Raichur | ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಲು ಆಗ್ರಹಿಸಿ ಡಿಎಚ್ಎಸ್ ಪ್ರತಿಭಟನೆ
ರಾಯಚೂರು : ಜಿಲ್ಲೆಯಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯ, ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ (DHS) ಜಿಲ್ಲಾ ಸಮಿತಿ ವತಿಯಿಂದ ಸೋಮವಾರ ನಗರದ ಟಿಪ್ಪು ಸುಲ್ತಾನ್ ಗಾರ್ಡನ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ಭೂಮಾನಂದ ಕೊಲೆ ಪ್ರಕರಣ, ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದ ಅಶ್ವಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಹಾಗೂ ಲಿಂಗಸುಗೂರು ತಾಲೂಕಿನ ಕರಡಕಲ್ ಗ್ರಾಮದ ರೇಣಮ್ಮ ಕೊಲೆ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಲಾಯಿತು.
ಪ್ರಕರಣಗಳ ಆರೋಪಿಗಳ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಕಠಿಣ ಕ್ರಮ ಕೈಗೊಂಡು ತ್ವರಿತ ವಿಚಾರಣೆ ನಡೆಸಬೇಕು. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ ಜಿಲ್ಲಾ ಕೇಂದ್ರಗಳಲ್ಲಿ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಂತ್ರಸ್ತ ಕುಟುಂಬಗಳಿಗೆ ತಲಾ 50 ಲಕ್ಷ ರೂ. ಪರಿಹಾರ, ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ಅಥವಾ 5 ಎಕರೆ ಕೃಷಿ ಭೂಮಿ ನೀಡಬೇಕು. ಡಿಸಿಆರ್‌ಇ ಪೊಲೀಸ್ ಠಾಣೆಯನ್ನು ಬಲಪಡಿಸಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಸಿಂಧನೂರು ತಾಲೂಕಿನ ವೀರಾಪುರ ಗ್ರಾಮದ ದಲಿತರಿಗೆ ಭೂ ಒಡೆತನ ಯೋಜನೆಯಡಿ ಮಂಜೂರಾದ ಜಮೀನುಗಳ ಪಹಣಿಯನ್ನು ಫಲಾನುಭವಿಗಳ ಹೆಸರಿಗೆ ಮಾಡಬೇಕು. ಸರ್ವೆ ನಂ.184ರ 9 ಎಕರೆ 7 ಗುಂಟೆ ಜಮೀನು ಹಾಗೂ ಸರ್ವೆ ನಂ.118ರಲ್ಲಿ 1982ರಲ್ಲಿ ಮಂಜೂರಾದ ಜಮೀನಿನ ಪಟ್ಟಾ ಮತ್ತು ಪಹಣಿಯಲ್ಲಿ ಫಲಾನುಭವಿಗಳ ಹೆಸರು ದಾಖಲಿಸುವಂತೆ ಆಗ್ರಹಿಸಿದರು.
ದಲಿತರು ಹಾಗೂ ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಬಳಿಕ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಹೆಚ್. ಪದ್ಮಾ, ಕೆ.ಜಿ. ವೀರೇಶ, ಅಪ್ಪಣ್ಣ ಕಾಂಬಳೆ, ಬಸವಂತರಾಯ ಗೌಡ, ವೀರನಗೌಡ, ಕರಿಯಪ್ಪ ಅಚ್ಚೋಳಿ, ಕರಿಯಮ್ಮ ವೀರಾಪುರ, ಹುಸೇನಪ್ಪ ದಡೆಸೂಗೂರು, ನರಸಿಂಹಲು ವಡವಾಟಿ, ತಿಮ್ಮಲಮ್ಮ ಬೋಳಬಂಡಿ, ನರಸಮ್ಮ ವಡವಾಟಿ, ಪಿ. ಯಲ್ಲಮ್ಮ, ಮಹಾದೇವಿ, ಜಮಲಮ್ಮ, ಶೇಖಮ್ಮ, ಹುಲಿಗೆಮ್ಮ, ಉತ್ತಮ್ಮ, ಸರೋಜಮ್ಮ, ನರಸಪ್ಪ, ಆನಂದ, ಶ್ರೀನಿವಾಸ, ಗಂಗಮ್ಮ, ದೇವಕಮ್ಮ, ತಾಯಮ್ಮ, ತಿಪ್ಪಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.