×
Ad

ವೆಲ್ಫೇರ್ ಪಾರ್ಟಿಯಿಂದ ಆಯೋಜಿಸಿರುವ ʼಕಲ್ಯಾಣ ಕರ್ನಾಟಕದ ನ್ಯಾಯಪೂರ್ಣ ಅಭಿವೃದ್ಧಿ ಜಾಥಾʼ ರಾಯಚೂರು ನಗರಕ್ಕೆ ಆಗಮನ

Update: 2025-10-09 21:22 IST

ರಾಯಚೂರು : ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದಿಂದ ಆಯೋಜಿಸಿದ್ದ ‘ಕಲ್ಯಾಣ ಕರ್ನಾಟಕ ನ್ಯಾಯಪೂರ್ಣ ಅಭಿವೃದ್ಧಿಗಾಗಿ ಜಾಥಾ’ ಗುರುವಾರ ಸಂಜೆ ರಾಯಚೂರು ನಗರಕ್ಕೆ ಆಗಮಿಸಿತು.

ಕಲ್ಯಾಣ ಕರ್ನಾಟಕ ಭಾಗದ ನಿರುದ್ಯೋಗ, ಗುಳೆ ಸಮಸ್ಯೆ, ತಾಯಿ,ಶಿಶುಮರಣ, ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗಾಗಿ ಹಾಗೂ ಈ ಭಾಗದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಾಥಾ ನಡೆಯಿತು.

ನಗರದ ಕಾಟೆ ದರ್ವಾಜಾದಿಂದ ಆರಂಭವಾದ ಜಾಥಾ ಏಕ್ ಮಿನಾರ್ ಮಸ್ಜಿದ್, ತಹಶೀಲ್ದಾರರ ಕಚೇರಿ, ಕೇಂದ್ರ ಬಸ್ ನಿಲ್ದಾಣ ಮಾರ್ಗವಾಗಿ ಡಾ.ಬಿ.ಆರ್ ವೃತ್ತದ ವರೆಗೆ ನಡೆಯಿತು. ಬಳಿಕ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಜಾಥಾದ ಬಳಿಕ ರಾಯಚೂರಿನ ಏಮ್ಸ್ ಹೋರಾಟ ಸಮಿತಿಯ ಹೋರಾಟಗಾರ ಅಶೋಕ್ ಕುಮಾರ ಜೈಬ್ ಸಮ್ಮುಖದಲ್ಲಿ ಏಮ್ಸ್ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ರಾಜ್ಯಾಧ್ಯಕ್ಷ ತಾಹೇರ್ ಹುಸೇನ್ ಮಾತನಾಡಿ, ಬೆಂಗಳೂರು ವಿಭಾಗದಲ್ಲಿ ತಲಾ ಆದಾಯ 5.01 ಇದ್ದರೆ ಕಲ್ಯಾಣ ಕರ್ನಾಟಕದಲ್ಲಿ 1.73, ಮೈಸೂರು ಭಾಗದಲ್ಲಿ 10 ಹಿಂದುಳಿದ ತಾಲೂಕುಗಳಿದ್ದರೆ ಇಲ್ಲಿ 29, ಈ‌ ಭಾಗದಲ್ಲಿ ನಿರುದ್ಯೋಗ ಸಮಸ್ಯೆಯಿಂದ ಮಹಾನಗರಗಳಿಗೆ ಕಾರ್ಮುಕರು ಗುಳೆ ಹೋಗುತ್ತಿದ್ದಾರೆ. ಈ‌ ಭಾಗಕ್ಕೆ ಕೆಕೆಆರ್ ಡಿಬಿ ಮೂಲಕ ಬಜೆಟ್ ನಲ್ಲಿ 5ಸಾವಿರ ಕೋಟಿ ರೂ. ಅನುದಾನ ಬಿಡುಗಡೆಯಾದರೂ ಸಮರ್ಪಕವಾಗಿ ಬಳಸಲಾಗುತ್ತಿಲ್ಲ ಈ ಭಾಗದ ಶಾಸಕರು, ಜನಪ್ರತಿನಿಧಿಗಳಿಗೆ ಅಭಿವೃದ್ಧಿಗೆ ಇಚ್ಛಾಶಕ್ತಿ ತೋರುತ್ತಿಲ್ಲ, ಜನರು ಮುಗ್ದರಾಗಿದ್ದು ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಇಲ್ಲದಿದ್ದರೆ ನಿಮಗೆ ಚುನಾವಣೆ ಬಂದಾಗ ಮಾತ್ರ ನೆನೆಸುತ್ತಾರೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಭಾಗದ ಜನತೆಗೆ ನ್ಯಾಯ ಸಿಗಬೇಕೆಂಬ ಉದ್ದೇಶದಿಂದ ವೇಲ್ಪೆರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ವತಿಯಿಂದ ಅ.6 ರಿಂದ 13 ರವರೆಗೆ "ಕಲ್ಯಾಣ ಕರ್ನಾಟಕ ನ್ಯಾಯಪೂರ್ಣ ಅಭಿವೃದ್ಧಿ ಜಾಥಾ ಆಯೋಜಿಸಲಾಗಿದೆ.  ಈ ಜಾಥಾ ಬಳ್ಳಾರಿಯಿಂದ ಆರಂಭವಾಗಿ ರಾಯಚೂರು ಮಾರ್ಗವಾಗಿ ಕಲಬುರಗಿಗೆ ತೆರಳಿ ಅಲ್ಲಿರುವ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್ ಡಿಬಿ) ಅಧ್ಯಕ್ಷರಿಗೆ ಭೇಟಿಯಾಗಿ ಈ‌ ಭಾಗದ ಅಭಿವೃದ್ಧಿಯ ಬಗ್ಗೆ ಚರ್ಚಿಸಿ ಈ ಭಾಗದ ಸಮಸ್ಯೆಗಳ ನಿವಾರಣೆಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಬಿಜೆಪಿ ಶಾಸಕರ ವಿರುದ್ಧ ಏಮ್ಸ್ ಹೋರಾಟಗಾರ ಆಕ್ರೋಶ :

ಜಾಥಾದಲ್ಲಿ ಏಮ್ಸ್ ಹೋರಾಟದ ಸಹ ಸಂಚಾಲಕ ಅಶೋಕಕುಮಾರ ಜೈನ್ ಮಾತನಾಡಿ, ರಾಯಚೂರು ಸೇರಿ ಹಿಂದುಳಿದ ಕಲ್ಯಾಣ ಕರ್ನಾಟಕದ ಸಮಸ್ಯೆಗಳ ಬಗ್ಗೆ ವೆಲ್ಫೇರ್ಪಾರ್ಟಿ ಜಾಗೃತಿ ಜಾಥಾ ಆಯೋಜಿಸಿದ್ದು ಶ್ಲಾಘನೀಯ. ಇದಕ್ಕೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ. ರಾಯಚೂರು ಜಿಲ್ಲೆಯ ಅಭಿವೃದ್ಧಿಗಾಗಿ ಏಮ್ಸ್ ಬೇಕಾಗಿದೆ. ಮೂರು ವರ್ಷಗಳಿಂದ ಅನಿರ್ಧಿಷ್ಠಾವಧಿ ಧರಣಿ ನಡೆಸಲಾಗುತ್ತಿದ್ದು, ಈ‌ ಭಾಗದ ಶಾಸಕರಿಂದ ಸರಿಯಾದ ಸ್ಪಂದಿಸುವ ಕೆಲಸ ಆಗುತ್ತಿಲ್ಲ, ಬದಲಾಗಿ‌ ಬಿಜೆಪಿ ನಗರ ಶಾಸಕ ಡಾ.ಶಿವರಾಜ ಪಾಟೀಲ ಏಮ್ಸ್ ಹೋರಾಟದ ಟೆಂಟ್ ಕಿತ್ತು ಹಾಕಲು ಮುಂದಾಗಿದ್ದರು‌. ನಾವು ಜಿಲ್ಲೆಗಾಗಿ ಹೋರಾಟ ಮಾಡುತ್ತಿದ್ದೆವೆ, ವೈಯಕ್ತಿಕ ಹಿತಾಸಕ್ತಿಗೆ ಅಲ್ಲ. ಶಾಸಕರು ಇದನ್ನು ಅರ್ಥ ಮಾಡಿಕೊಳ್ಳದಿರುವುದು ವಿಷಾದನೀಯ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ‌ ವೇಳೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್‌ ಅಹಮದ್, ರಾಜ್ಯ ಉಪಾಧ್ಯಕ್ಷ ಶ್ರೀಕಾಂತ್ ಸಾಲಿಯಾನ್, ಜಿಲ್ಲಾಧ್ಯಕ್ಷ ಫರೀದ್ ಉಮ್ರಿ, ಅಬ್ದುಲ್ ಘನಿ, ಜಮಾತೆ ಇಸ್ಲಾಂ ಜಿಲ್ಲಾಧ್ಯಕ್ಷ ಅಸಿಮುದ್ದೀನ್ ಅಖ್ತರ್, ಸಮದ್ ಪಾಶ ಮತ್ತಿತರರು ಉಪಸ್ಥಿತರಿದ್ದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News