿ ನಾಯಕರು ಇಟ್ಟಿದ್ದ ನಂಬಿಕೆ ನಿಜವಾಗಿದೆ. ಇಡೀ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಮತ ಪಡೆದು ಗೆದ್ದದ್ದು ಬಿಜೆಪಿಯ ಲಿಂಗರಾಜ್ ಪಾಟೀಲ್ ಎನ್ನುವುದೇ ಇದಕ್ಕೆ ಪುರಾವೆ.
ಜೆಡಿಎಸ್ ಕತೆಯನ್ನು ನೋಡುವುದಾದರೆ ಆ ಪಕ್ಷ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇ ನಮ್ಮ ಜೊತೆ ಎಷ್ಟು ಶಾಸಕರಿದ್ದಾರೆ ಎನ್ನುವುದನ್ನು ಪರೀಕ್ಷೆ ಮಾಡಿಕೊಳ್ಳಲು. ಜೊತೆಗೆ
ಮೈತ್ರಿ ಪಕ್ಷ ಬಿಜೆಪಿ ನಮಗೆ ಎಷ್ಟರಮಟ್ಟಿಗೆ ಸಹಕಾರ ನೀಡುತ್ತದೆ ಎನ್ನುವುದನ್ನು ಕಂಡುಕೊಳ್ಳಲು. ಜೆಡಿಎಸ್ ಗೆ ತಮ್ಮ ಪಕ್ಷದ ಶಾಸಕರು ಹಾಗೂ ಮಿತ್ರಪಕ್ಷದ ಬಗ್ಗೆಯೂ ಇದ್ದದ್ದು ಅಪನಂಬಿಕೆಯೇ ಹೊರತು ಬೇರೆಯಲ್ಲ. ಪಕ್ಷವನ್ನು ಅವರೇ ಮಾತೃ
ಎಂದು ಕರೆಯುವುದರಿಂದ ಮೂರೂ ಪಕ್ಷದಲ್ಲಿ ಆತ್ಮಸಾಕ್ಷಿ, ಅಭಿವೃದ್ಧಿ ಮತ್ತಿತರ ಹೆಸರಿನಲ್ಲಿ ನಾಟಕ ಮಾಡಿ ಅಡ್ಡ ಮತದಾನ ಮಾಡಿದವರನ್ನು ನಿಸ್ಸಂಶಯವಾಗಿ ಮಾತೃ ದ್ರೋಹಿಗಳೆನ್ನಬಹುದು.
ಕಾಂಗ್ರೆಸ್ ಪಕ್ಷ ‘ಬಿಜೆಪಿಯದು ಅನೈತಿಕ ರಾಜಕಾರಣ’ ಎಂದು ದೂರುವುದು ಮಾತ್ರವಲ್ಲ, ನೈತಿಕ ರಾಜಕಾರಣಕ್ಕಾಗಿ ನಮ್ಮನ್ನು ಬೆಂಬಲಿಸಿ ಎಂಬ ಸಂದೇಶವನ್ನೂ ಕೊಡಬೇಕು. ರಾಜಕಾರಣದಲ್ಲಿ ಯಾರಿಗೋ ‘ಚಮಕ್’ ಕೊಡುವುದೇ ಮುಖ್ಯವಲ್ಲ. ಎದುರಾಳಿಗಳನ್ನು ನೈತಿಕವಾಗಿ ಅಧೀರರನ್ನಾಗಿಸುವುದು ಬಹಳ ಮುಖ್ಯ. ‘ಮೋದಿಯಿಂದ ಯಾವ ಪಾಠ ಕಲಿಯುವಿರಿ?’ ಎಂಬ ಪ್ರಶ್ನೆಗೆ ‘ಮೋದಿಯಂತಾಗಬಾರದು’ ಎಂದು ಉತ್ತರಿಸುವುದು ಮುಖ್ಯವಲ್ಲ, ಹಾಗಾಗದಿರುವುದು ಬಹಳ ಮುಖ್ಯ.
ಆಫ್ ದಿ ರೆಕಾರ್ಡ್!
ಪರಿಷತ್ ಚುನಾವಣೆಯ ಸೋಲು ಬಿಜೆಪಿ ಪಾಳೆಯದಲ್ಲಿ ಸಂಚಲನವನ್ನು ಸೃಷ್ಟಿ ಮಾಡಿದೆ. ಬಿಜೆಪಿಯಲ್ಲಿ ಮೊದಲೇ ನಾಯಕತ್ವ ಬದಲಾವಣೆಯ ಬಗ್ಗೆ ಚರ್ಚೆಯಾಗುತ್ತಿತ್ತು. ಇದೀಗ ಆ ಸಾಧ್ಯತೆ ಇನ್ನಷ್ಟು ದಟ್ಟವಾಗಿದೆ. ಬಿಜೆಪಿಯ ರಾಜ್ಯಾಧ್ಯಕ್ಷ ಮತ್ತು ಪ್ರತಿಪಕ್ಷದ ನಾಯಕನ ಸ್ಥಾನಗಳಿಗೆ ಹೊಸಬರು ಬಂದರೆ ಆಶ್ಚರ್ಯವಿಲ್ಲ. ಒಂದು ಸ್ಥಾನ ಬದಲಾಗುವುದರಲ್ಲಿ ಅನುಮಾನವೇ