ಸ್ವಯಂ ದೃಢೀಕರಣ ಮೂಲಕವೂ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿ ಒದಗಿಸಲು ಅವಕಾಶ : ಜುಬೀನ್ ಮೊಹಪಾತ್ರ
ಜುಬಿನ್ ಮೋಹಪಾತ್ರ
ರಾಯಚೂರು : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಾರಂಭವಾಗಿದೆ. ಪ್ರತಿ ನಾಗರಿಕನು ತಮ್ಮ ಕುಟುಂಬದ ಮಾಹಿತಿಯನ್ನು ಸ್ವಯಂ ಘೋಷಣೆ ಮೂಲಕ ಸಲ್ಲಿಸಬಹುದು ಎಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತ ಜುಬೀನ್ ಮೊಹಪಾತ್ರ ತಿಳಿಸಿದ್ದಾರೆ.
ಸ್ವಯಂ ಘೋಷಣೆ ಸಲ್ಲಿಸಲು ನಾಗರಿಕರು https://kscbcselfdeclaration.karnataka.gov.in ವೆಬ್‌ಸೈಟ್‌ನಲ್ಲಿ ಲಾಗಿನ್ ಆಗಿ ಹೊಸ ಸಮೀಕ್ಷೆಯನ್ನು ಪ್ರಾರಂಭಿಸಬೇಕು. UHID ಮೂಲಕ ಖಾತೆ ದೃಢೀಕರಿಸಬಹುದು. UHID ಇಲ್ಲದಿದ್ದರೆ ESCOM ಖಾತೆ ID ಬಳಸಬಹುದು. ಮನೆ ಮುಖ್ಯಸ್ಥರು ಮತ್ತು ಕುಟುಂಬ ಸದಸ್ಯರ ಫೋಟೋಗಳನ್ನು ಅಪ್‌ಲೋಡ್ ಮಾಡಬೇಕು. ಪಡಿತರ ಚೀಟಿ ಅಥವಾ ಆಧಾರ್ ಮೂಲಕ ಮಾಹಿತಿ ಸಲ್ಲಿಸಬಹುದು. ಯಾವುದೇ ಸದಸ್ಯರು ಸಾವಿಗೊಂಡಿದ್ದರೆ ‘ಮೃತ’ ಎಂದು ಗುರುತಿಸಬೇಕು.
ಸ್ವಯಂ ಘೋಷಣೆ ಪ್ರಕ್ರಿಯೆಯಲ್ಲಿ ಎಲ್ಲಾ ಕುಟುಂಬ ಸದಸ್ಯರ ವೈಯಕ್ತಿಕ ಸಮೀಕ್ಷೆ ಪೂರ್ಣಗೊಂಡ ನಂತರ ಮಾತ್ರ ಕುಟುಂಬ ಸಮೀಕ್ಷೆಯನ್ನು ಸಲ್ಲಿಸಬಹುದಾಗಿದೆ. ಸಮೀಕ್ಷೆ ಸಲ್ಲಿಸಿದ ನಂತರ, ಬಳಕೆದಾರರಿಗೆ ಅಪ್ಲಿಕೇಶನ್ ಸಂಖ್ಯೆ ಲಭ್ಯವಾಗುತ್ತದೆ.
ರಾಯಚೂರು ಮಹಾನಗರ ಪಾಲಿಕೆ ಸಾರ್ವಜನಿಕರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ. ನಾಗರಿಕರು ಮಾಹಿತಿ ಜಾಗರೂಕತೆಯಿಂದ ಮತ್ತು ಸರಿಯಾಗಿ ಭರ್ತಿ ಮಾಡಬೇಕು ಎಂದು ಆಯುಕ್ತರು ಸೂಚಿಸಿದ್ದಾರೆ.