ರಾಜಕೀಯ ಬಾಯಿ ಪಟಾಕಿಗಳಲ್ಲೇ ಕಳೆದುಹೋದ ‘ಕಲ್ಲಿದ್ದಲು ಅನಿಲೀಕರಣ’
ಒಟ್ಟಿನಲ್ಲಿ 2070ಕ್ಕೆ ಮುನ್ನ ನೆಟ್ ಝೀರೊ ಸಾಧಿಸುವುದಕ್ಕಾಗಿ ಸರಕಾರ ಎದ್ದೂ ಬಿದ್ದೂ ಓಡುತ್ತಿದೆಯಾದರೂ, ಈ ಓಟ ದಿಕ್ಕುದೆಸೆ ಇಲ್ಲದೆ ಸಾಗುತ್ತಿರುವುದು ಸ್ಪಷ್ಟ. ತನ್ನ ನಾಯಕತ್ವದಲ್ಲಿ, 2028ರ ಹೊತಿಗೆ ಭಾರತದಲ್ಲಿ ನಡೆಯಬೇಕಿದ್ದ ಅಔP 33 ಆತಿಥೇಯತ್ವದಿಂದಲೇ ಹಿಂದೆಸರಿಯುವ ಮೂಲಕ ಭಾರತವು, ತನ್ನ ಓಟವು ದಿಕ್ಕೆಟ್ಟ ಓಟ ಎಂದು ಜಾಗತಿಕ ರಂಗಕ್ಕೆ ತೆರೆದು ತೋರಿಸಿದಂತಾಗಿದೆ.
ಅಮೆರಿಕ-ಇಸ್ರೇಲ್-ಇರಾನ್ ಕದನ ಕೋಲಾಹಲದ ಹಿನ್ನೆಲೆಯಲ್ಲಿ ಇಂಧನ ಕೊರತೆ ಜಗತ್ತಿನಾದ್ಯಂತ ಸಾಮಾಜಿಕ, ಆರ್ಥಿಕ ಒತ್ತಡಗಳನ್ನು ಉಂಟುಮಾಡುತ್ತಿದೆ. ಹಾಗಾಗಿ, ಇಂಧನ ಮೂಲದ ಹೊಸ ಸಾಧ್ಯತೆಗಳ ಕಡೆ ಜಗತ್ತಿನ ಗಮನ ಹರಿಯತೊಡಗಿದೆ. ಕಳೆದ ವಾರ ಈ ಅಂಕಣದಲ್ಲಿ, ವಿದ್ಯುತ್ ಮೂಲದ ಇಂಡಕ್ಷನ್ ಪ್ಲೇಟ್‌ಗಳ ಬಗ್ಗೆ ಚರ್ಚಿಸಲಾಗಿತ್ತು. ಅಂತಹದೇ ಇನ್ನೊಂದು ಸಾಧ್ಯತೆ ಸಿನ್‌ಗ್ಯಾಸ್ (SNG) ನದು. ಆ ವಿಚಾರದಲ್ಲಿ ನಾವು ಎಲ್ಲಿಂದ ಹೊರಟು ಎಲ್ಲಿಗೆ ತಲುಪಿದ್ದೇವೆ? ಮತ್ತು ಅದೇ ವೇಳೆಗೆ ಬೇರೆಯವರು ಏನು ಮಾಡಿದ್ದಾರೆ? ಎಂಬುದನ್ನು ಮ್ಯಾಪಿಂಗ್ ಮಾಡಿಕೊಳ್ಳುವುದು ಈ ಬರಹದ ಉದ್ದೇಶ.
2030ರ ಒಳಗೆ ಭಾರತದಲ್ಲಿ 100 MMTPA(ಮಿಲಿಯನ್ ಮೆಟ್ರಿಕ್ ಟನ್ ಪ್ರತೀ ವರ್ಷ) ಕಲ್ಲಿದ್ದಲನ್ನು ಅನಿಲೀಕರಣಗೊಳಿಸುವ (ಗ್ಯಾಸಿಫಿಕೇಷನ್) ಸಾಮರ್ಥ್ಯವನ್ನು ಹೊಂದುವ ಸಂಕಲ್ಪದೊಂದಿಗೆ, ಭಾರತ ಸರಕಾರವು ‘‘ನ್ಯಾಷನಲ್ ಕೋಲ್ ಗ್ಯಾಸಿಫಿಕೇಷನ್ ಮಿಷನ್’’ ಅನ್ನು 2020ರಲ್ಲಿ ಸ್ಥಾಪಿಸಿತ್ತು. (ಆಧಾರ: PIB Release ID: 2037489). ಅದಕ್ಕಾಗಿ ನಾಲ್ಕು ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿರುವುದಲ್ಲದೇ, ಈ ಯೋಜನೆಯಲ್ಲಿ ಪಾಲ್ಗೊಳ್ಳುವ ಉದ್ಯಮಿಗಳಿಗೆ ನಷ್ಟ ಭರ್ತಿ ಮಾಡಿಕೊಡಲು, ವಯಬಿಲಿಟಿ ಗ್ಯಾಪ್ ಫಂಡಿಂಗ್ ಮತ್ತಿತರ ಹಲವು ಸವಲತ್ತುಗಳ ಪ್ರಸ್ತಾವವನ್ನು ಸರಕಾರದ ಕಡೆಯಿಂದ ಒದಗಿಸಲಾಗಿತ್ತು.
ಸರಕಾರ ತನಗೆ ತಾನೇ ವಿಧಿಸಿಕೊಂಡಿರುವ ಈ ಗುರಿ (2030) ತಲುಪಲು ಇನ್ನು ಕೇವಲ ನಾಲ್ಕು ವರ್ಷಗಳಿವೆ. ಆದರೆ, ಬಾಯುಪಚಾರದ ಕೆಲವು ಮಾತುಗಳನ್ನು ಮತ್ತು ಕೆಲವು ಚಿಲ್ಲರೆ ಬೆಳವಣಿಗೆಗಳನ್ನು ಹೊರತುಪಡಿಸಿ, ಕಾರ್ಯರೂಪದಲ್ಲಿ ಹೆಚ್ಚೇನೂ ಆಗಿಲ್ಲ. ಸಣ್ಣ ಉದಾಹರಣೆ ಬೇಕೆಂದರೆ, 2025-26ನೇ ಸಾಲಿನಲ್ಲಿ (BE) 300 ಕೋಟಿ ರೂ.ಗಳನ್ನು ಇದಕ್ಕೆ ಮೀಸಲಿರಿಸಲಾಗಿತ್ತು. ಆದರೆ ಜನವರಿ ತನಕವೂ ಈ ಹಣ ವೆಚ್ಚವಾಗದ ಕಾರಣಕ್ಕೆ, ಅದನ್ನು 285 ಕೋಟಿ ರೂ.ಗಳಿಗೆ (BE) ತಗ್ಗಿಸಲಾಗಿದೆ. ಈಗ 2026-27ನೇ ಸಾಲಿನಲ್ಲಿ ಆ ಮೊತ್ತವನ್ನು ಏಕಾಏಕಿ 3525 ಕೋಟಿ ರೂ.ಗಳಿಗೆ ಏರಿಕೆ ಮಾಡಲಾಗಿದೆ.
ಆದರೆ, ಗಮನಾರ್ಹವಾದುದೇನೂ ಈವತ್ತಿನ ಆಪತ್ಕಾಲಕ್ಕೆ ಒದಗಿಬರುವಂತೆ ಕಾಣಿಸುತ್ತಿಲ್ಲ. ನಿಜಕ್ಕೆಂದರೆ, ಭಾರತದಲ್ಲಿರುವ ಕಲ್ಲಿದ್ದಲು ನಿಕ್ಷೇಪ ಜಗತ್ತಿನ ನಾಲ್ಕನೆಯ ದೊಡ್ಡ ಗಾತ್ರದ್ದಾಗಿದ್ದು, 38.9 ಲಕ್ಷ ಕೋಟಿ ಟನ್ ಕಲ್ಲಿದ್ದಲು ಭಾರತದಲ್ಲಿದೆ. ಅದರ ಪೈಕಿ 21.2 ಲಕ್ಷ ಕೋಟಿ ಟನ್ ಕಲ್ಲಿದ್ದಲು ಖಚಿತಪಡಿಸಿಕೊಳ್ಳಲಾದ ಭೂಗರ್ಭ ಸ್ಟಾಕ್. ಒಂದು ವೇಳೆ, ಈ ಅನಿಲೀಕರಣ ಸಾಧ್ಯವಾಗಿದ್ದಿದ್ದರೆ, ಈಗ ಯುದ್ಧಕಾಲದಲ್ಲಿ ದೇಶವು ಕಂಡವರ ಕೈ-ಬಾಯಿ ನೋಡುವುದು, ಇಂಧನ ಆಮದಿಗೆ ಬಲಿಷ್ಠರ ಅನುಮತಿ ಪಡೆಯುವುದು ಅಗತ್ಯವಿರುತ್ತಿರಲಿಲ್ಲ. ಇಂಧನ ಭದ್ರತೆಯಲ್ಲಿ ಆತ್ಮನಿರ್ಭರತೆ ಸಾಧ್ಯವಾಗುತ್ತಿತ್ತು; ನೈಸರ್ಗಿಕ ಅನಿಲ, ಮಿಥೆನಾಲ್, ಅಮೋನಿಯಂ ನೈಟ್ರೇಟ್ ಮತ್ತಿತರ ಹಲವು ಉತ್ಪನ್ನಗಳ ಆಮದಿನ ಮೇಲೆ ಅವಲಂಬನೆ ಅಗತ್ಯವಿರುತ್ತಿರಲಿಲ್ಲ.
ಅನಿಲೀಕರಣದಿಂದ ಸಿಗುವ ಸಿಂಥೆಟಿಕ್ ಗ್ಯಾಸ್ (ಸಿನ್‌ಗ್ಯಾಸ್- SNG) ಅನ್ನು ವಿದ್ಯುತ್ ಉತ್ಪಾದನೆ, ಮಿಥೆನಾಲ್, ಅಮೋನಿಯಾ, ಹೈಡ್ರೋಜನ್, ಯೂರಿಯಾದಂತಹ ರಾಸಾಯನಿಕಗಳ ಉತ್ಪಾದನೆ, ದ್ರವ ಇಂಧನಗಳ ಉತ್ಪಾದನೆಗೆ ವ್ಯಾಪಕವಾಗಿ ಬಳಸಬಹುದಾಗಿದ್ದು, ಚೀನಾ, ಅಮೆರಿಕ, ದ. ಆಫ್ರಿಕಾ ದೇಶಗಳು ಈ ನಿಟ್ಟಿನಲ್ಲಿ ಬಹುದೂರ ಸಾಗಿಯಾಗಿವೆ. ಸಾಂಪ್ರದಾಯಿಕ ಅನಿಲೀಕರಣ ವಿಧಾನದಲ್ಲಿ ಕಲ್ಲಿದ್ದಲು ಗಣಿಗಾರಿಕೆ, ದಾಸ್ತಾನು, ಸಾಗಣೆ, ಉರಿಸುವಿಕೆ ಇತ್ಯಾದಿ ಕಾರಣಗಳಿಂದಾಗಿ ಅಂತರ್ಜಲ ಕಲುಷಿತಗೊಳ್ಳುವ, ಗ್ರೀನ್ಹೌಸ್ ಅನಿಲಗಳು ವಾತಾವರಣಕ್ಕೆ ಬಿಡುಗಡೆಗೊಳ್ಳುವ, ಭೂಕುಸಿತದಂತಹ ಅಪಾಯಗಳಿವೆ. ಆದರೆ, ನೆಲದಡಿ ಕಲ್ಲಿದ್ದಲು ಇರುವಲ್ಲೇ ಅದರ ನಿರ್ದಿಷ್ಟ ಭೂಗರ್ಭ ಸ್ಥರವನ್ನು 1000 ಡಿಗ್ರಿಗೂ ಮಿಕ್ಕಿ ಉಷ್ಣತೆಯಲ್ಲಿ ಉರಿಸುವ ಮೂಲಕ ಅನಿಲೀಕರಿಸುವ, ನೆಲದಡಿಯ ಕಲ್ಲಿದ್ದಲು ಅನಿಲೀಕರಣ ವಿಧಾನವು (underground coal gasification - UCG)ಸದ್ಯ ದೇಶದಲ್ಲಿ ಬಳಕೆಯಾಗುತ್ತಿರುವ ಉಷ್ಣವಿದ್ಯುತ್ ಸ್ಥಾವರಗಳಿಗೆ ಹೋಲಿಸಿದರೆ, ಹಲವು ಪಟ್ಟು ಕಡಿಮೆ ಮಾಲಿನ್ಯಕಾರಕ ಎಂಬ ಅಭಿಪ್ರಾಯಗಳಿವೆ. ಇನ್ನಷ್ಟೇ ಅಭಿವೃದ್ಧಿಗೊಳ್ಳಬೇಕಿರುವ ಮಿನಿ ಪರಮಾಣು ವಿದ್ಯುತ್ ಸ್ಥಾವರಗಳಂತಹ ವಿಚಾರಗಳಲ್ಲಿ ಗಡಿಬಿಡಿ ತೋರುವ ಸರಕಾರ, UCG ವಿಚಾರದಲ್ಲಿ ಮಾತ್ರ ಆಮೆನಡಿಗೆಯಲ್ಲಿದೆ.
ಗಮನಿಸಬೇಕಾದ ಸಂಗತಿ ಎಂದರೆ, ಭಾರತವು ಕಲ್ಲಿದ್ದಲು ಅನಿಲೀಕರಣದ ವಿಚಾರದಲ್ಲಿ ಮೊದಲ ಬಾರಿಗೆ ಆಸಕ್ತಿ ತೋರಿದ್ದು UPA ಆಡಳಿತ ಕಾಲದಲ್ಲಿಯೇ (2007). ಅದೇ ಸಮಯದಲ್ಲಿ, ನೆರೆಯ ಚೀನಾ ಕೂಡ ಆ ಬಗ್ಗೆ ಆಸಕ್ತಿ ತಳೆದಿತ್ತು. ಭಾರತದಲ್ಲಿ ಮುಂದೆ ಹಗರಣದ ಹೆಸರಿನಲ್ಲಿ, ಕಲ್ಲಿದ್ದಲು ಗಣಿಗಾರಿಕೆಯು ಸುಪಾರಿ ಹೋರಾಟಗಾರರ ಕೈಗೆ ಸಿಕ್ಕು, ಕಲ್ಲಿದ್ದಲು ಎಂದರೆ ಜನ ಮಾರು ದೂರ ಓಡುವ ಸ್ಥಿತಿ ನಿರ್ಮಾಣ ಆಯಿತು. ಯಾರು ಈ ಹಗರಣಗಳ ಕುರಿತು ಗದ್ದಲ ಎಬ್ಬಿಸಿ, ಅದರ ಬೆನ್ನೇರಿ ಅಧಿಕಾರಕ್ಕೆ ಬಂದರೋ, ಅವರು ಕಡೆಗೆ, 2020ರಲ್ಲಿ ಅನಿಲೀಕರಣ ಮಿಷನ್ ಸ್ಥಾಪನೆ ಪ್ರಕಟಿಸಿದರು; ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಪ್ರಕಟಿಸಿದರು; ಅದನ್ನು ಸಾಧಿಸಲು 2030ರ ಗಡುವನ್ನೂ ಘೋಷಿಸಿಕೊಂಡರು. ಆದರೆ, ಈಗ ಗಡು ಪೂರೈಸಲು ನಾಲ್ಕು ವರ್ಷ ಬಾಕಿ ಇರುವಾಗ, ಭಾರತ ತಾನು ಘೋಷಿಸಿಕೊಂಡ 100 MMTPA ಪೈಕಿ ಸಾಧಿಸಿದ್ದೆಷ್ಟು? ನಾವು ಸಾಧಿಸಿರುವುದು ಕೇವಲ 5 MMTPA ಕಲ್ಲಿದ್ದಲಿನ ಅನಿಲೀಕರಣ ಸಾಮರ್ಥ್ಯ. ಅದರಲ್ಲೂ 2 MMTPA ಖಾಸಗಿ ಮೂಲಗಳ ಪ್ರಯತ್ನದ್ದು. ಆದರೆ ನಮ್ಮೊಂದಿಗೇ ಓಟ ಆರಂಭಿಸಿದ್ದ ಚೀನಾ, ಇಂದು 80 MMTPA ಕಲ್ಲಿದ್ದಲು ಅನಿಲೀಕರಣ ಸಾಮರ್ಥ್ಯವನ್ನು ಸಾಧಿಸಿಕೊಂಡಿದೆ. ಅದಕ್ಕೆ ಕಾರಣ, ಅಲ್ಲಿ ಹೂಡಿಕೆ, ಕೌಶಲ ವೃದ್ಧಿ, ತಂತ್ರಜ್ಞಾನ ಸುಧಾರಣೆಗೆ ದೊರೆತ ಆದ್ಯತೆ. ಈ ಕಾರಣದಿಂದಾಗಿ ಇಂದು ಯುದ್ಧದ ಸಂದರ್ಭ ಇರುವಾಗಲೂ ಚೀನಾ ತನ್ನ ಇಂಧನ, ರಸಗೊಬ್ಬರಗಳಿಗೆ ಸಂಬಂಧಿಸಿದಂತೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ ಮತ್ತು ಅವರಿವರ ಮರ್ಜಿಗೆ ಕಾದು ನಿಂತಿಲ್ಲ.
ರಸಗೊಬ್ಬರಗಳಿಗೆ ಸಂಬಂಧಿಸಿದಂತೆ ಹೇಳಬೇಕೆಂದರೆ, ಚೀನಾ ತನ್ನ DAP (ಡೈಯಮೋನಿಯಂ ಫಾಸ್ಫೇಟ್) ಉತ್ಪಾದನೆಗೆ ಬಳಸುವ ಅಮೋನಿಯಾದ 90ಶೇ. ಭಾಗವನ್ನು ತಯಾರಿಸಿಕೊಳ್ಳುತ್ತಿರುವುದು ಇದೇ ಅನಿಲೀಕರಣದಿಂದ. ಹಾಗೆಯೇ ಜಗತ್ತಿನಲ್ಲಿ ಉತ್ಪಾದನೆ ಆಗುವ ಯೂರಿಯಾದ 40ಶೇ. ಭಾಗವನ್ನೂ, ಮೆಥನಾಲ್‌ನ 54ಶೇ. ಭಾಗವನ್ನೂ ಉತ್ಪಾದಿಸುವ ಚೀನಾ, ಅದಕ್ಕೆ ಅಗತ್ಯವಿರುವ ರಾಸಾಯನಿಕಗಳ 70ಶೇ. ಭಾಗವನ್ನು ತನ್ನ ಅನಿಲೀಕರಣ ಸ್ಥಾವರಗಳಿಂದಲೇ ಪಡೆಯುತ್ತಿದೆ. ಆದರೆ ಭಾರತ, ಈ ಎಲ್ಲದಕ್ಕೂ ಆಮದನ್ನು ಅವಲಂಬಿಸಿದೆ. ಹಾಗಾಗಿ, ಈಗ ಯುದ್ಧಕಾಲದಲ್ಲಿ ಒಂದೆಡೆ ಇಂಧನಕ್ಕಾಗಿ ಹಾಹಾಕಾರ ಎದ್ದಿದ್ದರೆ, ಇನ್ನೊಂದೆಡೆ ಯುದ್ಧದ ಅನಿಶ್ಚಿತತೆ ಮುಂದುವರಿದರೆ ರಸಗೊಬ್ಬರಗಳಿಗೂ ಹಾಹಾಕಾರ ಏಳುವ ಲಕ್ಷಣಗಳು ಕಾಣಿಸುತ್ತಿವೆ.
ಸ್ವತಃ ಕಲ್ಲಿದ್ದಲು ಸಚಿವರೇ ಇತ್ತೀಚೆಗೆ ಭಾರತವು ಕಚ್ಚಾತೈಲದ ಮಟ್ಟಿಗೆ 83ಶೇ. ಭಾಗಕ್ಕೆ, ನೈಸರ್ಗಿಕ ಅನಿಲದ ಮಟ್ಟಿಗೆ 50ಶೇ. ಭಾಗಕ್ಕೆ ಮತ್ತು ರಸಗೊಬ್ಬರಗಳ ಮಟ್ಟಿಗೆ 90ಶೇ. ಭಾಗಕ್ಕೆ ಆಮದಿನ ಮೇಲೆ ಅವಲಂಬಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ! ಭಾರತವು 2030ಕ್ಕೆ 100 MMTPA ಅನಿಲೀಕರಣ ಗುರಿ ಸಾಧಿಸುವ ನಿಟ್ಟಿನಲ್ಲಿ 8,500 ಕೋಟಿ ರೂ.ಗಳ ಇನ್ಸೆಂಟಿವ್ ಯೋಜನೆಯನ್ನು ಪ್ರಕಟಿಸಿದೆ. 64,000 ಕೋಟಿ ರೂ.ಗಳ ಗಾತ್ರದ ಹೊಸ ಅನಿಲೀಕರಣ ಯೋಜನೆಗಳು ಸರಕಾರಿ ಹಾಗೂ ಖಾಸಗಿ ರಂಗದಲ್ಲಿ ಸಿದ್ಧಗೊಳ್ಳುತ್ತಿವೆ ಎಂದು ಸರಕಾರ ಇತ್ತೀಚೆಗೆ ಹೇಳಿಕೊಂಡಿದೆ (ಆಧಾರ: PIB Release ID: 224362).
ನೆಲದಡಿಯಲ್ಲಿ ಕಲ್ಲಿದ್ದಲು ಅನಿಲೀಕರಣಕ್ಕೆ, ಕಲ್ಲಿದ್ದಲು ಇಲಾಖೆ 150-160 ಮೀ. ಅಡಿಯಲ್ಲಿ ಅದು ನಡೆಯಬೇಕು ಎಂದು ಹೇಳುತ್ತಿದ್ದರೆ, ಪರಿಸರ ಇಲಾಖೆ ಅದು 300 ಮೀ. ಅಡಿ ನಡೆಯಬೇಕು ಅನ್ನುತ್ತಿದೆಯಂತೆ. ಈ ವಿವಾದದಲ್ಲಿ ಅಂತಿಮ ತೀರ್ಮಾನ ನನೆಗುದಿಗೆ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಭಾರತ ಸರಕಾರವು ತಾನು ಈ ವರೆಗೆ ಅನಿಲೀಕರಣದ ವೇಗ ಹೆಚ್ಚಿಸಲು ಕೈಗೊಂಡಿರುವ ಕ್ರಮಗಳನ್ನು ವಿವರಿಸುತ್ತಾ, ಈ ಯೋಜನೆಗಳ ಅನುಷ್ಠಾನ ಸಮಯ ಮಿತಿಯ ಒಳಗೆ ಆಗಲು ಹೆಚ್ಚುವರಿ ಕಾರ್ಯದರ್ಶಿ (ಕಲ್ಲಿದ್ದಲು) ಅಧ್ಯಕ್ಷತೆಯಲ್ಲಿ ವಿಶೇಷ ಕಾರ್ಯಪಡೆ ರಚಿಸಲಾಗಿದೆ ಎಂದಿದೆ. 21 ಗಣಿಗಳನ್ನು ನೆಲದಡಿಯ ಅನಿಲೀಕರಣಕ್ಕಾಗಿ ನಿಗದಿಪಡಿಸಿದ್ದು ಸೇರಿದಂತೆ, ಒಟ್ಟು 41 ಕಲ್ಲಿದ್ದಲು ಗಣಿಗಳನ್ನು ಅಕ್ಟೋಬರ್ 2025ರಲ್ಲಿ ಹರಾಜು ಹಾಕುವ ಪ್ರಕ್ರಿಯೆಯನ್ನು ಸರಕಾರ ಆರಂಭಿಸಿತ್ತು; ಅದಕ್ಕಾಗಿ ವಿಶೇಷ ರಿಯಾಯಿತಿಗಳನ್ನೂ ಪ್ರಕಟಿಸಿತ್ತು. ಆ ಪ್ರಕ್ರಿಯೆ ನಡೆದಿದೆ. (ಆಧಾರ: PIB Release ID: 2213723). ಇದೇ ಫೆಬ್ರವರಿ ಅಂತ್ಯದ ಹೊತ್ತಿಗೆ ಅದಾನಿ ಬಳಗವು, ಕಲ್ಲಿದ್ದಲು ಅನಿಲೀಕರಣಕ್ಕೆ ತಮ್ಮ ಕಂಪೆನಿ 70 ಸಾವಿರ ಕೋಟಿ ರೂ. ಹೂಡಿಕೆ ಮಾಡುವುದಾಗಿ ಪ್ರಕಟಿಸಿದೆ.
ಒಟ್ಟಿನಲ್ಲಿ 2070ಕ್ಕೆ ಮುನ್ನ ನೆಟ್ ಝೀರೊ ಸಾಧಿಸುವುದಕ್ಕಾಗಿ ಸರಕಾರ ಎದ್ದೂ ಬಿದ್ದೂ ಓಡುತ್ತಿದೆಯಾದರೂ, ಈ ಓಟ ದಿಕ್ಕುದೆಸೆ ಇಲ್ಲದೆ ಸಾಗುತ್ತಿರುವುದು ಸ್ಪಷ್ಟ. ತನ್ನ ನಾಯಕತ್ವದಲ್ಲಿ, 2028ರ ಹೊತಿಗೆ ಭಾರತದಲ್ಲಿ ನಡೆಯಬೇಕಿದ್ದ COP 33 ಆತಿಥೇಯತ್ವದಿಂದಲೇ ಹಿಂದೆಸರಿಯುವ ಮೂಲಕ ಭಾರತವು, ತನ್ನ ಓಟವು ದಿಕ್ಕೆಟ್ಟ ಓಟ ಎಂದು ಜಾಗತಿಕ ರಂಗಕ್ಕೆ ತೆರೆದು ತೋರಿಸಿದಂತಾಗಿದೆ. ಹೀಗೆ ಎಲ್ಲವನ್ನೂ ಬಾಯಿ ಬಡಾಯಿ ಮಾಡಿಕೊಂಡು, ಕಾರ್ಯರೂಪಕ್ಕೆ ತರುವಾಗ, ಆಗಬೇಕಾದುದಕ್ಕೆ ವಿರುದ್ಧದಿಕ್ಕಿನಲ್ಲಿ ಸಾಗುವುದೇ ‘ವಿಕಾಸ’ ಎಂದಾಗಿಬಿಟ್ಟಿದೆ.