ರಾಯಚೂರು | ಗವಾಯಿ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲನನ್ನು ಗಲ್ಲು ಶಿಕ್ಷೆಗೆ ಒಳಪಡಿಸಿ : ಮರಿಲಿಂಗಪ್ಪ ಕೋಳೂರ
Update: 2025-10-06 21:04 IST
ರಾಯಚೂರು : ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ ಮೇಲೆ ಶೂ ಎಸೆಯಲು ಯತ್ನಿಸಿದ ಮನುಸ್ಮೃತಿ ಮನಸ್ಥಿತಿಯ ವಕೀಲನನ್ನು ಗಲ್ಲು ಶಿಕ್ಷೆಗೆ ಒಳಪಡಿಸಿ ಎಂದು ವಕೀಲ ಮರಿಲಿಂಗಪ್ಪ ಕೋಳೂರ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಪತ್ರಿಕಾ ಹೇಳಿಕೆ ನೀಡಿದ ಅವರು, ಸನಾತನ ಧರ್ಮದ ಹೆಸರಲ್ಲಿ, ಸಂವಿಧಾನಾತ್ಮಕವಾಗಿ ಉನ್ನತ ಹುದ್ದೆಯಲ್ಲಿರುವ ಮುಖ್ಯನ್ಯಾಯಮೂರ್ತಿಯ ಮೇಲೆ ವಕೀಲನು ಶೂ ಎಸೆಯಲು ಯತ್ನಿಸಿರುವುದು ಖಂಡನೀಯ ಬೆಳವಣಿಗೆ. ಇದು ದೇಶದ್ರೋಹ ಕೃತ್ಯ ಮತ್ತು ಸಂವಿಧಾನದ ಮೇಲೆ ನಡೆದ ವ್ಯವಸ್ಥಿತ ದಾಳಿ. ಧರ್ಮದ ಹೆಸರಿನಲ್ಲಿ ಈ ರೀತಿಯ ಅಸಹಿಷ್ಣುತೆಯ ನಡೆ ದೇಶದ ಭವಿಷ್ಯಕ್ಕೆ ಅಪಾಯಕಾರಿಯಾಗಿದೆ. ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಸಿ ಗಲ್ಲು ಶಿಕ್ಷೆ ವಿಧಿಸಬೇಕು, ಇಲ್ಲವಾದರೆ ದೇಶದ ಬಹುಸಂಖ್ಯಾತ ಜನರು ನ್ಯಾಯಾಂಗದ ಮೇಲೆ ಭರವಸೆ ಕಳೆದುಕೊಳ್ಳುತ್ತಾರೆ ಎಂದು ಅವರು ತಿಳಿಸಿದ್ದಾರೆ.