ಅಂತಿಮ ಮತದಾರರ ಪಟ್ಟಿ ಪ್ರಕಟ | ರಾಯಚೂರು ನಗರದಲ್ಲಿ 70,725, ಗ್ರಾಮೀಣದಲ್ಲಿ 36,197 ಅನರ್ಹ ಮತದಾರರು
ರಾಯಚೂರು: ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಅಂತಿಮ ಪಟ್ಟಿ ಪ್ರಕಟವಾಗಿದ್ದು, ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ 70,725 ಹಾಗೂ ಗ್ರಾಮೀಣ ಕ್ಷೇತ್ರದಲ್ಲಿ 36,197 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ತಹಶೀಲ್ದಾರ್ ಸುರೇಶ್ ವರ್ಮಾ ತಿಳಿಸಿದರು.
ಅಕ್ಟೋಬರ್ 28ರಂದು ನಗರದ ಮಹಾನಗರ ಪಾಲಿಕೆಯ ಹಳೆಯ ಕಟ್ಟಡದ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಎಸ್ಐಆರ್ ಪ್ರಕ್ರಿಯೆಯ ಕುರಿತು ಮಾಹಿತಿ ನೀಡಿ ಅವರು ಮಾತನಾಡಿದರು.
ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರ ಸಂಖ್ಯೆ 53ರಲ್ಲಿ ಎಸ್ಐಆರ್ಗೂ ಮುನ್ನ ಒಟ್ಟು 275 ಮತಗಟ್ಟೆಗಳಿದ್ದವು. ಪರಿಷ್ಕರಣೆ ಬಳಿಕ ಮೂರು ಮತಗಟ್ಟೆಗಳು ಹೆಚ್ಚಾಗಿ ಒಟ್ಟು 278 ಮತಗಟ್ಟೆಗಳಾಗಿವೆ. ಎಸ್ಐಆರ್ಗೂ ಮುನ್ನ ಕ್ಷೇತ್ರದಲ್ಲಿ 2,39,883 ಮತದಾರರಿದ್ದು, ಪರಿಷ್ಕರಣೆ ನಂತರ 2,03,686 ಮತದಾರರು ಅಂತಿಮ ಪಟ್ಟಿಯಲ್ಲಿ ಉಳಿದಿದ್ದಾರೆ ಎಂದು ತಿಳಿಸಿದರು.
ಅಂತಿಮ ಮತದಾರರ ಪಟ್ಟಿಯಲ್ಲಿ 1,00,855 ಪುರುಷರು, 1,02,810 ಮಹಿಳೆಯರು ಹಾಗೂ 21 ಇತರೆ ಮತದಾರರಿದ್ದಾರೆ. ಶೇಕಡಾವಾರು ಲೆಕ್ಕಾಚಾರದಲ್ಲಿ ಪುರುಷ ಮತದಾರರು ಶೇ.49.51, ಮಹಿಳಾ ಮತದಾರರು ಶೇ.50.47 ಹಾಗೂ ಇತರೆ ಮತದಾರರು ಶೇ.0.01ರಷ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ಎಸ್ಐಆರ್ ಪ್ರಕ್ರಿಯೆಯಲ್ಲಿ ಗೈರುಹಾಜರಿ (ಆಬ್ಸೆಂಟ್), ಸ್ಥಳಾಂತರ (ಶಿಫ್ಟ್) ಹಾಗೂ ಮರಣ (ಡೆತ್) ಮುಂತಾದ ವಿವರಗಳನ್ನು ಪರಿಶೀಲಿಸಿ, ಒಂದಕ್ಕಿಂತ ಹೆಚ್ಚು ಬಾರಿ ದಾಖಲಾಗಿದ್ದ ಹೆಸರುಗಳನ್ನು ತೆಗೆದುಹಾಕಿದ ಬಳಿಕ ಒಟ್ಟು 36,197 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ತಿಳಿಸಿದರು.
ರಾಯಚೂರು ನಗರ ವಿಧಾನಸಭಾ ಕ್ಷೇತ್ರ ಸಂಖ್ಯೆ 54ರಲ್ಲಿ ಎಸ್ಐಆರ್ಗೂ ಮುನ್ನ ಒಟ್ಟು 250 ಮತಗಟ್ಟೆಗಳಿದ್ದವು. ಪರಿಷ್ಕರಣೆ ಬಳಿಕ ನಾಲ್ಕು ಮತಗಟ್ಟೆಗಳು ಹೆಚ್ಚಾಗಿ ಒಟ್ಟು 254 ಮತಗಟ್ಟೆಗಳಾಗಿವೆ. ಎಸ್ಐಆರ್ಗೂ ಮುನ್ನ ಕ್ಷೇತ್ರದಲ್ಲಿ 2,54,403 ಮತದಾರರಿದ್ದರು. ಗೈರುಹಾಜರಿ, ಸ್ಥಳಾಂತರ ಹಾಗೂ ಮರಣಕ್ಕೆ ಸಂಬಂಧಿಸಿದ ವಿವರಗಳನ್ನು ಪರಿಶೀಲಿಸಿ ಹೆಸರುಗಳನ್ನು ತೆಗೆದುಹಾಕಿದ ಬಳಿಕ ಅಂತಿಮ ಪಟ್ಟಿಯಲ್ಲಿ 1,84,678 ಮತದಾರರು ಉಳಿದಿದ್ದಾರೆ ಎಂದರು.
ಅಂತಿಮ ಪಟ್ಟಿಯಲ್ಲಿ 89,971 ಪುರುಷರು, 94,660 ಮಹಿಳೆಯರು ಹಾಗೂ 47 ಇತರೆ ಮತದಾರರಿದ್ದಾರೆ. ಶೇಕಡಾವಾರು ಲೆಕ್ಕಾಚಾರದಲ್ಲಿ ಪುರುಷ ಮತದಾರರು ಶೇ.48.71 ಹಾಗೂ ಮಹಿಳಾ ಮತದಾರರು ಶೇ.51.25ರಷ್ಟಿದ್ದಾರೆ ಎಂದು ಹೇಳಿದರು.
ನಗರ ಕ್ಷೇತ್ರದಲ್ಲಿ ಒಟ್ಟು 70,725 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಎರಡೂ ಕ್ಷೇತ್ರಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿರುವುದು ಕಂಡುಬಂದಿದೆ. 18 ವರ್ಷ ತುಂಬಿದ ಹೊಸ ಮತದಾರರ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ವಿಶೇಷ ಸಮರಿ ಪರಿಷ್ಕರಣೆ ಪ್ರಕ್ರಿಯೆಗಳು ನಿರಂತರವಾಗಿ ಮುಂದುವರಿಯಲಿವೆ ಎಂದು ತಿಳಿಸಿದರು.
ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿಯಾಗಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ ಹಾಗೂ ರಾಯಚೂರು ನಗರ ಕ್ಷೇತ್ರದ ಚುನಾವಣಾಧಿಕಾರಿಯಾಗಿ ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮಹಾಪಾತ್ರ ಕಾರ್ಯನಿರ್ವಹಿಸಿದ್ದಾರೆ. ಎರಡೂ ಕ್ಷೇತ್ರಗಳ ಸಹಾಯಕ ಮತದಾರರ ನೋಂದಣಾಧಿಕಾರಿಯಾಗಿ ರಾಯಚೂರು ತಹಶೀಲ್ದಾರ್ ಕಾರ್ಯನಿರ್ವಹಿಸಿದ್ದು, ಕಚೇರಿಯ ಇಬ್ಬರು ಶಿರಸ್ತೇದಾರರು ಹಾಗೂ ಸಿಬ್ಬಂದಿ ಸಹಕರಿಸಿದ್ದಾರೆ ಎಂದು ವಿವರಿಸಿದರು.
ಬಿಎಲ್ಒ ಮೇಲ್ವಿಚಾರಕರು, ನೋಡಲ್ ಅಧಿಕಾರಿಗಳು, ವಿವಿಧ ತಂತ್ರಜ್ಞಾನಗಳ ನೆರವು ಹಾಗೂ ಹೆಚ್ಚುವರಿ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಉತ್ತಮ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಶ್ರಮಿಸಿದ್ದಾರೆ. ಸುಮಾರು ಎರಡು ತಿಂಗಳ ಕಾಲ ನಡೆದ ಈ ಕಾರ್ಯದಲ್ಲಿ ಎಲ್ಲರೂ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿದ್ದಾರೆ. ರಾಜಕೀಯ ಪಕ್ಷಗಳ ಮುಖಂಡರು, ಮಾಧ್ಯಮದವರು, ಸಾರ್ವಜನಿಕರು ಹಾಗೂ ಮತದಾರರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ್ದಾರೆ ಎಂದರು.
ಜಿಲ್ಲಾಧಿಕಾರಿ ಪೂವಿತಾ ಎಸ್., ಅಪರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಆಯುಕ್ತರ ಮಾರ್ಗದರ್ಶನದಲ್ಲಿ ಮೇಲ್ವಿಚಾರಣಾ ತಂಡಗಳು ಮತ್ತು ತಾಂತ್ರಿಕ ಪರಿಣತಿ ಹೊಂದಿದ ಸಿಬ್ಬಂದಿಯ ಸಹಕಾರದಿಂದ ಎಸ್ಐಆರ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಯಚೂರು ಮಹಾನಗರ ಪಾಲಿಕೆಯ ಆಡಳಿತ ವಿಭಾಗದ ಉಪ ಆಯುಕ್ತ ಶರಣಪ್ಪ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.