ರಾಯಚೂರು | ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಠಿಸಿದ ವಂಚಕರು
ರಾಯಚೂರು: ಸಾಮಾನ್ಯ ಜನರ ಸಾಮಾಜಿಕ ಜಾಲತಾಣ ಖಾತೆಗಳನ್ನು ನಕಲಿ ಮಾಡಿ ವಂಚನೆ ಮಾಡುವ ಸೈಬರ್ ವಂಚಕರು ಈಗ ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಕೆ. ಅವರ ಹೆಸರಿನಲ್ಲಿಯೇ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ವಂಚನೆಗೆ ಮುಂದಾಗಿದ್ದಾರೆ..
ಜಿಲ್ಲಾಧಿಕಾರಿ ನಿತೀಶ್ ಅವರ ಹೆಸರಿನಲ್ಲಿ ತೆರೆದಿದ್ದ ನಕಲಿ ಫೇಸ್‌ಬುಕ್ ಖಾತೆಯನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಈ ಹಿಂದೆಯೂ ಇದೇ ರೀತಿಯಲ್ಲಿ ಡಿಸಿ ಹೆಸರಿನ ಖಾತೆಗಳನ್ನು ನಕಲಿ ಮಾಡಿ ಜನರನ್ನು ವಂಚಿಸಿದ ಪ್ರಕರಣಗಳು ನಡೆದಿದ್ದು, ಆ ಸಂಬಂಧ ತನಿಖೆಯೂ ನಡೆದಿತ್ತು. ಇದೀಗ ಮತ್ತೊಮ್ಮೆ ಇದೇ ರೀತಿಯ ನಕಲಿ ಖಾತೆ ಸೃಷ್ಟಿಸಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ನಿತೀಶ್ ಅವರ ಹೆಸರಿನಲ್ಲಿಯೇ ನಕಲಿ ಖಾತೆ ಸೃಷ್ಠಿಸಿರುವ ಬಗ್ಗೆ ದೂರು ಬಂದಿದ್ದು, ಈ ಬಗ್ಗೆ ಆರೋಪಿ ಪತ್ತೆಗೆ ಅಗತ್ಯ ಕ್ರಮಗಳನ್ನು ಸೈಬರ್ ವಿಭಾಗವು ತೆಗೆದುಕೊಳ್ಳಲಿದೆ. ಸಾರ್ವಜನಿಕರ ಖಾತೆಗಳನ್ನು ನಕಲಿ ಮಾಡುತ್ತಿದ್ದ ವಂಚಕರ ಜಾಲಕ್ಕೆ ಬಲಿಯಾಗದಂತೆ ಜಾಗೃತವಹಿಸಬೇಕು ಎಂದು ಸೈಬರ್ ಅಪರಾಧ ವಿಭಾಗದ ಡಿವೈಎಸ್‍ಪಿ ವೆಂಕಟೇಶ ಊಗಿಬಂಡಿ ಅವರು ತಿಳಿಸಿದ್ದಾರೆ.