ಲಿಂಗಸೂಗೂರು: ತಾಲೂಕಿನ ಈಚನಾಳ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ನಡೆದಿದೆ ಎಂಬ ಆರೋಪದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರವೀಂದ್ರ ಉಪ್ಪಾರ ಅವರು ಬುಧವಾರ ಸಂಜೆ ಗ್ರಾಮಕ್ಕೆ ಭೇಟಿ ನೀಡಿ ಹೋಟೆಲ್‌ನಲ್ಲಿ ದಿಢೀರ್ ಪರಿಶೀಲನೆ ನಡೆಸಿದರು.

ಈಚನಾಳ ಗ್ರಾಮದ ಹೋಟೆಲ್‌ನಲ್ಲಿ ದಲಿತರಿಗೆ ಕುಡಿಯಲು ಲೋಟ ನೀಡದೆ ಮೇಲಿಂದ ನೀರು ಹಾಕಿರುವ ದೃಶ್ಯವಿರುವ ವಿಡಿಯೊ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪರಿಶೀಲನೆ ವೇಳೆ ಹೋಟೆಲ್‌ನಲ್ಲಿದ್ದ ಕೆಲವರು, “ಹಿಂದೆ ಇಂತಹ ಆಚರಣೆ ಇತ್ತು. ಈಗ ಅದರಲ್ಲಿ ಬದಲಾವಣೆ ಮಾಡಿಕೊಂಡಿದ್ದೇವೆ” ಎಂದು ಅಧಿಕಾರಿಗಳ ಮುಂದೆ ಸಮಜಾಯಿಷಿ ನೀಡಿದರು ಎಂದು ತಿಳಿದುಬಂದಿದೆ.

ಇದೇ ವೇಳೆ ಗ್ರಾಮದಲ್ಲಿರುವ ದಲಿತ ಸಮುದಾಯದವರಿಂದಲೂ ಅಧಿಕಾರಿಗಳು ಮಾಹಿತಿ ಸಂಗ್ರಹಿಸಲು ಮುಂದಾದರು. ಆದರೆ ಈ ಕುರಿತು ದಲಿತರು ಯಾವುದೇ ಸ್ಪಷ್ಟ ಪ್ರತಿಕ್ರಿಯೆ ನೀಡದೆ ಮೌನ ವಹಿಸಿದ್ದಾರೆಂದು ತಿಳಿದು ಬಂದಿದೆ.

ಗ್ರಾಮದಲ್ಲಿ ದಲಿತರಿಗೆ ಕ್ಷೌರ ಸೇವೆ ನೀಡದಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ಕೇಳಿಬರುತ್ತಿದ್ದು, ಈ ಆರೋಪಗಳ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ.

ವೈರಲ್ ವಿಡಿಯೊ ಹಾಗೂ ಗ್ರಾಮದಲ್ಲಿ ಕೇಳಿಬಂದಿರುವ ಅಸ್ಪೃಶ್ಯತೆ ಆರೋಪಗಳ ಕುರಿತು ಸಮಾಜ ಕಲ್ಯಾಣ ಇಲಾಖೆ ಪರಿಶೀಲನೆ ನಡೆಸಿದ್ದು, ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಪ್ರಭಾರ ಉಪ ನಿರ್ದೇಶಕ ಕೃಷ್ಣ ಶಾವಂತಗೇರಿ ಪ್ರತಿಕ್ರಿಯಿಸಿ, ಅಸ್ಪೃಶ್ಯತೆ ಆಚರಣೆ ಆರೋಪದ ಹಿನ್ನೆಲೆ ತಾಲೂಕು ಮಟ್ಟದ ಅಧಿಕಾರಿಗಳನ್ನು ಗ್ರಾಮಕ್ಕೆ ಕಳುಹಿಸಿ ವಸ್ತುಸ್ಥಿತಿಯ ವರದಿ ಪಡೆಯಲು ಸೂಚಿಸಲಾಗಿತ್ತು ಎಂದು ಹೇಳಿದರು.

ಹೋಟೆಲ್ ಹಾಗೂ ಕ್ಷೌರದ ಅಂಗಡಿಗಳಲ್ಲಿ ಹಿಂದೆ ಅಸ್ಪೃಶ್ಯತೆ ಆಚರಣೆ ಇತ್ತು, ಈಗ ಅಂತಹ ಪರಿಸ್ಥಿತಿ ಇಲ್ಲ ಎಂದು ಸ್ಥಳದಲ್ಲಿದ್ದ ಕೆಲವರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ ಎಂದು ತಿಳಿಸಿದರು.

ಗ್ರಾಮದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಮುಂದಿನ ಎರಡು ದಿನಗಳಲ್ಲಿ ಶಾಂತಿ ಸಭೆ ನಡೆಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor