ರಾಯಚೂರಿಗೆ ಭೇಟಿ ನೀಡಿದ ಜಲಶಕ್ತಿ ಸಚಿವಾಲಯದ ಅಪರ ಕಾರ್ಯದರ್ಶಿ ಸುಭೋದ್ ಯಾದವ್
ರಾಯಚೂರು : ಭಾರತ ಸರ್ಕಾರದ ಜಲಶಕ್ತಿ ಸಚಿವಾಲಯ, ಜಲಸಂಪನ್ಮೂಲ ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆಯ ಅಪರ ಕಾರ್ಯದರ್ಶಿ ಸುಭೋದ್ ಯಾದವ್ ಅವರು ಅ.3ರಂದು ರಾಯಚೂರು ಪ್ರವಾಸ ಕೈಗೊಂಡು ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿದರು.
ಬೆಳಿಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಸಂಚಾರ ನಡೆಸಿದ ಅವರು, ಸಿರವಾರ ಮತ್ತು ಮಸ್ಕಿ ತಾಲೂಕುಗಳ ಕಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮಾನ್ವಿ ಪಟ್ಟಣದ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಬಳಿಕ ರಾಯಚೂರು ನಗರದ ಮಾವಿನಕೆರೆ ಪ್ರದೇಶಕ್ಕೆ ಆಗಮಿಸಿ ಸ್ಥಳೀಯ ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿಯನ್ನು ಪಡೆದುಕೊಂಡರು.
ಜಿಲ್ಲೆಯ ಕೆರೆಗಳ ಸಮಗ್ರ ಅಭಿವೃದ್ಧಿಗಾಗಿ ಶೀಘ್ರದಲ್ಲೇ ಕೇಂದ್ರ ಸರ್ಕಾರದಿಂದ ತಜ್ಞರ ತಂಡಗಳನ್ನು ಕಳುಹಿಸಲಾಗುವುದು ಎಂದು ಸುಭೋದ್ ಯಾದವ್ ತಿಳಿಸಿದರು.
ಈ ಸಂದರ್ಭದಲ್ಲಿ ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ, ಐಎಎಸ್ ಪ್ರೊಬೇಷನರಿ ಅಧಿಕಾರಿ ಪುರುರಾಜ್ ಸಿಂಗ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ. ಟಿ. ರೋಣಿ, ಮಹತ್ವಾಕಾಂಕ್ಷಿ ಯೋಜನೆಯ ಜಿಲ್ಲಾ ಸಂಯೋಜಕಿ ಸೌಮ್ಯ ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು ಹಾಜರಿದ್ದರು.