ರಾಯಚೂರು | ʼಬಳ್ಳಾರಿ ವಲಯ ಮಟ್ಟದ ಕರ್ತವ್ಯ ಕೂಟ–2025ʼ; ಜಿಲ್ಲೆಯ ಪೊಲೀಸರಿಗೆ 20 ಬಹುಮಾನ : ಎಸ್ಪಿ ಪ್ರಶಂಸೆ
ರಾಯಚೂರು: ಬಳ್ಳಾರಿ ವಲಯ ಮಟ್ಟದ ಕರ್ತವ್ಯ ಕೂಟ–2025 ಕಾರ್ಯಕ್ರಮವು ಬಳ್ಳಾರಿಯಲ್ಲಿ ಅದ್ಧೂರಿಯಾಗಿ ನಡೆದಿದ್ದು, ರಾಯಚೂರು ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಒಟ್ಟು 20 ಬಹುಮಾನಗಳನ್ನು ಪಡೆದುಕೊಂಡು ವಿಶಿಷ್ಟವಾದ ಸಾಧನೆ ಮಾಡಿದ್ದಾರೆ.
ರಾಯಚೂರು ಜಿಲ್ಲಾ ಕ್ರೈಂ ಬ್ರಾಂಚ್‌ನ ಪಿಐ ತಿಮ್ಮಣ್ಣ ಚಾಮನೂರ್ ಅವರು ನಾಲ್ಕು ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿ ನಾಲ್ಕು ಪದಕಗಳನ್ನು ಪಡೆದು ಶ್ರೇಷ್ಠತೆ ಮೆರೆದರು.
ರಾಯಚೂರು ತಾಲೂಕಿನ ಯಾಪಲದಿನ್ನಿ ಪೊಲೀಸ್ ಠಾಣೆಯ ಪಿಎಸ್ಐ ಹುಲಿಗೇಶ್ ದೇವದುರ್ಗ ತಾಲೂಕಿನ ಗಬ್ಬೂರು ಪೊಲೀಸ್ ಠಾಣೆಯ ಪಿಎಸ್ಐ ಅರುಣ್ ಕುಮಾರ್ ರಾಥೋಡ್ ಎರಡು ಪದಕಗಳನ್ನು ಪಡೆದಿದ್ದಾರೆ. ಸಿಂಧನೂರು ತಾಲೂಕಿನ ಬಳಗಾನೂರು ಪೊಲೀಸ್ ಠಾಣೆಯ ಪಿಎಸ್ ಐ ಎರಿಯಪ್ಪ ಎರಡು ಪದಕಗಳನ್ನು ಪಡೆದುಕೊಂಡಿದ್ದಾರೆ. ಅದರ ಜೊತೆಗೆ ಶ್ವಾನದಳವು ಅಪರಾಧ ಪತ್ತೆ ಪ್ರಕರಣ ಸೇರಿದಂತೆ ಹಲವು ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿ ರಾಯಚೂರು ಪೊಲೀಸ್ ಇಲಾಖೆಗೆ ಕೀರ್ತಿ ತಂದಿದ್ದಾರೆ.
ಜಿಲ್ಲಾ ಪೊಲೀಸರ ಈ ಸಾಧನೆಗೆ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.