ರಾಯಚೂರು | ಮದ್ಯ ಸೇವಿಸಿ ಶಾಲೆಗೆ ಬರುವ ಮುಖ್ಯೋಪಾಧ್ಯಾಯರ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರ ಮನವಿ
ರಾಯಚೂರು: ಮಾನ್ವಿ ತಾಲ್ಲೂಕಿನ ಜಾನೇಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಮದ್ಯ ಸೇವಿಸಿ ಶಾಲೆಗೆ ಬಂದು ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆಂದು ಆರೋಪಿಸಿ, ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಸ್ಥಳೀಯರ ಮಾಹಿತಿ ಪ್ರಕಾರ, ಶಾಲೆಯ ಮುಖ್ಯೋಪಾಧ್ಯಾಯ ಕಂಪಳಪ್ಪ ಅವರು ಶಾಲಾ ಸಮಯದಲ್ಲೇ ಮದ್ಯಪಾನದ ಅಮಲಿನಲ್ಲಿ ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ಮಾತನಾಡಿ, ಶಿಸ್ತಿನ ಉಲ್ಲಂಘನೆ ಮಾಡುತ್ತಿದ್ದಾರೆ. ಬೆಳಿಗ್ಗೆ ಹಾಜರಾತಿ ಹಾಕಿಕೊಂಡ ನಂತರ ಶಾಲೆಯಲ್ಲೇ ಉಳಿಯದೆ ಹೊರ ಹೋಗುವ ಅಭ್ಯಾಸವೂ ಇದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮಸ್ಥರು ಈ ವಿಚಾರದಲ್ಲಿ ಅನೇಕ ಬಾರಿ ಎಚ್ಚರಿಕೆ ನೀಡಿದ್ದರೂ ವರ್ತನೆಯಲ್ಲಿ ಸುಧಾರಣೆ ಆಗಿಲ್ಲವೆಂದು ವಿಷಾದ ವ್ಯಕ್ತಪಡಿಸಿದ್ದಾರೆ. ಶಾಲೆಯ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಹಿತಕ್ಕಾಗಿ ಕೈಗೊಳ್ಳುತ್ತಿರುವ ಗ್ರಾಮಸ್ಥರ ಪ್ರಯತ್ನಗಳಿಗೆ ಸಹಕಾರ ನೀಡದೆ ತಿರಸ್ಕರಿಸುವ ಮನಸ್ಥಿತಿ ತೋರಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಮನವಿ ಸಲ್ಲಿಕೆಯಲ್ಲಿ ಗ್ರಾಮಸ್ಥರಾದ ಕೊಂಡಯ್ಯ, ಬಸವರಾಜ, ವೀರೇಶ್, ಗೋಪಾಲ ಸೇರಿದಂತೆ ಅನೇಕರು ಹಾಜರಿದ್ದರು.