ವಿದೇಶಿ ದೇಣಿಗೆ ನಿಯಂತ್ರಣ ಕಾನೂನು 2026: ಎನ್‌ಜಿಒಗಳಿಗೆ ಅಂಕುಶ
ಅಲ್ಪಸಂಖ್ಯಾತರ ಸಂಸ್ಥೆಗಳು, ನಾಗರಿಕ ಹಕ್ಕು ಸಂಘಟನೆಗಳು, ಪರಿಸರ ಸಂಘಟನೆಗಳು ಮತ್ತು ಸಂಶೋಧನಾ ಕ್ಷೇತ್ರದ ಮೇಲೆ ಈ ಮಸೂದೆ ವಿಪರಿಣಾಮ ಬೀರಲಿದೆ. ಭಿನ್ನಾಭಿಪ್ರಾಯ ಹೊಂದಿರುವ ಸಂಸ್ಥೆಗಳನ್ನು ಗುರಿಯಾಗಿಸಿಕೊಳ್ಳುವುದರಿಂದ, ನಾಗರಿಕ ಸಮಾಜದ ಸಂಸ್ಥೆ/ಸಂಘಟನೆಗಳ ಕಾರ್ಯನಿರ್ವಹಣೆ ಮೇಲೆ ಸದಾ ಕಾಲ ಅಧಿಕಾರಶಾಹಿಯ ಕರಿ ನೆರಳು ಇರುತ್ತದೆ.
ಇದು ವಿದೇಶಿ ದೇಣಿಗೆ ನಿಯಂತ್ರಣ ಮಸೂದೆಯಲ್ಲ; ಬದಲಿಗೆ ಭಿನ್ನ ಧ್ವನಿ/ಸಿದ್ಧಾಂತ/ಆಶಯ/ಕಾರ್ಯನೀತಿ ಹೊಂದಿರುವ ಸಂಸ್ಥೆಗಳ ನಿಯಂತ್ರಣ ಮಸೂದೆ.
ವಿದೇಶಿ ದೇಣಿಗೆ ನಿಯಂತ್ರಣ ಮಸೂದೆ 2026 ಅನುದಾನ ಪಡೆಯಲು ಪಾಲಿಸಬೇಕಾದ ನಿಯಮಗಳನ್ನು ಬಿಗಿಗೊಳಿಸಿದೆ. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ(ಎಂಎಚ್‌ಎ)ದ ಹೊಸ ನಿಯಮಗಳ ಪ್ರಕಾರ, ದೇಣಿಗೆಯನ್ನು 16 ಧಾರ್ಮಿಕ, 22 ಶೈಕ್ಷಣಿಕ, 19 ಆರ್ಥಿಕ, 18 ಸಾಂಸ್ಕೃತಿಕ ಹಾಗೂ ಸಾಮಾಜಿಕ ಉದ್ದೇಶದ 30 ಸೇರಿದಂತೆ 105 ಚಟುವಟಿಕೆಗಳಿಗೆ ಮಾತ್ರ ಬಳಸಬೇಕು. ನಿಯಮಗಳನ್ನು ಜೂನ್ 23, 2026ರ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.
ಕೇಂದ್ರ ಸರಕಾರವು ಮಾರ್ಚ್ 25, 2026ರಂದು ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಿತು. ಬಲವಂತದ ಮತಾಂತರ ಹಾಗೂ ಸಂವಿಧಾನದ ಆಶಯ, ಕಾನೂನು ಮತ್ತು ದೇಶದ ಹಿತಾಸಕ್ತಿಗೆ ವಿರುದ್ಧವಾದ ಚಟುವಟಿಕೆಗಳಿಗೆ ವಿದೇಶಿ ಹಣ ಬಳಸುವ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಈ ತಿದ್ದುಪಡಿಗಳು ಸರಕಾರಕ್ಕೆ ಅಧಿಕಾರ ನೀಡಲಿವೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಹೇಳಿದರು. 2010ರ ಕಾಯ್ದೆಯಲ್ಲಿನ ಕಾರ್ಯಾಚರಣೆ ಮತ್ತು ಕಾನೂನು ಕಂದರವನ್ನು, ವಿಶೇಷವಾಗಿ ಎನ್‌ಜಿಒಗಳ ನೋಂದಣಿ ರದ್ದು ಅಥವಾ ಅವಧಿ ಮುಗಿದ ಸಂದರ್ಭಗಳಲ್ಲಿ, ಸರಿ ಪಡಿಸಲು ತಿದ್ದುಪಡಿ ಮಸೂದೆ ಪ್ರಯತ್ನಿಸುತ್ತದೆ ಎಂದು ಸರಕಾರ ಹೇಳಿಕೊಂಡಿದೆ. ಪಂಚರಾಜ್ಯಗಳ ವಿಧಾನಸಭೆ ಚುನಾವಣೆಗೆ ಮುನ್ನ ತಿದ್ದುಪಡಿ ಮಸೂದೆಯನ್ನು ಸಂಸತ್‌ನಲ್ಲಿ ಮಂಡಿಸಲಾಗಿತ್ತು. ಆದರೆ, ಅಲ್ಪಸಂಖ್ಯಾತ ಸಮುದಾಯಗಳ ವಿರೋಧದಿಂದ ಕೈಬಿಡಲಾಗಿತ್ತು. ಈಗ ಆ ಮಸೂದೆಯಲ್ಲಿದ್ದ ಅಂಶಗಳನ್ನೇ ಜಾರಿಗೊಳಿಸಲು ಸರಕಾರ ಮುಂದಾಗಿದೆ. ಹಿಂಬಾಗಿಲು ಮೂಲಕ ಮಸೂದೆಗಳನ್ನು ಅಂಗೀಕರಿಸುವುದು ಎನ್‌ಡಿಎ ಸರಕಾರದ ಚಾಳಿ ಆಗಿಬಿಟ್ಟಿದೆ.
ಕಾಯ್ದೆಗೆ ಹಲವು ತಿದ್ದುಪಡಿ
ಯುಪಿಎ ಸರಕಾರ ಜಾರಿಗೆ ತಂದ 1976ರ ‘ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ’ಯನ್ನು 2010ರಲ್ಲಿ ರದ್ದುಪಡಿಸಲಾಯಿತು. ವಿದೇಶಿ ಅನುದಾನಕ್ಕೆ ಸಂಬಂಧಿಸಿದ ಕಾನೂನಿನ ಕ್ರೋಡೀಕರಣ ಹಾಗೂ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ತರುವ ಚಟುವಟಿಕೆಗಳಿಗೆ ವಿದೇಶಿ ಹಣ ಸ್ವೀಕರಿಸುವುದು ಮತ್ತು ಬಳಸುವುದನ್ನು ನಿಷೇಧಿಸುವುದು ಇದರ ಉದ್ದೇಶವಾಗಿತ್ತು. 2010ರ ಕಾಯ್ದೆಯು ಮೇ 1,2011ರಂದು ಜಾರಿಗೊಂಡಿತು. 2016, 2018 ಮತ್ತು 2020ರಲ್ಲಿ ತಿದ್ದುಪಡಿ ತರಲಾಯಿತು. ಸರಕಾರೇತರ ಇಲ್ಲವೇ ಸ್ವಯಂಸೇವಾ ಸಂಸ್ಥೆ(ಎನ್‌ಜಿಒ)ಗಳ ನೋಂದಣಿ ಅವಧಿ 5 ವರ್ಷ. 2015ರ ಬಳಿಕ 18,000ಕ್ಕೂ ಅಧಿಕ ಎನ್‌ಜಿಒಗಳ ಪರವಾನಿಗೆ ವಜಾಗೊಂಡಿದೆ. ಜೂನ್ 22, 2026ರ ಅಂಕಿಅಂಶದ ಪ್ರಕಾರ, ದೇಶದಲ್ಲಿ ವಿದೇಶಿ ಅನುದಾನ ಪಡೆಯಲು ಪರವಾನಿಗೆ ಇರುವ ಎನ್‌ಜಿಒಗಳ ಸಂಖ್ಯೆ 14,456.
ಕಠಿಣ ಶರತ್ತುಗಳು
ಎಫ್‌ಸಿಆರ್‌ಎ ಜಾರಿಗೆ ಬಂದಾಗ ದೇಶದಲ್ಲಿ ತುರ್ತು ಪರಿಸ್ಥಿತಿ ಇತ್ತು; ಪ್ರಧಾನಿ ಇಂದಿರಾ ಗಾಂಧಿ ಅವರು ಕಾನೂನನ್ನು ಟೀಕಿಸುವವರ ಬಾಯಿ ಮುಚ್ಚಿಸಲು ಬಳಸುತ್ತಿದ್ದಾರೆ ಎಂದು ದೂರಲಾಗಿತ್ತು. 2010ರ ಕಾಯ್ದೆ ಪ್ರಕಾರ, ಎಫ್‌ಸಿಆರ್‌ಎ ನೋಂದಣಿ ಇರುವ ಸಂಸ್ಥೆಗಳನ್ನು ಹೊರತುಪಡಿಸಿ, ನಿಗದಿತ ಬ್ಯಾಂಕ್ ಖಾತೆಗೆ ಬಂದ ಹಣವನ್ನು ಬೇರೆ ಯಾವುದೇ ಸಂಸ್ಥೆಗೆ ವರ್ಗಾಯಿಸಲು ಅಥವಾ ಉಪ ಅನುದಾನ (ಸಬ್ ಗ್ರಾಂಟ್ಸ್) ನೀಡಲು ಅವಕಾಶವಿರಲಿಲ್ಲ. 2015ರಲ್ಲಿ ಎನ್‌ಡಿಎ ಸರಕಾರ ವಿದೇಶಿ ದೇಣಿಗೆಯ ಸ್ವೀಕಾರವು ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಲಿಖಿತ ಭರವಸೆ ನೀಡುವಂತೆ ಎನ್‌ಜಿಒಗಳಿಗೆ ಸೂಚಿಸಿತು. 2020ರಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಎಫ್‌ಸಿಆರ್‌ಎ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲಾಯಿತು. ತಿದ್ದುಪಡಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದರೂ, ನ್ಯಾಯಾಲಯ ತಿದ್ದುಪಡಿಯ ಬಹುತೇಕ ಅಂಶಗಳನ್ನು ಎತ್ತಿಹಿಡಿಯಿತು. ನಿಯಮಗಳು ಇನ್ನಷ್ಟು ಕಠಿಣಗೊಂಡವು; ಎನ್‌ಜಿಒಗಳು ಸಿಬ್ಬಂದಿ ಮತ್ತು ಕಚೇರಿ ನಿರ್ವಹಣೆಯಂತಹ ಆಡಳಿತಾತ್ಮಕ ವೆಚ್ಚಗಳಿಗೆ ಬಳಸಬಹುದಾದ ಅನುದಾನದ ಪಾಲು ಶೇ.50ರಿಂದ ಶೇ.20ಕ್ಕೆ ಇಳಿಯಿತು. ಪರವಾನಿಗೆ ಅಮಾನತು ಅವಧಿ 180 ದಿನಗಳವರೆಗೆ ವಿಸ್ತರಣೆ ಹಾಗೂ ವಿದೇಶಿ ದೇಣಿಗೆ ಪಡೆಯುವ ಸಂಘಟನೆಗಳು ‘ಸಕ್ರಿಯ ಅಥವಾ ಪಕ್ಷ ರಾಜಕೀಯ’ದಲ್ಲಿ ಭಾಗವಹಿಸಿದರೆ, ಅವುಗಳನ್ನು ರಾಜಕೀಯ ಸಂಘಟನೆಗಳೆಂದು ಪರಿಗಣಿಸಲಾಗುತ್ತದೆ ಎಂಬ ನಿರ್ಬಂಧ ಹೇರಲಾಯಿತು. ವಿದೇಶಿ ದೇಣಿಗೆಯನ್ನು ಬೇರೆ ಎನ್‌ಜಿಒಗಳಿಗೆ ಉಪ ಅನುದಾನ ನೀಡಲು ನಿಷೇಧ ವಿಧಿಸಿದ್ದರಿಂದ, ಪರವಾನಿಗೆ ಇದ್ದರೂ ಆರ್ಥಿಕ ಸಾಮರ್ಥ್ಯವಿಲ್ಲದ ನೂರಾರು ತಳ ಮಟ್ಟದ ಸಂಘಟನೆಗಳು ಬಾಗಿಲು ಮುಚ್ಚಿದವು. ಜುಲೈ 2022ರಲ್ಲಿ ಎನ್‌ಜಿಒಗಳ ಮೇಲಿನ ‘ನಿಯಮ ಪಾಲನೆಯ ಹೊರೆ’ ಕಡಿಮೆ ಮಾಡುವ ಉದ್ದೇಶದಿಂದ ಕೆಲವು ಬದಲಾವಣೆ ಗಳನ್ನು ತರಲಾಯಿತು; ಒಂದು ಅಥವಾ ಅದಕ್ಕಿಂತ ಹೆಚ್ಚು ‘ಬ್ಯಾಂಕ್ ಖಾತೆ’ ಇದ್ದಲ್ಲಿ ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಲು ನೀಡಿದ್ದ ಕಾಲಮಿತಿಯನ್ನು 15 ದಿನಗಳಿಂದ 45 ದಿನಗಳಿಗೆ ವಿಸ್ತರಣೆ, ಶಾಸಕರು, ಸರಕಾರಿ ನೌಕರರು, ನ್ಯಾಯಾಧೀಶರು ಮತ್ತು ಮಾಧ್ಯಮ ಸಿಬ್ಬಂದಿ ವಿದೇಶದಲ್ಲಿರುವ ತಮ್ಮ ಕುಟುಂಬ ಅಥವಾ ಸಂಬಂಧಿಕರಿಂದ ಗೃಹ ಸಚಿವಾಲಯಕ್ಕೆ ಮಾಹಿತಿ ನೀಡದೆ ಪಡೆಯಬಹುದಾದ ಹಣದ ಮಿತಿ 1 ಲಕ್ಷ ರೂ.ನಿಂದ 10 ಲಕ್ಷ ರೂ.ಗೆ ಹೆಚ್ಚಳ, 10 ಲಕ್ಷ ರೂ.ಗೂ ಅಧಿಕ ಮೊತ್ತ ಸ್ವೀಕರಿಸಿದ ಮಾಹಿತಿಯನ್ನು 90 ದಿನಗಳೊಳಗೆ ಸರಕಾರಕ್ಕೆ ನೀಡದಿದ್ದಲ್ಲಿ ಒಟ್ಟು ಮೊತ್ತದ ಶೇ.5 ರಷ್ಟು ದಂಡ ವಿಧಿಸಲು ಹಾಗೂ ಕಾನೂನಿನ ಉಲ್ಲಂಘನೆಯನ್ನು ರಾಜಿ ಮಾಡಿಕೊಳ್ಳಬಹುದಾದ ಅಪರಾಧವನ್ನಾಗಿ ಪರಿವರ್ತಿಸಲಾಯಿತು.
ಎನ್‌ಜಿಒಗಳ ಕಾರ್ಯನೀತಿ ಬಿಜೆಪಿ-ಸಂಘ ಪರಿವಾರದ ವಿರುದ್ಧ ಇದೆ; ಅವು ಮತಾಂತರದಲ್ಲಿ ತೊಡಗಿವೆ/ಬೆಂಬಲಿಸುತ್ತಿವೆ ಎನ್ನುವ ಅಭಿಪ್ರಾಯ ನಿಯಮ ಕಠಿಣಗೊಳಿಸಲು ಮುಖ್ಯ ಕಾರಣ. ಅಲ್ಪಸಂಖ್ಯಾತರ ಸಂಸ್ಥೆಗಳು, ನಾಗರಿಕ-ಮಾನವ ಹಕ್ಕು ಸಂಘಟನೆಗಳು, ಪರಿಸರ ಸಂಘಟನೆಗಳು ಮತ್ತು ಸಂಶೋಧನಾ ಕ್ಷೇತ್ರ ಈ ನಿಯಮಕ್ಕೆ ತುತ್ತಾಗಲಿವೆ. ಭಿನ್ನಾಭಿಪ್ರಾಯ ಹಾಗೂ ಸರಕಾರದ ಕಾರ್ಯ ನೀತಿಯನ್ನು ಟೀಕಿಸುವ ಸಂಸ್ಥೆಗಳನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂಬ ದೂರು ವ್ಯಾಪಕವಾಗಿದೆ.
* ಈ ಹಿಂದೆ ಸಾಮಾನ್ಯ ಪರವಾನಿಗೆ ನೀಡಲಾಗುತ್ತಿತ್ತು; ಅಂದರೆ, ನೋಂದಣಿ ಬಳಿಕ ಯಾವುದೇ ಕ್ಷೇತ್ರ ಇಲ್ಲವೇ ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿ ಕಾರ್ಯನಿರ್ವಹಿಸಬಹುದಿತ್ತು. ಆದರೆ, ಈಗ ಕಾರ್ಯ ನಿರ್ವಹಿಸುವ ಪ್ರತಿ ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿ ಹಾಗೂ ಪ್ರತಿಯೊಂದು ನಿಶ್ಚಿತ ಉದ್ದೇಶಕ್ಕೆ ಪ್ರತ್ಯೇಕ ನೋಂದಣಿ ಮಾಡಿಸಿಕೊಳ್ಳಬೇಕು; ಎನ್‌ಜಿಒಗಳು ತಮ್ಮ ನಿಶ್ಚಿತ ಚಟುವಟಿಕೆ ಹಾಗೂ ಕಾರ್ಯ ಕ್ಷೇತ್ರದ ಭೌಗೋಳಿಕ ವ್ಯಾಪ್ತಿಯನ್ನು ಬಹಿರಂಗಗೊಳಿಸಬೇಕು. ಇದರಿಂದ ಹಲವು ಉದ್ದೇಶ/ರಾಜ್ಯ-ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸುವ ಎನ್‌ಜಿಒಗಳು ಅಧಿಕ ನೋಂದಣಿ ಶುಲ್ಕ ತೆರಬೇಕಾಗುತ್ತದೆ.
* ಸತತ 2 ವರ್ಷ ವಾರ್ಷಿಕ 10 ಲಕ್ಷ ರೂ. ವೆಚ್ಚ ಮಾಡಿರಬೇಕು.
* 5 ವರ್ಗಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕಿದೆ. ನೋಂದಣಿ ಅರ್ಜಿ ಮತ್ತು ಮತ್ತು ಆಡಿಟ್ ವರದಿ ಸಲ್ಲಿಸುವಾಗ ತಮ್ಮ ಚಟುವಟಿಕೆ, ಕಾರ್ಯಕ್ಷೇತ್ರದ ಭೌಗೋಳಿಕ ವ್ಯಾಪ್ತಿ, ಜಾಲತಾಣ, ಸಾಮಾಜಿಕ ಮಾಧ್ಯಮ ಖಾತೆಗಳ ವಿವರ ಹಾಗೂ ಸಂಸ್ಥೆ/ಮುಖ್ಯಸ್ಥರು ಯಾವುದಾದರೂ ಪುಸ್ತಕ, ಲೇಖನ ಇಲ್ಲವೇ ನಿಯತಕಾಲಿಕೆಯನ್ನು ಪ್ರಕಟಿಸಿದ್ದಲ್ಲಿ ಅದರ ಸಂಕ್ಷಿಪ್ತ ವಿವರ ಹಾಗೂ ಬಿಡುಗಡೆ ದಿನಾಂಕದ ಬಗ್ಗೆ ಮಾಹಿತಿ ನೀಡಬೇಕು.
* ಅಧಿಕ ಆಡಳಿತಾತ್ಮಕ ವೆಚ್ಚ, ಊಹಾತ್ಮಕ ಹೂಡಿಕೆಗಳು, ಹಣದ ದುರುಪಯೋಗ, ವಿದೇಶಿ ದೇಣಿಗೆಯ ಅನಧಿಕೃತ ಸ್ವೀಕೃತಿ/ಬಳಕೆ ಮತ್ತು ಮಂಜೂರಾಗದ ಉದ್ದೇಶ/ರಾಜ್ಯ-ಕೇಂದ್ರಾಡಳಿತ ಪ್ರದೇಶ ದಲ್ಲಿ ಅನುದಾನ ಬಳಕೆಗೆ 1 ಲಕ್ಷ ರೂ. ಇಲ್ಲವೇ ದುರ್ಬಳಕೆ ಆದ ಹಣದ ಶೇ.30 ದಂಡ ನೀಡಬೇಕಾಗುತ್ತದೆ.
* ವಿದೇಶಿಯರು ಮುಖ್ಯ ಕಾರ್ಯನಿರ್ವಾಹಕ(ಸಿಇಒ) ಆಗಿರುವ ಸಂಸ್ಥೆಗಳ ಮನವಿಯನ್ನು ಪರಿಗಣಿಸಲಾಗುವುದಿಲ್ಲ. ವಿದೇಶಿ ದೇಣಿಗೆ ಪಡೆಯುವ ಎಲ್ಲ ಸಂಸ್ಥೆಗಳು ಗೃಹ ಸಚಿವಾಲಯದಿಂದ ಪರವಾನಿಗೆ-ನೋಂದಣಿ ಅಥವಾ ಪೂರ್ವಾನುಮತಿ ಪಡೆದಿರಬೇಕು.
* ಎನ್‌ಜಿಒಗಳ ಮುಖ್ಯಸ್ಥ ಎಂಬ ಪದದ ವ್ಯಾಖ್ಯಾನವನ್ನು ವಿಸ್ತರಿಸಿದ್ದು, ಟ್ರಸ್ಟಿಗಳು, ಪಾಲುದಾರರು, ಹಿಂದೂ ಅವಿಭಜಿತ ಕುಟುಂಬದ ಕರ್ತ, ಆಡಳಿತ ಮಂಡಳಿ ಸದಸ್ಯರು ಅಥವಾ ಸಂಸ್ಥೆಯನ್ನು ನಿಯಂತ್ರಿಸುವ ಇಲ್ಲವೇ ನಿರ್ವಹಿಸುವ ಎಲ್ಲರೂ ಈ ವರ್ಗಕ್ಕೆ ಸೇರಿರುತ್ತಾರೆ.
* ಶೈಕ್ಷಣಿಕ ಉದ್ದೇಶಗಳಲ್ಲಿ 22 ಚಟುವಟಿಕೆಗಳಿದ್ದು, ‘ರಾಜಕೀಯೇತರ ಸ್ವರೂಪದ್ದಾಗಿರಬೇಕು’ ಎಂಬ ಶರತ್ತು ಇದೆ. ಸಾಂವಿಧಾನಿಕ ಹಕ್ಕು, ಮೂಲಭೂತ ಕರ್ತವ್ಯ ಮತ್ತು ನಾಗರಿಕ ಜವಾಬ್ದಾರಿ ಕುರಿತ ಜಾಗೃತಿ ಕಾರ್ಯಕ್ರಮಗಳಿಗೆ ಅವಕಾಶದ ಸಾಧ್ಯತೆ ಕಡಿಮೆ. ಸಾಂಸ್ಕೃತಿಕ ಉದ್ದೇಶಗಳಲ್ಲಿ 18 ಚಟುವಟಿಕೆಗಳಿದ್ದು, ‘ಭಾರತೀಯ ಸಂಪ್ರದಾಯದಿಂದ ಪ್ರೇರಿತವಾದ ಸಮಕಾಲೀನ ಕಲೆಯ ಉತ್ತೇಜನ’ ಅದರಲ್ಲಿ ಸೇರಿದೆ. ಮಸೂದೆಯ ಕರಡು ಎಲ್ಲಿ ಸಿದ್ಧವಾಗಿದೆ ಎಂಬುದನ್ನು ಸುಲಭವಾಗಿ ಊಹಿಸಬಹುದು!
* ಒಂದುವೇಳೆ ಎನ್‌ಜಿಒ ಪರವಾನಿಗೆ ಕಳೆದುಕೊಂಡರೆ, ಅದರ ಖಾತೆಯಲ್ಲಿನ ವಿದೇಶಿ ಅನುದಾನ ಮತ್ತು ಸ್ವತ್ತುಗಳು ತಾತ್ಕಾಲಿಕವಾಗಿ ಸರಕಾರ ನೇಮಿಸಿದ ‘ನಿಯೋಜಿತ ಪ್ರಾಧಿಕಾರ’ದಲ್ಲಿ ಇರುತ್ತವೆ. ಸಂಸ್ಥೆ ಮರುಪರವಾನಿಗೆ ಪಡೆಯಲು ವಿಫಲವಾದರೆ, ಈ ಸ್ವತ್ತುಗಳನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಬಳಸಲು, ವರ್ಗಾಯಿಸಲು ಅಥವಾ ವಿಲೇವಾರಿ ಮಾಡಲು ಸರಕಾರಕ್ಕೆ ಅಧಿಕಾರ ಇರಲಿದೆ. ನೋಂದಣಿ ಅಮಾನತುಗೊಂಡ ಸಮಯದಲ್ಲಿ ಕೇಂದ್ರ ಸರಕಾರದ ಪೂರ್ವಾನುಮತಿ ಇಲ್ಲದೆ ವಿದೇಶಿ ನಿಧಿಯಿಂದ ಸೃಷ್ಟಿಯಾದ ಸ್ವತ್ತುಗಳನ್ನು ವರ್ಗಾಯಿಸಲು, ಮಾರಲು ಅಥವಾ ಬೇರೆ ರೀತಿ ವ್ಯವಹರಿಸಲು ಎನ್‌ಜಿಒಗಳಿಗೆ ಅವಕಾಶ ಇರುವುದಿಲ್ಲ.
ಯಾರು ವಿದೇಶಿ ದೇಣಿಗೆ ಅರ್ಹರು?
ಕಂಪೆನಿಗಳ ಕಾಯ್ದೆ 2013ರಡಿ ನೋಂದಾಯಿಸಲ್ಪಟ್ಟ ಯಾವುದೇ ವ್ಯಕ್ತಿ, ಸಂಘ ಅಥವಾ ಕಂಪೆನಿ ‘ಸಾಂಸ್ಕೃತಿಕ, ಆರ್ಥಿಕ, ಶೈಕ್ಷಣಿಕ, ಧಾರ್ಮಿಕ ಅಥವಾ ಸಾಮಾಜಿಕ ಕಾರ್ಯಕ್ರಮ’ಗಳಿಗೆ ವಿದೇಶಿ ದೇಣಿಗೆ ಪಡೆಯಬಹುದು. ಶಾಸಕರು-ಸಂಸದರು, ರಾಜಕೀಯ ಪಕ್ಷಗಳು, ಸಾರ್ವಜನಿಕ ಸೇವೆಯಲ್ಲಿ ಇರುವವರು, ನ್ಯಾಯಾಧೀಶರು, ಮಾಧ್ಯಮ ಸಂಸ್ಥೆಗಳ ಮಾಲಕರು, ಸಂಪಾದಕರು ಅಥವಾ ವರದಿಗಾರರು ದೇಣಿಗೆ ಪಡೆಯುವುದನ್ನು ನಿಷೇಧಿಸಲಾಗಿದೆ. ಕೋಮು ಸಾಮರಸ್ಯಕ್ಕೆ ಭಂಗ ಅಥವಾ ಬಲವಂತದ ಮತಾಂತರವನ್ನು ಬೆಂಬಲಿಸಿದ್ದಕ್ಕೆ ಶಿಕ್ಷೆಗೆ ಒಳಗಾಗಿರಬಾರದು. ದೇಣಿಗೆಯ ವೈಯಕ್ತಿಕ ಬಳಕೆ, ದುರುಪಯೋಗ ಕೂಡದು ಮತ್ತು ದೇಶದ್ರೋಹ ಕೃತ್ಯಗಳಲ್ಲಿ ತೊಡಗಬಾರದು. ದೇಣಿಗೆಯಿಂದ ದೇಶದ ಸಾರ್ವಭೌಮತ್ವಕ್ಕೆ ಹಾನಿ ಅಥವಾ ಶಾಸಕಾಂಗದ ಕಾರ್ಯನಿರ್ವಹಣೆ ಮೇಲೆ ಪ್ರತಿಕೂಲ ಪರಿಣಾಮ ಆಗಬಾರದು ಹಾಗೂ ಅಪರಾಧಕ್ಕೆ ಪ್ರಚೋದನೆ ನೀಡಬಾರದು. ಗುಂಪುಗಳ ನಡುವೆ ಸೌಹಾರ್ದ ಕೆಡಿಸಬಾರದು.
ಸಂಖ್ಯೆ ಕುಸಿತ
ಎನ್‌ಡಿಎ ಸರಕಾರ ಎನ್‌ಜಿಒಗಳ ಮೇಲೆ ಕಣ್ಗಾವಲು ಬಿಗಿಗೊಳಿಸಿದ ಬಳಿಕ ದೇಶದಲ್ಲಿ ಸಾವಿರಾರು ಎನ್‌ಜಿಒಗಳ ಪರವಾನಿಗೆ ರದ್ದುಗೊಂಡಿದೆ. ಇದಕ್ಕೆ ಆ ಸಂಸ್ಥೆಗಳಲ್ಲಿ ನಡೆದ ಅಕ್ರಮಗಳೇ ಕಾರಣ ಎಂದು ಸರಕಾರ ಸಮರ್ಥಿಸಿಕೊಂಡಿದೆ. ಆದರೆ, ಸರಕಾರ ಟೀಕೆಗಳನ್ನು ಕಾನೂನು ಬಳಸಿ ಹತ್ತಿಕ್ಕುತ್ತಿದೆ ಎಂದು ಆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರು ದೂರುತ್ತಾರೆ. 2015ರಲ್ಲಿ ರಾಜ್ಯಸಭೆಯಲ್ಲಿ ಸಚಿವ ಕಿರಣ್ ರಿಜಿಜು, ಸತತ 3 ವರ್ಷ ವಾರ್ಷಿಕ ವರದಿ ಸಲ್ಲಿಸದ 10,000ಕ್ಕೂ ಹೆಚ್ಚು ಎನ್‌ಜಿಒಗಳ ನೋಂದಣಿಗಳನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದ್ದರು. ಸಚಿವ ನಿತ್ಯಾನಂದ ರಾಯ್ ಅವರು ಮಾರ್ಚ್ 2022ರಲ್ಲಿ ಲೋಕಸಭೆಯಲ್ಲಿ ‘‘2019 ಮತ್ತು 2021ರ ಅವಧಿಯಲ್ಲಿ ಸರಕಾರ 1,811 ಸಂಸ್ಥೆಗಳ ಪ್ರಮಾಣಪತ್ರಗಳನ್ನು ರದ್ದುಗೊಳಿಸಿದೆ’’ ಎಂದು ಹೇಳಿದ್ದರು. 2016-17 ಮತ್ತು 2021-22ರ ನಡುವೆ 6,600ಕ್ಕೂ ಎನ್‌ಜಿಒಗಳು ಎಫ್‌ಸಿಆರ್‌ಎ ಪರವಾನಿಗೆ ಕಳೆದುಕೊಂಡಿವೆ ಎಂದು ಡಿಸೆಂಬರ್ 2022ರಲ್ಲಿ ಸಂಸತ್‌ಗೆ ಸರಕಾರ ತಿಳಿಸಿತ್ತು. 2023ರಲ್ಲಿ ಸಂಸತ್‌ಗೆ ನೀಡಿದ ಮಾಹಿತಿ ಪ್ರಕಾರ, 2019-20 ಮತ್ತು 2021-22ರ ಅವಧಿಯಲ್ಲಿ 13,520 ನೋಂದಾಯಿತ ಎನ್‌ಜಿಒ ಸಂಸ್ಥೆಗಳು 55,741.5 ಕೋಟಿ ರೂ. ವಿದೇಶಿ ದೇಣಿಗೆ ಸ್ವೀಕರಿಸಿದ್ದವು. 2011ರವರೆಗೆ ದೇಶದಲ್ಲಿ ಸುಮಾರು 40,000 ಎನ್‌ಜಿಒಗಳು ನೋಂದಾಯಿಸಲ್ಪಟ್ಟಿದ್ದವು. ವ್ಯಂಗ್ಯವೆಂದರೆ, ಕಳೆದ 10 ವರ್ಷದಲ್ಲಿ ಯಾವುದೇ ನೋಂದಣಿ ಇಲ್ಲದ ಆರೆಸ್ಸೆಸ್ ಜೊತೆ ಸಂಬಂಧ ಹೊಂದಿರುವ 20 ಸಂಸ್ಥೆಗಳಿಗೆ ಒಎನ್‌ಜಿಸಿ(ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್) ಒಂದೇ 668 ಕೋಟಿ ರೂ. ನೀಡಿದೆ! ಇದನ್ನು ಯಾವ ಕಾಯ್ದೆಯೂ ತಡೆದಿಲ್ಲ.
ವಿದೇಶಿ ನಿಧಿ ಸ್ವೀಕೃತಿ ಮತ್ತು ಬಳಕೆಗೆ ಸಂಬಂಧಿಸಿದಂತೆ ಹೊಣೆಗಾರಿಕೆಯನ್ನು ಬಲಪಡಿಸಲು ನಿಯಮಗಳಲ್ಲಿ ಬದಲಾವಣೆ ಅಗತ್ಯವಿತ್ತು; ನೋಂದಾಯಿತ ಎನ್‌ಜಿಒಗಳಲ್ಲಿ ಕೆಲವೇ ಕೆಲವು ಮೂಲಭೂತ ಕಾನೂನುಬದ್ಧ ಅವಶ್ಯಕತೆಗಳನ್ನು ಪೂರೈಸಿದ್ದವು ಅಥವಾ ನಿಧಿಯನ್ನು ಸರಿಯಾಗಿ ಬಳಸಿದ್ದವು ಎಂದು ಸರಕಾರ ಸಮರ್ಥಿಸಿ ಕೊಂಡಿತು. 2020ರಲ್ಲಿ ಆ್ಯಮ್ನೆಸ್ಟಿ ಇಂಡಿಯಾ ತನ್ನ ಭಾರತೀಯ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು. ಕಾರ್ಯನೀತಿ ಸಂಶೋಧನೆ ಕ್ಷೇತ್ರದಲ್ಲಿ ಸೆಂಟರ್ ಫಾರ್ ಪಾಲಿಸಿ ರಿಸರ್ಚ್, ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್, ಗ್ರೀನ್‌ಪೀಸ್ ಇಂಡಿಯಾ; ಅಕಾಡಮಿಕ್ ಕ್ಷೇತ್ರದಲ್ಲಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ, ಜವಾಹರಲಾಲ್ ನೆಹರೂ ವಿವಿ; ಆರೋಗ್ಯ ರಕ್ಷಣೆ ಮತ್ತು ಮಾನವಿಕ ನೆರವು ಕ್ಷೇತ್ರದಲ್ಲಿ ಆಕ್ಸ್‌ಫಾಮ್ ಇಂಡಿಯಾ, ವಾಲಂಟರಿ ಹೆಲ್ತ್ ಅಸೋಷಿಯೇಶನ್ ಆಫ್ ಇಂಡಿಯಾ, ವರ್ಲ್ಡ್ ವಿಷನ್ ಇಂಡಿಯಾ, ಇಂಡಿಯನ್ ಮೆಡಿಕಲ್ ಅಸೋಷಿಯೇಶನ್ ಮತ್ತು ಲೆಪ್ರಸಿ ಫೌಂಡೇಷನ್ ಸೇರಿದಂತೆ 5,900 ಅಧಿಕ ಎನ್‌ಜಿಒಗಳ ಪರವಾನಿಗೆ ರದ್ದಾಗಿದೆ; ಆನಂತರ ಕೆಲವು ಪರವಾನಿಗೆಗಳನ್ನು ಪುನಃಸ್ಥಾಪಿಸಲಾಗಿದೆ. ಸಬ್ರಂಗ್ ಟ್ರಸ್ಟ್ ಮತ್ತು ಕಂಪ್ಯಾಶನ್ ಇಂಟರ್‌ನ್ಯಾಶನಲ್‌ನಂತಹ ಎನ್‌ಜಿಒಗಳ ಮೇಲೆ ನಿಯಮಗಳ ಉಲ್ಲಂಘನೆ ಆರೋಪ ಹೊರಿಸಲಾಗಿದೆ. ಇದಕ್ಕೆ ಸರಕಾರ ನೀಡಿದ ಕಾರಣ-ಪರವಾನಿಗೆ ನವೀಕರಣದಲ್ಲಿ ವೈಫಲ್ಯ, ಹಣದ ದುರುಪಯೋಗ, ಉಪದೇಣಿಗೆ ನಿಯಮ ಉಲ್ಲಂಘನೆ ಮತ್ತು ರಾಷ್ಟ್ರೀಯ ಆಸಕ್ತಿಗೆ ಧಕ್ಕೆ (factChecker.in). ರಾಷ್ಟ್ರೀಯ ಆಸಕ್ತಿ/ಭದ್ರತೆ/ಸುರಕ್ಷೆಗೆ ಧಕ್ಕೆ ಎಂದರೆ ಮುಗಿಯಿತು! ಯಾರೂ ಪ್ರಶ್ನಿಸಲು ಆಗುವುದಿಲ್ಲ. ಎಫ್‌ಸಿಆರ್‌ಎ ಡ್ಯಾಶ್‌ಬೋರ್ಡ್(https;//fcraonline.gov.in) ಪ್ರಕಾರ, 15,947 ಸಂಸ್ಥೆಗಳು ಮಾತ್ರ ಸಕ್ರಿಯವಾಗಿವೆ; 35,488 ಸಂಸ್ಥೆಗಳ ಪರವಾನಿಗೆ ರದ್ದುಗೊಂಡಿದೆ ಅಥವಾ ನವೀಕರಿಸಿಲ್ಲ. ಸ್ವೀಡನ್‌ನ ‘ವಿ-ಡೆಮ್ ಇನ್‌ಸ್ಟಿಟ್ಯೂಟ್’ ದತ್ತಾಂಶದ ಪ್ರಕಾರ, ಭಾರತದ ನಾಗರಿಕ ಸಮಾಜದ ಭಾಗವಹಿಸುವಿಕೆ ಸೂಚ್ಯಂಕವು 2013ರಲ್ಲಿದ್ದ 0.84ರಿಂದ 2023ರಲ್ಲಿ 0.61ಕ್ಕೆ ಕುಸಿದಿದೆ; ಇದು ಕಳೆದ 47 ವರ್ಷದಲ್ಲೇ ಅತ್ಯಂತ ಕಳಪೆ ಸಾಧನೆ (ವೆರೈಟೀಸ್ ಆಫ್ ಡೆಮಾಕ್ರಸಿ ಇನ್‌ಸ್ಟಿಟ್ಯೂಟ್, www.v-dem.net). ಈಗಾಗಲೇ ಅನೇಕ ಎನ್‌ಜಿಒಗಳು ತಮ್ಮ ಕಾರ್ಯಚಟುವಟಿಕೆ ಸಂಪೂರ್ಣ ಸ್ಥಗಿತಗೊಳಿಸಿವೆ ಅಥವಾ ಕನಿಷ್ಠ ಮಟ್ಟಕ್ಕೆ ಸೀಮಿತಗೊಳಿಸಿಕೊಂಡಿವೆ; ಇದರಿಂದ ಉದ್ಯೋಗ ನಷ್ಟವಲ್ಲದೆ, ಅತ್ಯಂತ ದುರ್ಬಲ ವರ್ಗದವರು ಅತ್ಯಗತ್ಯ ಸೇವೆಗಳಿಂದ ವಂಚಿತರಾಗಿದ್ದಾರೆ. ಇದರಿಂದ ಎನ್‌ಜಿಒ ವಲಯದಲ್ಲಿ ಅನಿಶ್ಚಿತತೆ ಮೂಡಿದೆ.
ಹೊಸ ನಿಯಮಗಳನ್ನು ಕೆಥೊಲಿಕ್ ಬಿಷಪ್ಸ್ ಕಾನ್ಫೆರೆನ್ಸ್(ಸಿಬಿಸಿಐ) ಖಂಡಿಸಿದೆ; ಕಾಯ್ದೆ ಕ್ರಿಶ್ಚಿಯನ್ ಎನ್‌ಜಿಒಗಳ ವಿರುದ್ಧ ಇಲ್ಲ ಎಂದು ಗೃಹ ಸಚಿವ ಅಮಿತ್ ಶಾ ಆಶ್ವಾಸನೆ ನೀಡಿದ್ದಾರೆ ಎಂದು ಕೆಥೊಲಿಕ್ ಚರ್ಚಸ್ ಇನ್ ಇಂಡಿಯಾ(ಸಿಎಸ್‌ಐ) ಸಲಹೆಗಾರ ಹೇಳಿದ್ದಾರೆ. ದೇಶಕ್ಕೆ ಬರುವ ಒಟ್ಟು ಅನುದಾನದಲ್ಲಿ ಕ್ರಿಶ್ಚಿಯನ್ ಎನ್‌ಜಿಒಗಳ ಪಾಲು ಶೇ.15; 2015ರಲ್ಲಿ ಬಂದ 17,000 ಕೋಟಿ ರೂ. ಅನುದಾನದಲ್ಲಿ ಕ್ರಿಶ್ಚಿಯನ್ ಎನ್‌ಜಿಒಗಳ ಪಾಲು 3,000 ಕೋಟಿ ರೂ. ಎನ್‌ಜಿಒಗಳ ಕಾರ್ಯಕ್ಷೇತ್ರದ ಮೇಲಿನ ನಿರ್ಬಂಧದಿಂದ ಅವುಗಳ ಕಾರ್ಯವ್ಯಾಪ್ತಿ ಕುಗ್ಗಲಿದೆ ಮತ್ತು ಬೇರೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಸರಕಾರ ಅನುಮತಿ ನೀಡದೆ ಇರುವ ಸಾಧ್ಯತೆಯೂ ಇದೆ. ಸಾಮಾಜಿಕ ಮಾಧ್ಯಮ, ಜಾಲತಾಣ, ಪ್ರಕಟಣೆಗೆ ಸಂಬಂಧಿಸಿದ ಮಾಹಿತಿ ಬಹಿರಂಗಗೊಳಿಸುವಿಕೆಯನ್ನು ಕಡ್ಡಾಯಗೊಳಿಸಿರುವುದರಿಂದ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಆಗಲಿದೆ. ಸಂಸ್ಥೆಗಳ ಚಟುವಟಿಕೆಗಳಲ್ಲಿ ಸರಕಾರದ ಹಸ್ತಕ್ಷೇಪ ಹೆಚ್ಚಲಿದೆ. ಅಲ್ಪಸಂಖ್ಯಾತರ ಸಂಸ್ಥೆಗಳು, ನಾಗರಿಕ ಹಕ್ಕು ಸಂಘಟನೆಗಳು, ಪರಿಸರ ಸಂಘಟನೆಗಳು ಮತ್ತು ಸಂಶೋಧನಾ ಕ್ಷೇತ್ರದ ಮೇಲೆ ಈ ಮಸೂದೆ ವಿಪರಿಣಾಮ ಬೀರಲಿದೆ. ಭಿನ್ನಾಭಿಪ್ರಾಯ ಹೊಂದಿರುವ ಸಂಸ್ಥೆಗಳನ್ನು ಗುರಿಯಾಗಿಸಿಕೊಳ್ಳುವುದರಿಂದ, ನಾಗರಿಕ ಸಮಾಜದ ಸಂಸ್ಥೆ/ಸಂಘಟನೆಗಳ ಕಾರ್ಯನಿರ್ವಹಣೆ ಮೇಲೆ ಸದಾ ಕಾಲ ಅಧಿಕಾರಶಾಹಿಯ ಕರಿ ನೆರಳು ಇರುತ್ತದೆ.
ಇದು ವಿದೇಶಿ ದೇಣಿಗೆ ನಿಯಂತ್ರಣ ಮಸೂದೆಯಲ್ಲ; ಬದಲಿಗೆ ಭಿನ್ನ ಧ್ವನಿ/ಸಿದ್ಧಾಂತ/ಆಶಯ/ಕಾರ್ಯನೀತಿ ಹೊಂದಿರುವ ಸಂಸ್ಥೆಗಳ ನಿಯಂತ್ರಣ ಮಸೂದೆ.