ಸುಖ್ಬೀರ್ ಸಿಂಗ್ ಸಂಧು, ಜ್ಞಾನೇಶ್ ಕುಮಾರ್, ವಿವೇಕ್ ಜೋಶಿ | Photo: @ECISVEEP/X via PTI

ಕಾವಲು ನಾಯಿ ಮನೆಯ ಒಡೆಯನನ್ನೇ ಕಚ್ಚಿದೆ. ಪ್ರಜಾಸತ್ತೆಯ ಬಾಗಿಲು ಕಾಯಬೇಕಾಗಿದ್ದ ಮುಖ್ಯ ಚುನಾವಣಾ ಆಯುಕ್ತರು ಪ್ರಜಾಸತ್ತೆಯ ಬೆನ್ನಿಗಿರಿದಿರುವುದು ಇದೀಗ ದೇಶಾದ್ಯಂತ ಚರ್ಚೆಯಲ್ಲಿದೆ. ದೇಶದ ಚುನಾವಣೆಯು ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಬೇಕಾದ ಚುನಾವಣಾ ಆಯೋಗವೇ ಚುನಾವಣೆಯನ್ನು ಅಸ್ತವ್ಯಸ್ತಗೊಳಿಸಿರುವುದು, ತನ್ನ ಹಸ್ತಕ್ಷೇಪದ ಮೂಲಕ ಜನಾದೇಶವನ್ನೇ ಹೈಜಾಕ್ ಮಾಡಿರುವುದು ಇಂದಿರಾಗಾಂಧಿ ಈ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿರುವುದಕ್ಕಿಂತಲೂ ಭೀಕರವಾಗಿದೆ. ಇಂದಿರಾಗಾಂಧಿಯವರು 70ರ ದಶಕದಲ್ಲಿ ಸಂವಿಧಾನವನ್ನು ಅಮಾನತಿನಲ್ಲಿಟ್ಟರೆ, ಇಂದು ಸಂವಿಧಾನವನ್ನು ದುರ್ಬಳಕೆ ಮಾಡಿಕೊಂಡು ಪ್ರಜಾಪ್ರಭುತ್ವವನ್ನು ಅಮಾನತಿನಲ್ಲಿಡಲಾಗಿದೆ. ಚುನಾವಣಾ ಆಯೋಗವನ್ನು ಬಳಸಿಕೊಂಡು, ದೇಶದ ಪ್ರಧಾನಿ ತನಗೆ ಪೂರಕವಾದ ಜನಾದೇಶವನ್ನು ಸಿದ್ಧಪಡಿಸಿಕೊಳ್ಳುವುದು ಪರೋಕ್ಷವಾಗಿ ದೇಶದ ಮೇಲೆ ತುರ್ತುಪರಿಸ್ಥಿತಿಯನ್ನು ಹೇರಿದಂತೆಯೇ ಸರಿ.

ದೇಶಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಮೇಲಿರುವ ಆರೋಪ ಇದೀಗ ನಿರ್ಣಾಯಕ ಹಂತವನ್ನು ತಲುಪಿದೆ. ಈವರೆಗೆ ಇದನ್ನು ಚುನಾವಣಾ ಆಯೋಗದ ನಿರ್ಧಾರವೆಂದು ಭಾವಿಸಿಕೊಂಡು ಬರಲಾಗಿತ್ತಾದರೆ, ಇದೀಗ ಈ ನಿರ್ಧಾರಕ್ಕೆ ಸ್ವತಃ ಚುನಾವಣಾ ಆಯೋಗದೊಳಗೇ ಆಕ್ಷೇಪಗಳಿದ್ದಿರುವುದು ಬಹಿರಂಗವಾಗಿದೆ. ಎಸ್‌ಐಆರ್ ಪ್ರಕ್ರಿಯೆಗಳ ಬಗ್ಗೆ ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿಯವರು ಹತ್ತು ತಿಂಗಳ ಅವಧಿಯಲ್ಲಿ 14 ಬಾರಿ ಆಕ್ಷೇಪಗಳನ್ನು ಸಲ್ಲಿಸಿರುವುದು ಆಂಗ್ಲ ಪತ್ರಿಕೆಯೊಂದರ ವಿಶೇಷ ವರದಿಯಿಂದ ಬಹಿರಂಗವಾಗಿದೆ. ಮತದಾರರ ಹೆಸರುಗಳ ಅಳಿಸುವಿಕೆ, ಚುನಾವಣಾ ದತ್ತಾಂಶದ ನಿರ್ವಹಣೆ, ಹೊಸ ಮತದಾರರ ಸೇರ್ಪಡೆ, ಮತದಾರರ ಪಟ್ಟಿಗೆ ಸಂಬಂಧಿಸಿದ ನಿರ್ಧಾರಗಳ ಕುರಿತು ಈ ಇಬ್ಬರು ಚುನಾವಣಾ ಆಯುಕ್ತರು ಪದೇ ಪದೇ ಕಳವಳ ಮತ್ತು ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದರೂ, ಮುಖ್ಯ ಚುನಾವಣಾ ಆಯುಕ್ತರು ಏಕ ಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಂಡಿದ್ದರು ಎನ್ನುವ ಅಂಶ ಬಹಿರಂಗವಾಗಿದೆ. ವಿಪರ್ಯಾಸವೆಂದರೆ, ಚುನಾವಣಾ ಆಯುಕ್ತರು ವ್ಯಕ್ತಪಡಿಸಿದ್ದರೆನ್ನಲಾದ ಆಕ್ಷೇಪಗಳನ್ನು ಆಯೋಗವು ನಿರಾಕರಿಸಿಲ್ಲ. ‘‘ಯಾವುದೇ ಸಂಸ್ಥೆಯಲ್ಲಿ ಚರ್ಚೆ-ಸಮಾಲೋಚನೆಗಳ ವೇಳೆ ವಿಭಿನ್ನ ದೃಷ್ಟಿಕೋನಗಳು ಮತ್ತು ಅಭಿಪ್ರಾಯಗಳು ವ್ಯಕ್ತವಾಗುವುದು ಸಹಜ ಪ್ರಕ್ರಿಯೆ’’ ಎಂದು ಪರೋಕ್ಷವಾಗಿ ಮುಖ್ಯ ಚುನಾವಣಾ ಆಯುಕ್ತರು ತೆಗೆದುಕೊಂಡ ನಿರ್ಧಾರಗಳನ್ನು ಸಮರ್ಥಿಸಿಕೊಂಡಿದೆ.

ಇಷ್ಟಕ್ಕೂ ವ್ಯಕ್ತವಾಗಿರುವ ಆಕ್ಷೇಪಣೆಗಳಾದರೂ ಎಂತಹದು? ಚುನಾವಣಾ ಆಯೋಗದ ಅನುಮತಿಯಿಲ್ಲದೆ ತನ್ನ ಹೆಸರಿನಲ್ಲಿ ಪತ್ರಗಳು, ಆದೇಶಗಳು ಬಿಡುಗಡೆಯಾಗುತ್ತಿರುವ ಬಗ್ಗೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಂಧು ಆಕ್ಷೇಪ ವ್ಯಕ್ತಪಡಿಸಿದ್ದರು. ಚುನಾವಣಾ ಆಯೋಗದ ಹೊಸ ಮಾಹಿತಿ ತಂತ್ರಜ್ಞಾನ ಸಲಕರಣೆಗಳು ಮತ್ತು ವೆಬ್ ಸೈಟ್‌ಗಳ ಬಗ್ಗೆ ನನಗೆ ಯಾವುದೇ ಮಾಹಿತಿಯಿರಲಿಲ್ಲ ಎನ್ನುವುದನ್ನು ಸಂಧು ಇದೇ ಎಪ್ರಿಲ್‌ನಲ್ಲಿ ಕಳವಳ ವ್ಯಕ್ತಪಡಿಸಿದ್ದರು. ಒಂದು ವರ್ಷಕ್ಕಿಂತಲೂ ಹೆಚ್ಚಿನ ಅವಧಿಯಿಂದ ನನಗೆ ಯಾವುದೇ ಜವಾಬ್ದಾರಿ ನೀಡಲಾಗಿಲ್ಲ, ಆಯೋಗದ ಸಭೆಗಳ ಬಳಿಕ ಅದರ ನಿರ್ಣಯಗಳನ್ನು ನನಗೆ ತೋರಿಸುತ್ತಿಲ್ಲ ಎಂದು ಜೋಶಿಯವರು ಎ. 16ರಂದು ಆಕ್ಷೇಪವನ್ನು ಮಾಡಿದ್ದರು. ಮತದಾರರ ಪಟ್ಟಿಯ ದತ್ತಾಂಶ ಕೋಶವನ್ನು ಕೇಂದ್ರೀಕರಿಸಲಾಗುತ್ತಿದೆ. ಅದರ ಪರಿಶೀಲನೆ ಅಗತ್ಯ ಎಂದು ಮೇ 16ರಂದು ಜೋಶಿಯವರು ಅಭಿಪ್ರಾಯ ಪಟ್ಟಿದ್ದರು. ಆದರೆ ಇದನ್ನೂ ಮುಖ್ಯ ಚುನಾವಣಾ ಆಯುಕ್ತರು ನಿರ್ಲಕ್ಷಿಸಿದ್ದರು. ಆಯೋಗಕ್ಕೆ ಮಾಹಿತಿಯಿಲ್ಲದೆ ಆಯೋಗದ ಕೆಲಸವನ್ನು ಮರು ಹಂಚಿಕೆ ಮಾಡಲಾಗುತ್ತಿದೆ ಎಂದು ಜೋಶಿಯವರು ಜು. 29ರಂದು ಸಂಪುಟ ಕಾರ್ಯದರ್ಶಿಗೆ ತಮ್ಮ ಆಕ್ಷೇಪವನ್ನು ಸಲ್ಲಿಸಿದ್ದರು. ನಮೂನೆ 6ರಲ್ಲಿನ ಬದಲಾವಣೆಯು ಅನಧಿಕೃತ ಮತ್ತು ಕಾನೂನು ಬಾಹಿರ ಎಂದು ಸಂಧು ಅವರು ಆಗಸ್ಟ್ 13ರಂದು ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಹಾಗೆಯೇ ಆಗಸ್ಟ್ 14ರಂದು ಸಂಧು ಅವರು, ಚುನಾವಣಾ ಆಯೋಗದ ವೆಬ್ ಸೈಟ್‌ಗಳಿಗೆ ಕ್ಷೇತ್ರಾಧಿಕಾರಿಗಳಿಗೆ ಪ್ರವೇಶ ಸಿಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಪ್ರವೇಶ ನಿರ್ಬಂಧಿಸಲು ಐಟಿ ಮಹಾನಿರ್ದೇಶಕರಿಗೆ ಅಧಿಕಾರವಿಲ್ಲ ಎಂದು ಹೇಳಿದ್ದರು. ಇವೆಲ್ಲವೂ ವಿಭಿನ್ನ ದೃಷ್ಟಿಕೋನಗಳು, ಭಿನ್ನಾಭಿಪ್ರಾಯಗಳು ಎಂದು ತಳ್ಳಿ ಹಾಕುವ ಆಕ್ಷೇಪಗಳೆ? ಇಡೀ ಚುನಾವಣಾ ಆಯೋಗದಲ್ಲಿ ಇಬ್ಬರು ಆಯುಕ್ತರ ಅಸ್ತಿತ್ವವನ್ನು ಸಂಪೂರ್ಣ ನಿರ್ಲಕ್ಷಿಸಿ ಮುಖ್ಯ ಆಯುಕ್ತರು ಸರ್ವಾಧಿಕಾರಿಯಂತೆ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎನ್ನುವುದನ್ನು ಇದು ಸ್ಪಷ್ಟಪಡಿಸುತ್ತದೆ. ಪರಿಣಾಮವಾಗಿ ಇಂದು ಈ ದೇಶದ ಕೋಟ್ಯಂತರ ಮತದಾರರು ತಮ್ಮ ಮತದಾನದ ಹಕ್ಕುಗಳನ್ನು ಕಳೆದುಕೊಳ್ಳುವುದಕ್ಕೆ ಅವರೇ ನೇರ ಹೊಣೆಯಾಗಿದ್ದಾರೆ.

ಟಿ.ಎನ್. ಶೇಷನ್‌ನಂತಹ ನಿಷ್ಠುರ, ಮುತ್ಸದ್ದಿ ಮುಖ್ಯಚುನಾವಣಾ ಆಯುಕ್ತರು ಚುನಾವಣಾ ಆಯೋಗದ ಅಸ್ತಿತ್ವವನ್ನು ಎತ್ತಿ ಹಿಡಿದಿದ್ದರು. ಈ ದೇಶದ ಜನತೆಗೆ ಪ್ರಜಾಸತ್ತೆಯ ಮೇಲೆ ಭರವಸೆ ಮೂಡುವಂತೆ ಅವರು ಕೆಲಸ ಮಾಡಿದ್ದರು. ಆ ಬಳಿಕದ ಕೆಲವು ಚುನಾವಣಾ ಆಯುಕ್ತರಿಗೆ ಅವರಂತೆ ನಿಷ್ಠುರವಾಗಿ ಕೆಲಸ ಮಾಡಲು ಸಾಧ್ಯವಾಗದೇ ಇದ್ದರೂ, ಆಳುವವರ ಗುಲಾಮರಾಗಿ ತಮ್ಮ ಹುದ್ದೆಯ ಘನತೆಗೆ ಧಕ್ಕೆ ತಂದಿರಲಿಲ್ಲ. ಆದರೆ, ಜ್ಞಾನೇಶ್ ಕುಮಾರ್ ಅವರು ಚುನಾವಣಾ ಆಯೋಗವನ್ನು ಚುನಾವಣಾ ವ್ಯವಸ್ಥೆಯನ್ನು ಬುಡಮೇಲುಗೊಳಿಸುವುದಕ್ಕೆ ಬಳಸಿಕೊಂಡರು. ವಿರೋಧ ಪಕ್ಷದ ನಾಯಕರು ಆರೋಪಿಸುವಂತೆ, ಜ್ಞಾನೇಶ್ ಅವರು ಮಾಡಿರುವುದು ಸಂವಿಧಾನ ದ್ರೋಹದ ಕೆಲಸ, ದೇಶ ದ್ರೋಹದ ಕೆಲಸ. ಸಂವಿಧಾನಕ್ಕೆ ಚೇತರಿಸಿಕೊಳ್ಳಲಾಗದಷ್ಟು ಹಾನಿಯನ್ನು ಅವರು ಈಗಾಗಲೇ ಮಾಡಿದ್ದಾರೆ. ಅವರ ರಾಜೀನಾಮೆ ಈ ಹಾನಿಯನ್ನು ಯಾವ ಕಾರಣಕ್ಕೂ ತುಂಬಿ ಕೊಡಲಾರದು. ಇಷ್ಟಾದರೂ ಅವರು ರಾಜೀನಾಮೆ ಕೊಡುವುದು ಅನಿವಾರ್ಯ ಎನ್ನುವಂತಹ ಆರೋಪಗಳನ್ನು ಅವರ ಸಹೋದ್ಯೋಗಿಗಳೇ ಮಾಡಿರುವುದರಿಂದ ಜ್ಞಾನೇಶ್ ನುಣುಚಿಕೊಳ್ಳುವಂತಿಲ್ಲ. ಆದರೆ ಅವರು ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ತೆಗೆದುಕೊಂಡ ನಿರ್ಧಾರಗಳ ಪರಿಣಾಮಗಳನ್ನು ಏನು ಮಾಡಬೇಕು? ಎನ್ನುವ ಪ್ರಶ್ನೆ ಉಳಿದೇ ಬಿಡುತ್ತದೆ. ಅವರ ತಪ್ಪು ಹೆಜ್ಜೆಗಳು ಬಿಹಾರ, ಪಶ್ಚಿಮಬಂಗಾಳ ಸೇರಿದಂತೆ ಇತ್ತೀಚಿನ ವಿಧಾನಸಭಾ ಚುನಾವಣೆಯ ಮೇಲೆ ನೇರ ಪರಿಣಾಮ ಬೀರಿದೆ. ಅವರ ಕಾರಣದಿಂದ ಕೋಟ್ಯಂತರ ಜನರು ತಮ್ಮ ಮತಗಳನ್ನು ಚಲಾಯಿಸದೇ ಅಸಹಾಯಕರಾದರು. ಇದಕ್ಕೆ ಪರಿಹಾರವನ್ನು ಹುಡುಕುವುದು ಸುಲಭವಿಲ್ಲ. ಇದೇ ಸಂದರ್ಭದಲ್ಲಿ ಇನ್ನು ಹೊಸದಾಗಿ ನೇಮಕವಾಗುವ ಮುಖ್ಯ ಚುನಾವಣಾ ಆಯುಕ್ತರು ಜ್ಞಾನೇಶ್‌ಗಿಂತ ಹೇಗೆ ಭಿನ್ನರಾಗಬಲ್ಲರು? ಎನ್ನುವ ಪ್ರಶ್ನೆಗೂ ಉತ್ತರವಿಲ್ಲ. ಈಗಾಗಲೇ ಮುಖ್ಯ ಚುನಾವಣಾ ಆಯುಕ್ತರ ನೇಮಕದ ಸಂಪೂರ್ಣ ಅಧಿಕಾರವನ್ನು ಕೇಂದ್ರ ಸರಕಾರ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಚುನಾವಣಾ ಆಯೋಗಕ್ಕೆ ಸ್ವಾಯತ್ತೆಯನ್ನು ನೀಡುವುದು ಮತ್ತು ಆಯುಕ್ತರ ನೇಮಕಾತಿಯಲ್ಲಿ ಸುಪ್ರೀಂಕೋರ್ಟ್ ಮುಖ್ಯ ಪಾತ್ರವಹಿಸುವುದರಿಂದಷ್ಟೇ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದು. ಇಲ್ಲವಾದರೆ ಜ್ಞಾನೇಶ್ ಜಾಗಕ್ಕೆ ಇನ್ನೊಬ್ಬ ಅಜ್ಞಾನೇಶನನ್ನು ತಂದು ಕೂರಿಸುವುದು ಸರಕಾರಕ್ಕೆ ಕಷ್ಟವೇನಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor