×
Ad

ರಾಯಚೂರು| ಕೆಪಿಎಸ್ ಮ್ಯಾಗ್ನೆಟ್ ವಿರೋಧಿಸಿ ಎಐಡಿಎಸ್ಒ ವತಿಯಿಂದ ಪ್ರತಿಭಟನೆ

Update: 2025-12-07 16:46 IST

ರಾಯಚೂರು: ಕೆಪಿಎಸ್ ಮ್ಯಾಗ್ನೆಟ್ ವಿರೋಧಿಸಿ ಇಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ ರಾಯಚೂರು ಜಿಲ್ಲಾ ಸಮಿತಿ ನೇತೃತ್ವದಲ್ಲಿ ರಾಯಚೂರು ತಾಲೂಕಿನ ಅನ್ವರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮತ್ತು ಪೋಷಕರು ಬೃಹತ್ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಐಡಿಎಸ್ಒ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಲ್ಯಾಣ್ ಕುಮಾರ್ , ಅನ್ವರ ಗ್ರಾಮದ ರೈತರು ಮತ್ತು ಕಾರ್ಮಿಕ ಕುಟುಂಬಗಳ ಮಕ್ಕಳು ಶಿಕ್ಷಣಕ್ಕೆ ಈ ಸರ್ಕಾರಿ ಶಾಲೆಯನ್ನೇ ಅವಲಂಬಿಸಿದ್ದಾರೆ. ಶಾಲೆಯನ್ನು ಮುಚ್ಚಿ, ಮೂರು ಕಿ.ಮೀ. ದೂರದಲ್ಲಿರುವ ಮಂಜರ್ಲಾ ಗ್ರಾಮಕ್ಕೆ ಮಕ್ಕಳನ್ನು ಕಳುಹಿಸುವುದು ಅಸಾಧ್ಯ. 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇರುವ ಈ ಶಾಲೆಯನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದು ಆಗ್ರಹಿಸಿದರು.

ರಾಜ್ಯ ಸರಕಾರ 40 ಸಾವಿರಕ್ಕೂ ಅಧಿಕ ಶಾಲೆಗಳನ್ನು ಮುಚ್ಚಲು ಮುಂದಾಗಿದ್ದರೂ, ಶಿಕ್ಷಣ ಸಚಿವರು ಮಾಧ್ಯಮಗಳ ಮುಂದೆ ಶಾಲೆ ಮುಚ್ಚಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಇದರ ಜೊತೆಗೆ, ಇಲಾಖೆಯಿಂದ ಶಾಲೆ ಮುಚ್ಚುವ ಆದೇಶ ಮತ್ತು ಪಟ್ಟಿಗಳನ್ನು ಬಿಡುಗಡೆ ಮಾಡುತ್ತಿರುವುದು ಸರಕಾರ ಬಡವರಿಂದ ಶಿಕ್ಷಣ ಕಸಿಯುವ ಖಾಸಗೀಕರಣದ ಹುನ್ನಾರ ಎಂದು ಕಲ್ಯಾಣ್ ಕುಮಾರ್ ದೂರಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಬಸವರಾಜ್, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ನಂದಗೋಪಾಲ್, ಪ್ರೀತಿ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಭೀಮಯ್ಯ ಮತ್ತು ಹಿರಿಯರಾದ ಈರಣ್ಣ, ವಿರೂಪಣ್ಣ, ಭೀಮಣ್ಣ ಸೇರಿದಂತೆ ನೂರಾರು ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News