ಜಯಂತಿಪುರದಲ್ಲಿನ ಬದುಕಿನೊಂದಿಗೆ..
ಪ್ರಸ್ತುತ ಕಾಲಘಟ್ಟದ ದಿನಗಳಲ್ಲಿ ಬಹುಕಾಲದಿಂದಲೂ ನಾವು ಕಾಪಾಡಿಕೊಂಡು ಬಂದಿದ್ದ ಕೋಮುಸಾಮರಸ್ಯದ ಆಕೃತಿಗಳು ವಿಕಾರಗೊಳ್ಳುತ್ತಿವೆ. ಜಾತಿ, ಧರ್ಮ, ವರ್ಗ-ವರ್ಣ, ಲಿಂಗತಾರತಮ್ಯಗಳ ವಿಜೃಂಭಿಸುವಿಕೆ ಇನ್ನಿಲ್ಲದಂತೆ ತನ್ನ ಕಂಬಂಧಬಾಹುಗಳನ್ನು ಹೊಸ ಹಾದಿಗಳನ್ನರಿಸಿ ಚಾಚುತ್ತಲೇ ಇದೆ. ಇವೆಲ್ಲವುಗಳನ್ನು ಮೀರಿ ವಾಸ್ತವವನ್ನು ಮತ್ತು ತನ್ನ ಅಂತರಂಗವನ್ನು ನಿರಂತರವಾಗಿ ಪುಟಕ್ಕಿಕ್ಕಿ ‘ಆನುಒಲಿದಂತೆ ಹಾಡ’ಬೇಕಾದ ತುರ್ತಿದೆ. ಕನ್ನಡ ಸಾಹಿತ್ಯ ಅದರಲ್ಲೂ ವಿಶೇಷವಾಗಿ ಕನ್ನಡ ಕಥಾಲೋಕ ಮತ್ತೆ ಮತ್ತೆ ಇಂತಹ ತೀರ ಅಗತ್ಯವಾದ ತುರ್ತಿನ ಕಾರ್ಯವನ್ನು ಮಾಡುವಲ್ಲಿ ತನ್ನನ್ನು ನಿರಂತರವಾಗಿ ತೊಡಗಿಸಿಕೊಂಡು ಬಂದಿದೆ. ಮನುಷ್ಯ ಪ್ರಜ್ಞೆ ಮತ್ತು ಮಾನವೀಯ ಅಂತಃಕರಣವನ್ನು ಸಹೃದಯರ ಎದೆಯಾಳದಲ್ಲಿ ಉದ್ದೀಪನಗೊಳಿಸಿ ಹೊಸ ದಿಕ್ಕುಗಳತ್ತ ಕೈ ಹಿಡಿದು ಮೆಲ್ಲನೆ ನಡೆಸುತ್ತ ಬಂದಿದೆ. ನಮ್ಮ ನಡುವಿನ ಸೃಜನಶೀಲ ಕಥೆಗಾರ, ಉತ್ಸಾಹಿ ತರುಣ ಶ್ರೀಧರ ಬನವಾಸಿ ತಮ್ಮ ಕಥಾ ಸಂಕಲನ ‘ಜಯಂತಿಪುರದ ಕಥೆಗಳು’ ಎಂಬ ಕಥಾಸಂಕಲನ ಪ್ರಕಟಿಸುವ ಮೂಲಕ ಜೀವದೊಲವಿನ ಬದುಕಿಗಾಗಿ ಮನಸ್ಸು ತೆರೆದುಕೊಳ್ಳುವಂತೆ ಮಾಡಿದ್ದಾರೆ. ನಮ್ಮ ಪರಂಪರೆಯ ಅಧಿಕೃತ ವಾರಸುದಾರರಾಗಿ ನಿಂತಿರುವ ಗ್ರಾಮೀಣ ಪರಿಸರದ ಆಚಾರ-ವಿಚಾರಗಳನ್ನು, ಅಲ್ಲಿನ ಸಂಬಂಧಗಳನ್ನು ಅರ್ಥಪೂರ್ಣವಾಗಿ ಕಥೆಗಳ ಮೂಲಕ ಕಟ್ಟಿಕೊಡುವ ಮೂಲಕ ಜಯಂತಿಪುರದ ಜಗತ್ತನ್ನು ನಮ್ಮೆಲ್ಲರ ಊರಿನ ಲೋಕವನ್ನಾಗಿ ಕಟ್ಟಿಕೊಡುವ, ನಮ್ಮೆದುರು ತೆರೆದುಕೊಳ್ಳುವ ನಾಳಿನ ಬದುಕಿಗೆ ಉತ್ತಮವಾದ ನೆಲೆಯನ್ನೊದಗಿಸುವ ಬಹುದೊಡ್ಡ ಪ್ರಯತ್ನ ಮಾಡಿದ್ದಾರೆ.
‘ಜಯಂತಿಪುರದ ಕತೆಗಳು’ ಕಥಾಸಂಕಲನದಲ್ಲಿರುವ ಹನ್ನೆರಡು ಕಥೆಗಳಲ್ಲಿ ಎರಡು ನೀಳ್ಗತೆಗಳು. ಇಲ್ಲಿನ ಕಥೆಗಳು ಮೇಲ್ನೋಟಕ್ಕೆ ಬಿಡಿ ಬಿಡಿಯಾಗಿ ತೋರಿದರೂ ಅವೆಲ್ಲವು ಗಳು ಒಂದಕ್ಕೊಂದು ಪೂರಕವಾಗಿ ಬೆಸೆದುಕೊಂಡಿವೆ. ಒಂದಷ್ಟು ಕಥೆಗಳು ವ್ಯಕ್ತಿನಿಷ್ಠತೆಯನ್ನು ಬಿಂಬಿಸಿದರೆ, ಇನ್ನು ಕೆಲವುಗಳು ಸಮಷ್ಟಿ ಪ್ರಜ್ಞೆಯನ್ನು ತೆರೆದಿಡುತ್ತವೆ. ತಮ್ಮ ಬಾಲ್ಯದ ಅನುಭವಗಳಿಗೆ ಜೀವಂತಿಕೆಯನ್ನು ನೀಡುವಂತೆ ಜಯಂತಿಪುರದಲ್ಲಿ ನಿಂತು ಹತ್ತೂ ದಿಕ್ಕುಗಳಲ್ಲಿ ತಮ್ಮ ಅಂತರ್‌ದೃಷ್ಟಿಯನ್ನು ಹಾಯಿಸುತ್ತಾರೆ. ಪುರಾತನಕ್ಕೆ, ಇತಿಹಾಸಕ್ಕೆ ಬೆಸೆದುಕೊಂಡ ಪುಟ್ಟದೊಂದು ಊರಿನಲ್ಲಿಯ ವಿವಿಧ ಕೇರಿಗಳಲ್ಲಿ ಘಟಿಸುವ ಸಂಗತಿಗಳನ್ನೆಲ್ಲ ಮನೋಜ್ಞವಾಗಿ ಪಾತ್ರಗಳಲ್ಲಿ ಹಿಡಿದಿಡುತ್ತಾರೆ. ಅಂದಂದಿನ ಕಾಲಘಟ್ಟದ ಚಿತ್ರಣಗಳನ್ನು ಕಟ್ಟಿಕೊಡುತ್ತ ಇತಿಹಾಸ, ಪುರಾಣ, ಜಾನಪದ, ಬದುಕಿನ ನಂಬಿಕೆ ರೀತಿ-ರಿವಾಜು, ತವಕ-ತಲ್ಲಣಗಳನ್ನು, ಪ್ರೇಮ-ಕಾಮನೆಗಳು, ಸಲ್ಲದ ಮೂಢನಂಬಿಕೆಗಳಲ್ಲಿ ಸ್ಥಗಿತಗೊಂಡು ಪಾಚಿಗಟ್ಟಿರುವ ಸಂಕಟಮಯ ಸನ್ನಿವೇಶಗಳಲ್ಲಿ ಸಿಲುಕಿ ನಲುಗುವ ಅಸಹಾಯಕತೆ, ಉಳ್ಳವರ ಸ್ವಾರ್ಥಕೇಂದ್ರಿತ ದರ್ಪ, ಇಲ್ಲದವರ ಅಸಹಾಯಕತೆಗಳನ್ನು ಕಥೆಯ ಮೂಲದ್ರವ್ಯಗಳನ್ನಾಗಿಸಿಕೊಳ್ಳುತ್ತಾರೆ.
‘ಎಲ್ಲಿಂದಲೋ ಬಂದವನು’ ತೀರ ಅಪರಿಚಿತನಾಗಿದ್ದರೂ ಅವನಿಗೆ ಆ ಕ್ಷಣಕ್ಕೆ ಆಶ್ರಯ ಕೊಟ್ಟು ಅವನನ್ನು ಆದರಿಸುವ ಕೃಷ್ಣಪ್ಪ ಅವನ ಕೈಕೋಳ ಬಿಡಿಸಿ, ಅನ್ನ ನೀಡಿ, ಪ್ರೀತ್ಯಾದರಗಳಿಂದ ಸಲಹುವ ಪರಿ ಮಾನವೀಯತೆಯ ಪ್ರತೀಕವಾಗಿ ನಿಲ್ಲುತ್ತದೆ. ಕಾನೂನಿನ ದೃಷ್ಟಿಯಲ್ಲಿ ಅಪರಾಧಿಯಾಗಿದ್ದ ವ್ಯಕ್ತಿಯೊಬ್ಬನಿಗೆ ಆಶ್ರಯ ನೀಡುವುದು ಅಕ್ಷ್ಯಮ್ಮ ಎನ್ನುವ ಸತ್ಯವಾದ ಸಂಗತಿಯಾಗಿದ್ದರೂ ಅದಕ್ಕಿಂತ ಮಿಗಿಲು ಮಾನವೀಯತೆ. ಜೀವಪ್ರೀತಿಯ ಅಂತಃಕರುಣ ಕ್ರೂರಿಯೊಬ್ಬನ ಮನಸ್ಸನ್ನು ಪರಿವರ್ತಿಸಬಹುದು ಎಂಬ ನಿಲುವು ಊರಿನ ಗರಿಮೆಯಾಗಿ ನಿಲ್ಲುತ್ತದೆ. ಕಾಡುಪಾಲಾದ ಮಾರಿಬಲಿ ಕತೆಯು ಗ್ರಾಮೀಣ ಪರಿಸರದಲ್ಲಿ ಇಂದಿಗೂ ಜೀವಂತಿಕೆ ಪಡೆದಿರುವ ಅವೈಜ್ಞಾನಿಕ, ಅವೈಚಾರಿಕ ಸಂಗತಿಗಳ ಸುಳಿಯಲ್ಲಿ ಜನಸಾಮಾನ್ಯರ ಬದುಕು ಸಿಲುಕಿ ನಲುಗುತ್ತಿದ್ದರೂ, ಅದನ್ನು ಅತ್ಯಂತ ಸಹಜವಾಗಿ ಸ್ವೀಕರಿಸುವ ಪರಿ ಅಚ್ಚರಿಯನ್ನುಂಟು ಮಾಡುತ್ತದೆ. ಶೋಷಣೆಯ ಕರಾಳ ಮುಖಗಳನ್ನು ಗಟ್ಟಿಯಾಗಿ ಚಿತ್ರಿಸುತ್ತದೆ. ಎಲ್ಲರ ಪ್ರಯತ್ನದ ನಡುವೆಯೂ ತಪ್ಪಿಸಿಕೊಳ್ಳುವ ಕೋಣ ಮನುಷ್ಯನ ಅಸಹಾಯಕತೆಯನ್ನು ತೋರ್ಪಡಿಸುವುದಲ್ಲದೆ ಪರೋಕ್ಷವಾಗಿ ಅಹಿಂಸೆಯ ನಿಲುವುಗಳು ಬದುಕಿಗೆ ಪೂರಕವೆನ್ನುವ ಅಂಶವನ್ನು ಸಾರುತ್ತದೆ. ಕುದುರೆ ಹೊಂಡದಲ್ಲಿ ಜನರ ಬದುಕಿಗೆ ಜೀವನಾಡಿಯಾಗಿದ್ದ ವರದಾ ನದಿಯೇ ಜೀವ ಕಸಿದುಕೊಳ್ಳುವ ಮಾರಿಯಾಗಿರುವುದು ದುರಂತವೇ ಸರಿ. ಇನ್ನುಳಿದ ಕಥೆಗಳಲ್ಲಿನ ಮಾಲಿನಿ, ದೇವಿರಿ, ವತ್ಸಲ ಇತ್ಯಾದಿ ಮಹಿಳೆಯರು ಅಸಹಾಯಕತೆಯಿಂದ ಜೀವ ಕಳೆದುಕೊಳ್ಳುವುದು ಕೂಡ ಆಧುನಿಕತೆಯ ಕಾಲಘಟ್ಟದಲ್ಲಿಯೂ ಮಹಿಳೆಯರ ಮನಸ್ಸಿನ ದುರ್ಬಲತೆ, ಅದಕ್ಕೆ ಕಾರಣವಾದ ಪುರುಷ ಪ್ರಧಾನ ದೌರ್ಜನ್ಯಗಳಿಗೆ ಸಾಕ್ಷಿಯಾಗಿ ನಿಲ್ಲುತ್ತವೆ. ಇವೆಲ್ಲವುಗಳ ನಡುವೆಯೂ ಸೊನೆಗಾರ ಶೆಟ್ಟರ ಮಗಳು ಮಾಧವಿ ತನಗೆ ಒದಗಿಬಂದ ಸಂಕಟಗಳನ್ನು ಮೆಟ್ಟಿ ನಿಂತು ಬದುಕು ರೂಪಿಸಿಕೊಳ್ಳುವ ಗಟ್ಟಿತನ ಮೆಚ್ಚುಗೆ ಗಳಿಸುತ್ತದೆ.
ದೇಹವೆಂಬ ಮಡಿಕೆಯೊಳಗೆ, ಹುತ್ತದ ಅರಮನೆಯಲ್ಲಿ ವಿಷದ ಸುಂಟರಗಾಳಿಯಲ್ಲಿನ ಕಥೆಯ ಪಾತ್ರಗಳು ಸೇರಿದಂತೆ ಇತರ ಕೆಲವು ಪಾತ್ರಗಳು ಜಯಂತಿಪುರದಲ್ಲಿ ನಡೆಯುವ ನೈಜ ಘಟನೆಗಳಿಗೆ ದನಿಯಾಗುತ್ತವೆ. ಓದುಗರೊಂದಿಗೆ ಆಪ್ತವಾಗಿ ಮಾತನಾಡುತ್ತವೆ. ಕಷ್ಟಕರ ಸಂದರ್ಭಗಳಲ್ಲಿ ಮನುಷ್ಯ ಮನುಷ್ಯನ ನಡುವಿನ ಸಂಬಂಧಗಳನ್ನು ಮತ್ತೆ ಮತ್ತೆ ಒರೆಗಲ್ಲಿಗೆ ಹಚ್ಚಿ ಅವುಗಳ ಗಟ್ಟಿತನವನ್ನು ಪರೀಕ್ಷಿಸುತ್ತವೆ. ಮನುಷ್ಯ ತನ್ನ ಸಲ್ಲದ ಬಯಕೆಗಳಿಗೆ ಒಂದಷ್ಟು ಕಡಿವಾಣ ಹಾಕಿಕೊಳ್ಳುವುದರ ಮೂಲಕ ಬದುಕನ್ನು ಸಂತಸದ ಮೆರಗಿನಿಂದ ಸಿಂಗರಿಸಬಹುದಾಗಿದೆ ಎನ್ನುವುದನ್ನು ಒತ್ತಿ ಹೇಳುತ್ತವೆ.
ಇನ್ನುಳಿದ ಎಲ್ಲ ಕಥೆಗಳು ಗ್ರಾಮೀಣ ಪರಿಸರದ ಎಲ್ಲ ತವಕ ತಲ್ಲಣಗಳಿಗೆ ದನಿಯಾಗಿ ನಿಲ್ಲುತ್ತವೆ. ದೇವಾಲಯದಲ್ಲಿನ ಕಳ್ಳತನ, ಕೊರೋನ ಸಂದರ್ಭದ ಕರುಣಾಜನಕ ಸ್ಥಿತಿ, ಮಾರಮ್ಮನ ಜಾತ್ರೆ, ಪರಿಸರದ ಸಮರ್ಥ ಚಿತ್ರಣ, ವೈಯಕ್ತಿಕ ಬದುಕಿನ ಕ್ರೂರತೆ, ಇವೆಲ್ಲವುಗಳನ್ನು ಕಥೆಯ ಮೂಲದ್ರವ್ಯವನ್ನಾಗಿಸಿಕೊಂಡು ಅತ್ಯಂತ ಜಾಣ್ಮೆಯಿಂದ, ಕುಶಲತೆಯಿಂದ ಕಥೆಗಳನ್ನು ಕಟ್ಟಿಕೊಟ್ಟಿದ್ದಾರೆ. ಕಥೆೆಯ ಓದು ಜಯಂತಿಪುರ ಪರಿಸರದ ಸ್ವಾನುಭವ ಒದಗಿಸುತ್ತದೆ. ಕುತೂಹಲವನ್ನು ಕೆರಳಿಸುತ್ತವೆ. ಆಸಕ್ತಿಯನ್ನು ಉಳಿಸಿಕೊಂಡು ಹೋಗುತ್ತವೆ. ಹಿಂದಣ ಹೆಜ್ಜೆ ಬೆಳಕಿನಲ್ಲಿ ವಾಸ್ತವವನ್ನು ಗ್ರಹಿಸುವ ಮಾತ್ರವಲ್ಲದೆ ಮುಂದಿನ ದಾರಿಯ ಪಯಣಕ್ಕೆ ಹೊಸ ಹೊಳಹು ಬೀರುತ್ತವೆ. ಕಥೆಗಾರ ಶ್ರೀಧರ ಬನವಾಸಿ ಅವರ ಹೊಸ ರೀತಿಯ ಪ್ರಯೋಗ ನಿಜಕ್ಕೂ ಅಭಿನಂದನೀಯವೆನಿಸುತ್ತದೆ.