×
Ad

Raichur | 371(ಜೆ) ವ್ಯಾಜ್ಯಗಳಿಗೆ ಪ್ರತ್ಯೇಕ ನ್ಯಾಯ ಮಂಡಳಿ ರಚನೆಗೆ ಆಗ್ರಹ

ಕೆಪಿಎಸ್ ಶಾಲೆಗೆ ವಿರೊಧ ಹೋರಾಟಗಾರರ ಸಮಾವೇಶದಲ್ಲಿ ನಿರ್ಣಯ

Update: 2026-05-24 22:30 IST

ರಾಯಚೂರು : ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳ ಉದ್ಯೋಗ ನೇಮಕಾತಿಯಲ್ಲಿ ಮೀಸಲಾತಿಗೆ ಸಂಬಂಧಿಸಿದ ವ್ಯಾಜ್ಯಗಳ ನಿವಾರಣೆಗೆ ಪ್ರತ್ಯೇಕ 371(ಜೆ) ನ್ಯಾಯ ಮಂಡಳಿ ರಚಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಸಂಬಂಧಿಸಿದಂತೆ 371(ಜೆ) ಹೋರಾಟಗಾರರ ಸಮಾವೇಶದಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.

ನಗರದ ಎಸ್‌ಎಲ್‌ವಿ ಹೋಟೆಲ್ ಸಮೀಪದ ಕೋಠಾರಿ ಹಾಲ್‌ನಲ್ಲಿ ಭಾನುವಾರ ನಡೆದ 371(ಜೆ) ಹೋರಾಟಗಾರರ ಸಮಾವೇಶ ಹಾಗೂ ದುಂಡು ಮೇಜಿನ ಸಭೆಯಲ್ಲಿ ಹೋರಾಟಗಾರ್ತಿ ಶಾರದಾ ಹುಲಿ ನಾಯಕ ನಿರ್ಣಯ ಮಂಡಿಸಿದರು. ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರೂ ಅದಕ್ಕೆ ಬೆಂಬಲ ವ್ಯಕ್ತಪಡಿಸಿದರು.

ನೇಮಕಾತಿ ಪ್ರಕ್ರಿಯೆ ವೇಳೆ 371(ಜೆ) ನಿಯಮಗಳನ್ನು ಪ್ರಶ್ನಿಸಿ ಬೆಂಗಳೂರು, ಬೆಳಗಾವಿ ಹಾಗೂ ಕಲಬುರಗಿ ಆಡಳಿತಾತ್ಮಕ ನ್ಯಾಯ ಮಂಡಳಿಗಳಲ್ಲಿ ವ್ಯಾಜ್ಯಗಳು ದಾಖಲಾಗುತ್ತಿವೆ. ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ 2013ರ ನಿಯಮ 12(ಎ) ಅನ್ವಯ ಪ್ರತ್ಯೇಕ ನ್ಯಾಯ ಮಂಡಳಿ ರಚಿಸಬೇಕು ಎಂದು ಒತ್ತಾಯಿಸಲಾಯಿತು.

ಇದೇ ವೇಳೆ ಕೆಪಿಎಸ್‌ಸಿ, ಕೆಇಎ, ಪಿಯು ಬೋರ್ಡ್ ಸೇರಿದಂತೆ ರಾಜ್ಯ ಮಟ್ಟದ ವಿಭಾಗೀಯ ಕಚೇರಿಗಳನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ವರ್ಗಾಯಿಸಬೇಕು. 371(ಜೆ) ಮೀಸಲಾತಿ ಸಮರ್ಪಕವಾಗಿ ಜಾರಿಯಾಗದ ಇಲಾಖೆಗಳನ್ನು ಗುರುತಿಸಿ ಶೇ.8ರ ಮೀಸಲಾತಿಯನ್ನು ಕಾಲಮಿತಿಯೊಳಗೆ ಜಾರಿಗೊಳಿಸಬೇಕು ಎಂದು ಆಗ್ರಹಿಸಲಾಯಿತು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೆಪಿಎಸ್ ಹಾಗೂ ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ ಗ್ರಾಮೀಣ ಶಾಲೆಗಳನ್ನು ಮುಚ್ಚುವ ನಿರ್ಧಾರ ಹಿಂಪಡೆಯಬೇಕು. ಕೆಕೆಆರ್‌ಡಿಬಿಯಿಂದ 2 ಕೋಟಿ ರೂ. ಅನುದಾನ ಬಿಡುಗಡೆ ನಿರ್ಧಾರವನ್ನು ರದ್ದುಪಡಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.

ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಎಂ.ಫಿಲ್ ಹಾಗೂ ಪಿಎಚ್‌ಡಿ ಪ್ರವೇಶ ಅಧಿಸೂಚನೆಗಳಲ್ಲಿ 371(ಜೆ) ಮೀಸಲಾತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು. ಪ್ರಾಥಮಿಕ, ಪ್ರೌಢಶಾಲೆ, ಪಿಯು ಹಾಗೂ ತಾಂತ್ರಿಕ ಕಾಲೇಜುಗಳಲ್ಲಿ ಖಾಲಿ ಇರುವ ಸುಮಾರು 40 ಸಾವಿರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬ ಬೇಡಿಕೆಗಳೂ ಮುಂದಿಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News