ಮಂತ್ರಾಲಯದ ಬಳಿ ದುರಂತ: ತುಂಗಭದ್ರಾ ನದಿಗೆ ಸ್ನಾನಕ್ಕಿಳಿದ ಐವರು ನೀರುಪಾಲು
Update: 2026-05-31 10:58 IST
ರಾಯಚೂರು: ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಐವರು ನೀರುಪಾಲಾದ ಘಟನೆ ರಾಯಚೂರು ಜಿಲ್ಲೆಯ ಗಡಿಭಾಗದ ಮಂತ್ರಾಲಯದ ಬಳಿ ವರದಿಯಾಗಿದೆ.
ಹೈದರಾಬಾದ್ ಮೂಲದ ಯುವನ ಚಂದ್ರ(5), ಸತೀಶ್ (35), ಮಂತ್ರಾಲಯ ಗ್ರಾಮದ ರಾಘವೇಂದ್ರ (25), ಧನುಷ್ (23) ಮತ್ತು ಉರವಕೊಂಡದ ಸಂಧ್ಯಾ(22) ನೀರುಪಾಲಾದವರು ಎಂದು ತಿಳಿದುಬಂದಿದೆ. ಅಪರ್ಣಾ ಎಂಬ ಯುವತಿ ಅಪಾಯದಿಂದ ಪಾರಾಗಿದ್ದಾರೆ.
ಮಂತ್ರಾಲಯದಲ್ಲಿ ಸಂಬಂಧಿಕರ ಮನೆಯಲ್ಲಿ ಶನಿವಾರ ಏರ್ಪಡಿಸಿದ್ದ ಸತ್ಯನಾರಾಯಣ ಪೂಜೆಗೆ ಬಂದಿದ್ದ ಈ ಆರು ಮಂದಿ ಪೂಜೆಯ ಬಳಿಕ ನದಿಯಲ್ಲಿ ಈಜಲು ತೆರಳಿದ್ದ ವೇಳೆ ದುರ್ಘಟನೆ ನಡೆದಿದೆ.
ನದಿ ನೀರಿನ ಆಳ ತಿಳಿಯದೇ ಈಜಲು ತೆರಳಿದ್ದೆ ಘಟನೆಗೆ ಕಾರಣ ಎನ್ನಲಾಗಿದೆ.
ನೀರುಪಾಲಾದವರ ಪೈಕಿ ಧನುಷ್ ಮೃತದೇಹ ಪತ್ತೆಯಾಗಿದೆ. ಉಳಿದವರಿಗಾಗಿ ಪೊಲೀಸರು ಮೀನುಗಾರರ ಸಹಾಯದಿಂದ ಶೋಧ ಕಾರ್ಯ ಮುಂದುವರಿದಿದೆ.
ಎಮ್ಮಿಗನೂರು ಡಿವೈಎಸ್ಪಿ ಭಾರ್ಗವಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಘಟನಾ ಸ್ಥಳ. (ಒಳಚಿತ್ರದಲ್ಲಿ ರಾಘವೇಂದ್ರ)