×
Ad

ರಾಯಚೂರು | ಸಫಾಯಿ ಕರ್ಮಚಾರಿಗಳಿಗೆ ವಸತಿ, ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಿ : ಡಿಸಿ ನಿತೀಶ್ ಕೆ. ಸೂಚನೆ

Update: 2025-10-04 17:22 IST

ರಾಯಚೂರು : ಜಿಲ್ಲೆಯ ಸಫಾಯಿ ಕರ್ಮಚಾರಿಗಳಿಗೆ ವಸತಿ, ಪುನರ್ವಸತಿ ಹಾಗೂ ಪೌರ ಕಾರ್ಮಿಕರಿಗೆ ಅಗತ್ಯ ಸವಲತ್ತುಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಮ್ಯಾನ್ಯುಯಲ್ ಸ್ಕ್ಯಾವೆಂಜರ್/ಸಫಾಯಿ ಕರ್ಮಚಾರಿಗಳ ಪ್ರಗತಿ ಪರಿಶೀಲನಾ ಸಭೆಗೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಫಾಯಿ ಕರ್ಮಚಾರಿಗಳಿಗೆ ನಿಗದಿತ ಸಮಯಕ್ಕೆ ವೇತನ ಪಾವತಿಸುವುದು ಹಾಗೂ ಸೌಲಭ್ಯಗಳನ್ನು ಒದಗಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ಗುತ್ತಿಗೆ ಸಫಾಯಿ ಕರ್ಮಚಾರಿಗಳಿಗೆ ಗುತ್ತಿಗೆ ಏಜೆನ್ಸಿ ಸಮಯಕ್ಕೆ ಸರಿಯಾಗಿ ವೇತನ ಮತ್ತು ಇಎಸ್‌ಐ, ಪಿಎಫ್ ಪಾವತಿಸುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ನಿಯಮಾನುಸಾರ ಇದ್ದಲ್ಲಿ ಮಾತ್ರವೇ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಬೇಕು ಎಂದು ಸೂಚಿಸಿದರು.

ನಗರದ ಸಿಯಾತಲಾಬ್ ಪ್ರದೇಶದಲ್ಲಿ ನಿರ್ಮಾಣದಲ್ಲಿರುವ ಸಫಾಯಿ ಕರ್ಮಚಾರಿಗಳ ಸಮುದಾಯ ಭವನದ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಅವರು ನಿರ್ದೇಶಿಸಿದರು. ಈ ಭವನ ಕಾಮಗಾರಿ ಕೆಕೆಆರ್‌ಡಿಬಿ ಅನುದಾನದಲ್ಲಿ ಪ್ರಗತಿ ಹಂತದಲ್ಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ನಗರಸಭೆ ಆಯುಕ್ತರಾದ ಜುಬಿನ್ ಮೊಹಪಾತ್ರ ಅವರು, ವಾರ್ಷಿಕ ಆದಾಯ 2.50 ಲಕ್ಷ ರೂ. ಕ್ಕಿಂತ ಕಡಿಮೆ ಇರುವ ಎಸ್‌ಸಿಎಸ್‌ಪಿ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ ಕುಟುಂಬಗಳ ಮಕ್ಕಳ ಶಿಕ್ಷಣ ಪ್ರವೇಶ ಶುಲ್ಕವನ್ನು ನಗರಸಭೆಯ ಅನುದಾನದಿಂದ ಭರಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ., ಐಎಎಸ್ ಪ್ರೊಬೆಷನರಿ ಅಧಿಕಾರಿ ಪುರುರಾಜ್ ಸಿಂಗ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ, ಮುಖ್ಯ ಲೆಕ್ಕಾಧಿಕಾರಿ ವಿಜಯಶಂಕರ್, ಸಮಾಜ ಕಲ್ಯಾಣ ಉಪ ನಿರ್ದೇಶಕಿ ಸಿಂಧು ಹಾಗೂ ಸಮಿತಿ ಸದಸ್ಯರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News