ರಾಯಚೂರಿನಲ್ಲಿ ಬೆಳೆಹಾನಿ ಪರಿಶೀಲನೆ ನಡೆಸಿದ ಸಚಿವ ಡಾ.ಶರಣಪ್ರಕಾಶ್ ಪಾಟೀಲ್
ರಾಯಚೂರು : ರಾಯಚೂರು ಜಿಲ್ಲಾ ಉಸ್ತುವಾರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್ ಅವರು ಅ.3ರಂದು ಲಿಂಗಸುಗೂರ, ಮಸ್ಕಿ, ಸಿಂಧನೂರ ಮತ್ತು ಮಾನವಿ ತಾಲೂಕುಗಳಲ್ಲಿ ಸಂಚರಿಸಿ ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಗಳನ್ನು ಪರಿಶೀಲಿಸಿದರು.
ಬೆಳಿಗ್ಗೆ 9.30ಕ್ಕೆ ಲಿಂಗಸುಗೂರ ತಾಲೂಕಿನ ಗುರಗುಂಟಾ ಗ್ರಾಮದಲ್ಲಿ ತೊಗರಿ ಬೆಳೆಯ ಹಾನಿಯನ್ನು ವೀಕ್ಷಿಸಿದ ಅವರು, ನಂತರ ಮಸ್ಕಿ ತಾಲೂಕಿನ ಕೋಠ ಗ್ರಾಮದ ಹತ್ತಿ ಬೆಳೆ ಹಾಗೂ ಸಂತೆಕೆಲ್ಲೂರದ ತೊಗರಿ ಬೆಳೆ ಹಾನಿ ಪರಿಶೀಲಿಸಿದರು. ಬಳಿಕ ಸಿಂಧನೂರ ತಾಲೂಕಿನ ಸಂತೆಕೆಲ್ಲೂರ ಮತ್ತು ರಾಮತ್ನಾಳ ಗ್ರಾಮಗಳಲ್ಲಿ ಹಾಳಾದ ಹತ್ತಿ ಬೆಳೆಗಳನ್ನು ವೀಕ್ಷಿಸಿದರು.
ಮಧ್ಯಾಹ್ನ ಮಾನ್ವಿ ತಾಲೂಕಿಗೆ ಭೇಟಿ ನೀಡಿ ಹಿರೇಕೋಟ್ನೇಕಲ್ ಗ್ರಾಮದ ರೈತ ಮುದುಕಪ್ಪಗೌಡ ವಟಗಲ್ ಹಾಗೂ ನೀರಮಾನ್ವಿಯ ರೈತ ಮಹೇಶ್ ನಾಗಸಾಯಿ ಅವರ ಜಮೀನಿನಲ್ಲಿ ಹತ್ತಿ ಬೆಳೆ ಹಾನಿ ಪರಿಶೀಲನೆ ನಡೆಸಿದರು.
ಜಿಲ್ಲಾದ್ಯಂತ ಬೆಳೆಹಾನಿ ಕುರಿತ ಜಂಟಿ ಸಮೀಕ್ಷೆ ಆರಂಭವಾಗಿದ್ದು, ಅಧಿಕಾರಿಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಲು ಸೂಚನೆ ನೀಡಲಾಗಿದೆ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎ. ವಸಂತಕುಮಾರ, ಜಿಲ್ಲಾಧಿಕಾರಿ ನಿತೀಶ್ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ., ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯ ಡಾ. ರಝಾಕ್ ಉಸ್ತಾದ್, ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ ಸೇರಿದಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.