ರಾಯಚೂರು | ದಸರಾ ಅಂಗವಾಗಿ ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮ
ರಾಯಚೂರು : “ಅನುಭವದಿಂದ ಮೂಡುವ ಮನಸ್ಸಿನ ಅದ್ಭುತ ಭಾವನೆ, ರೂಪದೊಂದಿಗೆ ವಾಸ್ತವಿಕ ನೆಲಗಟ್ಟಿನ ಮೇಲೆ ಹೊರಹೊಮ್ಮುವ ಸಾಲುಗಳು ಕಾವ್ಯವೆನಿಸಿಕೊಳ್ಳುತ್ತವೆ” ಎಂದು ನಿವೃತ್ತ ಪ್ರಾಚಾರ್ಯ ಪರಮೇಶ್ವರ ಸಾಲಿಮಠ ಹೇಳಿದರು.
ನಗರದ ಮಕ್ಕಾದರವಾಜ ಆವರಣದಲ್ಲಿ ರಾಯಚೂರು ಮಹಾನಗರ ಪಾಲಿಕೆ ಹಾಗೂ ಐತಿಹಾಸಿಕ ಕೋಟೆ ಅಧ್ಯಯನ ಸಮಿತಿ ಜಂಟಿಯಾಗಿ ನಾಡಹಬ್ಬ ದಸರಾ–2025 ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ವಿಶಾಲವಾಗಿರುವುದನ್ನು ಸಂಕ್ಷಿಪ್ತ ಸಾಲುಗಳಲ್ಲಿ ಹಿಡಿಯುವುದೇ ಕಾವ್ಯ. ಕವನ ರೂಪ ಯಾವದೇ ಆಗಿರಲಿ, ಕಾವ್ಯ ಶಕ್ತಿಯುತ ಅನುಭವದಿಂದ ವಾಸ್ತವಿಕತೆ ಹೊಂದಿರಬೇಕು. ಅಧ್ಯಾಯ, ಅನುಭವ, ವಿಚಾರಗಳನ್ನು ಜೀವನದಲ್ಲಿ ಅರಗಿಸಿಕೊಂಡಾಗ ಉತ್ತಮ ಕವಿ ಆಗಲು ಸಾಧ್ಯ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಿರಿಯ ಸಾಹಿತಿ ಬಾಬು ಭಂಡಾರಿಗಲ್ ಅವರು, “ಕೋಟೆ ರಕ್ಷಣೆಯಲ್ಲಿ ಉತ್ತಮ ಕಾರ್ಯ ನಡೆಯುತ್ತಿದೆ. ದಸರಾ ಮಹೋತ್ಸವ ಅಂಗವಾಗಿ ಕವಿಗೋಷ್ಠಿ ಹಮ್ಮಿಕೊಳ್ಳಲಾಗುವುದು ಶ್ಲಾಘನೀಯ. ರಾಜ್ಯದ ಸಾಹಿತ್ಯಕ್ಕೆ ರಾಯಚೂರು ಅನೇಕ ಕೊಡುಗೆ ನೀಡಿದೆ. ಸಾಹಿತ್ಯ ಕ್ಷೇತ್ರದ ಕೊಡುಗೆದಾರರನ್ನು ಸ್ಮರಿಸಲು ಇಂತಹ ಕಾರ್ಯಕ್ರಮಗಳು ಅಗತ್ಯ” ಎಂದರು.
ಕವಿ ವೆಂಕಟೇಶ ಬೇವಿನಬೆಂಚಿ ಮಾತನಾಡಿ, “ನೂತನ ಸಾಹಿತಿಗಳಿಗೆ ಚೈತನ್ಯ ಅಗತ್ಯ. ಹೆಚ್ಚಿನ ಸಂಶೋಧನೆ, ಅಧ್ಯಯನ ಮುಖ್ಯ. ಸಾಮಾಜಿಕ ಜಾಲತಾಣಗಳು ಯುವಕರ ಸಾಹಿತ್ಯಾಸಕ್ತಿಗೆ ಕಡಿವಾಣ ಹಾಕುತ್ತಿವೆ. ಸಾಹಿತ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು” ಎಂದು ಸಲಹೆ ನೀಡಿದರು.
ಕಾರ್ಯಕ್ರಮವನ್ನು ಮಹಾನಗರ ಪಾಲಿಕೆಯ ಮಹಾಪೌರ ನರಸಮ್ಮ ನರಸಿಂಹಲು ಮಾಡಿಗಿರಿ ಉದ್ಘಾಟಿಸಿದರು. ವೇದಿಕೆಯಲ್ಲಿ ಉಪ ಮಹಾಪೌರ ಸಾಜೀದ್ ಸಮೀರ್, ಹಿರಿಯ ಪಾಲಿಕೆ ಸದಸ್ಯರು, ಕೋಟೆ ಅಧ್ಯಯನ ಸಮಿತಿಯ ಗೌರವಾಧ್ಯಕ್ಷ ಜಯಣ್ಣ, ಆರ್.ಡಿ.ಎ. ಸದಸ್ಯ ನರಸಿಂಹಲು ಮಾಡಿಗಿರಿ, ಮಹಾನಗರ ಪಾಲಿಕೆ ಉಪ ಆಯುಕ್ತೆ ಸಂತೋಷ ರಾಣಿ, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಉರ್ದು ಕವಿ ಡಾ.ಇಫ್ತೆಕಾರ್ ಶಕೀಲ್ ಸೇರಿದಂತೆ ಅನೇಕರು ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಎಚ್.ಎಚ್.ಮ್ಯಾದರ್ ಸ್ವಾಗತಿಸಿದರು, ಕೋಟೆ ಅಧ್ಯಯನ ಸಮಿತಿ ಅಧ್ಯಕ್ಷ ಕೆ. ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ್ ಐಲಿ ನಿರೂಪಣೆ ಮಾಡಿದರು.