ದೇಶದ ಸಮಸ್ಯೆಗಳನ್ನು ದೇವರ ತಲೆಗೆ ಕಟ್ಟಿದ ಪ್ರಧಾನಿ !

Update: 2024-05-25 05:11 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಶ್ರೀ ರಾಮ ತನ್ನ ಪತ್ನಿಯನ್ನು ತ್ಯಜಿಸಿದ್ದ ಎನ್ನುವ ಕಾರಣಕ್ಕೆ ಪತ್ನಿಯರನ್ನು ತ್ಯಜಿಸಿದವರೆಲ್ಲರೂ ಶ್ರೀರಾಮನಾಗಲು ಸಾಧ್ಯವೆ? ಕೆಲವೊಂದು ಜೀವನ ಮೌಲ್ಯಗಳನ್ನು ಪ್ರತಿಪಾದಿಸುವುದಕ್ಕಾಗಿ ಶ್ರೀರಾಮಚಂದ್ರ ಪತ್ನಿಯನ್ನು ತ್ಯಜಿಸಿರುವುದಕ್ಕೂ, ಬೇಜವಾಬ್ದಾರಿಯಿಂದ ಪತ್ನಿಯನ್ನು ತ್ಯಜಿಸಿ ಸಾರ್ವಜನಿಕವಾಗಿ ತಾನು ಅವಿವಾಹಿತ ಎಂದು ಸುಳ್ಳು ಹೇಳುವುದಕ್ಕೂ ವ್ಯತ್ಯಾಸವಿಲ್ಲವೆ? ಪ್ರಧಾನಿ ಮೋದಿಯವರು ಟಿವಿ ಸಂದರ್ಶನಗಳಲ್ಲಿ ನೀಡುತ್ತಿರುವ ತಮ್ಮ ಬಾಲಿಶ ಹೇಳಿಕೆಗಳ ಮೂಲಕ ಇಂತಹ ಪ್ರಶ್ನೆಗಳನ್ನು ಸಾರ್ವಜನಿಕರಿಂದ ತಾವಾಗಿಯೇ ಆಹ್ವಾನಿಸಿಕೊಂಡಿದ್ದಾರೆ.

ಚುನಾವಣೆಯಲ್ಲಿ ಅಭ್ಯರ್ಥಿ ಧರ್ಮ,ದೇವರುಗಳ ಹೆಸರುಗಳನ್ನು ದುರ್ಬಳಕೆ ಮಾಡಿಕೊಂಡರೆ ಅವರ ಮೇಲೆ ನೀತಿ ಸಂಹಿತೆ ಉಲ್ಲಂಘನೆಯ ದೂರನ್ನು ಆಯೋಗ ದಾಖಲಿಸುತ್ತದೆ. ಆದರೆ ಇಲ್ಲಿ ಪ್ರಧಾನಿ ಮೋದಿಯವರು ತಮ್ಮನ್ನು ತಾವು ಪರೋಕ್ಷವಾಗಿ ದೇವರ ಅವತಾರವೆಂದೇ ಕರೆದುಕೊಂಡಿದ್ದಾರೆ. ‘ಮುಂದಿನ ಪ್ರಧಾನಿಯಾಗುವುದಕ್ಕೆ ತನಗೆ ದೇವರೇ ಆದೇಶಿಸಿದ್ದಾನೆ. ನಾನು ತಾಯಿಯ ಅಂಶವಲ್ಲ, ದೇವರ ಅಂಶ ಎನ್ನುವುದು ನನಗೀಗ ಮನವರಿಕೆಯಾಗಿದೆ’ ಎಂದು ಮಾಧ್ಯಮವೊಂದಕ್ಕೆ ಸಂದರ್ಶನ ನೀಡುವ ಸಂದರ್ಭದಲ್ಲಿ ಅವರು ಹೇಳಿಕೊಂಡಿದ್ದಾರೆ. ಸ್ವತಃ ತಾನೇ ದೇವರೆಂದು ಘೋಷಿಸಿಕೊಂಡು ಮತ ಯಾಚನೆ ಮಾಡಿದರೆ ಅದು ಚುನಾವಣೆಯ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆಯೇ ಎನ್ನುವುದರ ಬಗ್ಗೆ ಚುನಾವಣಾ ಆಯೋಗ ಇನ್ನೂ ಸ್ಪಷ್ಟನೆಯನ್ನು ನೀಡಿಲ್ಲ. ‘‘ನನಗೆ ಮತ ನೀಡಿದರೆ ನಾನು ಮಾಡುವ ಪುಣ್ಯದ ಕಾರ್ಯದಲ್ಲಿ ನಿಮಗೂ ಪಾಲು ಸಿಗುತ್ತದೆ’’ ಎನ್ನುವ ಹೊಸ ಗ್ಯಾರಂಟಿಯನ್ನೂ ಪ್ರಧಾನಿ ಮೋದಿಯವರು ದೇಶದ ಜನತೆಗೆ ನೀಡಿದ್ದಾರೆ. ಪ್ರಧಾನಿ ಮೋದಿಗೆ ಒಂದು ಸ್ಪಷ್ಟವಾಗಿದೆ. ಮುತ್ಸದ್ದಿ ಆಡಳಿತ ನೀಡುವ ಮೂಲಕ ಆಧುನಿಕ ನೆಹರೂ, ಪಟೇಲ್ ಅಥವಾ ಇಂದಿರಾಗಾಂಧಿ ಎಂದು ಗುರುತಿಸಿಕೊಳ್ಳುವುದಕ್ಕಿಂತ ಈ ದೇಶದಲ್ಲಿ ‘ದೇವರಾಗುವುದು’ ಅತ್ಯಂತ ಸುಲಭ ಎನ್ನುವುದನ್ನು ಅವರು ಕಂಡುಕೊಂಡಿದ್ದಾರೆ. ಆದುದರಿಂದಲೇ, ನೆಹರೂ, ಪಟೇಲ್, ಇಂದಿರಾಗಾಂಧಿಯಾಗುವ ಪ್ರಯತ್ನವನ್ನು ಕೈ ಬಿಟ್ಟು ಈ ಬಾರಿಯ ಚುನಾವಣೆಯಲ್ಲಿ ನೇರವಾಗಿ ‘ದೇವರಾಗುವುದಕ್ಕೆ’ ಹೊರಟಿದ್ದಾರೆ.

ಪ್ರಧಾನಿ ಮೋದಿಯವರ ಹೇಳಿಕೆಯನ್ನು ನಾವು ವಾಚ್ಯವಾಗಿ ತೆಗೆದುಕೊಳ್ಳದೆ, ಅದರೊಳಗಿರುವ ಕೆಲವು ನಿಗೂಢಾರ್ಥಗಳನ್ನು ನಮ್ಮದಾಗಿಸಿಕೊಳ್ಳಬೇಕಾಗಿದೆ. ತನ್ನನ್ನು ತಾನು ದೇವರ ಅಂಶ ಎಂದು ಘೋಷಿಸುವ ಮೂಲಕ ಕಳೆದ ಹತ್ತು ವರ್ಷಗಳಲ್ಲಿ ಆಡಳಿತದ ಹೆಸರಿನಲ್ಲಿ ನಡೆಸಿದ ಎಲ್ಲ ಅನಾಹುತಗಳನ್ನು ಅವರು ದೇವರ ತಲೆಗೆ ಕಟ್ಟಲು ಹೊರಟಿದ್ದಾರೆ. ಈ ಹಿಂದೆ ಈ ದೇಶದ ವಿತ್ತ ಸಚಿವೆ ದೇಶದ ಆರ್ಥಿಕ ಹಿಂಜರಿಕೆಗೆ ‘ಆ್ಯಕ್ಟ್ ಆಫ್ ಗಾಡ್’ನ್ನು ಮುಂದೊಡ್ಡಿ, ರಾಜ್ಯಗಳಿಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಬೇಕಾದರೆ ದೇವರಲ್ಲೇ ಪರಿಹಾರವನ್ನು ಕೇಳಿ ಎನ್ನುವುದು ಅವರು ರಾಜ್ಯಗಳಿಗೆ ನೀಡಿದ ‘ಪರಿಹಾರ’ವಾಗಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿಯವರು ತನ್ನನ್ನು ತಾನು ದೇವರು ಎಂದು ಕರೆದುಕೊಳ್ಳುವ ಮೂಲಕ ‘ಈ ದೇಶವನ್ನು ಆರ್ಥಿಕ ಬಿಕ್ಕಟ್ಟಿಗೆ ತಳ್ಳಿದ ವಿತ್ತ ಸಚಿವರ ಗಾಡ್ ಇನ್ನಾರೂ ಅಲ್ಲ, ನಾನೇ’ ಎಂದು ಹೇಳಿ ನೈತಿಕ ಹೊಣೆಯನ್ನು ಹೊತ್ತುಕೊಂಡಂತಾಗಿದೆ. ಕೊರೋನ ಸಂದರ್ಭದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ರ ‘ಆ್ಯಕ್ಟ್ ಆಫ್ ಗಾಡ್’ ಹೇಳಿಕೆಯನ್ನು ಎಲ್ಲರೂ ಬೇಜವಾಬ್ದಾರಿಯ ಪರಮಾವಧಿ ಎಂದು ಟೀಕಿಸಿದ್ದರು. ಆದರೆ ಅವರ ಹೇಳಿಕೆಯ ಹಿಂದಿನ ನಿಜವಾದ ಅರ್ಥವೇನು ಎನ್ನುವುದು ಮೋದಿಯವರ ಹೇಳಿಕೆಯಿಂದ ದೇಶಕ್ಕೆ ಅರ್ಥವಾಗತೊಡಗಿದೆ. ಆದರೆ ಪ್ರಧಾನಿಯವರ ಹೇಳಿಕೆಯಿಂದಾಗಿ ಭಾರತದ ಆಸ್ತಿಕ ಸಮುದಾಯ ಮಾತ್ರ ತೀವ್ರ ಮುಜುಗರಕ್ಕೆ ಸಿಲುಕಿಕೊಂಡಿದೆ. ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆಗಳು, ಸಾಮೂಹಿಕ ಅತ್ಯಾಚಾರ, ಹತ್ಯಾಕಾಂಡ, ರೈತರ ದಮನ, ಲಾಕ್ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಬರ್ಬರ ಸಾವು, ಕೊರೋನ ಕಾಲದಲ್ಲಿ ಗಂಗಾನದಿಯಲ್ಲಿ ತೇಲಿದ ಹೆಣಗಳು, ನಿರುದ್ಯೋಗ, ಬಡತನ ಇವೆಲ್ಲಕ್ಕೂ ದೇವರೇ ಹೊಣೆ ಎಂದು ಪ್ರಧಾನಿ ಘೋಷಿಸಿದಂತಾಗಿದೆ. ಈ ಎಲ್ಲ ಸಾವುನೋವುಗಳು ದೇವರ ಇಚ್ಛೆಯಿಂದ ನಡೆದಿರುವುದರಿಂದ, ಅದನ್ನು ಶಿರಭಾಗಿ ಒಪ್ಪಿಕೊಳ್ಳಬೇಕು ಎಂದು ಅವರು ದೇಶದ ಮತದಾರರಿಗೆ ಆದೇಶವನ್ನು ನೀಡಿದ್ದಾರೆ.

‘ನನಗೆ ಮತ ನೀಡಿದರೆ ನಾನು ಮಾಡಿದ ಕಾರ್ಯದ ಪುಣ್ಯ ನಿಮಗೂ ಸಿಗುತ್ತದೆ’ ಎಂಬ ಆಮಿಷವನ್ನು ಅವರು ಈ ಸಂದರ್ಭದಲ್ಲಿ ಒಡ್ಡಿದ್ದಾರೆ. ಈ ಮೂಲಕ, ಕಳೆದ ಹತ್ತು ವರ್ಷಗಳಲ್ಲಿ ನನ್ನ ಆಡಳಿತದಲ್ಲಿ ನಡೆದಿರುವ ಎಲ್ಲ ಪಾಪ ಕಾರ್ಯಗಳಿಗೆ ನಾನು ಮಾತ್ರವಲ್ಲ್ಲ ನೀವೂ ಹೊಣೆಗಾರರು ಎನ್ನುವುದನ್ನು ಮತದಾರರಿಗೆ ಸೂಚ್ಯವಾಗಿ ತಿಳಿಸಿದ್ದಾರೆ. ಪ್ರಧಾನಿ ಮೋದಿ ಮಾಡಿದ ಪುಣ್ಯ ಕಾರ್ಯದಲ್ಲಿ ಮತದಾರರಿಗೆ ಪಾಲಿದೆ ಎಂದಾದರೆ, ಅವರು ಮಾಡಿದ ಪಾಪ ಕಾರ್ಯಗಳ ಪಾಲನ್ನೂ ಮತದಾರರು ಹೊತ್ತುಕೊಳ್ಳುವುದು ಅನಿವಾರ್ಯವಾಗುತ್ತದೆ. ಗುಜರಾತ್ ಹತ್ಯಾಕಾಂಡದಿಂದ ಹಿಡಿದು ಮಣಿಪುರ ಹತ್ಯಾಕಾಂಡದವರೆಗಿನ ರಕ್ತದ ಕಲೆಗಳನ್ನು ಅವರು ಮತದಾರರ ಮೂತಿಗೆ ಒರೆಸಲು ಮುಂದಾಗಿದ್ದಾರೆ. ದೇಶದಲ್ಲಿ ಹೆಚ್ಚಿರುವ ಬಡತನ, ನಿರುದ್ಯೋಗ ಇತ್ಯಾದಿಗಳಿಗಾಗಿ ನನ್ನನ್ನು ದೂಷಿಸುವಂತಿಲ್ಲ, ನನಗೆ ಮತ ನೀಡಿದ ನಿಮ್ಮ ಪಾಲೂ ಇದರಲ್ಲಿ ಇದೆ ಎನ್ನುವುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಭಾರತದ ಲಕ್ಷಾಂತರ ಜನರ ಉದ್ಯೋಗ, ಸಂಪತ್ತನ್ನು ಕಸಿದು ಅದನ್ನು ಅಂಬಾನಿ, ಅದಾನಿಗಳಿಗೆ ಒಪ್ಪಿಸುವುದಕ್ಕಾಗಿಯೇ ದೇವರು ತನ್ನನ್ನು ಭೂಮಿಗಿಳಿಸಿದ್ದಾರೆ. ಆದುದರಿಂದ ಅದನ್ನು ಪ್ರಶ್ನಿಸುವ ಹಕ್ಕು ವಿರೋಧ ಪಕ್ಷಗಳಿಗೆ ಇಲ್ಲ ಎನ್ನುವುದನ್ನು ಅವರು ತಮ್ಮ ಹೇಳಿಕೆಯಲ್ಲಿ ಪರೋಕ್ಷವಾಗಿ ತಿಳಿಸಿದ್ದಾರೆ.

ಈ ಬಾರಿಯ ಚುನಾವಣೆಯ ಹೊತ್ತಿನಲ್ಲಿ ಪ್ರಧಾನಿ ತನ್ನನ್ನು ತಾನು ದೇವರ ಅಂಶ ಎಂದು ಘೋಷಿಸಿಕೊಂಡಿರುವುದರಿಂದ, ಒಂದು ವೇಳೆ ಆಯ್ಕೆ ಮಾಡಿದ್ದೇ ಆದರೆ ಅವರನ್ನು ಪ್ರಶ್ನಿಸುವ ಎಲ್ಲ ಹಕ್ಕುಗಳನ್ನು ಮತದಾರರು ಕಳೆದುಕೊಳ್ಳುತ್ತಾರೆ. ಯಾಕೆಂದರೆ ದೇವರು ಒಳಿತು, ಕೆಡುಕು ಏನೇ ಮಾಡಿದರೂ ಅದನ್ನು ಪ್ರಶ್ನಿಸುವ ಹಕ್ಕು ‘ಭಕ್ತ’ರಿಗೆ ಇರುವುದಿಲ್ಲ. ಭಾರತ ನೂರಾರು ದೇವರುಗಳನ್ನು, ನಂಬಿಕೆಗಳನ್ನು ಹೊಂದಿರುವ ದೇಶ. ಸದ್ಯಕ್ಕೆ ಇಲ್ಲಿ ಇನ್ನೊಬ್ಬ ಹೊಸ ದೇವರ ಅಗತ್ಯ ಖಂಡಿತ ಇಲ್ಲ. ಆದರೆ ಈ ದೇಶದ ಸಂವಿಧಾನಕ್ಕೆ ಬದ್ಧತೆಯನ್ನು ವ್ಯಕ್ತಪಡಿಸುವ, ಈ ದೇಶದ ಜನಸಾಮಾನ್ಯರ ಬಗ್ಗೆ ಕಾಳಜಿಯನ್ನು ಹೊಂದಿರುವ, ಬಡತನ, ನಿರುದ್ಯೋಗ ಇತ್ಯಾದಿಗಳಿಗೆ ಪರಿಹಾರವನ್ನು ಹುಡುಕುವ ರಾಜಕೀಯ ಮುತ್ಸದ್ದಿಯ ಅಗತ್ಯವಿದೆ. ಪ್ರಧಾನಿಯಾಗಿ ಮಣಿಪುರದ ಹಿಂಸಾಚಾರವನ್ನು ತಡೆಯುವಲ್ಲಿ ಯಾಕೆ ಸೋತಿರಿ? ನೋಟು ನಿಷೇಧದಿಂದ ಈ ದೇಶಕ್ಕೆ ಆದ ಒಳಿತುಗಳು ಏನು? ಕೊರೋನ ಕಾಲದಲ್ಲಿ ಈ ದೇಶದ ಆರೋಗ್ಯ ವಲಯ ಯಾಕೆ ಅಸ್ತವ್ಯಸ್ತವಾಯಿತು? ಲಾಕ್ಡೌನ್ಗಳಿಂದ ಜರ್ಜರಿತವಾದ ಆರ್ಥಿಕ ವ್ಯವಸ್ಥೆಯನ್ನು ಎತ್ತಿ ನಿಲ್ಲಿಸಲು ನೀವು ತೆಗೆದುಕೊಂಡ ಕ್ರಮಗಳೇನು? ದೇಶದಲ್ಲಿ ಉದ್ಯೋಗಗಳನ್ನು ಹೆಚ್ಚಿಸುವಲ್ಲಿ ನೀವು ಯಾಕೆ ವಿಫಲರಾದಿರಿ? ದೇಶ ಯಾಕೆ ಹಸಿವಿನ ಸೂಚ್ಯಂಕದಲ್ಲಿ ಕಳಪೆ ಸಾಧನೆಯನ್ನು ತೋರಿಸಿದೆ? ಕೋವಿಶೀಲ್ಡ್,

ಕೋವ್ಯಾಕ್ಸಿನ್ ಲಸಿಕೆಗಳಿಂದ ಕಂಪೆನಿಗಳು ಕೋಟ್ಯಂತರ ಹಣವನ್ನು ಬಾಚಿಕೊಂಡವು. ಇವುಗಳಿಂದ ಈ ದೇಶದ ಜನತೆಗೆ ಆದ ಪ್ರಯೋಜನವೇನು? ಈ ಲಸಿಕೆಗಳ ಕುರಿತಂತೆ ಎದುರಾಗಿರುವ ಆತಂಕಗಳಿಗೆ ನೀವು ಯಾಕೆ ಇನ್ನೂ ಸ್ಪಷ್ಟೀಕರಣವನ್ನು ನೀಡಿಲ್ಲ? ಮೊದಲಾದ ಪ್ರಶ್ನೆಗಳಿಗೆ ಪ್ರಧಾನಿಯಾಗಿ ಮೋದಿಯವರು ಉತ್ತರಿಸಬೇಕಾಗಿದೆ. ವಿಪರ್ಯಾಸವೆಂದರೆ, ಈ ಎಲ್ಲ ಪ್ರಶ್ನೆಗಳಿಂದ ನುಣುಚಿಕೊಳ್ಳುವ ಏಕೈಕ ಉದ್ದೇಶದಿಂದ ಅವರು ತನ್ನನ್ನು ತಾನು ದೇವರ ಅಂಶವಾಗಿಸಲು ಇದೀಗ ಹೊರಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News