ಸಿಂಧೂನೂರು : ಮಹಿಳೆಯನ್ನು ಕೊಲೆಗೈದು ಮೃತದೇಹದ ಮೇಲೆ ಮಗುವನ್ನಿಟ್ಟು ಪರಾರಿಯಾದ ಹಂತಕರು!
ಸಿಂಧೂನೂರು (ರಾಯಚೂರು): ಆರ್‌ಎಚ್.ಕ್ಯಾಂಪ್ 5ರ ಗ್ರಾಮದ ಹೊರವಲಯದಲ್ಲಿರುವ ಜಮೀನಿನಲ್ಲಿ ಗೃಹಿಣಿಯನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಆರ್‌ಎಚ್.ಕ್ಯಾಂಪ್ 4ರ ನಿವಾಸಿ ಸ್ನೇಹಾ (26) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಹಂತಕರು ಕೃತ್ಯ ಎಸಗಿದ ಬಳಿಕ, ಮಹಿಳೆಯ ಎರಡು ವರ್ಷದ ಮಗುವನ್ನು ಆಕೆಯ ಮೃತದೇಹದ ಮೇಲೆಯೇ ಕುಳ್ಳಿರಿಸಿ ಪರಾರಿಯಾಗಿದ್ದಾರೆ. ನಿರ್ಜನ ಪ್ರದೇಶದಲ್ಲಿ ಮಗುವಿನ ಅಳುವಿನ ಶಬ್ದ ಕೇಳಿ ಸ್ಥಳೀಯರು ತೆರಳಿ ನೋಡಿದಾಗ ಈ ದಾರುಣ ಘಟನೆ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಹಂತಕರ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ.