ರಾಯಚೂರು | ಕೇಂದ್ರ ಸರಕಾರದ ವಿದ್ಯುತ್ ಖಾಸಗೀಕರಣ ಕಾಯ್ದೆಯ ವಿರುದ್ಧ ಅ.26 ರಂದು ಹೋರಾಟ : ವೇಣುಗೋಪಾಲ
ರಾಯಚೂರು : ಕೇಂದ್ರ ಸರ್ಕಾರ ವಿದ್ಯುತ್ ಇಲಾಖೆಯನ್ನು ಖಾಸಗೀಕರಣಗೊಳಿಸಲು, ಸ್ಮಾರ್ಟ್ ಮೀಟರ್ ಅಳವಡಿಸಲು ಹಾಗೂ ವಿದ್ಯುತ್ ಕಾಯ್ದೆ ಪರಿಷ್ಕರಣೆ ಮಾಡಲು ಮುಂದಾಗಿರುವ ಕ್ರಮವನ್ನು ವಿರೋಧಿಸಿ ಅ.26ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ದಕ್ಷಿಣ ಭಾರತ ವಿದ್ಯುತ್ ಬಳಕೆದಾರರ ವಲಯ ಸಮಾವೇಶ ಆಯೋಜಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ವೇಣುಗೋಪಾಲ್ ಭಟ್ ತಿಳಿಸಿದ್ದಾರೆ.
ಅವರು ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ವಿದ್ಯುತ್ ಕಾಯ್ದೆಯಲ್ಲಿ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ. ಇದರ ಮೂಲಕ ಬಹುರಾಷ್ಟ್ರೀಯ ಕಂಪನಿಗಳ ಕೈಗೆ ವಿದ್ಯುತ್ ವಿತರಣೆಯನ್ನು ನೀಡುವ ಹುನ್ನಾರಗಳು ನಡೆಯುತ್ತಿವೆ. ಈಗಾಗಲೇ ದೆಹಲಿ ಮತ್ತು ಮುಂಬೈಗಳಲ್ಲಿ ಖಾಸಗಿ ಕಂಪನಿಗಳು ವಿದ್ಯುತ್ ಪೂರೈಕೆ ಮಾಡುತ್ತಿವೆ. ಜೀವನಾಶ್ಯಕವಾದ ವಿದ್ಯುತ್‌ನ ದರವನ್ನು ನಿರಂತರವಾಗಿ ಹೆಚ್ಚಿಸಿ, ಬಳಕೆದಾರರನ್ನು ಕಂಗೆಡಿಸುವ ಕೆಲಸ ನಡೆದಿದೆ ಎಂದು ಹೇಳಿದರು.
ಅದಾನಿ, ಅಂಬಾನಿ, ಟೊರೆಂಟ್ ಸೇರಿದಂತೆ ಅನೇಕ ಖಾಸಗಿ ಕಂಪನಿಗಳ ಕೈಗೆ ವಿದ್ಯುತ್ ನಿರ್ವಹಣೆಯನ್ನು ನೀಡಲಾಗುತ್ತಿದೆ. 2022ರಲ್ಲಿ ಎನ್‌ಡಿಎ ಸರ್ಕಾರ ವಿದ್ಯುಚ್ಛಕ್ತಿ ಮಸೂದೆ ಸಂಸತ್ತಿನಲ್ಲಿ ಮಂಡಿಸಿತ್ತು. ಆದರೆ ಜನರ ತೀವ್ರ ವಿರೋಧದ ಹಿನ್ನೆಲೆ ಅದು ಸದನ ಸಮಿತಿಗೆ ವಹಿಸಲ್ಪಟ್ಟಿತು. ರೈತರು ಮತ್ತು ಜನರ ಹೋರಾಟದ ಫಲವಾಗಿ ಅದು ಇನ್ನೂ ಜಾರಿಯಾಗಿಲ್ಲ. ಈ ನಡುವೆ ರಾಜ್ಯ ಸರ್ಕಾರ ಸ್ಮಾರ್ಟ್ ಮೀಟರ್ ಅಳವಡಿಸಲು ಮುಂದಾಗಿದೆ. ನೌಕರರ ಸಂಖ್ಯೆಯನ್ನು ಕಡಿಮೆ ಮಾಡಿ ಖಾಸಗೀಕರಣಕ್ಕೆ ದಾರಿ ಮಾಡಿಕೊಡಲಾಗುತ್ತಿದೆ ಎಂದರು.
ಗ್ರಾಹಕರನ್ನು ಪ್ರಜ್ಞಾಪೂರ್ವಕವಾಗಿ ವಂಚಿಸುವ ಪ್ರಯತ್ನಗಳನ್ನು ಜನರು ಪ್ರತಿರೋಧದ ಮೂಲಕ ತಡೆದು ನಿಲ್ಲಿಸಬೇಕು. ದೇಶದ ವಿವಿಧ ರಾಜ್ಯಗಳಲ್ಲಿ ಹೋರಾಟ ಬಲಗೊಳಿಸುವ ಉದ್ದೇಶದಿಂದ ನಡೆಯುವ ಈ ಸಮಾವೇಶದಲ್ಲಿ ಕರ್ನಾಟಕ, ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.
ರಾಷ್ಟ್ರೀಯ ವಿದ್ಯುತ್ ಬಳಕೆದಾರರ ಸಂಘದ ಅಧ್ಯಕ್ಷ ಸ್ವಪನ್ ಘೋಷ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ.
ಅತಿಥಿಗಳಾಗಿ ಹರಿಯಾಣದ ಮಾಜಿ ಐಎಎಸ್ ದೇವ ಸಹಾಯಂ, ಆಂಧ್ರಪ್ರದೇಶ ಸಂಯುಕ್ತ ಕೃಷಿ ಮೋರ್ಚಾದ ವಡ್ಡೆ ಸೋಭನಾದ್ರಿಶ್ವರ, ತಮಿಳುನಾಡಿನ ಎಐಇಸಿಎ ಅಧ್ಯಕ್ಷ ಎಸ್. ಗಾಂಧಿ, ಕೇರಳದ ಜನಕೀಯ ಪ್ರತಿರೋಧ ಸಮಿತಿಯ ಬಿ. ದಿಲಿಪನ್, ಸಮರ್ ಸಿನ್ಹಾ, ಕೆ. ಸೋಮಶೇಖರ, ಅಜಯ ಚಟರ್ಜಿ, ದೀಪಾ, ಜ್ಞಾನಮೂರ್ತಿ, ಸುರೇಂದ್ರನ್, ಅನವರಣ್, ಶಿವುಕುಮಾರ ಮತ್ತು ಹೆಚ್ಚಿ ಶಿವಪ್ರಕಾಶ ಸೇರಿದಂತೆ ವಿವಿಧ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅಣ್ಣಪ್ಪ ಶಿರಶ್ಯಾಡ್, ಪಾಂಡುರಂಗ ಸೇರಿ ಇತರಿದ್ದರು.