ಅರಣ್ಯ ಪ್ರದೇಶದಲ್ಲಿ ಏರಿಕೆ, ಜೀವ ವೈವಿಧ್ಯದಲ್ಲಿ ಇಳಿಕೆ!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಇತ್ತೀಚೆಗಷ್ಟೇ ಜಗತ್ತಿನ ಜನಸಂಖ್ಯೆ ವರದಿ ಹೊರ ಬಿದ್ದು, ಭಾರತ ವಿಶ್ವದಲ್ಲೇ ಅಗ್ರಸ್ಥಾನದಲ್ಲಿರುವುದನ್ನು ಬಹಿರಂಗಪಡಿಸಿತ್ತು. ಹೆಚ್ಚುತ್ತಿರುವ ಜನಸಂಖ್ಯೆ ಹೇಗೆ ಹಂತ ಹಂತವಾಗಿ ಈ ದೇಶದ ಪರಿಸರವನ್ನು ಹದಗೆಡಿಸುತ್ತಿದೆ, ವಾತಾವರಣದ ಮಾಲಿನ್ಯಕ್ಕೆ ಕಾರಣವಾಗುತ್ತಿದೆ ಎನ್ನುವುದು ಇದೇ ಸಂದರ್ಭದಲ್ಲಿ ಚರ್ಚೆಗೊಳಗಾಗಿತ್ತು. ಜಾಗತಿಕ ತಾಪಮಾನ ಮತ್ತು ಹೆಚ್ಚುತ್ತಿರುವ ಜನಸಂಖ್ಯೆಯ ನಡುವಿನ ಸಂಬಂಧವೂ ವಿಶ್ಲೇಷಣೆಗೆ ಒಳಗಾಗಿದೆ. ಜನಸಂಖ್ಯೆಗೆ ಸಂಬಂಧಿಸಿದ ವರದಿಯ ಬೆನ್ನಿಗೇ ಭಾರತದ ಅರಣ್ಯ ಸ್ಥಿತಿಗತಿಯ ಬಗ್ಗೆ ನಡೆಸಿದ ಸಮೀಕ್ಷೆಯೊಂದು ಹೊರಬಿದ್ದಿದ್ದು, ಕೆಲವು ಆಶಾದಾಯಕ ಸಂಗತಿಗಳನ್ನು ಅದು ಉಲ್ಲೇಖಿಸಿದೆ. ಭಾರತೀಯ ಅರಣ್ಯ ಸಮೀಕ್ಷೆಯು ತನ್ನ ಇತ್ತೀಚಿನ ‘18ನೇ ಭಾರತೀಯ ಅರಣ್ಯ ಸ್ಥಿತಿಗತಿ ವರದಿ’ಯಲ್ಲಿ ಭಾರತದಲ್ಲಿ ಅರಣ್ಯ ವ್ಯಾಪ್ತಿ ಮತ್ತು ಮರಗಳ ಪ್ರಮಾಣದಲ್ಲಿ ಸಣ್ಣ ಮಟ್ಟದ ಏರಿಕೆಯಾಗಿರುವುದನ್ನು ತಿಳಿಸಿದೆ. ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಏರಿಕೆಯಾಗಿದ್ದರೂ, ಹಲವಾರು ಜೀವವೈವಿಧ್ಯಗಳಿಂದ ಸಮೃದ್ಧವಾಗಿದ್ದ ನೈಸರ್ಗಿಕ ಅರಣ್ಯ ಪ್ರದೇಶಗಳು ಕುಸಿದಿರುವ ಆಘಾತಕಾರಿ ಅಂಶವನ್ನೂ ಸಮೀಕ್ಷೆ ಬಹಿರಂಗಪಡಿಸಿದೆ.
ಭಾರತದ ಒಟ್ಟು ಅರಣ್ಯ ಮತ್ತು ಮರಗಳ ವ್ಯಾಪ್ತಿ 8,27,357 ಚದರ ಕಿ.ಮೀ. ಎಂದು ವರದಿ ಹೇಳುತ್ತದೆ. ಅಂದರೆ ಇದು ದೇಶದ ಭೌಗೋಳಿಕ ಪ್ರದೇಶದ 25.17 ಶೇ. ಆಗುತ್ತದೆ. ಇದರಲ್ಲಿ 7,15,343 ಚದರ ಕಿ.ಮೀ. (21.76 ಶೇ.) ಅರಣ್ಯ ವ್ಯಾಪ್ತಿ ಮತ್ತು 1,12,014 ಚದರ ಕಿ.ಮೀ. (3.14 ಶೇ.) ಮರಗಳ
ವ್ಯಾಪ್ತಿಯಾಗಿದೆ. 2021ರ ಬಳಿಕ, ಅರಣ್ಯ ಮತ್ತು ಮರಗಳ ವ್ಯಾಪ್ತಿಯಲ್ಲಿ 1,446 ಚದರ ಕಿ.ಮೀ. ಏರಿಕೆಯಾಗಿದೆ ಎಂದು ವರದಿ ಹೇಳುತ್ತದೆ. ಇದರಲ್ಲಿ, 156 ಚದರ ಕಿ.ಮೀ. (0.2 ಶೇ.) ಅರಣ್ಯ ವ್ಯಾಪ್ತಿ ಏರಿಕೆಯಾದರೆ, ಮರಗಳ ವ್ಯಾಪ್ತಿಯಲ್ಲಿ 1,289 ಚದರ ಕಿ.ಮೀ. (1.16 ಶೇ.) ಏರಿಕೆಯಾಗಿದೆ. ಆದರೆ, ಪಶ್ಚಿಮಘಟ್ಟ, ಹಿಮಾಲಯದ ರಾಜ್ಯಗಳು ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮುಂತಾದ ಪರಿಸರಸೂಕ್ಷ್ಮ ವಲಯಗಳಲ್ಲಿ ಅರಣ್ಯ ವ್ಯಾಪ್ತಿ ಕುಸಿದಿದೆ. ಕಳೆದ ಒಂದು ದಶಕದಲ್ಲಿ, ಪಶ್ಚಿಮ ಘಟ್ಟದ ಪರಿಸರಸೂಕ್ಷ್ಮಪ್ರದೇಶಗಳು 58.22 ಚದರ ಕಿ.ಮೀ. ಅರಣ್ಯ ವ್ಯಾಪ್ತಿಯನ್ನು ಕಳೆದುಕೊಂಡಿವೆ. ಈಶಾನ್ಯ ವಲಯದಲ್ಲಿ ಇದೇ ಅವಧಿಯಲ್ಲಿ ಪರಿಸರಸೂಕ್ಷ್ಮ ಪ್ರದೇಶಗಳ ಪ್ರಮಾಣ 327 ಚದರ ಕಿ.ಮೀ.ನಷ್ಟು ಕುಸಿದಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ದಾಖಲಿತ ಅರಣ್ಯ ಪ್ರದೇಶದಲ್ಲೂ ಇಳಿಕೆಯಾಗಿದೆ. ಮಹತ್ವದ ನೈಸರ್ಗಿಕ ಅರಣ್ಯ ಮತ್ತು ಪರಿಸರಸೂಕ್ಷ್ಮ ವಲಯಗಳು ಬೆದರಿಕೆಯನ್ನು ಎದುರಿಸುತ್ತಿವೆ ಹಾಗೂ ಬೆಳೆಸಿದ ಕೃತಕ ಅರಣ್ಯ ವ್ಯವಸ್ಥೆಯತ್ತ ದೇಶವು ಸಾಗುತ್ತಿದೆ.
ಪ್ಲಾಂಟೇಶನ್‌ಗಳ ಹೆಚ್ಚಳದಿಂದಾಗಿ ಇಂಗಾಲದ ಡೈ ಆಕ್ಸೈಡ್ ಹೀರುವಿಕೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ವರದಿ ಹೇಳಿಕೊಳ್ಳುತ್ತದೆ. ಆದರೆ, ಹೆಚ್ಚುತ್ತಿರುವ ಅರಣ್ಯನಾಶದಿಂದಾಗಿ ಬಿಡುಗಡೆಗೊಳ್ಳುವ ಕಾರ್ಬನ್ ಡೈ ಆಕ್ಸೈಡ್ ಬಗ್ಗೆ ವರದಿ ಮೌನವಾಗಿದೆ.2011ರಿಂದ 2021ರವರೆಗಿನ ದಶಕದ ಅರಣ್ಯನಾಶದ ಬಗ್ಗೆಯೂ ವರದಿ ಮಾಹಿತಿ ನೀಡಿದೆ. ಅರಣ್ಯಗಳನ್ನು ಅತ್ಯಂತ ದಟ್ಟ ಅರಣ್ಯ, ಮಧ್ಯಮ ದಟ್ಟ ಅರಣ್ಯ ಮತ್ತು ತೆರೆದ ಅರಣ್ಯ ಎಂಬುದಾಗಿ ವಿಂಗಡಿಸಲಾಗಿದೆ. ಆಘಾತಕಾರಿ ಅಂಶವೆಂದರೆ, 46,707 ಚದರ ಕಿ.ಮೀ. ಅತ್ಯಂತ ದಟ್ಟ, ಮಧ್ಯಮ ದಟ್ಟ ಮತ್ತು ತೆರೆದ
ಅರಣ್ಯಗಳು ಅರಣ್ಯೇತರ ಪ್ರದೇಶಗಳಾಗಿ ಮಾರ್ಪಟ್ಟಿವೆ. ಅದೇ ವೇಳೆ, 5,573 ಚದರ ಕಿ.ಮೀ. ಅರಣ್ಯವು ಪೊದೆಗಳಾಗಿವೆ. ಕಳೆದ ಒಂದು ದಶಕದಲ್ಲಿ, 40,709 ಚದರ ಕಿ.ಮೀ. ಅರಣ್ಯವು ದಟ್ಟತೆಯನ್ನು ಕಳೆದುಕೊಂಡಿದೆ. ಈ ಅವಧಿಯಲ್ಲಿ ಅತ್ಯಂತ ದಟ್ಟ ಮತ್ತು ಮಧ್ಯಮ ದಟ್ಟ ಅರಣ್ಯಗಳು ತೆರೆದ ಅರಣ್ಯಗಳಾಗಿವೆ ಎಂದು ವರದಿ ಹೇಳುತ್ತದೆ.
ಈಗ ಅಸ್ತಿತ್ವದಲ್ಲಿರುವ ಅರಣ್ಯಗಳ ಗುಣಮಟ್ಟದಲ್ಲಿ ಅಗಾಧ ಬದಲಾವಣೆಗಳಾಗಿವೆ ಎಂದು ಹೇಳುವ ತಜ್ಞರು, ನೈಸರ್ಗಿಕ ಅರಣ್ಯಗಳನ್ನು ಕಡಿಯುವಾಗ ಎಷ್ಟು ಇಂಗಾಲದ ಡೈ ಆಕ್ಸೈಡ್ ಬಿಡುಗಡೆಗೊಳ್ಳುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಸರಿಯಾದ ಅಧ್ಯಯನವೊಂದನ್ನು ಮಾಡಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಡುತ್ತಾರೆ. ಇತ್ತೀಚಿನ ಅರಣ್ಯ ಸಮೀಕ್ಷೆಯು ಕೃಷಿ ಅರಣ್ಯಕ್ಕೆಂದೇ ಒಂದು ಅಧ್ಯಾಯವನ್ನು ಮೀಸಲಿಟ್ಟಿದೆ. ಕೃಷಿ ಅರಣ್ಯವೆಂದರೆ ಕೃಷಿ ಭೂಮಿಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮರಗಳು ಮತ್ತು ಪೊದೆಗಳನ್ನು ಬೆಳೆಸುವುದು. 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮರಗಳ ವ್ಯಾಪ್ತಿ ಹಿಗ್ಗಿದೆ ಎಂದು ವರದಿ ಹೇಳುತ್ತದೆ. ಅಂದರೆ, ಅದರ ಅರ್ಥ ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೃಷಿ ಅರಣ್ಯವನ್ನು ಅನುಷ್ಠಾನಕ್ಕೆ ತರಲಾಗಿದೆ. 2023ರಲ್ಲಿ, ಕೃಷಿ ಅರಣ್ಯದ ಅಡಿಯಲ್ಲಿ ಬರುವ ಮರಗಳ ಒಟ್ಟು ವ್ಯಾಪ್ತಿ 1,27,590 ಚದರ ಕಿ.ಮೀ. ಎಂಬುದಾಗಿ ವರದಿ ತಿಳಿಸುತ್ತದೆ. ಇದರಲ್ಲಿ 5ರಿಂದ 10 ಸೆಂಟಿಮೀಟರ್ ವ್ಯಾಸವಿರುವ ಮರಗಳು ಮತ್ತು ಬಿದಿರುಗಳನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. 2013 ಮತ್ತು 2023ರ ನಡುವಿನ ಅವಧಿಯಲ್ಲಿ ಕೃಷಿ ಅರಣ್ಯವು 20.02 ಶೇ. ದಷ್ಟು ಬೆಳೆದಿದೆ.
ಅದೇ ವೇಳೆ, ಭಾರತದ ನದಿ ಪ್ರದೇಶಗಳನ್ನು ಕಾಪಾಡುವ ಕಾಂಡ್ಲಾ ಕಾಡು ಅಥವಾ ಮ್ಯಾಂಗ್ರೋವ್ ವ್ಯಾಪ್ತಿ ಕುಗ್ಗುತ್ತಿದೆ ಎಂದು ವರದಿ ಹೇಳಿದೆ. ಜಲಚರಗಳು ಸೇರಿದಂತೆ ನದಿ ತಟದ ರಕ್ಷಣೆಯಲ್ಲಿ ಮಹತ್ತರ ಪಾತ್ರವಹಿಸುವ, ಜೀವವೈವಿಧ್ಯಗಳಿಗೆ ಆಶ್ರಯವಾಗಿರುವ ಮ್ಯಾಂಗ್ರೋವ್ ಇಳಿಕೆಯಾಗುತ್ತಿರುವುದು ಕರಾವಳಿಯ ಪ್ರದೇಶಗಳಿಗೆ ಅಪಾಯಕಾರಿಯಾಗಿದೆ. ಭಾರತದ ಒಟ್ಟು ಮ್ಯಾಂಗ್ರೋವ್ ವ್ಯಾಪ್ತಿ 4,991 ಚದರ ಕಿ.ಮೀ. ಆಗಿದೆ. ಅಂದರೆ ಇದು ದೇಶದ ಭೌಗೋಳಿಕ ವ್ಯಾಪ್ತಿಯ 0.15 ಶೇ. ದಷ್ಟಿದೆ. ಅತ್ಯಂತ ದಟ್ಟ ಮ್ಯಾಂಗ್ರೋವ್‌ಗಳ ಪ್ರಮಾಣ 29.33 ಶೇ. ಆಗಿದ್ದರೆ, ಮಧ್ಯಮ ದಟ್ಟ ಮ್ಯಾಂಗ್ರೋವ್‌ಗಳ ಪ್ರಮಾಣ 30.07 ಶೇ. ಆಗಿದೆ. ಅದೇ ವೇಳೆ, ತೆರೆದ ಮ್ಯಾಂಗ್ರೋವ್‌ಗಳ ಪ್ರಮಾಣ 40.60 ಶೇ. ಆಗಿದೆ. 2021ರಿಂದ ಮ್ಯಾಂಗ್ರೋವ್‌ಗಳ ಪ್ರಮಾಣ 7.43 ಚದರ ಕಿ.ಮೀ.ನಷ್ಟು ಕಡಿಮೆಯಾಗಿದೆ. ಇದರ ಪ್ರಮಾಣ ಗುಜರಾತ್‌ನಲ್ಲಿ 36.39 ಚದರ ಕಿ.ಮೀ. ನಷ್ಟು ಕಡಿಮೆಯಾದರೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 4.65 ಚದರ ಕಿ.ಮೀ.ನಷ್ಟು ಕುಗ್ಗಿದೆ. ಆದರೆ, ಈ ಅವಧಿಯಲ್ಲಿ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳ ಮ್ಯಾಂಗ್ರೋವ್ ವ್ಯಾಪ್ತಿ ಕ್ರಮವಾಗಿ 13.01 ಚದರ ಕಿ.ಮೀ. ಮತ್ತು 12.39 ಚದರ ಕಿ.ಮೀ.ನಷ್ಟು ಹಿಗ್ಗಿದೆ.ಗುಜರಾತ್ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮ್ಯಾಂಗ್ರೋವ್‌ಗಳ
ಪ್ರಮಾಣದಲ್ಲಿ ಇಳಿಕೆಯಾಗಲು ಏನು ಕಾರಣ ಎಂಬ ಬಗ್ಗೆ ಅಧ್ಯಯನ ನಡೆಯಬೇಕಾದ ಅಗತ್ಯವಿದೆ. ಯಾಕೆಂದರೆ ಹವಾಮಾನ ಬದಲಾವಣೆಯ ತೀವ್ರತೆಯನ್ನು ಕಡಿಮೆಗೊಳಿಸಲು ಮತ್ತು ಕರಾವಳಿ ಪರಿಸರ ವ್ಯವಸ್ಥೆಯನ್ನು ರಕ್ಷಿಸಲು ಮ್ಯಾಂಗ್ರೋವ್‌ಗಳು ಅಗತ್ಯವಾಗಿವೆ.
ಕಾಡಿನ ನಾಶಕ್ಕೆ ಬೃಹತ್ ಕಾಡ್ಗಿಚ್ಚುಗಳನ್ನು ಹೊಣೆ ಮಾಡಲಾಗುತ್ತದೆಯಾದರೂ, ಬಹುತೇಕ ಕಾಡ್ಗಿಚ್ಚುಗಳು ಮನುಷ್ಯನ ಸ್ವಯಂಕೃತಾಪರಾಧಗಳಾಗಿವೆ. ತನ್ನ ಸ್ವಾರ್ಥಕ್ಕಾಗಿ ಮನುಷ್ಯ ಹಚ್ಚಿದ ಬೆಂಕಿಯೇ ಬಳಿಕ ಬೃಹತ್ ಕಾಡ್ಗಿಚ್ಚುಗಳಾಗಿ ಬದಲಾವಣೆಯಾಗಿವೆ. ಭಾರತದಲ್ಲಿ ಸಂಭವಿಸುವ ಕಾಡ್ಗಿಚ್ಚುಗಳಲ್ಲಿ ಮರಗಳ್ಳರ ಕೈವಾಡಗಳಿರುತ್ತವೆ. ಕೆಲವೊಮ್ಮೆ ಅರಣ್ಯ ಸಿಬ್ಬಂದಿಯೇ ತಮ್ಮ ಅಕ್ರಮಗಳನ್ನು ಮುಚ್ಚಿ ಹಾಕಲು ಕಾಡಿಗೆ ಬೆಂಕಿ ಹಚ್ಚುವುದಿದೆ. ಇದೇ ಸಂದರ್ಭದಲ್ಲಿ, ಕಾಡು ಉಳಿಸುವ ನೆಪದಲ್ಲಿ ಆದಿವಾಸಿಗಳನ್ನು ಕಾಡಿನಿಂದ ಓಡಿಸಿ, ಕಾಡುಗಳಲ್ಲಿ ಬೃಹತ್ ಗಣಿಗಾರಿಕೆಗಳಿಗೆ ಅನುಮತಿ ನೀಡಿರುವುದು ಕೂಡ ಅರಣ್ಯ ನಾಶಕ್ಕೆ ಕಾರಣವಾಗಿದೆ. ಹೀಗೆ ನಾಶ ಮಾಡಿದ ಅರಣ್ಯವನ್ನು ಕೃತಕವಾಗಿ ಸೃಷ್ಟಿಸಲು ಸರಕಾರ ಪ್ರಯತ್ನಿಸುತ್ತಿದೆ. ಕಳೆದು ಹೋದ ಕಾಡನ್ನು ನಾವು ತೋಟಗಾರಿಕೆಯ ಮೂಲಕ ಪುನರ್ ಸೃಷ್ಟಿಸುವ ಪ್ರಯತ್ನ ನಡೆಸಬಹುದು. ಆದರೆ ಅರಣ್ಯದ ಜೊತೆಗೇ ಇಲ್ಲವಾದ ಜೀವವೈವಿಧ್ಯವನ್ನು ಪುನರ್ ಸೃಷ್ಟಿಸಲು ಸಾಧ್ಯವಿಲ್ಲ. ನೈಸರ್ಗಿಕ ಅರಣ್ಯಗಳು ತನ್ನ ಜೊತೆ ಜೊತೆಗೇ ಸಣ್ಣ ಪುಟ್ಟ ಕೀಟಗಳಿಂದ ಹಿಡಿದು, ವೈವಿಧ್ಯಮಯವಾದ ಪ್ರಾಣಿ ಪಕ್ಷಿಗಳನ್ನು ಬೆಳೆಸುತ್ತವೆ. ಅವು ಒಂದಕ್ಕೊಂದು ಪೂರಕವಾಗಿ ಹರಡಿಕೊಳ್ಳುತ್ತವೆ. ಮನುಷ್ಯ ನೆಡುವ ಕಾಡು ಎನ್ನುವುದು ನೈಸರ್ಗಿಕ ಕಾಡಿನ ಒಂದು ಅಣಕ ಮಾತ್ರವಾಗಿದೆ. ಅರಣ್ಯ ಸಮೀಕ್ಷೆ ಬಹಿರಂಗ ಪಡಿಸಿರುವ ವರದಿಯು ಇದನ್ನೇ ಹೇಳುತ್ತದೆ. ಆದುದರಿಂದ, ಅರಣ್ಯವನ್ನು ಮನುಷ್ಯ ಸೃಷ್ಟಿಸುವುದಕ್ಕಿಂತಲೂ, ಪ್ರಕೃತಿದತ್ತವಾಗಿರುವ ಅರಣ್ಯಗಳನ್ನು ಉಳಿಸಿಕೊಳ್ಳುವ ಬಗ್ಗೆ ನಾವು ಆದ್ಯತೆಯನ್ನು ನೀಡಬೇಕಾಗಿದೆ.