×
Ad

ಯುವ ಶಕ್ತಿಗೆ ಸಕಾರಾತ್ಮಕ ದಿಕ್ಕು ನೀಡಲು ರಾಯಚೂರಿನಲ್ಲಿ ‘ಭರವಸೆಯ ಓಟ’ ಮ್ಯಾರಥಾನ್

Update: 2025-10-09 18:17 IST

ರಾಯಚೂರು :ನಗರದ ಯುವಜನರು ಸಕಾರಾತ್ಮಕ ಚಟುವಟಿಕೆಗಳತ್ತ ಆಕರ್ಷಿತರಾಗಿ ತಮ್ಮ ಶಕ್ತಿಯನ್ನು ಸಮಾಜ ಹಿತದತ್ತ ಹರಿಸಬೇಕೆಂಬ ಸದುದ್ದೇಶದಿಂದ, ಮಹಾನಗರ ಪಾಲಿಕೆಯು ವಿವಿಧ ಇಲಾಖೆಗಳ ಸಹಯೋಗದಲ್ಲಿ ಅಕ್ಟೋಬರ್ 9 ರಂದು “ಸ್ವಚ್ಛ ಹಸಿರು ರಾಯಚೂರಿಗಾಗಿ ಭರವಸೆಯ ಓಟ” ಎಂಬ ವಿಷಯದಡಿ ಮ್ಯಾರಥಾನ್ ಸ್ಪರ್ಧೆಯನ್ನು ಆಯೋಜಿಸಿತು.

ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 5 ಕಿಲೋಮೀಟರ್ ಮ್ಯಾರಥಾನ್‌ಗೆ ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ ಚಾಲನೆ ನೀಡಿದರು. ಈ ಕಾರ್ಯಕ್ರಮವನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ತಡೆ ಮತ್ತು ನಿಯಂತ್ರಣಾಧಿಕಾರಿಗಳ (ಕೆ.ಎಸ್.ಎ.ಪಿ.ಎಸ್) ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಆಯುಕ್ತರು, ಇಂದಿನ ಯುವಜನರು ನಕಾರಾತ್ಮಕ ಚಟುವಟಿಕೆಗಳತ್ತ ತಿರುಗುತ್ತಿರುವ ಸನ್ನಿವೇಶದಲ್ಲಿ, ಅವರನ್ನು ಸರಿಯಾದ ಮಾರ್ಗದರ್ಶನದ ಮೂಲಕ ಸಮಾಜದ ಮುಖ್ಯಧಾರೆಗೆ ತರುವುದು ಅತ್ಯಗತ್ಯ. ಈ ಉದ್ದೇಶದಿಂದಲೇ ಇಂತಹ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಯುವಕರು ನಮ್ಮ ನಗರದ ಭವಿಷ್ಯ — ಅವರನ್ನು ಸಕಾರಾತ್ಮಕವಾಗಿ ಒಟ್ಟುಗೂಡಿಸುವುದು ನಮ್ಮ ಕರ್ತವ್ಯ ಎಂದರು.

ಭವಿಷ್ಯದಲ್ಲಿ ಕ್ರಿಕೆಟ್, ವಿಜ್ಞಾನ ಪ್ರದರ್ಶನ, ಸ್ವಚ್ಛತಾ ಅಭಿಯಾನ, ಕ್ರೀಡಾ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆಗಳಿವೆ. ಯುವಕರು ದುಶ್ಚಟಗಳಿಂದ ದೂರವಿದ್ದು, ಉತ್ತಮ ಜೀವನ ಮತ್ತು ಸಾಧನೆಗೆ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಸುರೇಂದ್ರ ಬಾಬು ಅವರು ಮಾತನಾಡಿ, ಆರೋಗ್ಯಕರ ಜೀವನಶೈಲಿ ಮತ್ತು ಏಡ್ಸ್ ನಿಯಂತ್ರಣದ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ. ಇಂತಹ ಸಮುದಾಯ ಕಾರ್ಯಕ್ರಮಗಳು ಆರೋಗ್ಯ ಮತ್ತು ಜಾಗೃತಿಯ ಸಂದೇಶವನ್ನು ತಲುಪಿಸಲು ಉತ್ತಮ ವೇದಿಕೆ ಎಂದರು.

ವಿಜೇತರಿಗೆ ಪ್ರಶಸ್ತಿ ವಿತರಣೆ:

17ರಿಂದ 35 ವರ್ಷದ ವಯೋಮಾನದ ಯುವಕರು ಮತ್ತು ಮಹಿಳೆಯರಿಗಾಗಿ ಆಯೋಜಿಸಿದ ಮ್ಯಾರಥಾನ್ ಅಂಬೇಡ್ಕರ್ ವೃತ್ತದಿಂದ ಸ್ಟೇಷನ್ ವೃತ್ತದವರೆಗೆ ಹಾಗೂ ನವೀನ್ ಆಸ್ಪತ್ರೆಯಿಂದ ಮಹಾತ್ಮ ಗಾಂಧಿ ಕ್ರೀಡಾಂಗಣದವರೆಗೆ ನಡೆಯಿತು.

ಪ್ರಥಮ ಬಹುಮಾನವನ್ನು ಪುರುಷರ ವಿಭಾಗದಲ್ಲಿ ದೇವದುರ್ಗ ತಾಲೂಕಿನ ಜಾಲಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ನಿಂಗಣ್ಣ, ಮಹಿಳಾ ವಿಭಾಗದಲ್ಲಿ ದೇವಸೂಗೂರಿನ ಯಲ್ಲಮ್ಮ, ದ್ವಿತೀಯ ಬಹುಮಾನವನ್ನು ಪುರುಷರ ವಿಭಾಗದಲ್ಲಿ ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ತಾಯಪ್ಪ, ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿ ಭೂಮಿಕಾ, ತೃತೀಯ ಬಹುಮಾನವನ್ನು ರಾಯಚೂರಿನ ಸನ್‌ರೈಸ್ ಕಾಲೇಜಿನ ವಿದ್ಯಾರ್ಥಿ ತಿಮ್ಮಪ್ಪ, ಎಲ್‌ವಿಡಿ ಕಾಲೇಜಿನ ಶೃತಿ ಅವರಿಗೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿರೇಶ್ ನಾಯಕ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರವೀಣ್ ಕುಮಾರ್, ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಎಂ.ಡಿ.ಶಾಕೀರ್ ಸೇರಿದಂತೆ ಪಾಲಿಕೆಯ ವಿವಿಧ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News