ರಾಯಚೂರು: ಭಾರತದಲ್ಲಿ ಜಾತಿ ವ್ಯವಸ್ಥೆ ನಿಂತ ನೀರಿನಂತಾಗಿದ್ದು, ಸಮಾಜದಲ್ಲಿ ಶಾಂತಿ ಮತ್ತು ಸಮಾನತೆ ನೆಲೆಸಲು ಬುದ್ಧನ ಪ್ರೀತಿ, ಮೈತ್ರಿ ಹಾಗೂ ದಮ್ಮದ ಸಂದೇಶ ಅತ್ಯಗತ್ಯವಾಗಿದೆ ಎಂದು ಮೈಸೂರಿನ ಮಾಜಿ ಮೇಯರ್ ಪುರುಷೋತ್ತಮ ಹೇಳಿದರು.

ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆಯೋಜಿಸಿದ್ದ ‘ಬುದ್ಧ ಪ್ರಜ್ಞಾ – ಮಕ್ಕಳ ಮೈತ್ರಿ ಉತ್ಸವ 2026’ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನ ಜೀವನವನ್ನು ಧನಾತ್ಮಕವಾಗಿ ಬದಲಾಯಿಸುವ ಶಕ್ತಿ ಬುದ್ಧನ ತತ್ವಗಳಲ್ಲಿ ಅಡಗಿದೆ. ಜಾತಿ ವ್ಯವಸ್ಥೆ, ಅಜ್ಞಾನ ಮತ್ತು ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಲು ದಮ್ಮ ಜ್ಯೋತಿಯ ಮೂಲಕ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.

ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಮಕ್ಕಳ ಜೀವನದಲ್ಲಿ ಬುದ್ಧ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳನ್ನು ಬಿತ್ತುವಂತಹ ವಾತಾವರಣ ನಿರ್ಮಾಣವಾಗಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ಮಕ್ಕಳಲ್ಲಿ ಪ್ರಜ್ಞೆ, ನಡತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಅಗತ್ಯ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಧ್ವಜಾರೋಹಣ, ತ್ರಿಶರಣ ಪಂಚಶೀಲ ಪಠಣ ಹಾಗೂ ಬುದ್ಧವಂದನೆ ನೆರವೇರಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ 32ಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಉತ್ಸವದಲ್ಲಿ ಮೈಸೂರು, ಕಲಬುರಗಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಕ್ಕಳು ಭಾಗವಹಿಸಿದ್ದರು. ಮಾತೆ ಗೌತಮಿ, ಧಮ್ಮಚಾರಿ ಮಲ್ಲಶೆಪ್ಪ ದೇವದುರ್ಗ, ಭಂತೆ ಸಂಘಪಾಲ್, ಗೌತಮಿ ಕಟ್ಟಿಮನಿ, ಧಮ್ಮಚಾರಿ ನರಸಿಂಹಲು, ಮಲ್ಲೇಶ್ ಕೊಲಮಿ, ದೇವಯ್ಯ ಮೈಸೂರು, ಗಿರಿಯಪ್ಪ ನೆಲಹಾಳ ಸೇರಿದಂತೆ ಹಲವು ಗಣ್ಯರು, ವಿದ್ಯಾರ್ಥಿಗಳು, ಪಾಲಕರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor