Raichur | ಕಾಲುವೆಗಳಿಗೆ ಜಿಲ್ಲಾಧಿಕಾರಿಗಳ ಭೇಟಿ; ಪರಿಶೀಲನೆ
ರಾಯಚೂರು : ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು ಸೋಮವಾರ ಗಣೇಕಲ್ ಜಲಾಶಯಕ್ಕೆ ಭೇಟಿ ನೀಡಿ ನೀರಿನ ಸಂಗ್ರಹದ ಸ್ಥಿತಿಯನ್ನು ಪರಿಶೀಲಿಸಿದರು. ಬಳಿಕ ನಾಗಡದಿನ್ನಿ, ಅತ್ತನೂರ ಹಾಗೂ ಶಿರವಾರ ಕಾಲುವೆಗಳಿಗೆ ಭೇಟಿ ನೀಡಿ ನೀರು ಹರಿಸುವ ವ್ಯವಸ್ಥೆಯನ್ನು ಅವಲೋಕಿಸಿದರು.
ಈ ವೇಳೆ ಕಾಲುವೆಗಳಿಗೆ ಬಿಡಲಾಗಿರುವ ನೀರು ಕುಡಿಯುವ ನೀರಿನ ಉದ್ದೇಶಕ್ಕೆ ಸಮರ್ಪಕವಾಗಿ ಬಳಕೆಯಾಗಬೇಕು ಹಾಗೂ ಅನಾವಶ್ಯಕವಾಗಿ ಪೋಲಾಗದಂತೆ ಸಂಬಂಧಿತ ಇಲಾಖೆಯ ಅಧಿಕಾರಿಗಳು ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ಅವರು ಸೂಚನೆ ನೀಡಿದರು.
ಸಾರ್ವಜನಿಕರು ಯಾವುದೇ ಕಾರಣಕ್ಕೂ ಕಾಲುವೆಗಳ ಗೇಟ್‌ಗಳನ್ನು ತೆರೆಯಬಾರದು. ನಿಯಮ ಉಲ್ಲಂಘಿಸಿ ಗೇಟ್‌ಗಳನ್ನು ತೆರೆದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಪರಿಶೀಲನೆ ವೇಳೆ ಶಿರವಾರ ತಹಶೀಲ್ದಾರ್ ಅಶೋಕ ಪವಾರ್, ನೀರಾವರಿ ಇಲಾಖೆ ಅಧಿಕಾರಿಗಳು, ಪಿಡಿಒ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.