ಕೇಂದ್ರ ಜಲಶಕ್ತಿ ಸಚಿವಾಲಯದ ಅಪರ ಕಾರ್ಯದರ್ಶಿ ಸುಭೋದ್ ಯಾದವ್ ರಾಯಚೂರಿಗೆ ಭೇಟಿ
ಮಹತ್ವಾಕಾಂಕ್ಷಿ ಜಿಲ್ಲೆ, ತಾಲೂಕು ಪ್ರಗತಿ ಪರಿಶೀಲನಾ ಸಭೆ
ರಾಯಚೂರು : ಭಾರತ ಸರ್ಕಾರದ ಜಲಶಕ್ತಿ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆಯ ಅಪರ ಕಾರ್ಯದರ್ಶಿ ಸುಬೋಧ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ಅ.2ರಂದು ಮಹತ್ವಾಕಾಂಕ್ಷಿ ಜಿಲ್ಲೆ ಮತ್ತು ಮಹತ್ವಾಕಾಂಕ್ಷಿ ತಾಲೂಕು ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ನಗರ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಧ್ಯಾಹ್ನ ಆರಂಭಗೊಂಡ ಸಭೆ ಸಂಜೆ 7 ಗಂಟೆಯವರೆಗೆ ಸುಧೀರ್ಘವಾಗಿ ನಡೆಯಿತು.
ಸಭೆಯಲ್ಲಿ ಸುಬೋಧ್ ಯಾದವ್ ರಾಯಚೂರು ಜಿಲ್ಲೆ ಸಂಬಂಧಪಟ್ಟ ವಿವಿಧ ಇಲಾಖೆಗಳ ಕಾರ್ಯಕ್ಷಮತೆ, ಮಹತ್ವಾಕಾಂಕ್ಷಿ ಯೋಜನೆಗಳ ಅನುಷ್ಠಾನ ಮತ್ತು ದಾಖಲೆಗಳ ಪರಿಶೀಲನೆ ನಡೆಸಿದರು. ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಅವರು ಗಮನಹರಿಸಿ, ಪ್ರತಿ ಶಾಲೆಯಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶೌಚಾಲಯಗಳ ಉತ್ತಮ ನಿರ್ವಹಣೆ ಬಗ್ಗೆ ಸಲಹೆ ನೀಡಿದರು.
ಆರೋಗ್ಯ ಇಲಾಖೆಗೆ ಸೂಚನೆ ನೀಡಿರುವ ಸುಬೋಧ್ ಯಾದವ್, ತಾಯಿ ಮತ್ತು ಮಗುವಿನ ಆರೋಗ್ಯ ಕುರಿತ ಜಾಗೃತಿ ಕಾರ್ಯಕ್ರಮಗಳನ್ನು ಬಲಪಡಿಸಲು, ಆಸ್ಪತ್ರೆಗಳಲ್ಲಿ ಹೆರಿಗೆ ಕೇಂದ್ರಗಳ ಕಾರ್ಯಕ್ಷಮತೆಯನ್ನು ಮೇಲ್ನೋಟದಿಂದ ಪರಿಶೀಲಿಸಲು ಶಿಫಾರಸು ಮಾಡಿದರು. ರೈತರಿಗೆ ಮಿಶ್ರ ಬೆಳೆಗಳನ್ನು ಕೃಷಿ ಮಾಡುವ ಮೂಲಕ ಮಣ್ಣಿನ ಸಮತೋಲನ ಕಾಯ್ದುಕೊಳ್ಳಲು, ಮಣ್ಣಿನ ಆರೋಗ್ಯ ಕಾರ್ಡ್ ಹಂಚುವಂತೆ ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಅವರು ಅಂಗನವಾಡಿಗಳಲ್ಲಿ ಗರ್ಭಿಣಿಯರಿಗೆ ಪೌಷ್ಠಿಕ ಆಹಾರ ನೀಡುವ ಬಗ್ಗೆ ಪರಿಶೀಲನೆ ನಡೆಸಿದರು.
ಗ್ರಾಮೀಣ ಮಹಿಳೆಯರಿಗೆ ಈ ಕುರಿತು ಸಮರ್ಪಕ ಮಾಹಿತಿ ಒದಗಿಸಲಾಗಿದೆಯೇ ಎಂಬುದನ್ನು ಅಧಿಕಾರಿಗಳೊಂದಿಗೆ ಪರಿಶೀಲಿಸಿದರು.
ಮೂಲಭೂತ ಸೌಕರ್ಯಗಳ ಪರಿಶೀಲನೆಯ ಸಂದರ್ಭದಲ್ಲಿ, ಬ್ಯಾಂಕ್‌ಗಳಲ್ಲಿ ಮುದ್ರಾ ಲೋನಿನ ಲಭ್ಯತೆ, ರಸ್ತೆಗಳ ಗುಣಮಟ್ಟ, ಕೇಂದ್ರ ಸರ್ಕಾರದ ವಸತಿ ಯೋಜನೆಗಳ ಅನುಷ್ಠಾನ ಮತ್ತು ಪ್ರಗತಿ ಕುರಿತು ಚರ್ಚೆ ನಡೆಯಿತು. ಅಧಿಕಾರಿಗಳಿಗೆ ಸೂಚನೆ ನೀಡಿ, ತಮ್ಮ ಕಾರ್ಯಕ್ರಮಗಳ ಪ್ರಗತಿ ಮಾಹಿತಿಯನ್ನು ಪ್ರತಿ ತಿಂಗಳು ಆ್ಯಸ್ಪೈರೇಶನಲ್ ಆ್ಯಪ್‌ನಲ್ಲಿ ನಿಖರವಾಗಿ ಎಂಟ್ರಿ ಮಾಡಬೇಕು ಎಂದು ತಿಳಿಸಿದರು.
ಉತ್ತಮ ಪ್ರಗತಿ ತೋರಿದ ಜಿಲ್ಲೆಗಳಿಗೆ ಆಲ್ ಇಂಡಿಯಾ ಲೆವೆಲ್ ರ‍್ಯಾಂಕ್ ಹಾಗೂ ಇನ್ಸೆಂಟಿವ್ ದೊರೆಯುವುದಾಗಿ ತಿಳಿಸಿದರು.
ಸಭೆಯಲ್ಲಿ ಕೃಷಿ, ಆಹಾರ, ಪಶುಪಾಲನೆ, ಶಾಲಾ ಶಿಕ್ಷಣ, ತೋಟಗಾರಿಕೆ, ಆರೋಗ್ಯ, ಅಂತರ್ಜಲ, ಬೆಂಗಳೂರು ಕೊಳಗೇರಿ ಅಭಿವೃದ್ಧಿ ಮಂಡಳಿ, ದೂರಸಂಚಾರ ನಿಗಮ, ಪಿಆರ್‌ಐಡಿ, ಪಿಎಂಜಿಎಸ್‌ವೈ, ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ, ಲೀಡ್ ಬ್ಯಾಂಕ್, ಜಿಲ್ಲಾ ವಯಸ್ಸರ ಶಿಕ್ಷಣ, ಶಿಶು ಅಭಿವೃದ್ಧಿ, ಎನ್‌ಆರ್‌ಎನ್, ಎನ್‌ಯುಎಲ್‌ಎಮ್ ಸೇರಿದಂತೆ ಸರ್ಕಾರಿ ಮತ್ತು ಎನ್‌ಜಿಓ ಸಂಸ್ಥೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಜಿಲ್ಲಾಧಿಕಾರಿ ನಿತೀಶ್ ಕೆ., ಪಾಲಿಕೆಯ ಆಯುಕ್ತರು ಜುಬಿನ್ ಮೊಹಪಾತ್ರ ಮತ್ತು ಪ್ರೋಬೇಶನರಿ ಐಎಎಸ್ ಅಧಿಕಾರಿ ಪುರುರಾಜ್ ಸೋಲಂಕಿ ಸಹ ಸಭೆಯಲ್ಲಿ ಉಪಸ್ಥಿತರಿದ್ದರು.