ಸಂವಿಧಾನ ಪ್ರಸ್ತಾವನೆ ತಿದ್ದುಪಡಿಗೆ ಐವತ್ತರ ಹರೆಯ
ನವೆಂಬರ್ 26ರಂದು 77ನೇ ಸಂವಿಧಾನ ದಿನಾಚರಣೆ ನಡೆದಿದೆ. ಆದರೆ, ಸಂವಿಧಾನದ ಆಶಯವಾದ ಸಮಸಮಾಜ ನಿರ್ಮಾಣ ಸಾಕಷ್ಟು ದೂರದಲ್ಲಿ ಇದೆ. ಅಧಿಕಾರಸ್ಥರ ಶೋಷಣೆ, ಪ್ರಭುತ್ವದ ನಿರಂಕುಶ ಆಡಳಿತ ಮತ್ತು ದಬ್ಬಾಳಿಕೆಯನ್ನು ತಡೆಯಲು ಸಂವಿಧಾನ ಬೇಕು ಎಂದು ಬಾಬಾ ಸಾಹೇಬರು ಹೇಳಿದ್ದರು. ಸಂವಿಧಾನ ಎಷ್ಟೇ ಉದಾತ್ತವಾಗಿದ್ದರೂ ಆಡಳಿತ ನಡೆಸುವವರು ಅಧಮರಾದರೆ ಹೆಚ್ಚೇನೂ ಪ್ರಯೋಜನ ಆಗುವುದಿಲ್ಲ ಎಂಬ ಅವರ ಮಾತು ನಮಗೆ ಎಚ್ಚರಿಕೆ ಗಂಟೆ ಆಗಬೇಕು.
ಸಂವಿಧಾನದ ಮೇಲೆ ನಿರಂತರ ಹಲ್ಲೆ ನಡೆಸುತ್ತಿರುವ ಹಿಂದಿ, ಹಿಂದೂ ಮತ್ತು ಹಿಂದುಸ್ತಾನದ ಅಮಲು ಏರಿಸಿಕೊಂಡಿರುವ ಬಲಪಂಥೀಯರು ಹಾಗೂ ಇನ್ನಿತರ ಸಂವಿಧಾನ ವಿರೋಧಿಗಳ ಬಗ್ಗೆ ಜಾಗೃತಿ ಮೂಡಬೇಕಿದೆ. ಸಂಘಟನೆ ಮತ್ತು ಹೋರಾಟ ಮೂಲಕ ನಮ್ಮೆಲ್ಲರನ್ನೂ ರಕ್ಷಿಸಿರುವ ಸಂವಿಧಾನದ ಋಣಸಂದಾಯ ಮಾಡಬೇಕಿದೆ.
ಸಂವಿಧಾನದ ಪ್ರಸ್ತಾವನೆಯ ತಿದ್ದುಪಡಿಗೆ ನವೆಂಬರ್ 11, 2026ಕ್ಕೆ 50 ವರ್ಷದ ಹರೆಯ. ಸಂವಿಧಾನ(42ನೇ ತಿದ್ದುಪಡಿ) ಕಾಯ್ದೆಯನ್ನು ನವೆಂಬರ್ 2, 1976ರಲ್ಲಿ ಲೋಕಸಭೆಯಲ್ಲಿ ಹಾಗೂ ನವೆಂಬರ್ 11ರಂದು ರಾಜ್ಯಸಭೆಯಲ್ಲಿ ಅಂಗೀಕರಿಸಲಾಯಿತು. ಆಗ ಪ್ರತಿಪಕ್ಷಗಳ ಬಹುತೇಕ ಸಂಸದರು ಸೆರೆಮನೆಯಲ್ಲಿದ್ದರು. ಲೋಕಸಭೆಯಲ್ಲಿದ್ದ ನಾಲ್ವರು ಮಸೂದೆಯನ್ನು ವಿರೋಧಿಸಿದರು ಮತ್ತು ರಾಜ್ಯಸಭೆಯಲ್ಲಿ ಹೆಚ್ಚು ವಿರೋಧ ವ್ಯಕ್ತವಾಗಲಿಲ್ಲ. ‘ಕಿರು ಸಂವಿಧಾನ’ ಎಂದೇ ಹೆಸರಾದ 59 ಪರಿಚ್ಛೇದ ಒಳಗೊಂಡಿದ್ದ ತಿದ್ದುಪಡಿಗೆ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಡಿಸೆಂಬರ್ 18ರಂದು ಸಹಿ ಹಾಕಿದರು; ಜನವರಿ 3, 1977ರಂದು ಜಾರಿಗೆ ಬಂದಿತು. ಮೂಲಭೂತ ಕರ್ತವ್ಯವನ್ನು ಇದೇ ತಿದ್ದುಪಡಿಯಲ್ಲಿ ಸೇರ್ಪಡೆ ಮಾಡಲಾಯಿತು.
ಆನಂತರ ಅಧಿಕಾರಕ್ಕೆ ಬಂದ ಮೊರಾರ್ಜಿ ದೇಸಾಯಿ ಸರಕಾರವು 43ನೇ ತಿದ್ದುಪಡಿ ಮೂಲಕ ಲೋಕಸಭೆ ಅವಧಿ 5ರಿಂದ 6 ವರ್ಷಕ್ಕೆ ಹೆಚ್ಚಳ, ತುರ್ತು ಪರಿಸ್ಥಿತಿ ಅವಧಿಯಲ್ಲಿ 20 ಮತ್ತು 21ನೇ ವಿಧಿಗಳ ಅಮಾನತು ಹಾಗೂ ಆಂತರಿಕ ಗಲಭೆಗಳ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಲು ಅವಕಾಶ ಮತ್ತಿತರ ಅಂಶಗಳನ್ನು ಕೈ ಬಿಟ್ಟಿತು. ಬಲಪಂಥೀಯರ ನಿರಂತರ ವಿರೋಧದ ನಡುವೆಯೂ ಪ್ರಸ್ತಾವನೆಯಲ್ಲಿ ‘ಸಾರ್ವಭೌಮ ಸಮಾಜವಾದಿ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯ’ ಹಾಗೂ ‘ಭಾರತದ ಏಕತೆ ಮತ್ತು ಸಮಗ್ರತೆ’ ಎಂಬ ಪದಪುಂಜಗಳು ಉಳಿದುಕೊಂಡವು.
ಪದ ಪ್ರಶ್ನಿಸಿ ಅರ್ಜಿ
ರಾಜ್ಯಸಭೆ ಮಾಜಿ ಸದಸ್ಯ ಸುಬ್ರಮಣಿಯನ್ ಸ್ವಾಮಿ, ವಕೀಲ ಅಶ್ವಿನಿ ಉಪಾಧ್ಯಾಯ ಹಾಗೂ ಬಲರಾಮ್ ಸಿಂಗ್ ‘ಜಾತ್ಯತೀತ’, ‘ಸಮಾಜವಾದ’, ಮತ್ತು ‘ಸಮಗ್ರತೆ’ ಪದಗಳನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಲೋಕಸಭೆ ಅವಧಿ ಮಾರ್ಚ್ 18, 1976ರಂದು ಮುಕ್ತಾಯಗೊಂಡಿತ್ತು. ತಿದ್ದುಪಡಿಯು ತುರ್ತುಪರಿಸ್ಥಿತಿ ಜಾರಿಯಲ್ಲಿರುವಾಗ ಬಂದಿರುವುದರಿಂದ, ಅದು ಅಸಾಂವಿಧಾನಿಕ ಎಂದು ಅರ್ಜಿದಾರರು ವಾದಿಸಿದ್ದರು. ‘1976ರಲ್ಲಿ ತಂದ ತಿದ್ದುಪಡಿಯು ನ್ಯಾಯಾಂಗದ ವಿಮರ್ಶೆಗೆ ಒಳಪಟ್ಟಿದೆ. ಈ ಪದಗಳ ಸೇರ್ಪಡೆ ಸೇರಿದಂತೆ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ತೆಗೆದುಕೊಂಡ ಎಲ್ಲ ನಿರ್ಧಾರಗಳನ್ನು ಅನೂರ್ಜಿತ ಎನ್ನಲಾಗದು’ ಎಂದು ತೀರ್ಪು ಕಾಯ್ದಿರಿಸಿದ್ದ ಸುಪ್ರೀಂ ಕೋರ್ಟ್ ಹೇಳಿತ್ತು. ಬಳಿಕ ನವೆಂಬರ್ 25, 2024ರಲ್ಲಿ ಈ ಕುರಿತ ಎಲ್ಲ ಅರ್ಜಿಗಳನ್ನು ತಳ್ಳಿಹಾಕಿತು. ‘ಸಂವಿಧಾನಕ್ಕೆ ತಿದ್ದುಪಡಿ ತರುವ ಸಂಸತ್ತಿನ ಅಧಿಕಾರವು ಪ್ರಸ್ತಾವನೆಗೂ ಅನ್ವಯಿಸುತ್ತದೆ. 44 ವರ್ಷಗಳ ಬಳಿಕ ತಿದ್ದುಪಡಿಯನ್ನು ಪ್ರಶ್ನಿಸಲು ಯಾವುದೇ ಶಾಸನಬದ್ಧ ಕಾರಣ ಇಲ್ಲವೇ ಸಮರ್ಥನೆ ಇಲ್ಲ. ಇಷ್ಟು ವರ್ಷಗಳ ಬಳಿಕ ಈ ವಿಷಯವನ್ನು ಕೆದಕಿರುವುದು ಏಕೆ?’ ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ನ್ಯಾ.ಸಂಜಯ್ ಕುಮಾರ್ ಅವರ ಪೀಠ ಪ್ರಶ್ನಿಸಿತು.
ಸಂವಿಧಾನ ರಚನಾ ಸಭೆಯಲ್ಲಿಯೂ ಜಾತ್ಯತೀತ, ಸಮಾಜವಾದ ಪದಗಳ ಸೇರ್ಪಡೆ ಕುರಿತು ಚರ್ಚೆ ನಡೆದಿತ್ತು. ಜಾತ್ಯತೀತ, ಫೆಡರಲ್ ಹಾಗೂ ಸಮಾಜವಾದ ಪದಗಳನ್ನು ಸೇರಿಸಬೇಕೆಂಬ ಕೆ.ಟಿ.ಶಾ ಅವರ ನವೆಂಬರ್ 15,1948ರ ಮನವಿಯನ್ನು ಕರಡು ಸಮಿತಿ ಅಧ್ಯಕ್ಷರಾದ ಬಿ.ಆರ್. ಅಂಬೇಡ್ಕರ್ ಆಕ್ಷೇಪಿಸಿದ್ದರು. ಸಮಾಜವಾದ ಪದ ಚುನಾಯಿತ ಸರಕಾರದ ಆರ್ಥಿಕ ನೀತಿಯನ್ನು ನಿರ್ಬಂಧಿಸುತ್ತದೆ ಎಂಬುದು ಕಾರಣ. ಕೆಲವು ನ್ಯಾಯಶಾಸ್ತ್ರಜ್ಞರು ಜಾತ್ಯತೀತ ಪದವು ಧರ್ಮಕ್ಕೆ ವಿರುದ್ಧವಾಗಿದ್ದು, ನಿಖರ ಅರ್ಥವನ್ನು ಕೊಡುವುದಿಲ್ಲ ಎಂದು 1949ರಲ್ಲಿ ಆಕ್ಷೇಪಿಸಿದ್ದರು.
‘ಕಾಲಕ್ರಮೇಣ ದೇಶವು ಜಾತ್ಯತೀತತೆ ಬಗ್ಗೆ ತನ್ನದೇ ವ್ಯಾಖ್ಯಾನವನ್ನು ರೂಪಿಸಿಕೊಂಡಿದೆ. ಸರಕಾರ ಯಾವುದೇ ಧರ್ಮವನ್ನು ಬೆಂಬಲಿಸುವುದಿಲ್ಲ ಇಲ್ಲವೇ ಯಾವುದೇ ನಂಬಿಕೆಯ ಆಚರಣೆಯನ್ನು ವಿರೋಧಿಸುವುದಿಲ್ಲ. ಜಾತ್ಯತೀತ ಪದವು ಗಣರಾಜ್ಯವು ಎಲ್ಲ ಧರ್ಮಗಳಿಗೂ ಸಮಾನ ಗೌರವ ನೀಡುತ್ತದೆ ಎಂಬುದನ್ನು ಸೂಚಿಸುತ್ತದೆ. ‘ಸಮಾಜವಾದ’ ಪದವು ಸರಕಾರದ ಆರ್ಥಿಕ ನೀತಿಯನ್ನು ನಿರ್ಬಂಧಿಸುತ್ತದೆ ಎಂದು ವ್ಯಾಖ್ಯಾನಿಸಬಾರದು. ಅದು ಸಾಮಾಜಿಕ, ಆರ್ಥಿಕ ಇಲ್ಲವೇ ರಾಜಕೀಯ ಸೇರಿದಂತೆ ಎಲ್ಲ ಅಸಮಾನತೆಯನ್ನು ತೊಡೆಯಲು ಸರಕಾರ ಬದ್ಧವಾಗಿದೆ ಎಂಬುದನ್ನು ಹಾಗೂ ಆರ್ಥಿಕ/ಸಾಮಾಜಿಕ ಉನ್ನತಿಯ ಗುರಿಯನ್ನು ಪ್ರತಿಬಿಂಬಿಸುತ್ತದೆ; ಖಾಸಗಿ ಉದ್ಯಮ/ವ್ಯಾಪಾರವನ್ನು ತಡೆಯುವುದಿಲ್ಲ. ರಾಜ್ಯ ಯಾವುದೇ ನಾಗರಿಕ ಆರ್ಥಿಕ ಇಲ್ಲವೇ ಸಾಮಾಜಿಕ ಅನನುಕೂಲತೆ ಅನು ಭವಿಸದಂತೆ ಖಾತ್ರಿ ನೀಡುತ್ತದೆ. ಸಂವಿಧಾನದ ವಿಧಿ 14,15 ಮತ್ತು 16 ಇದನ್ನೇ ಪ್ರತಿಪಾದಿಸುತ್ತವೆ’ ಎಂದು ಪೀಠ ಹೇಳಿತು. ತುರ್ತು ಪರಿಸ್ಥಿತಿ ವೇಳೆ ಸಂಸತ್ತು ವಿಸರ್ಜನೆ ಆಗಿರುವಾಗ ಈ ಮೂರು ಪದಗಳನ್ನು ಸೇರ್ಪಡೆಗೊಳಿಸಲಾಗಿದೆ ಎಂಬ ವಾದವನ್ನು ನ್ಯಾಯಾಲಯ ಒಪ್ಪಲಿಲ್ಲ; 1978ರಲ್ಲಿ 43ನೇ ತಿದ್ದುಪಡಿ ಸಂದರ್ಭದಲ್ಲಿ ಈ ಕುರಿತು ಚರ್ಚೆ ನಡೆದಿದೆ ಎಂದಿತು.
ಪದಗಳಿಂದ ಇರಿಸುಮುರಿಸು
ಯಾವುದೇ ಧರ್ಮದ ಆಚರಣೆ ಮತ್ತು ಪ್ರಚಾರದ ಹಕ್ಕು ಹಾಗೂ ಎಲ್ಲರಿಗೂ ನಂಬಿಕೆ ಮತ್ತು ಆತ್ಮಸಾಕ್ಷಿಯ ಸ್ವಾತಂತ್ರ್ಯವಿದೆ ಎನ್ನುವುದು ಜಾತ್ಯತೀತ ನಿಲುವು. ದೇಶದ ವೈಶಿಷ್ಟ್ಯಗಳಲ್ಲಿ ಜಾತ್ಯತೀತತೆಯೂ ಒಂದು ಎನ್ನುವುದು ಬಲಪಂಥೀಯರಿಗೆ ಇರಿಸುಮುರಿಸಾಗಿದೆ. ದೇಶ ಯಾವುದೇ ಧರ್ಮದ ಪರವಾಗಿಲ್ಲ ಇಲ್ಲವೇ ಧರ್ಮವೊಂದನ್ನು ವಿರೋಧಿಸುವುದಿಲ್ಲ; ಅಲ್ಪ ಸಂಖ್ಯಾತರಿಗೆ ಸಂವಿಧಾನದ ರಕ್ಷಣೆ ಇದೆ ಎನ್ನುವುದನ್ನು ‘ನಕಲು ಜಾತ್ಯತೀತತೆ’ ಎಂದು ಬ್ರಾಂಡ್ ಮಾಡಲಾಯಿತು. 2014ರ ಚುನಾವಣೆ ಬಳಿಕ ಇಂಥ ನಕಾರಾತ್ಮಕತೆ ಹೆಚ್ಚಿತು. 2025ರಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ‘‘ಈ ಪದಗಳ ಸೇರ್ಪಡೆಯು ಸನಾತನದ ಸ್ಫೂರ್ತಿಗೆ ಮಾಡಿದ ಅಪಚಾರ’’ ಎಂದರು; ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ‘‘ಇವನ್ನು ಉಳಿಸಿಕೊಳ್ಳಬೇಕೇ ಇಲ್ಲವೇ ತೆಗೆದುಹಾಕಬೇಕೇ ಎಂಬ ಕುರಿತು ರಾಷ್ಟ್ರವ್ಯಾಪಿ ಚರ್ಚೆ ಆಗಬೇಕು’’ ಎಂದು ಹೇಳಿದರು.
ನ್ಯಾಯಾಲಯಗಳ ಹಲವು ಆದೇಶಗಳು ಜಾತ್ಯತೀತತೆಯನ್ನು ಪುರಸ್ಕರಿಸಿವೆ. ಎಸ್.ಆರ್. ಬೊಮ್ಮಾಯಿ ವಿ/ಎಸ್ ಭಾರತ ಸರಕಾರ(1994) ಪ್ರಕರಣದಲ್ಲಿ ‘ಜಾತ್ಯತೀತತೆಯು ಸಂವಿಧಾನದ ಮೂಲಭೂತ ಲಕ್ಷಣ. ಎಲ್ಲ ನಂಬಿಕೆಗಳ ಜನರನ್ನು ಸಮಾನವಾಗಿ ಮತ್ತು ಯಾವುದೇ ತಾರತಮ್ಯವಿಲ್ಲದೆ ನೋಡುವ ಬದ್ಧತೆಯನ್ನು ಜಾತ್ಯತೀತತೆ ಪ್ರತಿನಿಧಿಸುತ್ತದೆ’ ಎಂದು ನ್ಯಾಯಾಲಯ ಹೇಳಿತು. ಅಸಮಾನತೆಯನ್ನು ಕಡಿಮೆಗೊಳಿಸಲು ರಾಜ್ಯ ಸಕಾರಾತ್ಮಕ ಪಾತ್ರ ವಹಿಸಬೇಕು ಎಂದು ಸಂವಿಧಾನ ಕರ್ತೃಗಳು ಬಯಸಿದ್ದರು. ಮುಕ್ತ ವಾತಾವರಣದಲ್ಲಿ ಮಾತ್ರ ಬೌದ್ಧಿಕ, ನೈತಿಕ ಹಾಗೂ ಭೌತಿಕ ಸಾಮರ್ಥ್ಯ ಹೊರಹೊಮ್ಮುತ್ತದೆ ಎಂಬ ನಂಬಿಕೆಯಿಂದಾಗಿ, ಸ್ವಾತಂತ್ರ್ಯ ಎನ್ನುವುದು ಉದಾರವಾದದ ಬಹುಮುಖ್ಯ ಮೌಲ್ಯ ಆಯಿತು. ಆದರೆ, 77 ವರ್ಷಗಳ ಬಳಿಕವೂ ಸಂವಿಧಾನ ಆಶಿಸಿದ ಸಮಸಮಾಜ ನಿರ್ಮಾಣದ ಗುರಿಯಿಂದ ನಾವು ಬಹಳ ದೂರದಲ್ಲಿದ್ದೇವೆ. ಸಂವಿಧಾನದ ಭಾಗ 3ರ ಮೂಲಭೂತ ಹಕ್ಕುಗಳು ಹಾಗೂ ಭಾಗ 4ರ ರಾಜ್ಯ ಕಾರ್ಯನೀತಿಯ ನಿರ್ದೇಶಕ ತತ್ವ(ಡಿಪಿಎಸ್ಪಿ, ಡೈರೆಕ್ಟಿವ್ ಪ್ರಿನ್ಸಿಪಲ್ಸ್ ಆಫ್ ಸ್ಟೇಟ್ ಪಾಲಿಸಿ)ಗಳು ಉದಾತ್ತ ಆಶಯಗಳನ್ನು ಪ್ರತಿಫಲಿಸುತ್ತವೆ. ನಿರ್ದೇಶಕ ತತ್ವಗಳ ವಿಧಿ 38(2) ರಾಜ್ಯವು ಆರ್ಥಿಕ ಅಸಮಾನತೆಯನ್ನು ಕನಿಷ್ಠಗೊಳಿಸುವ ಮತ್ತು ಅಂತಸ್ತು, ಸೌಲಭ್ಯಗಳು ಹಾಗೂ ಅವಕಾಶಗಳಲ್ಲಿನ ಅಸಮಾನತೆಯನ್ನು ನಿವಾರಿಸಬೇಕು ಎಂದು ಹೇಳುತ್ತದೆ. ವಿಧಿ 39(ಸಿ) ಐಶ್ವರ್ಯ ಮತ್ತು ಉತ್ಪಾದನಾ ಮಾರ್ಗಗಳು ಕೇಂದ್ರೀಕೃತಗೊಂಡು ಜನರಿಗೆ ಅನನುಕೂಲ ಆಗಬಾರದು ಎನ್ನುತ್ತದೆ.
ಕಲ್ಯಾಣ ರಾಜ್ಯದ ಪರಿಕಲ್ಪನೆ ಸಡಿಲ
ಸುಪ್ರೀಂ ಕೋರ್ಟ್ ಹಲವು ತೀರ್ಪುಗಳಲ್ಲಿ ಇದನ್ನು ಪುನರುಚ್ಚರಿಸಿದೆ. ಡಿ.ಎಸ್. ನಕರ ಮತ್ತಿತರರು ವಿ/ಎಸ್ ಭಾರತ ಸರಕಾರ ಪ್ರಕರಣ(1983)ದಲ್ಲಿ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ನಿರ್ದಿಷ್ಟ ದಿನಾಂಕದ ಆಧಾರದಲ್ಲಿ ನಿವೃತ್ತರನ್ನು ವಿಭಜಿಸುವುದು ಸಂವಿಧಾನದ ವಿಧಿ 14ರ ಉಲ್ಲಂಘನೆ. ಕಾರ್ಮಿಕರಿಗೆ ತೊಟ್ಟಿಲಿನಿಂದ ಅಂತ್ಯದವರೆಗೆ ಜೀವನಮಟ್ಟ ಹಾಗೂ ಸಾಮಾನ್ಯ ಸುರಕ್ಷೆಯನ್ನು ಒದಗಿಸಬೇಕು ಎಂದು ತೀರ್ಪು ನೀಡಿತ್ತು. ನಿವೃತ್ತಿ ವೇತನಕ್ಕೆ ಸಂಬಂಧಿಸಿದ ಈ ಪ್ರಕರಣದಲ್ಲಿ ಎಲ್ಲ ನಿವೃತ್ತ ನೌಕರರು ಒಂದೇ ವರ್ಗಕ್ಕೆ ಸೇರುತ್ತಾರೆ ಎಂದು ಪ್ರತಿವಾದಿಗಳು ವಾದಿಸಿದ್ದರು. ಏರ್ ಇಂಡಿಯಾ ಸ್ಟ್ಯಾಟ್ಯೂಟರಿ ಕಾರ್ಪೊರೇಷನ್ ವಿ/ಎಸ್ ಯುನೈಟೆಡ್ ಲೇಬರ್ ಯೂನಿಯನ್ ಮತ್ತು ಇತರರು ಪ್ರಕರಣದಲ್ಲಿ ಸಮಾನ ಸಾಮಾಜಿಕ ಶ್ರೇಣಿಯ ಸ್ಥಾಪನೆ, ಸಾಮಾಜಿಕ-ಆರ್ಥಿಕ ನ್ಯಾಯದ ರಕ್ಷಣೆ ಹಾಗೂ ಅಂತಸ್ತು-ಅವಕಾಶಗಳ ಸಮಾನತೆ ಮೂಲಕ ವೈಯಕ್ತಿಕ ಘನತೆಯನ್ನು ಕಾಪಾಡುವುದು ಸಂವಿಧಾನದ ಪ್ರಸ್ತಾವನೆ, ಮೂಲಭೂತ ಹಕ್ಕುಗಳು ಹಾಗೂ ರಾಜ್ಯ ನಿರ್ದೇಶಕ ತತ್ವಗಳ ಸೈದ್ಧಾಂತಿಕ ಗುರಿ ಎಂದು ವ್ಯಾಖ್ಯಾನಿಸಿತ್ತು. ಸಮಂತಾ ವಿ/ಎಸ್ ಆಂಧ್ರಪ್ರದೇಶ ಸರಕಾರ ಮತ್ತು ಇತರರು(1997) ಪ್ರಕರಣದಲ್ಲಿ ಸಮಾಜವಾದ ಎಂದರೆ ಆದಾಯದ ಅಸಮಾನತೆಯನ್ನು ಕಡಿಮೆಗೊಳಿಸುವ ಮತ್ತು ಎಲ್ಲರಿಗೂ ಸಮಾನ ಅವಕಾಶ/ಸೌಲಭ್ಯ ಒದಗಿಸುವ ಮೂಲಕ ಸಮಾನ ಸಾಮಾಜಿಕ ವರ್ಗವನ್ನು ಸೃಷ್ಟಿಸುವುದು ಎಂದು ಹೇಳಿತ್ತು. ಕರ್ನಾಟಕ ರಾಜ್ಯ ವಿ/ಎಸ್ ಶ್ರೀರಂಗನಾಥ ರೆಡ್ಡಿ ಮತ್ತು ಇತರರು ಪ್ರಕರಣದಲ್ಲಿ ನ್ಯಾ.ವಿ.ಆರ್. ಕೃಷ್ಣ ಅಯ್ಯರ್, ರಾಜ್ಯ ನಿರ್ದೇಶಕ ತತ್ವದ ವಿಧಿ 39(ಬಿ) ಹೇಳುವ ‘ಸಾರ್ವಜನಿಕ ಮತ್ತು ಖಾಸಗಿ ಸಂಪನ್ಮೂಲಗಳು ಸಾಮುದಾಯಿಕ ಸಂಪನ್ಮೂಲದಡಿ ಬರುತ್ತವೆ’ ಎಂಬ ವ್ಯಾಖ್ಯಾನವು ಸಂಪನ್ಮೂಲಗಳ ಮರುಹಂಚಿಕೆಯಲ್ಲಿ ರಾಜ್ಯ ಸರಕಾರದ ಬಲವನ್ನು ವರ್ಧಿಸುವ ಮೂಲಕ ಅಸಮಾನತೆಯನ್ನು ತಗ್ಗಿಸಿ, ಸಮಸಮಾಜ ಸೃಷ್ಟಿಸಬೇಕೆಂಬ ಸಾಂವಿಧಾನಿಕ ತತ್ವಕ್ಕೆ ಪೂರಕವಾಗಿದೆ ಎಂದು ಹೇಳಿದ್ದರು. ಆದರೆ, ಈಗ ಸರಕಾರಗಳು ಕೆಲವೇ ಕೆಲವರ ಕೈಯಲ್ಲಿ ಸಂಪತ್ತಿನ ಕ್ರೋಡೀಕರಣಕ್ಕೆ ಅನುಕೂಲ ಆಗುವಂತೆ ಮಾಡುತ್ತಿದ್ದು, ಸಂವಿಧಾನದ ಆಶಯಗಳಿಗೆ ಧಕ್ಕೆ ತರುತ್ತಿವೆ.
ಸಂಪತ್ತಿನ ಕ್ರೋಡೀಕರಣ
ಆರ್ಥಿಕ ಉದಾರೀಕರಣದ ಬಳಿಕ ಸಮಸಮಾಜ-ಕಲ್ಯಾಣ ರಾಜ್ಯದ ಪರಿಕಲ್ಪನೆ ಹಿಂದೆ ಸರಿದಿದೆ. ಸಂಪತ್ತಿನ ಕ್ರೋಡೀಕರಣದಿಂದ ಅಸಮಾನತೆ ತೀವ್ರಗೊಂಡಿದೆ ಮತ್ತು ಐಶ್ವರ್ಯ ಮೇಲ್ಜಾತಿಗಳಲ್ಲಿ ಸಂಚಯವಾಗಿದೆ. ಪ್ಯಾರಿಸ್ ಅರ್ಥಶಾಸ್ತ್ರ ಶಾಲೆಯ ಲೂಕಾಸ್ ಛಾನ್ಸೆಲ್ ಮತ್ತು ಥಾಮಸ್ ಪಿಕೆಟ್ಟಿ ಅವರ ಅಧ್ಯಯನ(ಇಂಡಿಯನ್ ಇನ್ಕಂ ಇನ್ಈಕ್ವಾಲಿಟಿ 1922-2015: ಫ್ರಂ ಬ್ರಿಟಿಷ್ ರಾಜ್ ಟು ಬಿಲಿಯನೇರ್ ರಾಜ್) ಪ್ರಕಾರ, 1930ರಲ್ಲಿ ಒಟ್ಟು ಆದಾಯದಲ್ಲಿ ಶೇ.21ರಷ್ಟು ಪಾಲು ಶೇ.1ರಷ್ಟು ಜನರಲ್ಲಿ ಇದ್ದಿತ್ತು. 1980ರಲ್ಲಿ ಒಟ್ಟು ಆದಾಯದಲ್ಲಿ ಶ್ರೀಮಂತರ ಪಾಲು ಶೇ.6ಕ್ಕೆ ಇಳಿಯಿತು. ಉದಾರೀಕರಣದ ಬಳಿಕ ಶೇ.1ರಷ್ಟು ಶ್ರೀಮಂತರ ಕೈಯಲ್ಲಿ ಶೇ.22ರಷ್ಟು ಆದಾಯ ಕ್ರೋಡೀಕರಣಗೊಂಡಿತು; 2022ರಲ್ಲಿ ಇದು ಶೇ.40.1ಕ್ಕೆ ಹೆಚ್ಚಿತು. ಇನ್ಸ್ಟಿಟ್ಯೂಟ್ ಆಫ್ ಕಾಂಪಿಟಿಟಿವ್ ನೆಸ್ನ ‘ಸ್ಟೇಟ್ ಆಫ್ ಇನ್ಈಕ್ವಾಲಿಟಿ ಇನ್ ಇಂಡಿಯಾ ರಿಪೋರ್ಟ್(2022)’ ಪ್ರಕಾರ, ದೇಶದ ಶೇ.90ರಷ್ಟು ಮಂದಿಯ ಮಾಸಿಕ ಆದಾಯ 25,000 ರೂ.ಗಿಂತ ಕಡಿಮೆ ಇದೆ. ಪ್ಯಾರಿಸ್ ಅರ್ಥಶಾಸ್ತ್ರ ಶಾಲೆಯ ವರ್ಲ್ಡ್ ಇನ್ಈಕ್ವಾಲಿಟಿ ಲ್ಯಾಬ್ ವರದಿ(2024) ಪ್ರಕಾರ, 2022-23ರಲ್ಲಿ ಮೇಲ್ಜಾತಿಯ ಶತಕೋಟಿಪತಿಗಳಲ್ಲಿ ಶೇ.90ರಷ್ಟು ಐಶ್ವರ್ಯ ಸಂಚಯಗೊಂಡಿತ್ತು. ಪರಿಶಿಷ್ಟ ವರ್ಗ ಶೂನ್ಯ, ಇತರ ಹಿಂದುಳಿದ ಜಾತಿ(ಒಬಿಸಿ) ಶೇ.10 ಮತ್ತು ಪರಿಶಿಷ್ಟ ಜಾತಿಗಳ ಶೇ.2.6 ಶತಕೋಟಿಪತಿಗಳು ಇದ್ದರು. 2014-22ರ ಅವಧಿಯಲ್ಲಿ ಒಬಿಸಿ ಶತಕೋಟಿಪತಿಗಳ ಸಂಖ್ಯೆ ಶೇ.20ರಿಂದ ಶೇ.10ಕ್ಕೆ ಕುಸಿದರೆ, ಮೇಲ್ಜಾತಿಗಳ ಧನವಂತರ ಸಂಖ್ಯೆ ಶೇ.80ರಿಂದ ಶೇ.90ಕ್ಕೆ ಹೆಚ್ಚಿತು. ಆಕ್ಸ್ಫ್ಯಾಮ್ ಪ್ರಕಾರ, ದೇಶದಲ್ಲಿ 2000ದಲ್ಲಿ 9 ಶತಕೋಟಿಪತಿಗಳು ಇದ್ದರು; 2023ರಲ್ಲಿ ಸಂಖ್ಯೆ 119ಕ್ಕೆ ಹೆಚ್ಚಿತು. ಆದರೆ, ಜನ ಸಾಮಾನ್ಯರ ಆದಾಯ ಹೆಚ್ಚಲಿಲ್ಲ. ಅಸಮಾನತೆ ಎಷ್ಟು ತೀವ್ರವಾಗಿದೆ ಎಂದರೆ, ದಿನಗೂಲಿ ನೌಕರ ಹಾಗೂ ಕಾರ್ಪೊರೇಟ್ ಸಿಇಒ ನಡುವಿನ ವೇತನ ಸಮಾನತೆಗೆ 931 ವರ್ಷ ಬೇಕಾಗುತ್ತದೆ!
ನವೆಂಬರ್ 26ರಂದು 77ನೇ ಸಂವಿಧಾನ ದಿನಾಚರಣೆ ನಡೆದಿದೆ. ಆದರೆ, ಸಂವಿಧಾನದ ಆಶಯವಾದ ಸಮಸಮಾಜ ನಿರ್ಮಾಣ ಸಾಕಷ್ಟು ದೂರದಲ್ಲಿ ಇದೆ. ಅಧಿಕಾರಸ್ಥರ ಶೋಷಣೆ, ಪ್ರಭುತ್ವದ ನಿರಂಕುಶ ಆಡಳಿತ ಮತ್ತು ದಬ್ಬಾಳಿಕೆಯನ್ನು ತಡೆಯಲು ಸಂವಿಧಾನ ಬೇಕು ಎಂದು ಬಾಬಾ ಸಾಹೇಬರು ಹೇಳಿದ್ದರು. ಸಂವಿಧಾನ ಎಷ್ಟೇ ಉದಾತ್ತವಾಗಿದ್ದರೂ ಆಡಳಿತ ನಡೆಸುವವರು ಅಧಮರಾದರೆ ಹೆಚ್ಚೇನೂ ಪ್ರಯೋಜನ ಆಗುವುದಿಲ್ಲ ಎಂಬ ಅವರ ಮಾತು ನಮಗೆ ಎಚ್ಚರಿಕೆ ಗಂಟೆ ಆಗಬೇಕು. ಸಂವಿಧಾನದ ಮೇಲೆ ನಿರಂತರ ಹಲ್ಲೆ ನಡೆಸುತ್ತಿರುವ ಹಿಂದಿ, ಹಿಂದೂ ಮತ್ತು ಹಿಂದುಸ್ತಾನದ ಅಮಲು ಏರಿಸಿಕೊಂಡಿರುವ ಬಲಪಂಥೀಯರು ಹಾಗೂ ಇನ್ನಿತರ ಸಂವಿಧಾನ ವಿರೋಧಿಗಳ ಬಗ್ಗೆ ಜಾಗೃತಿ ಮೂಡಬೇಕಿದೆ. ಸಂಘಟನೆ ಮತ್ತು ಹೋರಾಟ ಮೂಲಕ ನಮ್ಮೆಲ್ಲರನ್ನೂ ರಕ್ಷಿಸಿರುವ ಸಂವಿಧಾನದ ಋಣಸಂದಾಯ ಮಾಡಬೇಕಿದೆ.
(ಅಂಕಣಕಾರರು ಪತ್ರಕರ್ತ ಮತ್ತು ಅನುವಾದಕ
www.ruthamedia.com)