‘ರಿಚ್’ ಆದರೆ ಸಾಕೇ? ಬಾಯಿ ಬಿಡಬೇಡವೇ?

Update: 2026-08-22 10:45 IST

ಸಂವಿಧಾನದ ಚೌಕಟ್ಟನ್ನೇ ಉಲ್ಲಂಘಿಸಿ, ಶಾಸನ ರಚನೆಗೆ ಸಂಬಂಧಿಸಿದಂತೆ ಚರ್ಚೆಗಳೇ ಇಲ್ಲದೆ ಕೇವಲ ತನ್ನ ಕ್ರೋನಿಗಳ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಭಾರತ ಸರಕಾರ ತಂದಿರುವ ಈ ತಿದ್ದುಪಡಿಯನ್ನು ಮಿನರಲ್ ರಿಚ್ ಕರ್ನಾಟಕವು ಮುಂಚೂಣಿಯಲ್ಲಿ ನಿಂತು ವಿರೋಧಿಸಬೇಕಿತ್ತು. ಆದರೆ, ಹೊಸ ಸರಕಾರ ತನ್ನ ಹನಿಮೂನ್ ಮತ್ತಿನಲ್ಲಿರುವಂತಿದೆ. ಇನ್ನಾದರೂ ರಾಜ್ಯದ ಮುಖ್ಯಮಂತ್ರಿಯವರು, ಗಣಿಗಾರಿಕೆ ಸಚಿವರು ಈ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳಲಿ.

ಭಾರತ ಸರಕಾರವು ಆಗಸ್ಟ್ 12, 13ರಂದು ಕ್ರಮವಾಗಿ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಗಣಿ ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ 2026ನ್ನು ಪಾಸ್ ಮಾಡಿಸಿಕೊಂಡಿದೆ. ರಾಷ್ಟ್ರಪತಿ ಯವರ ಅಂಕಿತ ಬಿದ್ದರೆ, ಈ ತಿದ್ದುಪಡಿ ಕಾನೂನಾಗಲಿದೆ. MMRD Act, 1957ಕ್ಕೆ ಮಾಡಲಾಗಿರುವ ತಿದ್ದುಪಡಿ ಇದು. ಈ ಕಾಯ್ದೆ ತಿದ್ದುಪಡಿಯ ಮೂಲಕ ಭಾರತ ಸರಕಾರವು ನೇರವಾಗಿ ರಾಜ್ಯಗಳ ಒಂದು ಪ್ರಮುಖ ಆದಾಯ ಮೂಲಕ್ಕೆ ಕೈಹಾಕಿದೆ. ಕಾಯ್ದೆಯ ಕಾರಣದಿಂದಾಗಿ ಖನಿಜಗಳು ಮತ್ತು ಖನಿಜ ಶ್ರೀಮಂತ ಭೂಮಿಯ ಮೇಲೆ ತೆರಿಗೆ ಹಾಕುವ ರಾಜ್ಯಗಳ ಅಧಿಕಾರ ಕುಂಠಿತವಾಗಲಿದೆ.

ಕೋವಿಡ್ ಕಾಲದ ನೆನಪಿದ್ದರೆ, ಆಗ ರಾಜ್ಯಗಳಲ್ಲಿ ಕೋವಿಡ್ ನಿರ್ವಹಣೆಗೆ ಅಗತ್ಯ ಹಣವನ್ನು ‘ಅಡುಗೆ ಮನೆಯ ಸಾಸಿವೆ ಡಬ್ಬಿಯಲ್ಲಿ ಕಾಪಿಟ್ಟ ನಿಧಿಯಂತೆ’ ಒದಗಿಸಿಕೊಟ್ಟದ್ದು, ರಾಜ್ಯಸರಕಾರಗಳು ಸಂಗ್ರಹಿಸಿದ್ದ ಜಿಲ್ಲಾ ಮಿನರಲ್ ಫಂಡ್ (DMF)ನಿಂದಲೇ. 2020-2022ರ ನಡುವೆ ರಾಜ್ಯಗಳು 1,459.93 ಕೋಟಿ ರೂ.ಗಳನ್ನು ತಮ್ಮ DMFಗಳಿಂದ ಬಳಸಿಕೊಂಡಿದ್ದವು. ಕರ್ನಾಟಕ ಕೂಡ ಆ ಅವಧಿಯಲ್ಲಿ 204.5 ಕೋಟಿ ರೂ.ಗಳನ್ನು ಕೋವಿಡ್ ನಿರ್ವಹಣೆಗೆ ಬಳಸಿಕೊಂಡಿತ್ತು.

ಈಗ ಭಾರತ ಸರಕಾರವು ತನ್ನ ಕಾಯ್ದೆ ತಿದ್ದುಪಡಿಯ ಮೂಲಕ ರಾಜ್ಯಸರಕಾರಗಳ ಈ ಹಕ್ಕನ್ನು ಕಸಿದುಕೊಂಡಿದೆ. ಆದರೂ ಕರ್ನಾಟಕದ ಕಡೆಯಿಂದ ಈ ಬಗ್ಗೆ ಚಕಾರ ಹೊರಡದಿರುವುದು ಬಹಳ ಅಚ್ಚರಿಯ ಸಂಗತಿ. ಡಿ.ಕೆ. ಶಿವಕುಮಾರ್ ಅವರ ಸರಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸುವುದು ಅಗತ್ಯವಿದೆ. ಗಣಿ ಸಂಪತ್ತು ಸಮೃದ್ಧವಾಗಿರುವ ರಾಜ್ಯಗಳಲ್ಲಿ ಈ ಬಗ್ಗೆ ಆತಂಕ ಈಗಾಗಲೇ ಶುರುವಾಗಿದೆ. ಕೇರಳದಲ್ಲಿ ವಿ.ಡಿ. ಸತೀಶನ್ ಸರಕಾರವು ಈ ತಿದ್ದುಪಡಿ ದೇಶದ ಫೆಡರಲ್ ಸಂರಚನೆಗೆ ಧಕ್ಕೆ ತರಲಿದೆ, ಇದು ರಾಜ್ಯದ ಸಾಂವಿಧಾನಿಕ ಹಕ್ಕುಗಳ ಮೇಲೆ ಹಸ್ತಕ್ಷೇಪ ಎಂದಿದೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಂತೂ ಈ ತಿದ್ದುಪಡಿಯಿಂದ ತಮ್ಮ ರಾಜ್ಯಕ್ಕೆ ವಾರ್ಷಿಕ 15,000 ಕೋಟಿ ರೂ.ಗಳ ನಷ್ಟ ಆಗಲಿದೆಯೆಂದು ಹೇಳಿ, ರಾಜ್ಯದಾದ್ಯಂತ ಪ್ರತಿಭಟನೆಗೆ ಸಜ್ಜಾಗುತ್ತಿದ್ದಾರೆ. ಬಿಜೆಪಿಯ ಮುಖ್ಯಮಂತ್ರಿಯನ್ನು ಹೊಂದಿರುವ ಒಡಿಶಾದಲ್ಲಿ ಸರಕಾರ ಮೊಗಂ ಆಗಿ ಕುಳಿತಿದ್ದರೂ, ಬಿಜೆಡಿಯ ನವೀನ್ ಪಟ್ನಾಯಕ್ ಧ್ವನಿ ಎತ್ತುತ್ತಿದ್ದಾರೆ. ಇಷ್ಟೆಲ್ಲ ಆಗುತ್ತಿದ್ದರೂ ಗಣಿಗಾರಿಕೆಯ ಶ್ರೀಮಂತ ರಾಜ್ಯಗಳಲ್ಲೊಂದಾದ ಕರ್ನಾಟಕ ಮಾತ್ರ ಹನಿಮೂನ್ ಮೂಡಿನಲ್ಲಿ, ಎಲ್ಲ ಮರೆತು ಕುಳಿತಿರುವುದು ಆಶ್ಚರ್ಯಕರ.

ನ್ಯಾಯಾಂಗದ ಸಂವಿಧಾನ ಪೀಠಕ್ಕೂ ಬೆಲೆ ಇಲ್ಲವೆ?

2024ರಲ್ಲಿ ಭಾರತದ ಸುಪ್ರೀಂಕೋರ್ಟ್‌ನ 9 ಸದಸ್ಯರ ಸಂವಿಧಾನ ಪೀಠವು ಪ್ರಕರಣವೊಂದರಲ್ಲಿ (Mineral Area Development Authority vs. M/s Steel Authority of India) ಖನಿಜಗಳ ಮತ್ತು ಖನಿಜಗಳನ್ನು ಹೊಂದಿರುವ ನೆಲದ ಹಕ್ಕಿನ ಮೇಲೆ ತೆರಿಗೆ ವಿಧಿಸುವ ಅಧಿಕಾರ ರಾಜ್ಯಗಳದಾಗಿದ್ದು, 2005ರ ಎಪ್ರಿಲ್ 1ರಿಂದ ಪೂರ್ವಾನ್ವಯ ಆಗುವಂತೆ ಹಂತಹಂತವಾಗಿ ಬಾಕಿ ಇರುವ ತೆರಿಗೆ, ಸುಂಕಗಳನ್ನು ರಾಜ್ಯಗಳು ಸಂಗ್ರಹಿಸಬಹುದು ಎಂದು ಹೇಳಿತ್ತು. ಆದರೆ, ಈಗ ಬಂದಿರುವ ಹೊಸ ತಿದ್ದುಪಡಿ, ಸುಪ್ರೀಂಕೋರ್ಟಿನ ಸಂವಿಧಾನ ಪೀಠದ ಈ ಆದೇಶವನ್ನೇ ಧಿಕ್ಕರಿಸಿ, ರಾಜ್ಯಗಳ ಪೂರ್ವಾನ್ವಯ ಬಾಕಿ ಬೇಡಿಕೆಗಳನ್ನು ರದ್ದುಪಡಿಸುತ್ತಿದೆ. ಸುಪ್ರೀಂಕೋರ್ಟ್ ಈ ಹಿಂದೆ, ಮತ್ತೊಂದು ತೀರ್ಮಾನದಲ್ಲಿ ನ್ಯಾಯಾಂಗದ ತೀರ್ಮಾನವೊಂದನ್ನು ಶಾಸಕಾಂಗವು ಶಾಸನವೊಂದರ ಮೂಲಕ ಅಮಾನ್ಯಗೊಳಿಸುವುದು ಸಾಧ್ಯವಿಲ್ಲ ಎಂದು ಹೇಳಿದ್ದಿದೆ. ಇವನ್ನೆಲ್ಲ ಪರಿಗಣನೆಗೆ ತೆಗೆದುಕೊಳ್ಳದೆ, ಯಾವುದೇ ಶಾಸಕಾಂಗ ಚರ್ಚೆ ಇಲ್ಲದೆ, ಕೆಲವೇ ಗಂಟೆಗಳಲ್ಲಿ ಈ ಮಸೂದೆಯನ್ನು ಲೋಕಸಭೆ-ರಾಜ್ಯಸಭೆಗಳೆರಡೂ ಅನುಮೋದಿಸಿಕೊಂಡಿವೆ. ಈ ಮಸೂದೆಯನ್ನು ಪಾರ್ಲಿಮೆಂಟರಿ ಸ್ಥಾಯೀ ಸಮಿತಿಯ ಪರಿಶೀಲನೆಗೆ ಬಿಡಬೇಕೆಂಬ ಪ್ರತಿಪಕ್ಷಗಳ ಬೇಡಿಕೆಯನ್ನೂ ಸರಕಾರ ತಿರಸ್ಕರಿಸಿದೆ.

ಏನಿದು ತಿದ್ದುಪಡಿ?

ಸಂವಿಧಾನದ ಅಡಿಯಲ್ಲಿ ಸಂಸತ್ತಿಗೆ ಗಣಿ ಮತು ಖನಿಜಗಳ ಅಭಿವೃದ್ಧಿಯ ನೀತಿಗಳನ್ನು ನಿಯಂತ್ರಿಸುವ ಅಧಿಕಾರ (ಕೇಂದ್ರ ಪಟ್ಟಿಯ 54ನೇ ಎಂಟ್ರಿ) ಇದೆ. ಈ ಗಣಿಗಳ ನೇರ ನಿಯಂತ್ರಣ, ಗಣಿ ಹಕ್ಕುಗಳಿಗೆ ತೆರಿಗೆ ವಿಧಿಸುವಿಕೆ ಇತ್ಯಾದಿಗಳೆಲ್ಲ ರಾಜ್ಯಗಳ ಹಕ್ಕು (ರಾಜ್ಯ ಪಟ್ಟಿಯ 23, 50ನೇ ಎಂಟ್ರಿ). 1957ರ ಕೇಂದ್ರ ಸರಕಾರದ ಹಳೆಯ ಒಒಖಆ ಕಾನೂನಿನ ಅಡಿಯಲ್ಲಿ ಕಲ್ಲಿದ್ದಲು, ಲೈಮ್ ಸ್ಟೋನ್, ಕಬ್ಬಿಣ, ತಾಮ್ರ, ಮ್ಯಾಂಗನೀಸ್ ಇತ್ಯಾದಿ ಮೇಜರ್ ಖನಿಜಗಳ ನಿಯಂತ್ರಣ ಕೇಂದ್ರದ್ದಾಗಿದ್ದರೆ, ಉಳಿದ 49ರಷ್ಟು ಮೈನರ್ ಮಿನರಲ್‌ಗಳ ನಿಯಂತ್ರಣ ರಾಜ್ಯಗಳದು.

ಈ ಕಾಯ್ದೆಯ ಬಗ್ಗೆ ಸಂಸತ್ತಿನಲ್ಲಿ ಮಾತನಾಡಿದ ಗಣಿ ಸಚಿವ ಜಿ. ಕಿಷನ್ ರೆಡ್ಡಿ ಅವರು, ರಾಜ್ಯಗಳು ತಮ್ಮ ತಮ್ಮ ಮೂಗಿನ ನೇರಕ್ಕೆ ತೆರಿಗೆ ಮತ್ತು ಸುಂಕಗಳನ್ನು ವಿಧಿಸುತ್ತಿರುವುದರಿಂದ ಹಲವು ಸಮಸ್ಯೆಗಳಾಗುತ್ತಿವೆ. ಗಣಿಗಾರಿಕೆ ಆರಂಭ ಆದಮೇಲೂ ಅನಿರೀಕ್ಷಿತವಾಗಿ ತೆರಿಗೆಗಳನ್ನು ವಿಧಿಸಲಾಗುತ್ತಿದೆ, ಒಂದಕ್ಕಿಂತ ಹೆಚ್ಚು ತೆರಿಗೆಗಳು ಬೀಳುತ್ತಿವೆ, ತೆರಿಗೆ ದರಗಳು ಸಮಾನವಾಗಿಲ್ಲ, ಇದರಿಂದಾಗಿ ಗಣಿಗಾರಿಕೆಯ ವೆಚ್ಚ ಹೆಚ್ಚಿ, ಅದು ಲಾಭದಾಯಕ ಉದ್ಯಮ ಅನ್ನಿಸಿಕೊಳ್ಳುತ್ತಿಲ್ಲ ಮತ್ತು ಹೂಡಿಕೆದಾರರನ್ನು ಆಕರ್ಷಿಸುತ್ತಿಲ್ಲ. ಈ ತಿದ್ದುಪಡಿಯ ಮೂಲಕ ಅವನ್ನೆಲ್ಲ ಸರಿಪಡಿಸಲಾಗುತ್ತಿದೆ ಎಂದಿದ್ದಾರೆ.

ಈ ತಿದ್ದುಪಡಿಯಿಂದಾಗಿ ಈಗ, ಗಣಿಗಳ ಮತ್ತು ಖನಿಜಗಳ ನಿಯಂತ್ರಣ ಮಾತ್ರವಲ್ಲದೆ ಖನಿಜಗಳನ್ನು ಹೊಂದಿರುವ ಭೂಮಿಯ ನಿಯಂತ್ರಣವೂ ಕೇಂದ್ರ ಸರಕಾರದ ಸುಪರ್ದಿಗೆ ಬರಲಿದೆ. ಇನ್ನು ಮುಂದೆ ರಾಜ್ಯಗಳು ಕೇಂದ್ರ ಸರಕಾರದ ಷರತ್ತುಗಳು ಮತ್ತು ನಿರ್ಬಂಧಗಳ ಚೌಕಟ್ಟಿನ ಒಳಗೇ ತೆರಿಗೆ ವಿಧಿಸಬೇಕಾಗುತ್ತದೆ ಹೊರತು ಬೇರಾವುದೇ ರೀತಿಯ ತೆರಿಗೆ, ಸೆಸ್, ಸುಂಕಗಳನ್ನು ಖನಿಜಗಳ ಮತ್ತು ಖನಿಜ ಭರಿತ ಭೂಮಿಯ ಮೇಲೆ ವಿಧಿಸುವಂತಿಲ್ಲ. ಈ ತಿದ್ದುಪಡಿಗಿಂತ ಹಿಂದೆ ರಾಜ್ಯಸರಕಾರಗಳು ವಿಧಿಸಿರುವ ಯಾವುದೇ ಸುಂಕಗಳ ಪಾವತಿ ಆಗಿರದಿದ್ದರೆ, ವಸೂಲಿ ಆಗಿರದಿದ್ದರೆ, ಇನ್ನು ಅವನ್ನು ವಸೂಲಿ ಮಾಡುವ ಹಕ್ಕು ರಾಜ್ಯಗಳಿಗೆ ಇಲ್ಲ. ಆದರೆ, ಈಗಾಗಲೇ ವಸೂಲಿ ಆಗಿರುವ ಇಂತಹ ಮೊತ್ತವನ್ನು ಹಿಂದಿರುಗಿಸಬೇಕಾಗಿಲ್ಲ ಎಂದು ತಿದ್ದುಪಡಿ ಹೇಳುತ್ತದೆ.

ಸಂಸತ್ತಿನಲ್ಲಿ ಪ್ರತಿಪಕ್ಷಗಳ ಸದಸ್ಯರು ಈ ತಿದ್ದುಪಡಿ ಹಣಕಾಸಿನ-ರೆವೆನ್ಯೂ ಹಂಚಿಕೆಯ ಫೆಡರಲಿಸಂಗೆ ವಿರುದ್ಧ, ಬುಡಕಟ್ಟು ಜನಾಂಗಗಳ ಹಿತಾಸಕ್ತಿಗೆ ಇದು ವಿರುದ್ಧ ಎಂದೆಲ್ಲ ಹೇಳಿದರೂ ಅದು ಅರಣ್ಯರೋದನವಾಯಿತು.

ಆಕ್ಷೇಪಗಳೇನು?

ಭಾರತ ಸರಕಾರಕ್ಕೀಗ ‘ಅಪರೂಪದ ಖನಿಜ’ಗಳು (ರೇರ್ ಅರ್ಥ್ ಮಿನರಲ್ಸ್) ಲಭ್ಯ ಇರುವ ಭೂಮಿಯನ್ನು ಹರಿವಾಣದಲ್ಲಿಟ್ಟು ತನ್ನ ಆನಿ ಬಳಗಕ್ಕೆ ಒಪ್ಪಿಸುವ ಹುಮ್ಮಸ್ಸು. ಕರ್ನಾಟಕದ ಹಲವು ಭಾಗಗಳಲ್ಲಿ ಕಳೆದ ನಾಲ್ಕಾರು ತಿಂಗಳುಗಳಿಂದ, ಈ ಖನಿಜಗಳ ಲಭ್ಯತೆ ಸಮೀಕ್ಷೆಗಾಗಿ ಸರಕಾರದ ವತಿಯಿಂದಲೇ ವಿಮಾನಗಳು ಕೆಳಮಟ್ಟದಲ್ಲಿ ಹಾರಾಡಿದ್ದನ್ನು ಗಮನಿಸಿದ್ದೇವೆ. ಖನಿಜ ಶ್ರೀಮಂತವಾಗಿರುವ ರಾಜ್ಯದ ಎಲ್ಲ ಭಾಗಗಳನ್ನೂ ಭಾರತ ಸರಕಾರ ತನ್ನ ಸುಪರ್ದಿಗೆ ತೆಗೆದುಕೊಂಡು, ಅದನ್ನು ಗಣಿಗಾರಿಕೆಗಾಗಿ ಉದ್ಯಮಗಳಿಗೆ ತುರ್ತಾಗಿ ಹಂಚಿಕೊಡಲುದ್ದೇಶಿಸಿರುವ ಮಹಾ ನಾಟಕದ ಒಂದು ಪುಟ್ಟ ಅಂಕ, ಈ ತಿದ್ದುಪಡಿ. ಈ ತುರ್ತಿನ ಹಿಂದಿರುವುದು, ಗ್ರಾಫೈಟ್, ನಿಕ್ಕಲ್, ಕೋಬಾಲ್ಟ್, ಲೀಥಿಯಂ ಮತ್ತಿತರ ಸೆಮಿಕಂಡಕ್ಟರ್ ಉದ್ಯಮಕ್ಕೆ ಅಗತ್ಯವಿರುವ ‘ಕ್ರಿಟಿಕಲ್ ಮಿನರಲ್‌ಗಳು’.

ಎಲ್ಲ ಕ್ಷೇತ್ರಗಳಲ್ಲೂ ಕಳೆದ 10-12 ವರ್ಷಗಳಿಂದ ಫೆಡರಲ್ ವ್ಯವಸ್ಥೆಯನ್ನು ಇಂಚಿಂಚಾಗಿ ನಾಶ ಮಾಡುತ್ತಾ ಬರುತ್ತಿರುವ ಹಾಲಿ ಆಡಳಿತಪಕ್ಷವು ತನ್ನ ಕ್ರೋನಿಗಳ ವ್ಯವಹಾರ ಸುಗಮಗೊಳಿಸುವ ಗರ್ಜಿನ ಕಾರಣಕ್ಕಾಗಿ, ಸ್ಟೇಕ್ ಹೋಲ್ಡರ್‌ಗಳಾಗಿರುವ ರಾಜ್ಯಗಳ ಜೊತೆ ಸಮಾಲೋಚನೆಯನ್ನೇ ನಡೆಸದೆ, ಈ ಮಹತ್ವದ ಕಾಯ್ದೆಯನ್ನು ಜಾರಿಗೆ ತರಲು ಅಣಿಯಾಗಿದೆ. ಆದರೆ, ಆ ಗಡಿಬಿಡಿಗಳಲ್ಲಿ ಅದು ಹಲವಾರು ಸಾಂವಿಧಾನಿಕ ಪ್ರಮಾದಗಳನ್ನೂ ಎಸಗಿರುವಂತೆ ಕಾಣಿಸುತ್ತಿದೆ. ಮೇಲೆ ವಿವರಿಸಲಾದ ನ್ಯಾಯಾಂಗದ ತೀರ್ಪಿನ ಬದಿಗೊತ್ತುವಿಕೆ, ವಿಕೇಂದ್ರೀಕೃತ ಅಧಿಕಾರ ವ್ಯವಸ್ಥೆಯ ನಿರ್ಲಕ್ಷ್ಯ ಮಾತ್ರವಲ್ಲದೆ, ಹಲವು ಅಸಾಂವಿಧಾನಿಕ ನಿಲುವುಗಳನ್ನು ಈ ಕಾಯ್ದೆಯ ಮೂಲಕ ತೆಗೆದುಕೊಳ್ಳಲಾಗಿದೆ. ಈಗಾಗಲೇ ತೆರಿಗೆ ತೆತ್ತವರಿಗೆ ಉಂಡೆನಾಮ ಮತ್ತು ತೆರಿಗೆ ಬಾಕಿ ಇರಿಸಿಕೊಂಡವರಿಗೆ ತೆರಿಗೆ ವಿನಾಯಿತಿ ನೀಡುವ ಈ ಕಾಯ್ದೆಯು ಸಂವಿಧಾನದ 14ನೇ ವಿಧಿಗೆ (ಕಾನೂನಿನ ಎದುರು ಸಮಾನತೆ) ವ್ಯತಿರಿಕ್ತವಾದುದಾಗಿದೆ. ರಾಜ್ಯ ಸರಕಾರಗಳು ಎಷ್ಟು ತೆರಿಗೆ ವಿಧಿಸಬೇಕೆಂಬುದನ್ನು ಭಾರತ ಸರಕಾರ ನಿರ್ಧರಿಸಲು ಹೊರಡುವುದು ಕೂಡ ನ್ಯಾಯಾಂಗದ ತೀರ್ಮಾನಕ್ಕೆ (ಶಾಸನರಚನೆಯನ್ನು ಶಾಸಕಾಂಗದಿಂದ ಹೊರಗೆ ವಹಿಸಿಕೊಡುವುದು) ವ್ಯತಿರಿಕ್ತವಾಗಿದೆ. ಇದಲ್ಲದೆ ಭಾರತ ಸರಕಾರದ ಹೊಸ ಚಾಳಿಯೊಂದಿದೆ. ಶಾಸನಗಳನ್ನು ಉದ್ದೇಶಪೂರ್ವಕವಾಗಿಯೇ ಸ್ಥೂಲವಾಗಿರಿಸಿ, ಸಂಸತ್ತಿನಿಂದ ಹೊರಗೆ ಶಾಸನದಡಿಯ ನಿಯಮಗಳನ್ನು ತಾನೇ ರೂಪಿಸಿಕೊಂಡು, ಅದರ ಮೂಲಕವೇ ಆಡಳಿತ ನಡೆಸುವ ಹೊಸ ಚಾಳಿ, ಈ ಗಣಿಗಾರಿಕೆ ಸಂಬಂಧಿ ತಿದ್ದುಪಡಿಗೂ ಅನ್ವಯ ಆದಂತಿದೆ. ಸಂವಿಧಾನದ ರಾಜ್ಯಪಟ್ಟಿಯ 18ನೇ ಎಂಟ್ರಿಯು ಭೂಮಿ, ಅದರ ಹಕ್ಕು, ಇತ್ಯಾದಿಗಳೆಲ್ಲ ಸಂಪೂರ್ಣವಾಗಿ ರಾಜ್ಯಗಳ ವ್ಯಾಪ್ತಿಗೆ ಬರುತ್ತವೆ ಎಂದು ಹೇಳಿದೆ. ಹಾಲಿ ತಿದ್ದುಪಡಿ ಸಂವಿಧಾನದ ಆ ಷರತ್ತಿನ ಉಲ್ಲಂಘನೆ ಕೂಡ ಹೌದು.

ಸಂವಿಧಾನದ ಚೌಕಟ್ಟನ್ನೇ ಉಲ್ಲಂಘಿಸಿ, ಶಾಸನ ರಚನೆಗೆ ಸಂಬಂಧಿಸಿದಂತೆ ಚರ್ಚೆಗಳೇ ಇಲ್ಲದೆ ಕೇವಲ ತನ್ನ ಕ್ರೋನಿಗಳ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಭಾರತ ಸರಕಾರ ತಂದಿರುವ ಈ ತಿದ್ದುಪಡಿಯನ್ನು ಮಿನರಲ್ ರಿಚ್ ಕರ್ನಾಟಕವು ಮುಂಚೂಣಿಯಲ್ಲಿ ನಿಂತು ವಿರೋಧಿಸಬೇಕಿತ್ತು. ಆದರೆ, ಹೊಸ ಸರಕಾರ ತನ್ನ ಹನಿಮೂನ್ ಮತ್ತಿನಲ್ಲಿರುವಂತಿದೆ. ಇನ್ನಾದರೂ ರಾಜ್ಯದ ಮುಖ್ಯಮಂತ್ರಿಯವರು, ಗಣಿಗಾರಿಕೆ ಸಚಿವರು ಈ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳಲಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಾಜಾರಾಂ ತಲ್ಲೂರು

contributor

Similar News