×
Ad

ಸರಕಾರಿ ಶಾಲೆಗಳನ್ನು ಕಾಪಾಡಿ

Update: 2025-11-04 09:05 IST

ಸಾಂದರ್ಭಿಕ ಚಿತ್ರ PC: iStock photo

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಆರೋಗ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ಕೆಲವು ರಾಜ್ಯ ಸರಕಾರಗಳು ತಮ್ಮ ಹೊಣೆಗಾರಿಕೆಯನ್ನು ಜಾರಿಸಿಕೊಳ್ಳುತ್ತ ಹೊರಟಿವೆ. ಇದರ ಪರಿಣಾಮವಾಗಿ ಬಡವರ, ಅವಕಾಶ ವಂಚಿತರ ಪಾಲಿನ ಆಸರೆಯಾಗಿರುವ ಸರಕಾರಿ ಆಸ್ಪತ್ರೆಗಳು ಮತ್ತು ಸರಕಾರಿ ಶಾಲೆಗಳು ಒಂದೊಂದಾಗಿ ಮುಚ್ಚಿ ಹೋಗುತ್ತಿವೆ.ಅವುಗಳನ್ನು ಉಳಿಸಿಕೊಳ್ಳುವ ಯಾವ ಆಸಕ್ತಿಯನ್ನೂ ಅಧಿಕಾರದಲ್ಲಿರುವವರು ತೋರಿಸುತ್ತಿಲ್ಲ. ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಸರಕಾರ ಖಾಸಗಿ ಸಹಭಾಗಿತ್ವದಲ್ಲಿ ಸರಕಾರಿ ಆಸ್ಪತ್ರೆಗಳ ಸ್ಥಾಪನೆ ಹಾಗೂ ಸರಕಾರಿ ಶಾಲೆಗಳ ದತ್ತು ಯೋಜನೆಯನ್ನು ರೂಪಿಸಿ ಎಲ್ಲವನ್ನೂ ಖಾಸಗಿಯವರ ಮಡಿಲಿಗೆ ಹಾಕಲು ಹೊರಟಿದೆ.

ಜವಾಹರಲಾಲ್ ನೆಹರೂ ಕಾಲದಲ್ಲಿ ಸ್ಥಾಪಿಸಲ್ಪಟ್ಟ ಸಾರ್ವಜನಿಕ ರಂಗದ, ಅಂದರೆ ಸರಕಾರಿ ವಲಯದ ಉದ್ಯಮಗಳನ್ನು ಒಂದೊಂದಾಗಿ ಖಾಸಗಿ ವಲಯದ ಕಾರ್ಪೊರೇಟ್ ಕಂಪೆನಿಗಳ ಮಡಿಲಿಗೆ ಹಾಕುತ್ತಿರುವ ತನ್ನ ಸರಕಾರದ ಕ್ರಮವನ್ನು ಹಿಂದೊಮ್ಮೆ ಸಮರ್ಥಿಸಿಕೊಂಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ‘‘ಉದ್ಯಮಗಳನ್ನು ನಡೆಸುವುದು ಸರಕಾರದ ಕೆಲಸವಲ್ಲ’’ ಎಂದು ಹೇಳಿದ್ದರು.ಅವರಿಗೆ ಕಾರ್ಪೊರೇಟ್ ವಲಯದ ಮೇಲೆ ವಿಶೇಷ ಪ್ರೀತಿ. ಅದರಲ್ಲೂ ಅದಾನಿ ಮತ್ತು ಅಂಬಾನಿಯವರ ಪರವಾಗಿ ವಿಶೇಷ ಒಲವು. ಇತ್ತೀಚೆಗೆ ಜೀವ ವಿಮಾ ನಿಗಮದಿಂದ ಅದಾನಿ ಅವರಿಗೆ 33,000 ಕೋಟಿ ರೂಪಾಯಿಗಳನ್ನು ಕೊಡಿಸಿದರು.ಈಗ ಉದ್ಯಮಗಳು ಮಾತ್ರವಲ್ಲ, ಸರಕಾರಿ ಶಾಲೆಗಳು ಒಂದೊಂದಾಗಿ ಮುಚ್ಚಿ ಹೋಗುತ್ತಿವೆ. ಅವುಗಳನ್ನು ಉಳಿಸಿಕೊಳ್ಳುವ ಯಾವ ಪ್ರಯತ್ನವನ್ನೂ ಸರಕಾರ ಮಾಡುತ್ತಿಲ್ಲ. ಸರಕಾರಿ ಆಸ್ಪತ್ರೆಗಳನ್ನು ಕೂಡ ಖಾಸಗಿ ಸಹಭಾಗಿತ್ವದ ಹೆಸರಿನಲ್ಲಿ ಹಣವಂತರ ಮಡಿಲಿಗೆ ಹಾಕುವ ಮಸಲತ್ತು ನಡೆದಿದೆ.

ಇದು ಯಾವುದೇ ಒಂದು ರಾಜ್ಯದ ಸ್ಥಿತಿಯಲ್ಲ. ಇಡೀ ಭಾರತದ ಪರಿಸ್ಥಿತಿಯಾಗಿದೆ. ಪ್ರಸಕ್ತ 2025-26ನೇ ಶೈಕ್ಷಣಿಕ ವರ್ಷದಲ್ಲಿ ದೇಶದ 7,993 ಸರಕಾರಿ ಶಾಲೆಗಳಲ್ಲಿ ಯಾವ ವಿದ್ಯಾರ್ಥಿಯೂ ಪ್ರವೇಶ ಪಡೆದಿಲ್ಲ. ಈ ಪೈಕಿ ಪಶ್ಚಿಮ ಬಂಗಾಳ ಮೊದಲ ಸ್ಥಾನದಲ್ಲಿದ್ದರೆ, ತೆಲಂಗಾಣ ಎರಡನೇ ಸ್ಥಾನದಲ್ಲಿ ಇದೆ. ಸರಕಾರಿ ಶಾಲೆಗಳಲ್ಲಿ ಪ್ರವೇಶ ಪ್ರಮಾಣ ಕುಸಿಯುತ್ತಿರುವುದು ಆತಂಕದ ಸಂಗತಿಯಾಗಿದೆ. 2024-25ನೇ ವರ್ಷದಲ್ಲಿ ದಾಖಲಾತಿಯೇ ಆಗದ 7,993 ಸರಕಾರಿ ಶಾಲೆಗಳಲ್ಲಿ ಇರುವ ಶಿಕ್ಷಕರ ಸಂಖ್ಯೆ 20,817. ಒಬ್ಬರೇ ಶಿಕ್ಷಕರು ಇರುವ ಶಾಲೆಗಳ ಸಂಖ್ಯೆ ಒಂದು ಲಕ್ಷದಷ್ಟಿದೆ. ಇಂತಹ ಶಾಲೆಗಳಲ್ಲಿ ಎಲ್ಲ ತರಗತಿಗಳ ಮಕ್ಕಳಿಗೆ ಒಬ್ಬರೇ ಶಿಕ್ಷಕರು ಪಾಠ ಮಾಡುತ್ತಾರೆ. ಸರಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ ವ್ಯಾಪಕವಾಗಿದೆ. ಬಹುತೇಕ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ, ಗ್ರಂಥಾಲಯ, ಪ್ರಯೋಗಾಲಯ ಹಾಗೂ ಆಟದ ಮೈದಾನ ಸೇರಿದಂತೆ ಹಲವಾರು ಕೊರತೆಗಳು ಇವುಗಳ ದುರವಸ್ಥೆಗೆ ಕಾರಣ. ಅನೇಕ ಹಳ್ಳಿಗಳ ಸರಕಾರಿ ಶಾಲೆಗಳಲ್ಲಿ ಶೌಚಾಲಯಗಳು ಇಲ್ಲದಿರುವುದರಿಂದಲೇ ಬಾಲಕಿಯರು ಶಾಲೆಗೆ ಬರುತ್ತಿಲ್ಲ. ಸರಕಾರ ಶಿಕ್ಷಣ ಕ್ಷೇತ್ರವನ್ನು ನಿರ್ಲಕ್ಷಿಸಿರುವುದು ಇದರಿಂದ ಸ್ಪಷ್ಟವಾಗುತ್ತದೆ.

ಸರಕಾರಿ ಶಾಲೆಗಳಿಗೆ ಮಕ್ಕಳು ಯಾಕೆ ಬರುತ್ತಿಲ್ಲ? ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಯಾಕೆ ಸೇರಿಸುತ್ತಿಲ್ಲ? ಎಂಬ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವುದು ಅಗತ್ಯವಾಗಿದೆ. ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಸರಕಾರಿ ಶಾಲೆಗಳು ಮೂಲಭೂತ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿವೆ.ಕರ್ನಾಟಕದ ಸರಕಾರಿ ಶಾಲೆಗಳಲ್ಲಿ ಶೌಚಾಲಯಗಳ ಕೊರತೆ ಮಾತ್ರವಲ್ಲ 36,000 ಕೊಠಡಿಗಳ ಕೊರತೆ ಇದೆ. ಇದಷ್ಟೇ ಅಲ್ಲ, ಅನೇಕ ಸರಕಾರಿ ಶಾಲೆಗಳ ಕಟ್ಟಡಗಳು ಶಿಥಿಲವಾಗಿವೆ. ಯಾವಾಗ ಕಟ್ಟಡ ಬೀಳುತ್ತದೋ ಎಂದು ವಿದ್ಯಾರ್ಥಿಗಳು ಜೀವ ಭಯದಿಂದ ಪಾಠ ಕಲಿಯಬೇಕಾದ ಪರಿಸ್ಥಿತಿ ಇದೆ. ಶಾಲಾ ಶಿಕ್ಷಕರನ್ನು ಜನಗಣತಿ ಮುಂತಾದ ಅನ್ಯ ಕಾರ್ಯಗಳಿಗಾಗಿ ಪದೇ ಪದೇ ಬಳಸಿಕೊಳ್ಳುವುದರಿಂದ ನಿತ್ಯದ ಶಾಲಾ ಪಾಠ ಮಾಡಲು ತೊಂದರೆ ಆಗುತ್ತಿದ್ದು, ಶಾಲಾ ಗುಣಮಟ್ಟ ಕುಸಿಯುತ್ತಿದೆ. ಹೀಗಾಗಿ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ ಸೇರಿದಂತೆ ಹಲವಾರು ವಿಷಯಗಳಲ್ಲಿ ಪಾಠ ಮಾಡುವವರೇ ಇಲ್ಲದಂತಾಗಿದೆ. ನಮ್ಮ ರಾಜ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢ ಶಾಲೆಗಳು ಸೇರಿದಂತೆ 46,776 ಶಾಲೆಗಳಿವೆ. ಲಕ್ಷಾಂತರ ಮಕ್ಕಳ ಬದುಕಿಗೆ ಬೆಳಕನ್ನು ನೀಡುವ ಶಕ್ತಿ ಈ ಶಾಲೆಗಳಿಗಿದೆ. ಆದರೆ ಶಿಕ್ಷಕರ ಕೊರತೆ ಹಾಗೂ ಮೂಲಭೂತ ಸೌಕರ್ಯಗಳ ಅಭಾವದಿಂದ ಈ ಶಾಲೆಗಳು ಹೆಸರಿಗೆ ಮಾತ್ರ ಶಾಲೆಗಳೆಂದು ಕರೆದುಕೊಳ್ಳುತ್ತಿವೆ.ಇದರಿಂದ ರೋಸಿ ಹೋದ ಪೋಷಕರು ತಮ್ಮ ಮಕ್ಕಳನ್ನು ಸಾಲ ಮಾಡಿ ಖಾಸಗಿ ಶಾಲೆಗಳಿಗೆ ಸೇರಿಸುವ ಸನ್ನಿವೇಶ ನಿರ್ಮಾಣವಾಗಿದೆ.

ಇಷ್ಟೆಲ್ಲಾ ಕೊರತೆಗಳ ನಡುವೆಯೂ ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳೇ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದು ಹೆಮ್ಮೆ ಪಡಬೇಕಾದ ಸಂಗತಿಯಾಗಿದೆ. ಯಾವ ಅನುಕೂಲಗಳಿಲ್ಲದ ಬಡವರು, ದಲಿತರು ಮತ್ತು ಹಿಂದುಳಿದ ಅಲ್ಪಸಂಖ್ಯಾತ ಸಮುದಾಯಗಳಿಂದ ಬರುವ ಮಕ್ಕಳಿಗೆ ಸರಕಾರಿ ಶಾಲೆಗಳೇ ಶೈಕ್ಷಣಿಕ ಆಸರೆಯಾಗಿವೆ. ಯಾರೇ ಬರಲಿ ಸರಕಾರಿ ಶಾಲೆಗಳಲ್ಲಿ ಪ್ರವೇಶವನ್ನು ನಿರಾಕರಿಸುವುದಿಲ್ಲ. ಆದರೆ ಖಾಸಗಿ ಶಾಲೆಗಳಲ್ಲಿ ಲಕ್ಷಾಂತರ ರೂ. ನೀಡಿ ಶೇ. 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದರೆ ಮಾತ್ರ ಪ್ರವೇಶದ ಅವಕಾಶ ಇದೆ. ಶೇ. 85ರಷ್ಟು ಅಂಕಗಳನ್ನು ಪಡೆದ ಮಕ್ಕಳಿಗೂ ಖಾಸಗಿ ಶಾಲೆಗಳಲ್ಲಿ ಪ್ರವೇಶ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಕಡಿಮೆ ಅಂಕಗಳನ್ನು ಪಡೆದ ಮಕ್ಕಳಿಗೆ ಸರಕಾರಿ ಶಾಲೆಗಳೇ ಏಕೈಕ ಆಸರೆಯಾಗಿವೆ. ಆದ್ದರಿಂದ ಸರಕಾರಿ ಶಾಲೆಗಳನ್ನು ಕಾಪಾಡಿಕೊಳ್ಳುವುದು ಸರಕಾರದ ಮತ್ತು ಸಾರ್ವಜನಿಕರ ಮೊದಲ ಆದ್ಯತೆಯಾಗಬೇಕಾಗಿದೆ.

ಸರಕಾರದ ಮಹತ್ವದ ಸ್ಥಾನಗಳಲ್ಲಿ ಇರುವವರು ಸರಕಾರಿ ಶಾಲೆಗಳ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಬೇಕಾಗಿದೆ. ಆದರೆ ನಮ್ಮ ಬಹುತೇಕ ಮಂತ್ರಿಗಳು, ಶಾಸಕರು ಸೇರಿದಂತೆ ರಾಜಕಾರಣಿಗಳಿಗೆ ಅವರದೇ ಆದ ಶಾಲೆ, ಕಾಲೇಜುಗಳಿವೆ. ತಮ್ಮ ಶಿಕ್ಷಣ ಸಂಸ್ಥೆಗಳ ಬಗ್ಗೆ ಇರುವ ಕಾಳಜಿ ಮತ್ತು ಆಸಕ್ತಿ ಸರಕಾರಿ ಶಾಲೆಗಳ ಬಗ್ಗೆ ಇಲ್ಲ. ಬಹುತೇಕ ಖಾಸಗಿ ಶಾಲೆಗಳು ಶೈಕ್ಷಣಿಕ ಮಾರುಕಟ್ಟೆಗಳಾಗಿವೆ. ಅವುಗಳಿಗೆ ಅನುಕೂಲ ಮಾಡಲೆಂದೇ ಅನೇಕ ರಾಜಕಾರಣಿಗಳು ಶಾಸನ ಸಭೆಗಳನ್ನು ಪ್ರವೇಶಿಸಿರುತ್ತಾರೆ. ಸರಕಾರಿ ಶಾಲೆಗಳು ಮುಚ್ಚಿದಷ್ಟೂ ಇವರಿಗೆ ಅನುಕೂಲ. ಇಂತಹ ಸನ್ನಿವೇಶದಲ್ಲಿ ಸರಕಾರಿ ಶಾಲೆ, ಕಾಲೇಜುಗಳನ್ನು ಉಳಿಸಿಕೊಳ್ಳಲು ಜನರೇ ಮುಂದಾಗಬೇಕಾಗಿದೆ. ಜನಪರ, ಪ್ರಗತಿಪರ ಸಂಘಟನೆಗಳು ಇಂತಹ ಮಹತ್ವದ ವಿಷಯದಲ್ಲಿ ಆಸಕ್ತಿ ತೋರಿಸಬೇಕಾಗಿದೆ.

ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಪೂರಕವಾಗಿ ಸರಕಾರಿ ಶಾಲೆಗಳನ್ನು ಸಜ್ಜುಗೊಳಿಸಬೇಕು. ಮೂಲಭೂತ ಸೌಕರ್ಯಗಳು ಮಾತ್ರವಲ್ಲ ಗುಣಮಟ್ಟದ ಶಿಕ್ಷಣ, ಅದರಲ್ಲೂ ಡಿಜಿಟಲ್ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸಮರ್ಪಕವಾದ ಕಲಿಕಾ ವಾತಾವರಣವನ್ನು ನಿರ್ಮಿಸುವುದು ಸರಕಾರದ ಮೊದಲ ಆದ್ಯತೆಯಾಗಬೇಕಾಗಿದೆ. ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಸರಕಾರಿ ಶಾಲೆಗಳನ್ನು ಸಿದ್ಧಪಡಿಸಬೇಕಾಗಿದೆ. ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳದಿದ್ದರೆ ಸರಕಾರದಲ್ಲಿ ಇದ್ದವರನ್ನು ಜನ ಕ್ಷಮಿಸುವುದಿಲ್ಲ.

ಅನ್ನ, ಆರೋಗ್ಯ ಮತ್ತು ಶಿಕ್ಷಣ ಇಂತಹ ಮಹತ್ವದ ವಿಷಯಗಳಿಗೆ ಸಂಬಂಧಿಸಿದಂತೆ ಸರಕಾರ ತನ್ನ ಹೊಣೆಗಾರಿಕೆಯಿಂದ ಜಾರಿಕೊಳ್ಳಬಾರದು. ಇವು ಪ್ರಜೆಗಳ ಮೂಲಭೂತ ಹಕ್ಕುಗಳು, ಯಾವುದೇ ಕಾರಣಕ್ಕೂ ಇಲ್ಲಿ ಖಾಸಗಿ ವಲಯದ ಹಸ್ತಕ್ಷೇಪಕ್ಕೆ ಅವಕಾಶ ನೀಡಲೇ ಬಾರದು. ಖಾಸಗಿ ಸಹಭಾಗಿತ್ವದ ಸರಕಾರಿ ಹೈಟೆಕ್ ಆಸ್ಪತ್ರೆ ಮತ್ತು ಶಾಲೆಗಳು ಜನರ ಸಂಪನ್ಮೂಲಗಳನ್ನು ದೋಚಿ ಬಂಡವಾಳಿಗರ ಮಡಿಲಿಗೆ ಹಾಕುವ ಅತ್ಯಂತ ಜಾಣ ಕುತಂತ್ರವಾಗಿದೆ. ಇದನ್ನು ವಿರೋಧಿಸಲು ತಮ್ಮ ಸಂಪನ್ಮೂಲಗಳನ್ನು ಉಳಿಸಿಕೊಳ್ಳಲು ಜನರು ಮತ್ತು ಜನಪರ ಸಂಘಟನೆಗಳು ಸಂಕಲ್ಪ ಮಾಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News