×
Ad

ಅಸ್ಸಾಂ: ಮಾಘ್ ಬಿಹು ಬಳಿಕ ಸರಕಾರ ರಚಿಸುವವರು ಯಾರು?

Update: 2026-04-10 11:23 IST

ಸಾಂದರ್ಭಿಕ ಚಿತ್ರ

ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿರುವುದು-ಪರಿಶಿಷ್ಟ ವರ್ಗಕ್ಕೆ ಆರು ಸಮುದಾಯಗಳ ಸೇರ್ಪಡೆ ಪ್ರಸ್ತಾವ. ರಾಜ್ಯದಲ್ಲಿ 14 ಬುಡಕಟ್ಟುಗಳಿದ್ದು, ಒಟ್ಟು ಜನಸಂಖ್ಯೆ 40 ಲಕ್ಷ. ಬಯಲು ಮತ್ತು ಬೆಟ್ಟ ಪ್ರದೇಶದ ಪರಿಶಿಷ್ಟ ವರ್ಗಗಳ ಗುಂಪಿಗೆ ಆರು ಸಮುದಾಯಗಳನ್ನು ಒಳಗೊಂಡ ಕಣಿವೆ ವರ್ಗದ ಸೇರ್ಪಡೆ ಪ್ರಸ್ತಾವ ವಿವಾದ ಸೃಷ್ಟಿಸಿದೆ. 8 ಸಮುದಾಯಗಳು ಎಸ್‌ಟಿ ಪಟ್ಟಿಯ ವಿಸ್ತರಣೆಯನ್ನು ವಿರೋಧಿಸುತ್ತಿವೆ. ಆಲ್ ಬೋಡೋ ಸ್ಟೂಡೆಂಟ್ಸ್ ಯೂನಿಯನ್(ಎಬಿಎಸ್‌ಯು) ಬೋಡೋಲ್ಯಾಂಡ್‌ನಲ್ಲಿ ಈ ಸಂಬಂಧ ವ್ಯಾಪಕ ಪ್ರತಿಭಟನೆ ನಡೆಸಿತ್ತು. ಪೂರ್ವ, ಉತ್ತರ ಮತ್ತು ದಕ್ಷಿಣ ಅಸ್ಸಾಮಿನ 9 ಜಿಲ್ಲೆಗಳಲ್ಲಿ ಹರಡಿಕೊಂಡಿರುವ ಚಹಾ ತೋಟಗಳ ಮತದಾರರು 35 ಕ್ಷೇತ್ರಗಳಲ್ಲಿ ನಿರ್ಣಾಯಕ ಹಾಗೂ 10 ಕ್ಷೇತ್ರಗಳಲ್ಲಿ ಗಮನಾರ್ಹ ಪಾತ್ರ ವಹಿಸುತ್ತಾರೆ.

ಅಸ್ಸಾಂ ವಿಧಾನಸಭೆಯ 126 ಕ್ಷೇತ್ರಗಳ 789 ಅಭ್ಯರ್ಥಿಗಳ ಹಣೆಬರಹ ವಿದ್ಯುನ್ಮಾನ ಮತಯಂತ್ರಗಳಲ್ಲಿ ಸಂಗ್ರಹವಾಗಿದೆ. 25 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆದಿದೆ. ಹೊಸ ವರ್ಷವನ್ನು ಸ್ವಾಗತಿಸಲು ನಡೆಯುವ ಮಾಘ್ ಬಿಹು ಎಪ್ರಿಲ್ 15ರಿಂದ ಆರಂಭವಾಗಲಿದ್ದು, ಹಬ್ಬ ಮುಗಿದ ಬಳಿಕ ಹೊಸ ಸರಕಾರ ರಚನೆ ಯಾಗಲಿದೆ. ನಿರಂತರ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್, ಬಿಜೆಪಿ ನೇತೃತ್ವದ ಎನ್‌ಡಿಎಯನ್ನು ಹಣಿಯುವುದೇ?

ರಾಜ್ಯದ 35 ಜಿಲ್ಲೆಗಳನ್ನು 5 ವಿಭಾಗವಾಗಿ ವಿಭಜಿಸಲಾಗಿದೆ; ಕೆಳ ಅಸ್ಸಾಂ, ಉತ್ತರ ಅಸ್ಸಾಂ, ಮೇಲಣ ಅಸ್ಸಾಂ, ಕೇಂದ್ರ ಅಸ್ಸಾಂ ಮತ್ತು ಬರಾಕ್ ಕಣಿವೆ. ಮೇಲಣ ಅಸ್ಸಾಂ 56 ಹಾಗೂ ಕೆಳ ಅಸ್ಸಾಂ 50 ಕ್ಷೇತ್ರಗಳನ್ನು ಒಳಗೊಂಡಿದೆ. ಬಿಜೆಪಿ ಮೇಲಣ/ಕೇಂದ್ರ ಅಸ್ಸಾಂ, ನಗರ ಕೇಂದ್ರಗಳು, ಚಹಾ ಬುಡಕಟ್ಟು ಪಟ್ಟಿ(ಟೀ ಟ್ರೈಬ್ ಬೆಲ್ಟ್) ಮತ್ತು ಮೂಲವಾಸಿ ಸಮುದಾಯಗಳಿರುವ ಪ್ರದೇಶಗಳು ಮತ್ತು ಸ್ವಾಯತ್ತ ಪರ್ವತ ಜಿಲ್ಲೆಗಳಲ್ಲಿ ಹಾಗೂ ಕಾಂಗ್ರೆಸ್/ಎಐಯುಡಿಎಫ್ ಕೆಳ ಅಸ್ಸಾಂ ಮತ್ತು ಬರಾಕ್ ಕಣಿವೆಯಲ್ಲಿ ಹಿಡಿತ ಹೊಂದಿವೆ. 2021ರಲ್ಲಿ ಎನ್‌ಡಿಎ 75(ಬಿಜೆಪಿ 60, ಅಸ್ಸಾಂ ಗಣ ಪರಿಷತ್ 9, ಯುನೈಟೆಡ್ ಪೀಪಲ್ಸ್ ಪಾರ್ಟಿ ಯುಪಿಪಿಎಲ್ 6) ಹಾಗೂ ಮಹಾಜೋತ್ 51(ಕಾಂಗ್ರೆಸ್ 29, ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಎಐಯುಡಿಎಫ್ 16, ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ 4, ಸಿಪಿಐಎಂ ಹಾಗೂ ಪಕ್ಷೇತರರು 1) ಸ್ಥಾನ ಗಳಿಸಿತ್ತು; ಬಿಜೆಪಿ ಶೇ.33.21, ಕಾಂಗ್ರೆಸ್ ಶೇ.29. 57, ಎಐಡಿಯುಎಫ್ ಶೇ.9.29, ಎಜಿಪಿ ಶೇ.7.91 ಹಾಗೂ ಯುಪಿಪಿಎಲ್ ಶೇ.3.39 ಮತ ಗಳಿಸಿದ್ದವು. ಕಾಂಗ್ರೆಸ್ 2016ಕ್ಕೆ ಹೋಲಿಸಿದರೆ 3 ಸ್ಥಾನ ಹೆಚ್ಚು ಗಳಿಸಿತು. ಹಾಲಿ ಚುನಾವಣೆಯಲ್ಲಿ ಮಹಾಜೋತ್‌ನಿಂದ ಬದ್ರುದ್ದೀನ್ ಅಜ್ಮಲ್ ನೇತೃತ್ವದ ಎಐಯುಡಿಎಫ್ ಹೊರನಡೆದು, ಪ್ರತ್ಯೇಕವಾಗಿ ಸ್ಪರ್ಧಿಸಿದೆ. ಕಾಂಗ್ರೆಸ್ ಮಾಜಿ ರಾಜ್ಯಾಧ್ಯಕ್ಷ ಭೂಪೇನ್ ಕುಮಾರ್ ಬೋರಾ, ಸಂಸದ ಪ್ರದ್ಯುತ್ ಬೋರ್ದೋ ಹಾಗೂ ಮೂವರು ಶಾಸಕರು ಪಕ್ಷವನ್ನು ತೊರೆದು ಬಿಜೆಪಿ ಸೇರಿದ್ದಾರೆ. ಎನ್‌ಡಿಎ ಜೊತೆಗೆ ತಂಕೇಶ್ವರ ರಬಾ ನೇತೃತ್ವದ ರಬಾ ಹಸಾಂಗ್ ಜೌತ ಮಂಚ್ ಕೈ ಜೋಡಿಸಿದೆ. ಮಹಾಜೋತ್‌ನಲ್ಲಿ ಕಾಂಗ್ರೆಸ್, ಅಸ್ಸಾಂ ಜಾತೀಯ ಪರಿಷತ್, ಸಿಪಿಐ(ಮಾರ್ಕ್ಸಿಸ್ಟ್, ಮಾರ್ಕ್ಸಿಸ್ಟ್ -ಲೆನಿನಿಷ್ಟ್) ಮತ್ತು ಆಲ್ ಪಾರ್ಟಿ ಹಿಲ್ ಲೀಡರ್ಸ್ ಕಾನ್ಫೆರೆನ್ಸ್ ಇವೆ. ಶಾಸಕ ಅಖಿಲ್ ಗೊಗೊಯಿ ನೇತೃತ್ವದ ರೈಜೋರ್ ದಳ 2021ರಲ್ಲಿ ಬಿಜೆಪಿಗೆ ನೆರವಾಗುವ ಮೂಲಕ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲಲು ಕಾರಣವಾಗಿತ್ತು. ಕಾಂಗ್ರೆಸ್ ಜೊತೆ ಮೈತ್ರಿ ಸಾಧ್ಯವಾಗದೆ ಜಾರ್ಖಂಡ್ ಮುಕ್ತಿ ಮೋರ್ಚಾ, ಜೈ ಭಾರತ್ ಪಕ್ಷದ ಬೆಂಬಲದಲ್ಲಿ 18 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಬಿಜೆಪಿಯ 9 ಬಂಡಾಯ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಸನಾತನಿ ಹಿಂದೂಗಳು ಮತ್ತು ಆದಿವಾಸಿಗಳಿಗೆ ರಕ್ಷಣೆ ಹಾಗೂ ಕಾಂಗ್ರೆಸ್ ‘ಬೊರ್ ಅಹೋಮ್’(ಎಲ್ಲರನ್ನೂ ಒಳಗೊಳ್ಳುವ ಜಾತ್ಯತೀತ ಅಸ್ಸಾಂ) ಆಶ್ವಾಸನೆ ನೀಡಿವೆ. 48 ಕ್ಷೇತ್ರಗಳಲ್ಲಿ ಮಹಿಳೆಯರು ನಿರ್ಧಾರಕ ಪ್ರಮಾಣದಲ್ಲಿ ಇರುವುದರಿಂದ ಎರಡೂ ಪಕ್ಷಗಳು ಅವರನ್ನು ಸೆಳೆಯಲು ಪ್ರಯತ್ನಿಸಿವೆ.

ನಾಗರಿಕತ್ವ ತಿದ್ದುಪಡಿ ಕಾಯ್ದೆ ಭೀತಿ

ಬಿಜೆಪಿಯ ಸರ್ಬಾನಂದ ಸೋನೋವಾಲ್ ತಮ್ಮ 2 ಅವಧಿ ಆಡಳಿತದಲ್ಲಿ ಮೂಲವಾಸಿಗಳನ್ನು ಹಾಗೂ ಆನಂತರ ಚುಕ್ಕಾಣಿ ಹಿಡಿದ ಹಿಮಂತ ಬಿಸ್ಸಾ ಶರ್ಮಾ, ಹಿಂದುಳಿದ ಮತದಾರರನ್ನು ಕ್ರೋಡೀಕರಿಸಿದರು. ಆಡಳಿತಕ್ಕೆ ಬಂದರೆ ಸಿಎಎ ಜಾರಿಗೊಳಿಸುವುದಾಗಿ ಬಿಜೆಪಿ ಹೇಳಿದೆ. ಬಾಂಗ್ಲಾ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರ ವಲಸೆಗಾರರಿಗೆ ನಾಗರಿಕತ್ವ ನೀಡಲು 2019ರಲ್ಲಿ ಸಿಎಎ ಜಾರಿಗೊಳಿಸಲಾಯಿತು. ರಾಜ್ಯದಲ್ಲಿ ಸಿಎಎ ವಿರೋಧಿಸಿ ಉಗ್ರ ಹೋರಾಟ ನಡೆದಿತ್ತು; ಗೋಲಿಬಾರ್‌ನಲ್ಲಿ ಐವರು ಮೃತಪಟ್ಟಿದ್ದರು. ಬಿಜೆಪಿಯ ವೋಟ್‌ಬ್ಯಾಂಕ್ ಆದ ಹಿಂದೂ ಬಂಗಾಳಿಗಳಲ್ಲಿ ಹೆಚ್ಚಿನವರು ತಾವು 1971ಕ್ಕಿಂತ ಮೊದಲೇ ಬಂದಿದ್ದೇವೆ ಎನ್ನುತ್ತಿದ್ದಾರೆ. 1971ರ ಬಳಿಕ ಬಂದವರಿಗೆ ನಾಗರಿಕತ್ವ ನೀಡಿದರೆ, ತಾವು ಅಲ್ಪಸಂಖ್ಯಾತರಾಗುತ್ತೇವೆ ಎಂದು ಅಸ್ಸಾಮಿಯರು ಹಾಗೂ ಇತರ ಮೂಲವಾಸಿ ಸಮುದಾಯಗಳು ಆತಂಕಗೊಂಡಿದ್ದು ಸಿಎಎಯನ್ನು ವಿರೋಧಿಸುತ್ತಿವೆ.

ಅಸ್ಸಾಂ ಗಣ ಪರಿಷತ್ ದ್ವಂದ್ವ

1979ರಲ್ಲಿ ರಾಜ್ಯದಿಂದ ವಲಸಿಗರನ್ನು ಹೊರಹಾಕಬೇಕೆಂದು ಆಂದೋಲನ ಆರಂಭವಾಯಿತು. 1980ರ ಲೋಕಸಭೆ ಚುನಾವಣೆಯಲ್ಲಿ ಅಸ್ಸಾಮೇತರರು ನಾಮಪತ್ರ ಸಲ್ಲಿಸುವುದನ್ನು ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಕೆಳ ಅಸ್ಸಾಮಿನ ಬರ್ಪೆಟಾದಲ್ಲಿ ಖರ್ಗೇಶ್ವರ್ ತಾಲೂಕ್‌ದಾರ್ ಮೇಲೆ ಪೊಲೀಸರು ಹಲ್ಲೆ ನಡೆಸಿದರು. ಅವರ ಶವ ರಸ್ತೆ ಬದಿ ಪತ್ತೆಯಾಯಿತು. ಈ ಸಾವು ಚಳವಳಿಯ ದಿಕ್ಕು ಬದಲಿಸಿತು; ಆಗಸ್ಟ್ 1985ರಲ್ಲಿ ಅಸ್ಸಾಂ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಗೋಲಾಘಾಟ್ ರಾಷ್ಟ್ರೀಯ ಸಮಾವೇಶ ದಲ್ಲಿ ರಚನೆಯಾದ ಅಸ್ಸಾಂ ಗಣ ಪರಿಷತ್(ಎಜಿಪಿ)ನ ಮುಖ್ಯಸ್ಥರಾಗಿ ಆಯ್ಕೆಯಾದವರು-ಅಖಿಲ ಅಸ್ಸಾಂ ವಿದ್ಯಾರ್ಥಿಗಳ ಸಂಘಟನೆ(ಎಎಎಸ್‌ಯು) ಮುಖ್ಯಸ್ಥ ಪ್ರಫುಲ್ಲಕುಮಾರ್ ಮಹಂತ. ಆನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಎಜಿಪಿ 92 ಸ್ಥಾನ ಗೆದ್ದಿತು. ವಿದ್ಯಾರ್ಥಿ ಚಳವಳಿಯೊಂದು ರಾತ್ರೋರಾತ್ರಿ ಸರಕಾರ ರಚನೆ ಮಾಡಿದ್ದು, ಜಗತ್ತಿನೆಲ್ಲೆಡೆ ಸುದ್ದಿಯಾಯಿತು. ಸರಕಾರಕ್ಕೆ ರಾಜ್ಯದ ಅತ್ಯಂತ ದೊಡ್ಡ ಬಂಡುಕೋರ ಗುಂಪು, ಪರೇಶ್ ಬರುವಾ ನೇತೃತ್ವದ ಉಲ್ಫಾ(ಯುನೈಟೆಡ್ ಲಿಬರೇಷನ್ ಫ್ರಂಟ್)ದ ಸವಾಲು ಎದುರಾಯಿತು. ಆನಂತರ 1996ರಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯಿತು. ಮೊದಲು ನ್ಯಾಷನಲ್ ಫ್ರಂಟ್ ಮತ್ತು ಯುಪಿಎ ಭಾಗವಾಗಿದ್ದ ಎಜಿಪಿ, 1998ರಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಸೇರಿಕೊಂಡಿತು.

ಅಧಿಕಾರ ಮುಖ್ಯ; ಸಿದ್ಧಾಂತವಲ್ಲ ಎಂಬುದಕ್ಕೆ ಎಜಿಪಿ ಒಂದು ಉದಾಹರಣೆ. ವಲಸಿಗರ ವಿರೋಧವನ್ನು ಗುರಿಯಾಗಿಸಿಕೊಂಡಿದ್ದ ಪಕ್ಷ ಹಾಲಿ ಚುನಾವಣೆಯಲ್ಲಿ ಕಣಕ್ಕೆ ಇಳಿಸಿರುವ 26 ಅಭ್ಯರ್ಥಿಗಳಲ್ಲಿ 13 ಮಂದಿ ಬಂಗಾಳಿ ಮುಸ್ಲಿಮ್ ಸಮುದಾಯಕ್ಕೆ ಸೇರಿದವರು! ಸರ್ಬಾನಂದ ಸೋನೋವಾಲ್ ಎಜಿಪಿ ಮೂಲಕ ರಾಜಕೀಯ ಪ್ರವೇಶಿಸಿದರು. ‘‘ಅಸ್ಸಾಂ ಆಂದೋಲನಕ್ಕೆ 855 ಮಂದಿ ಜೀವ ತೆತ್ತಿದ್ದಾರೆ. ಎಜಿಪಿ ಅವರ ತ್ಯಾಗವನ್ನು ಗುರುತಿಸುವಲ್ಲಿ ವಿಫಲವಾಗಿದೆ’’ ಎಂದು ಪಕ್ಷ ತೊರೆದು, 2011ರಲ್ಲಿ ಬಿಜೆಪಿ ಸೇರಿದರು. ಬಿಜೆಪಿಯ ಬಳಸಿ ಎಸೆಯುವ ಪ್ರವೃತ್ತಿಗೆ ಮಹಂತ ಮತ್ತು ಸೋನೋವಾಲ್ ಉತ್ತಮ ನಿದರ್ಶನ. ಮಹಂತ ಅವರಿಗೆ 2021ರಲ್ಲಿ ಸೀಟು ನಿರಾಕರಿಸಲಾಯಿತು. ಸೋನೋವಾಲ್ ಅವರದ್ದೂ ಇದೇ ಕತೆ. 2015ರಲ್ಲಿ ಅವರನ್ನು ಬದಿಗೆ ಸರಿಸಿ, ಕಾಂಗ್ರೆಸ್‌ನಿಂದ ವಲಸೆ ಬಂದಿದ್ದ ಹಿಮಂತ ಬಿಸ್ವಾ ಶರ್ಮಾ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಯಿತು.

ಬೋಡೋಲ್ಯಾಂಡ್ ಬಿಕ್ಕಟ್ಟು

ರಾಜ್ಯದ ವಾಯವ್ಯ ಭಾಗದಲ್ಲಿರುವ ಬೋಡೋ ಪ್ರಾದೇಶಿಕ ಪ್ರಾಂತ(ಬೋಡೊ ಟೆರಿಟೋರಿಯಲ್ ರೀಜನ್, ಬಿಟಿಆರ್)ದ ವ್ಯಾಪ್ತಿಯಲ್ಲಿ 15 ಕ್ಷೇತ್ರಗಳಿವೆ. ಎನ್‌ಡಿಎ ಭಾಗವಾಗಿರುವ ಬೋಡೋ ಪೀಪಲ್ಸ್ ಫ್ರಂಟ್ 11 ಹಾಗೂ ಬಿಜೆಪಿ 4 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿವೆ. ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ಎಲ್ಲ 15 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 13, ರೈಜೋರ್ ದಳ(ಮಾನಸ್) ಮತ್ತು ತೃಣಮೂಲ ಕಾಂಗ್ರೆಸ್ (ಘೋರೇಶ್ವರ) ತಲಾ ಒಂದು ಕ್ಷೇತ್ರದಲ್ಲಿ ಕಣಕ್ಕಿಳಿದಿವೆ. ಸೆಪ್ಟಂಬರ್ 22, 2025ರಂದು ನಡೆದ ಬೋಡೊ ಟೆರಿಟೋರಿಯಲ್ ಕಮಿಟಿ(ಬಿಟಿಸಿ) ಚುನಾವಣೆಯಲ್ಲಿ 2005-2020ರವರೆಗೆ ಅಧಿಕಾರದಲ್ಲಿದ್ದ ಯುಪಿಪಿಎಲ್ ಪರಾಭವಗೊಂಡಿತು; ಚುನಾವಣೆಗೆ ಒಂದು ತಿಂಗಳು ಮೊದಲು ಬಿಜೆಪಿ ಮತ್ತು ಯುಪಿಪಿಎಲ್ ಬೇರೆಯಾದವು. ಯುಪಿಪಿಎಲ್‌ನ ಪ್ರಮೋದ್ ಬೋರೋ ಬಿಟಿಸಿ ಮುಖ್ಯಸ್ಥನ ಸ್ಥಾನದಿಂದ ಕೆಳಗಿಳಿದು, ಬಿಪಿಎಫ್‌ನ ಹಂಗ್ರಾಮ ಲೊಹಿರಿ ಗದ್ದುಗೆ ಏರಿದರು. ಬೋರೊ ಅವರನ್ನು 2026ರಲ್ಲಿ ರಾಜ್ಯಸಭೆಗೆ ಆಯ್ಕೆ ಮಾಡಲಾಯಿತು. ಬೋಡೋ ಪ್ರಾಂತದಲ್ಲಿ ಬಿಜೆಪಿಯ ಯಶಸ್ಸು ಬಿಪಿಎಫ್‌ನ್ನು ಆಧರಿಸಿದೆ.

ಆದರೆ, ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿರುವುದು-ಪರಿಶಿಷ್ಟ ವರ್ಗಕ್ಕೆ ಆರು ಸಮುದಾಯಗಳ ಸೇರ್ಪಡೆ ಪ್ರಸ್ತಾವ. ರಾಜ್ಯದಲ್ಲಿ 14 ಬುಡಕಟ್ಟುಗಳಿದ್ದು, ಒಟ್ಟು ಜನಸಂಖ್ಯೆ 40 ಲಕ್ಷ. ಬಯಲು ಮತ್ತು ಬೆಟ್ಟ ಪ್ರದೇಶದ ಪರಿಶಿಷ್ಟ ವರ್ಗಗಳ ಗುಂಪಿಗೆ ಆರು ಸಮುದಾಯಗಳನ್ನು ಒಳಗೊಂಡ ಕಣಿವೆ ವರ್ಗದ ಸೇರ್ಪಡೆ ಪ್ರಸ್ತಾವ ವಿವಾದ ಸೃಷ್ಟಿಸಿದೆ. 8 ಸಮುದಾಯಗಳು ಎಸ್‌ಟಿ ಪಟ್ಟಿಯ ವಿಸ್ತರಣೆಯನ್ನು ವಿರೋಧಿಸುತ್ತಿವೆ. ಆಲ್ ಬೋಡೋ ಸ್ಟೂಡೆಂಟ್ಸ್ ಯೂನಿಯನ್(ಎಬಿಎಸ್‌ಯು) ಬೋಡೋಲ್ಯಾಂಡ್‌ನಲ್ಲಿ ಈ ಸಂಬಂಧ ವ್ಯಾಪಕ ಪ್ರತಿಭಟನೆ ನಡೆಸಿತ್ತು. ಪೂರ್ವ, ಉತ್ತರ ಮತ್ತು ದಕ್ಷಿಣ ಅಸ್ಸಾಮಿನ 9 ಜಿಲ್ಲೆಗಳಲ್ಲಿ ಹರಡಿಕೊಂಡಿರುವ ಚಹಾ ತೋಟಗಳ ಮತದಾರರು 35 ಕ್ಷೇತ್ರಗಳಲ್ಲಿ ನಿರ್ಣಾಯಕ ಹಾಗೂ 10 ಕ್ಷೇತ್ರಗಳಲ್ಲಿ ಗಮನಾರ್ಹ ಪಾತ್ರ ವಹಿಸುತ್ತಾರೆ. ಪ್ರಧಾನಿ ಮಾರ್ಚ್ 13, 2026ರಂದು ಪೂರ್ವ ಮತ್ತು ಉತ್ತರ ಅಸ್ಸಾಮಿನ 28,000 ಕಾರ್ಮಿಕ ಕುಟುಂಬಗಳಿಗೆ ಡಿಜಿಟಲ್ ಪಟ್ಟಾ ವಿತರಿಸಿದರು. ಬಿಜೆಪಿ ಪ್ರಣಾಳಿಕೆಯಲ್ಲಿ 3.5 ಲಕ್ಷ ಕುಟುಂಬಗಳಿಗೆ ಭೂಮಿ ಹಕ್ಕು ಹಾಗೂ ಕಾರ್ಮಿಕರ ಕೂಲಿಯನ್ನು 500 ರೂ.ಗೆ ಹೆಚ್ಚಿಸುವುದಾಗಿ ಆಶ್ವಾಸನೆ ನೀಡಿದೆ. ಆದರೆ, ಪ್ರಮುಖ ಬೇಡಿಕೆಯಾದ ಪರಿಶಿಷ್ಟ ವರ್ಗಕ್ಕೆ ಸೇರ್ಪಡೆ ಬಗ್ಗೆ ಮಾತನ್ನಾಡಿಲ್ಲ. ಆದರೆ, ರಾಹುಲ್ ಗಾಂಧಿ ಎಸ್‌ಟಿ ಪಟ್ಟಿಗೆ ಸೇರ್ಪಡೆಯ ಆಶ್ವಾಸನೆ ನೀಡಿದ್ದಾರೆ. ಈ ಸಮುದಾಯಗಳು ಜಾರ್ಖಂಡ್, ಪಶ್ಚಿಮ ಬಂಗಾಳ, ಛತ್ತೀಸ್‌ಗಡ ಹಾಗೂ ಒಡಿಶಾದಲ್ಲಿ ಎಸ್‌ಟಿ ಪಟ್ಟಿಯಲ್ಲಿದ್ದು, ಅಸ್ಸಾಮಿನಲ್ಲಿ ಇತರ ಹಿಂದುಳಿದ ಜಾತಿ(ಒಬಿಸಿ) ಪಟ್ಟಿಯಲ್ಲಿವೆ.

ಮೇಲಣ ಅಸ್ಸಾಂ ಮತ್ತು ಬರಾಕ್ ಕಣಿವೆ ಪ್ರದೇಶದಲ್ಲಿ ಗೊಗೊಯಿ ಕುಟುಂಬ, ಶರ್ಮಾ-ಸೋನೋವಾಲ್ ನಡುವಿನ ವೈಮನಸ್ಸು ಹಾಗೂ ಗಾಯಕ ಜುಬೀನ್ ಪ್ರಕರಣ ಬಿಜೆಪಿ ಮೇಲೆ ವಿಪರಿಣಾಮ ಬೀರಬಹುದು. ಅಖಿಲ್ ಗೊಗೊಯಿ ಅವರ ರೈಜೋರ್ ದಳ ಮತ್ತು ಉರಿನ್‌ಜ್ಯೋತಿ ಅವರ ಅಸ್ಸಾಂ ಜಾತೀಯ ಪರಿಷತ್(ಎಜಿಪಿ) ಮೇಲಣ ಅಸ್ಸಾಮಿನಲ್ಲಿ ಪ್ರಭಾವ ಹೊಂದಿವೆ. ಇವರಿಬ್ಬರೂ ಅಹೋಂ ಸಮುದಾಯಕ್ಕೆ ಸೇರಿದ್ದಾರೆ. ಅಖಿಲ್ 2021ರಲ್ಲಿ ಶಾಸನಸಭೆಗೆ ಆಯ್ಕೆಯಾಗಿದ್ದು, ಎಜೆಪಿ ಚುನಾವಣೆಯಲ್ಲಿ ಇನ್ನೂ ಯಶಸ್ಸು ಸಾಧಿಸಿಲ್ಲ. 2021ರಲ್ಲಿ ಸೋನೋವಾಲ್ ಅವರನ್ನು ಬದಲಿಸಿ ಕೆಳ ಅಸ್ಸಾಂ ಮೂಲದ ಶರ್ಮಾ ಅವರನ್ನು ಆಯ್ಕೆ ಮಾಡಿದ್ದು ಅಸಮಾಧಾನಕ್ಕೆ ಕಾರಣವಾಗಿದೆ. ಬರಾಕ್ ಕಣಿವೆಯದು ಬೇರೆಯದೇ ಕತೆ. ದಕ್ಷಿಣ ಅಸ್ಸಾಮಿನಲ್ಲಿ ಅಸ್ಸಾಮಿ ಭಾಷೆ ನಗಣ್ಯ; ಬಂಗಾಳಿಗೆ ಆದ್ಯತೆ. ಮೇ 11, 1961ರಲ್ಲಿ ಅಸ್ಸಾಮಿ ಹೇರಿಕೆಯನ್ನು ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಗೋಲಿಬಾರ್‌ನಿಂದ 11 ಮಂದಿ ಮೃತಪಟ್ಟಿದ್ದರು. ಆನಂತರ ಬಂಗಾಳಿಯನ್ನು ಅಧಿಕೃತ ಭಾಷೆ ಎಂದು ಪರಿಗಣಿಸಲಾಯಿತು. ಕಣಿವೆಯ ಕಛಾರ್, ಕರೀಂಗಂಜ್ ಮತ್ತು ಹೈಲಕಂಡಿ ಜಿಲ್ಲೆಗಳ ಒಟ್ಟು ಜನಸಂಖ್ಯೆ 45 ಲಕ್ಷ. ಇವರಲ್ಲಿ ಶೇ.90ರಷ್ಟು ಮಂದಿ ಬಂಗಾಳಿ ಭಾಷಿಕರು. ಸರಕಾರ ಇತ್ತೀಚೆಗೆ ಮುಸ್ಲಿಮರು ಗಮನಾರ್ಹ ಸಂಖ್ಯೆಯಲ್ಲಿರುವ ಕರೀಂಗಂಜ್ ಹೆಸರನ್ನು ಶ್ರೀಭೂಮಿ ಎಂದು ಬದಲಿಸಿತು. ಬಿಜೆಪಿ 2021ರಲ್ಲಿ ಇಲ್ಲಿರುವ 15 ಕ್ಷೇತ್ರಗಳಲ್ಲಿ 6ರಲ್ಲಿ ಗೆದ್ದಿದೆ; 2023ರಲ್ಲಿ ನಡೆದ ಕ್ಷೇತ್ರ ಮರು ವಿಂಗಡಣೆಯಿಂದ ಕ್ಷೇತ್ರಗಳ ಸಂಖ್ಯೆ 13ಕ್ಕೆ ಕುಸಿದಿದೆ. ಇದು ಬಂಗಾಳಿಗಳನ್ನು ದುರ್ಬಲಗೊಳಿಸಲು ನಡೆಸಿದ ತಂತ್ರ ಎಂದು ದೂರಲಾಗುತ್ತಿದೆ.

ಎಚ್ಚೆತ್ತುಕೊಳ್ಳದ ಕಾಂಗ್ರೆಸ್

2001ರಿಂದ 3 ಬಾರಿ ಕಾಂಗ್ರೆಸ್‌ನ ತರುಣ್ ಗೊಗೊಯಿ ಮುಖ್ಯಮಂತ್ರಿ ಆಗಿದ್ದರು. ಆನಂತರ ಪಕ್ಷ ಕುಸಿಯತೊಡಗಿತು. 2021ರಲ್ಲಿ ಕಾಂಗ್ರೆಸ್‌ನ 29 ಸ್ಥಾನಗಳು 13 ಜಿಲ್ಲೆಗಳಿಂದ ಬಂದಿದ್ದವು; ಉಳಿದ 22 ಜಿಲ್ಲೆಗಳಲ್ಲಿ ಶೂನ್ಯ ಸಂಪಾದನೆ ಮಾಡಿತ್ತು. 2014ರಿಂದ ನಿರಂತರ ಸೋಲುಣ್ಣುತ್ತಿರುವ ಕಾಂಗ್ರೆಸ್, ರಾಜ್ಯದಲ್ಲಿ ಆಂತರಿಕ ಬಿಕ್ಕಟ್ಟಿನಿಂದ ಬಳಲುತ್ತಿದೆ. ಬಿಕ್ಕಷ್ಟು ಬಗೆಹರಿಸಲು ಸಂಸದ ಗೌರವ್ ಗೊಗೊಯಿ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಿಸಿತು. ಲೋಕಸಭೆ ಚುನಾವಣೆಯಲ್ಲಿ 3 ಸ್ಥಾನ ಗಳಿಸಿತು; ಉಳಿದ 11 ಎನ್‌ಡಿಎ ಪಾಲಾಯಿತು. ಚುನಾವಣೆ ಘೋಷಣೆಯಾದರೂ ಸುಮ್ಮನಿದ್ದು, ಕೊನೆ ಗಳಿಗೆಯಲ್ಲಿ ಮೈತ್ರಿಗೆ ಮುಂದಾಯಿತು. ಬಿಜೆಪಿಗೆ ಆರ್ಥಿಕ-ಮಾನವ ಸಂಪನ್ಮೂಲವಲ್ಲದೆ, ಚುನಾವಣೆ ಆಯೋಗ, ಸಿಬಿಐ, ಜಾರಿ ನಿರ್ದೇಶನಾಲಯ ಮತ್ತಿತರ ಕೇಂದ್ರೀಯ ಸಂಸ್ಥೆಗಳ ಬೆಂಬಲವಿದೆ; ಆರೆಸ್ಸೆಸ್ ಕಾರ್ಯಕರ್ತರ ವಿಸ್ತೃತ ಜಾಲವಿದೆ. ಇದನ್ನು ಸರಿಗಟ್ಟಲು ಕಾಂಗ್ರೆಸ್‌ಗೆ ಆಗುತ್ತಿಲ್ಲ. ಪಕ್ಷದ ಸಂಘಟನೆ ತೀರ ದುರ್ಬಲವಾಗಿದೆ.

ಸುಪ್ರೀಂ ಕೋರ್ಟ್ ವಲಸಿಗರ ಪರ ಕಾಯ್ದೆಯನ್ನು ವಜಾಗೊಳಿಸಿದ ಬಳಿಕ 2005ರಲ್ಲಿ ಎಐಯುಡಿಎಫ್ ಸ್ಥಾಪನೆಯಾಯಿತು. ಸುಗಂಧ ದ್ರವ್ಯಗಳ ಉತ್ಪಾದಕ ಮುಹಮ್ಮದ್ ಅಜ್ಮಲ್ ಬದ್ರುದ್ದೀನ್ ಪಕ್ಷದ ಸಂಸ್ಥಾಪಕ. ಇಂಥದ್ದೇ ಇನ್ನೊಂದು ಪಕ್ಷ ಯುನೈಟೆಡ್ ಮೈನಾರಿಟೀಸ್ ಫ್ರಂಟ್(ಯುಎಂಎಫ್) ಈಗ ನಿಸ್ಸತ್ವವಾಗಿದೆ. ಎಐಯುಡಿಎಫ್ ಬಲ 2006ರಲ್ಲಿದ್ದ 10ರಿಂದ 2011ರಲ್ಲಿ 18ಕ್ಕೆ ಹಾಗೂ ಕಾಂಗ್ರೆಸ್ ಬಲ 25ರಿಂದ 78ಕ್ಕೆ ಹೆಚ್ಚಿತು. ತರುಣ್ ಗೊಗೋಯಿ ತಮ್ಮ ಪುತ್ರ ಗೌರವ್ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲು ಯತ್ನಿಸಿದ್ದರಿಂದ ಬಂಡೆದ್ದ ಹಿಮಂತ ಬಿಸ್ವಾ ಶರ್ಮಾ ಬಿಜೆಪಿ ಸೇರಿದರು. 2011ರಲ್ಲಿ ಐವರು ಶಾಸಕರನ್ನು ಹೊಂದಿದ್ದ ಬಿಜೆಪಿ, 2016ರಲ್ಲಿ 60 ಕ್ಷೇತ್ರಗಳಲ್ಲಿ ಗೆದ್ದಿತು. 2021ರಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡ ಎಐಯುಡಿಎಫ್, ಆನಂತರ ಪ್ರತ್ಯೇಕಗೊಂಡಿತು. 2024ರ ಲೋಕಸಭೆ ಚುನಾವಣೆಯಲ್ಲಿ ಮೂರು ಸಂಸದ ಸ್ಥಾನ ಉಳಿಸಿಕೊಳ್ಳುವಲ್ಲಿ ವಿಫಲವಾಯಿತು. ಒಟ್ಟು ಜನಸಂಖ್ಯೆ 3.12 ಕೋಟಿಯಲ್ಲಿ ಮುಸ್ಲಿಮರ ಪಾಲು ಶೇ.34. ಕ್ಷೇತ್ರ ಮರುವಿಂಗಡಣೆ ಬಳಿಕ ಮುಸ್ಲಿಮ್ ಪ್ರಾಬಲ್ಯದ ಕ್ಷೇತ್ರಗಳು 35ರಿಂದ 22ಕ್ಕೆ ಕುಸಿದಿವೆ. ಅಂತೆಯೇ, ಅಹೋಂಗಳ ಪ್ರಾಬಲ್ಯ ಇದ್ದ ಕ್ಷೇತ್ರಗಳು ಕೂಡ ಕಡಿಮೆಯಾಗಿವೆ. 2010ರವರೆಗೆ ಮುಸ್ಲಿಮರು ಹಾಗೂ ‘ಚಹಾ ಬುಡಕಟ್ಟು’ಗಳು ಕಾಂಗ್ರೆಸ್ ಪರ ಇದ್ದವು. ಆನಂತರ ಆದಿವಾಸಿಗಳು ಬಿಜೆಪಿ ಪರ ವಾಲಿದರು. ಕಣದಲ್ಲಿ ಎಐಯುಡಿಎಫ್ ಉಪಸ್ಥಿತಿಯು ಕಾಂಗ್ರೆಸ್‌ಗೆ ಹಾನಿಯುಂಟು ಮಾಡಲಿದೆ.

ಚಾರಿತ್ರ್ಯ ಹನನ

ಈಶಾನ್ಯ ಭಾರತದಲ್ಲಿ ಬಿಜೆಪಿ ನೆಲೆಯೂರಲು ಕಾರಣರಾದ ಶರ್ಮಾ ಮೇಲೆ ಪಕ್ಷವನ್ನು ಗೆಲ್ಲಿಸಲೇಬೇಕಾದ ಜವಾಬ್ದಾರಿ ಇದೆ. ಅದಕ್ಕಾಗಿ ಅವರು ಯಾವ ಮಟ್ಟಕ್ಕಾದರೂ ಇಳಿಯಲು ಸಿದ್ಧರಿದ್ದಾರೆ. 2021ರಲ್ಲಿ ಗುವಾಹಟಿ ನಗರದ 4 ಕ್ಷೇತ್ರಗಳಲ್ಲೂ ಬಿಜೆಪಿ ಗೆದ್ದಿತ್ತು. ಮಹಾಜೋತ್ ಈ ಬಾರಿ ಕುಂಕಿ ಚೌಧುರಿ ಅವರನ್ನು ಗುವಾಹಟಿ ಕೇಂದ್ರ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಚೌಧುರಿ ಜೆನ್ ಝಿ ಪೀಳಿಗೆಯ ಏಕೈಕ ಅಭ್ಯರ್ಥಿ ಮತ್ತು ಇಂಗ್ಲೆಂಡ್‌ನಲ್ಲಿ ಉನ್ನತ ಶಿಕ್ಷಣ ಪಡೆದವರು. ಅವರನ್ನು ಹಣಿಯಲು ಶರ್ಮಾ ಬಳಸಿದ್ದು-‘‘ಅವರ ತಾಯಿ ಸುಜಾತಾ ಗುರುಂಗ್ ಗೋಮಾಂಸ ತಿನ್ನುತ್ತಾರೆ. ಆದ್ದರಿಂದ ಮತ ನೀಡಬೇಡಿ’’. ಶರ್ಮಾ ಅಪಸವ್ಯ ಇಷ್ಟಕ್ಕೇ ನಿಲ್ಲಲಿಲ್ಲ. ‘‘ಸುಜಾತಾ ಗುರುಂಗ್ ದಿಲ್ಲಿ ದೊಂಬಿ ಪ್ರಕರಣದ ಆರೋಪಿಗಳಾದ ಶರ್ಜೀಲ್ ಇಮಾಮ್ ಹಾಗೂ ಉಮರ್ ಖಾಲಿದ್ ಅವರನ್ನು ಸಾರ್ವಜನಿಕವಾಗಿ ಬೆಂಬಲಿಸಿದ್ದರು’’ ಎಂದು ದೂರಿದರು. ಸಂಸದ ಗೌರವ್ ಗೊಗೊಯಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ ಮತ್ತು ಅವರ ಪತ್ನಿ ಎಲಿಝಬೆತ್ ಕೋಲ್ಬರ್ಟ್ ಅವರು ಪಾಕಿಸ್ತಾನದ ಪರಿಸರ ಸಂಘಟನೆಯೊಂದಿಗೆ ಕಾರ್ಯ ನಿರ್ವಹಿಸಿದ್ದಾರೆ ಎನ್ನುವುದು ಶರ್ಮಾ ಅವರ ಇನ್ನೊಂದು ದೂರು. ತಮಾಷೆ ಏನೆಂದರೆ, ಶರ್ಮಾ ಪೂರ್ವೇತಿಹಾಸ ವರ್ಣರಂಜಿತವಾಗಿದೆ; ಶಾರದಾ ಚಿಟ್ ಫಂಡ್ ಹಗರಣದಲ್ಲಿ ನವೆಂಬರ್ 2014ರಲ್ಲಿ ಅವರನ್ನು ಸಿಬಿಐ ಕೋಲ್ಕತಾದಲ್ಲಿ ಪ್ರಶ್ನಿಸಿತ್ತು. ಗುವಾಹಟಿ ನಗರಕ್ಕೆ ನೀರು ಪೂರೈಸುವ ಯೋಜನೆಗೆ ಸಂಬಂಧಿಸಿದಂತೆ ಅಮೆರಿಕ ಮೂಲದ ಲೂಯಿಸ್ ಬರ್ಗರ್‌ನಿಂದ ಹಣ ಪಡೆದಿದ್ದಾರೆ ಎಂದು ದೂರಿದ್ದ ಬಿಜೆಪಿ, ‘ವಾಟರ್ ಸ್ಕ್ಯಾಮ್’ ಎಂಬ ಕಿರುಹೊತ್ತಗೆ ಪ್ರಕಟಿಸಿತ್ತು! ಅವರು 2015ರಲ್ಲಿ ಬಿಜೆಪಿ ಸೇರಿದ ಬಳಿಕ ಶುಭ್ರಚರಿತ್ರರಾದರು!

ಬಿಜೆಪಿ ಬಂಗಾಳಿ ಮೂಲದ ಮುಸ್ಲಿಮ್ ಸಮುದಾಯವನ್ನು ‘ಮಿಯಾ’ ಎಂದು ಹಂಗಿಸಿ, ಅವರ ಸುತ್ತ ಭೂಮಿ ಅತಿಕ್ರಮಣ, ಜನಸಂಖ್ಯೆ ಹೆಚ್ಚಳದ ನರೇಟಿವ್ ಕಟ್ಟಿದೆ; ಆಮೂಲಕ ಅಸ್ಸಾಮಿ ಭಾಷಿಕ ಹಿಂದೂಗಳು ಹಾಗೂ ಮೂಲವಾಸಿಗಳ ಮತಗಳ ಕ್ರೋಡೀಕರಣ ನಡೆಸಿದೆ ಮತ್ತು ಅದರಲ್ಲಿ ಯಶಸ್ವಿಯಾಗಿದೆ. ಆರು ಸಮುದಾಯಗಳಿಗೆ ಪರಿಶಿಷ್ಟ ವರ್ಗ ಸ್ಥಾನಮಾನ ನೀಡುವಲ್ಲಿ ಬಿಜೆಪಿ ವೈಫಲ್ಯವನ್ನು ಬಳಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಮುಖ್ಯಮಂತ್ರಿ ಪ್ರಕಾರ, ಒಟ್ಟು ಜನಸಂಖ್ಯೆಯಲ್ಲಿ ಅಂದಾಜು ಶೇ.40ರಷ್ಟು ವಲಸಿಗರಿದ್ದಾರೆ (2011ರ ಜನಗಣತಿ ಪ್ರಕಾರ, ರಾಜ್ಯದ ಜನಸಂಖ್ಯೆ 3.12 ಕೋಟಿ). ಆದರೆ, ಈವರೆಗೆ 30,000 ಮಂದಿಯನ್ನು ಮಾತ್ರ ಗಡಿಪಾರು ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಅಧಿಕಾರ ದಲ್ಲಿರುವ ಎನ್‌ಡಿಎ ಏನು ಮಾಡುತ್ತಿದೆ? ಈ ಪ್ರಶ್ನೆಗೆ ಎನ್‌ಡಿಎ ಉತ್ತರ ಕೊಡುವುದಿಲ್ಲ; ಅದು ಬೈನರಿಗಳ ಮೂಲಕ ಚುನಾವಣೆ ಗೆಲ್ಲುತ್ತದೆ. ಜನ ತಕ್ಕ ಪ್ರತಿಕ್ರಿಯೆ ನೀಡುತ್ತಾರೆ ಎಂದು ಆಶಿಸಬೇಕಷ್ಟೇ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮಾಧವ ಐತಾಳ್

contributor

Similar News