ಜಾನಪದ ಕಲೆಗಳ ಸೃಷ್ಟಿ ಹಿನ್ನೆಲೆಯ ಅನ್ವೇಷಣೆ
ನಾಡಿನ ಹಿರಿಯ ವಿದ್ವಾಂಸರು, ಸಂಸ್ಕೃತಿ ಚಿಂತಕರು, ಸಂಶೋಧಕರು, ಶಿಕ್ಷಣ ತಜ್ಞರು ಆಗಿರುವ ಪ್ರೊ. ಎಸ್.ಸಿ. ಶರ್ಮಾ ಅವರು ಜಾನಪದದಲ್ಲಿ ಕೆಲಸ ಮಾಡಿರುವುದು ವಿಶೇಷ ಸಂಗತಿ. ಅವರು ರಚಿಸಿದ ನೆಲದ ಕಂಪು ಕೃತಿಯು ಜನಪದ ಸಾಹಿತ್ಯ, ಜನಪದ ಪ್ರದರ್ಶನ ಕಲೆಗಳು ಮತ್ತು ಜನಪದ ಆಚರಣೆಗಳ ಸೃಷ್ಟಿಯ ಹಿನ್ನೆಲೆಯನ್ನು ಅನ್ವೇಷಿಸಿದ ಕೃತಿಯಾಗಿದೆ. ಲೇಖಕರ ದೃಷ್ಟಿಯಲ್ಲಿ ಜಾನಪದ ಎಂಬುದು ನಮ್ಮ ಹಿರಿಯ ನಾಗರಿಕರ, ಪುರಾತನರ ಜೀವನಾನುಭವದಿಂದ ಕೂಡಿದ ಬೌದ್ಧಿಕ ಅರಿವಿನ ಕಟ್ಟು. ಅದು ವ್ಯಕ್ತಿಯ ವ್ಯಕ್ತಿತ್ವದ ವಿಕಾಸಕ್ಕೆ, ಸಮಾಜದ ವಿಕಾಸಕ್ಕೆ, ಸಾಂಸ್ಕೃತಿಕ ವಿಕಾಸಕ್ಕೆ ಕಾರಣವಾಗುವ ಅರಿವಿನ ಜೀವನದಿ. ಹಾಗಾಗಿಯೇ ಲೇಖಕರು ಕೃತಿಯ ಉದ್ದಕ್ಕೂ ಜನಪದ ಸಾಹಿತ್ಯದ ಹಿನ್ನೆಲೆಯನ್ನು ಮತ್ತು ಜನಪದರ ನಂಬಿಕೆ, ಆಚರಣೆ, ಕಲೆಗಳ ಹಿನ್ನೆಲೆಯನ್ನು, ಅಲ್ಲಿನ ಪೌರಾಣಿಕತೆಯನ್ನು ಅರಿಯುವ ಪ್ರಯತ್ನ ಮಾಡಿದ್ದಾರೆ. ಮುಖ್ಯವಾಗಿ ವೀರಭದ್ರನ ಆರಾಧನೆ, ವೀರಗಾಸೆ ಕುಣಿತ, ಪುರವಂತಿಕೆ, ಯಲ್ಲಮ್ಮನ ಆರಾಧಾನೆ, ಮಲೆ ಮಾದೇಶ್ವರ, ಮಂಟೆಸ್ವಾಮಿ, ಗೋವಿನ ಹಾಡು, ಶ್ರೀಕೃಷ್ಣ ಪಾರಿಜಾತ, ಮಾರಿಯ ಆರಾಧನೆ, ನಾಗಾರಾಧನೆ, ಯಕ್ಷಗಾನ ಮತ್ತು ಜನಪದರ ಪ್ರಕೃತಿ ಆರಾಧನೆಯ ಪೌರಾಣಿಕ ಹಿನ್ನೆಲೆಯನ್ನು ತಮ್ಮದೇ ಆದ ಅಧ್ಯಯನದ ನೆಲೆಯಲ್ಲಿ ಶೋಧಿಸುವ ಪ್ರಯತ್ನ ಪ್ರಸ್ತುತ ಕೃತಿಯಲ್ಲಿ ಮಾಡಿದ್ದಾರೆ.
ಜನಪದ ಸಮಾಜವು ವೈವಿಧ್ಯಮಯವಾಗಿದ್ದು, ಅದು ಹಲವು ಬಗೆಯ ನಂಬಿಕೆ, ಆಚರಣೆ, ಸಂಪ್ರದಾಯ, ಜೀವನ ಪದ್ಧತಿ, ಕುಲಕಸುಬುಗಳು, ಕಲೆಗಳನ್ನು ಹೊಂದಿತ್ತು. ಅದಕ್ಕೆ ಅನುಗುಣವಾಗಿಯೇ ವೈವಿಧ್ಯಮಯವಾದ ಮತ್ತು ವಿಪುಲವಾದ ಸಾಹಿತ್ಯ ರಚನೆಗೊಂಡಿದೆ. ಆ ಸಾಹಿತ್ಯ ಸಾಮೂಹಿಕ ಸೃಷ್ಟಿ. ಅಂತಹ ಜನಪದರ ಮೇಲೆ ಪುರಾಣಗಳ ಪ್ರಭಾವವೂ ಅಧಿಕವಾಗಿದೆ ಎಂಬುದು ಶರ್ಮಾ ಅವರ ಅಚಲವಾದ ನಿಲುವು. ಕೃತಿಯುದ್ದಕ್ಕೂ ಅದನ್ನು ಶೋಧಿಸಿ ನಿರೂಪಿಸಿದ್ದಾರೆ. ಜನಪದರು ಮರಗಳನ್ನು ನೆಟ್ಟು ಪೋಷಿಸುವಲ್ಲಿ ಹಲವು ಬಗೆಯ ನಂಬಿಕೆಗಳನ್ನು ಹೊಂದಿದ್ದರು. ಇಂದು ನಾವು ಅದನ್ನು ಮೂಢ ನಂಬಿಕೆ ಎಂದು ಕರೆಯುತ್ತೇವೆ. ಆದರೆ ಶರ್ಮಾ ಅವರ ಆಲೋಚನೆಯೇ ಬೇರೆ. ಅವರು ಜನರು ಮರಗಳನ್ನು ನೆಟ್ಟು ಬೆಳೆಸುವುದರಿಂದ ಆಗುವ ನೈಸರ್ಗಿಕ ಲಾಭಗಳ ಕಡೆಗೆ ಗಮನಕೊಡುತ್ತಾರೆ. ಜನಪದರು ಮರಗಳನ್ನು ನೆಟ್ಟು ಬೆಳೆಸಿದವರಿಗೆ ಧನ ಪ್ರಾಪ್ತಿಯಾಗುತ್ತದೆ, ಸಂತಾನ ಪ್ರಾಪ್ತಿಯಾಗುತ್ತದೆ, ಆಯುಷ್ಯ ವೃದ್ಧಿಯಾಗುತ್ತದೆ ಎಂಬ ಹಲವು ನಂಬಿಕೆಗಳನ್ನು ಹೊಂದಿದ್ದರು. ಯಾವ-ಯಾವ ಗಿಡಗಳನ್ನು ನೆಟ್ಟು ಪೋಷಿಸಿದರೆ ಯಾವ-ಯಾವ ಲಾಭ ಆಗುತ್ತದೆ ಎಂಬ ನಂಬಿಕೆಯನ್ನು ಜನಪದರು ಹೊಂದಿದ್ದರು ಎಂಬುದನ್ನು ಕೃತಿಯಲ್ಲಿ ಶರ್ಮಾ ಅವರು ಗುರುತಿಸಿದ್ದಾರೆ.
ಜನಪದ ಪ್ರದರ್ಶನ ಕಲೆಗಳ ಪೌರಾಣಿಕ ಹಿನ್ನೆಲೆಯನ್ನು ವಿವರಿಸುವ ಸಂದರ್ಭದಲ್ಲಿ ಶರ್ಮಾ ಅವರು ಆ ಕಲೆಗಳ ಸ್ವರೂಪ, ಮಹತ್ವವನ್ನು ತಿಳಿಸಿದ್ದಾರೆ. ಕಲೆಗಳ ಭೌಗೋಳಿಕ ನೆಲೆಗಳನ್ನು ಗುರುತಿಸಿದ್ದಾರೆ. ದೈವಾರಾಧನೆಯ ಸಂದರ್ಭದಲ್ಲಿನ ಜನಪದ ಆಟಗಳು, ವಾದ್ಯಗಳು ಹಾಗೂ ಕಲೆಗಳಾದ ಗೊಂದಲಿಗರ ಮೇಳ, ಭೂತೇರ ಕುಣಿತ, ಚೌಡಿಕೆ, ಜೋಗತಿಯರ ಕುಣಿತ, ಕಂಸಾಳೆಯ ನೃತ್ಯ, ನೀಲಗಾರರ ಮೇಳ, ತಮಟೆ ವಾದನ, ನಗಾರಿ, ಬುಡುಬಡುಕಿ, ಹೆಜ್ಜೆಮೇಳ, ದೊಂಬರಾಟ, ಕೀಲು ಕುದುರೆ ಕುಣಿತ, ಕೊಂಡಮಾಮ, ಕರಪಾಲ ಮೇಳ, ಹೆಳವರು, ಲಾವಣಿ ಸಂಪ್ರದಾಯ, ತಂಬೂರಿಯವರು, ಭಜನೆ ಸಂಪ್ರದಾಯ, ಅಂಟಿಗೆ-ಪಿಂಟಿಗೆ, ಆಣಿ-ಪಿಣಿ, ಹುಲಿವೇಷ, ಗೊಂಬೆಯಾಟ ಮುಂತಾದವುಗಳ ಸ್ವರೂಪ, ಹಿನ್ನೆಲೆಯನ್ನು ವಿವರವಾಗಿ ವಿಶ್ಲೇಷಿಸಿದ್ದಾರೆ. ಶರ್ಮಾ ಅವರು ಜನಪದ ಕಲೆಗಳನ್ನು ಪೌರಾಣಿಕ ಹಿನ್ನೆಲೆಯ ನೆಲೆಯಲ್ಲಿ ವಿಶ್ಲೇಷಣೆ ಮಾಡಿರುವುದು ವಿಶಿಷ್ಟವಾಗಿ ಕಂಡುಬರುತ್ತದೆ. ಸಾಮಾನ್ಯವಾಗಿ ಜನಪದ ಕಲೆಗಳಿಗೆ ಧಾರ್ಮಿಕ, ಕೃಷಿ, ಸಾಮಾಜಿಕ, ಪೌರಾಣಿಕ ಹಿನ್ನೆಲೆ ಇರುವುದನ್ನು ನಾವು ನೋಡುತ್ತೇವೆ. ಕುತೂಹಲ ಹಾಗೂ ಸಂದೇಹಗಳು ಯಾವಾಗಲೂ ಹೊಸ ಸೃಷ್ಟಿಗೆ ಕಾರಣವಾಗುತ್ತವೆ. ಪ್ರಾಚೀನ ಪುರಾಣಗಳು ಜನಪದರ ನಂಬಿಕೆ, ಆಚರಣೆಗಳೊಂದಿಗೆ ಯಾವ ರೀತಿಯ ಸಂಬಂಧ ಹೊಂದಿವೆ ಎಂಬ ಸಂದೇಹ, ಕುತೂಹಲವೇ ಈ ಕೃತಿಯ ಸೃಷ್ಟಿಗೆ ಕಾರಣವಾಗಿದೆ.
ಕೃತಿಯ ಕೊನೆಯಲ್ಲಿ ಆರ್.ವಿ. ತಾಂತ್ರಿಕ ಮಹಾವಿದ್ಯಾನಿಲಯದ ಆವರಣದಲ್ಲಿರುವ ಕ್ರಿಯಾಕಲ್ಪ ಎನ್ನುವ ಪಾರಂಪರಿಕ ಮತ್ತು ತಾಂತ್ರಿಕ ಉಪಕರಣಗಳ ಸಂಗ್ರಹಾಲಯದ ವೈಶಿಷ್ಟ್ಯ ಮತ್ತು ತುಮಕೂರು ವಿಶ್ವವಿದ್ಯಾನಿಲಯದ ಆವರಣದಲ್ಲಿನ ಕಲಾರಾಧನೆಯ ವೈಶಿಷ್ಟ್ಯವನ್ನು ದಾಖಲಿಸಿದ್ದಾರೆ. ಕ್ರಿಯಾಕಲ್ಪವು ಜಾಗತಿಕ ತಂತ್ರಜ್ಞಾನದ ಬೆಳವಣಿಗೆಯಲ್ಲಿ ಭಾರತದ ಜಾನಪದೀಯ ಜ್ಞಾನಪರಂಪರೆಯ ಕೊಡುಗೆಯ ಕುರಿತು ಜನರಲ್ಲಿ ಅರಿವು ಮೂಡಿಸಲು ಸ್ಥಾಪಿಸಲಾದ ಸಂಗ್ರಹಾಲಯವಾಗಿದೆ. ಕಲಾರಾಧನೆಯು ತುಮಕೂರು ವಿಶ್ವವಿದ್ಯಾನಿಲಯದ ಆವರಣವನ್ನು ಜಾನಪದ ವಿಸ್ಮಯಗಳ ತಾಣವನ್ನಾಗಿಸಿದ ಯೋಜನೆಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಪ್ರೊ. ಎಸ್.ಸಿ. ಶರ್ಮಾ ಅವರು ಜನಪದ ಸಾಹಿತ್ಯ, ಕಲೆ, ನಂಬಿಕೆ, ಆಚರಣೆಗಳ ಹಿಂದಿನ ಜನಪದರ ತಿಳುವಳಿಕೆಯನ್ನು, ಅಲ್ಲಿರುವ ಆದರ್ಶವನ್ನು, ಜೀವನ ಮೌಲ್ಯಗಳನ್ನು ಮತ್ತು ಅದರ ಮಹತ್ವವನ್ನು ಹುಡುಕುವ ಪ್ರಯತ್ನ ಮಾಡಿದ್ದಾರೆ. ಅವರ ಜೀವನಮೌಲ್ಯವು ಕೂಡ ಹಾಗೆ ಶಿಕ್ಷಣತಜ್ಞರಾಗಿ ಅನೇಕ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ, ಆಡಳಿತಗಾರನಾಗಿ ಸಂಸ್ಥೆಯನ್ನು ಕಟ್ಟುವಲ್ಲಿ ಆದರ್ಶ ಮತ್ತು ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಒಟ್ಟಿನಲ್ಲಿ ಶರ್ಮಾ ಅವರ ನೆಲದ ಕಂಪು ಕೃತಿಯು ನಮ್ಮ ಜನಪದರ ನಂಬಿಕೆ, ಆಚರಣೆ, ಕಲೆ, ಸಾಹಿತ್ಯದ ಬಗ್ಗೆ ಅರಿವನ್ನು ನೀಡುವ ಜೊತೆಗೆ ಅದರ ಮಹತ್ವವನ್ನು ಸಾರುತ್ತದೆ. ಜನಪದರ ಸಂಸ್ಕೃತಿಯು ಎಲ್ಲ ಧನಾತ್ಮಕ ಚಿಂತನೆಗಳ ಸಮ್ಮಿಶ್ರಣ ಎಂದು ಸಾರುವ ಶರ್ಮಾ ಅವರು ಅಲ್ಲಿನ ನಂಬಿಕೆಗಳಲ್ಲಿನ ಮಿತಿಗಳನ್ನು ಗುರುತಿಸಲು ಹಿಂಜರಿದಿದ್ದು ಗೋಚರಿಸುತ್ತದೆ. ಜನಪದ ಕಲೆಗಳು ಉಗಮಗೊಂಡ ಬಗೆ ಹಾಗೂ ಜನಪದ ಆಚರಣೆಗಳ ವೈವಿಧ್ಯವನ್ನು ಅರಿಯಲು ಈ ಕೃತಿ ಹೆಚ್ಚು ಉಪಯುಕ್ತವಾಗಿದೆ. ಅನ್ಯಶಿಸ್ತಿನ ವಿದ್ವಾಂಸರು ಜಾನಪದ ಕ್ಷೇತ್ರದಲ್ಲಿ ಕೃತಿ ರಚಿಸಿರುವುದು ಮೆಚ್ಚುವಂಥದಾಗಿದೆ.
ಪುಸ್ತಕ: ನೆಲದ ಕಂಪು
ಲೇಖಕರು: ಪ್ರೊ. ಎಸ್.ಸಿ. ಶರ್ಮಾ
ಪ್ರಕಾಶನ: ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ
ಪುಟಗಳು: 220, ಬೆಲೆ: 200 ರೂ.