×
Ad

ವಿಜಯದ ಹಾದಿಯ ಮುಳ್ಳುಗಳು!

Update: 2026-05-09 07:59 IST

 ಟಿವಿಕೆ ಮುಖ್ಯಸ್ಥ ವಿಜಯ್ | Photo : PTI

 

ತಮಿಳುನಾಡಿನಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಒಂದು ಥ್ರಿಲ್ಲರ್ ಸಿನೆಮಾ ಕತೆಯನ್ನು ಸರಿಗಟ್ಟುವಂತಿದೆ. ಸೂಪರ್ ಸ್ಟಾರ್ ವಿಜಯ್ ಈ ರಾಜಕೀಯ ಥ್ರಿಲ್ಲರ್ ಕತೆಯ ಕೇಂದ್ರ ಬಿಂದುವಾಗಿರುವುದರಿಂದ ದೇಶದ ಕಣ್ಣು ತಮಿಳು ನಾಡಿನ ಕಡೆಗಿದೆ. ತಮಿಳು ನಾಡಿನಲ್ಲಿ ನಡೆಯುವ ರಾಜಕೀಯ ಬೆಳವಣಿಗೆಗಳನ್ನು ಕೇಂದ್ರ ಸರಕಾರ ಎಚ್ಚರದ ಕಣ್ಣಿನಿಂದ ಗಮನಿಸುತ್ತಿದೆ. ಕೇಂದ್ರ ಸರಕಾರದ ಸರ್ವಾಧಿಕಾರಿ ದೋರಣೆಗೆ ಪ್ರಬಲ ಪ್ರತಿರೋಧವನ್ನು ತೋರುತ್ತಾ ಬಂದಿರುವ ರಾಜ್ಯ ತಮಿಳು ನಾಡು. ಡಿಎಂಕೆ ಅಧಿಕಾರದಲ್ಲಿರುವ ಅಷ್ಟೂ ಸಮಯ ಸರಕಾರ ಮತ್ತು ರಾಜ್ಯಪಾಲರ ನಡುವಿನ ತಿಕ್ಕಾಟ ಚರ್ಚೆಯ ವಿಷಯವಾಗಿತ್ತು. ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲನ್ನೂ ಏರಿತ್ತು. ರಾಜ್ಯಪಾಲರನ್ನು ಬಳಸಿಕೊಂಡು ತಮಿಳುನಾಡು ಸರಕಾರವನ್ನು ನಿಯಂತ್ರಿಸುವ ಕೇಂದ್ರ ಸರಕಾರದ ಪ್ರಯತ್ನವನ್ನು ಡಿಎಂಕೆ ಭಾಗಶಃ ವಿಫಲಗೊಳಿಸಿತ್ತು. ಮಾತ್ರವಲ್ಲ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ನೀತಿಗಳ ವಿರುದ್ಧ ದೊಡ್ಡ ಸ್ವರದಲ್ಲಿ ಧ್ವನಿಯೆತ್ತಿ ಕೇಂದ್ರ ಸರಕಾರಕ್ಕೆ ಮುಜುಗರವನ್ನುಂಟು ಮಾಡಿತ್ತು. ತಮಿಳು ಅಸ್ಮಿತೆಗಳ ವಿರುದ್ಧ ರಾಜ್ಯಪಾಲರು ನೀಡಿದ ಹೇಳಿಕೆಗಳನ್ನು ತಮಿಳರು ಉಗ್ರವಾಗಿ ಪ್ರತಿಭಟಿಸಿದ್ದರು. ತಮಿಳರನ್ನು ಸೆಳೆಯಲು ಪ್ರಧಾನಿ ಮೋದಿಯವರು ಬಹುರೂಪಿ ವೇಷಗಳನ್ನು ಹಾಕಬೇಕಾಯಿತು. ಪಂಚೆ, ಶಾಲು ಧರಿಸಿ ತಮಿಳರನ್ನು ಸೆಳೆಯಲು ಪ್ರಯತ್ನಿಸಿದ್ದರು. ಸೆಂಗೋಲ್‌ನ್ನು ನೂತನ ಸಂಸತ್‌ನಲ್ಲಿ ತಂದಿರಿಸಿ ತಮಿಳರ ಮನಸ್ಸನ್ನು ಗೆಲ್ಲುವ ಪ್ರಯತ್ನ ನಡೆಸಿದ್ದರು. ಅಣ್ಣಾಮಲೈಯನ್ನು ಮುಂದಿಟ್ಟು ನಡೆಸಿದ ಪ್ರಯತ್ನವೂ ವಿಫಲವಾಯಿತು.ಅಣ್ಣಾಮಲೈ ಜೊತೆಗೆ ಬಿಜೆಪಿಯೂ ತಮಿಳರ ಪಾಲಿಗೆ ತಮಾಷೆಯ ವಸ್ತುವಾಯಿತು. ಎಡಿಎಂಕೆಯಿಲ್ಲದೆ ತಮಿಳುನಾಡಿನಲ್ಲಿ ಬಿಜೆಪಿಗೆ ಅಸ್ತಿತ್ವವೇ ಇರಲಿಲ್ಲ. ಈ ಬಾರಿಯ ಚುನಾವಣೆಯಲ್ಲಿ ತಮಿಳರು ಆಡಳಿತ ವಿರೋಧಿ ಮತಗಳನ್ನು ಚಲಾಯಿಸಿದರಾದರೂ ಅವರು ಈ ಹಿಂದೆ ಮಾಡಿದಂತೆ ಡಿಎಂಕೆಗೆ ಪರ್ಯಾಯವಾಗಿ ಎಡಿಎಂಕೆಯನ್ನು ಆರಿಸಲಿಲ್ಲ ಎನ್ನುವುದು ಗಮನಾರ್ಹವಾಗಿದೆ. ಎರಡು ವರ್ಷಗಳ ಹಿಂದೆ ಸ್ಥಾಪನೆಯಾದ ವಿಜಯ್ ನೇತೃತ್ವದ ಟಿವಿಕೆಯನ್ನು ಆರಿಸಿಕೊಂಡರು. ಎಡಿಎಂಕೆ ಮೂಲಕ ತಮಿಳು ನಾಡಿನಲ್ಲಿ ಅಧಿಕಾರದ ಕನಸು ಕಾಣುತ್ತಿದ್ದ ಬಿಜೆಪಿಗೆ ತಮಿಳರು ಮಾಡಿದ ದೊಡ್ಡ ಮುಖಭಂಗವಾಗಿದೆ.

ವಿಪರ್ಯಾಸವೆಂದರೆ, ತಮಿಳುನಾಡಿನ ಚುಕ್ಕಾಣಿಯನ್ನು ಕೈಗೆತ್ತಿಕೊಳ್ಳುವ ಮೊದಲೇ ಟಿವಿಕೆ ನಾಯಕ ವಿಜಯ್‌ಗೆ ರಾಜ್ಯಪಾಲರ ಜೊತೆಗೆ ಹಗ್ಗಜಗ್ಗಾಟ ಮಾಡಬೇಕಾಗಿದೆ. ಸರಕಾರ ರಚಿಸುವ ಹಕ್ಕು ಮಂಡಿಸಲು ಹೋಗಿ ಮೂರು ಬಾರಿಯೂ ಅವರು ಬರಿಗೈಯಲ್ಲಿ ಮರಳಿದ್ದಾರೆ. ಸಾಧಾರಣವಾಗಿ ಅತಿ ದೊಡ್ಡ ಪಕ್ಷವು ಸರಕಾರ ರಚನೆಗೆ ಹಕ್ಕು ಮಂಡಿಸುವುದು ಸಂಪ್ರದಾಯವಾಗಿದೆ. ತಮಿಳುನಾಡಿನಲ್ಲಿ ಇತರ ಯಾವುದೇ ಪಕ್ಷಗಳು ಅಧಿಕಾರ ರಚನೆಯನ್ನು ಮಾಡುವ ಇಂಗಿತವನ್ನು ವ್ಯಕ್ತಪಡಿಸಿಲ್ಲ. ಬಹುಮತ ಸಾಬೀತು ಮಾಡಲು ನನಗೆ ಅವಕಾಶ ನೀಡಿ ಎನ್ನುವ ಅಪೇಕ್ಷೆಯೊಂದಿಗೆ ವಿಜಯ್ ಹಕ್ಕು ಮಂಡಿಸಿದಾಗ ‘ಪೂರ್ಣ ಬಹುಮತದೊಂದಿಗೆ ಬಂದರೆ ಮಾತ್ರ ಅವಕಾಶ’ ಎಂದು ರಾಜ್ಯಪಾಲರು ಕಠಿಣ ನಿಲುವನ್ನು ತಳೆದಿದ್ದಾರೆ. ಬಹುಮತ ಸಾಬೀತಿಗೆ ಮುನ್ನವೇ ಜನರ ಆದೇಶವನ್ನು ನಿರ್ಲಕ್ಷಿಸಿ ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಲು ಅವರು ತುದಿಗಾಲಿನಲ್ಲಿ ನಿಂತಂತಿದೆ. ರಾಜ್ಯಪಾಲರ ನಿಲುವಿನ ಹಿಂದೆ ಕೇಂದ್ರ ಸರಕಾರದ ಒತ್ತಡವಿದೆ ಎನ್ನುವುದು ಗುಟ್ಟಿನ ವಿಷಯವೇನೂ ಅಲ್ಲ. ಟಿವಿಕೆಯು ಅಧಿಕಾರ ಹಿಡಿಯಲು ಎಡಿಎಂಕೆಯ ಸ್ನೇಹಕ್ಕೆ ಮುಂದಾಗಿಲ್ಲ. ಎಡಿಎಂಕೆಯ ಕೆಲವು ಶಾಸಕರು ಸ್ವತಂತ್ರವಾಗಿ ಟಿವಿಕೆಯ ಜೊತೆಗೆ ಕೈ ಜೋಡಿಸಲು ಸಿದ್ಧರಿದ್ದಾರಾದರೂ, ಅವರನ್ನು ಈಗಾಗಲೇ ಪುದುಚೇರಿಗೆ ಸ್ಥಳಾಂತರಿಸಲಾಗಿದೆ. ವಿಜಯ್‌ಗೆ ಈಗಾಗಲೇ ಕಾಂಗ್ರೆಸ್ ಮತ್ತು ಎಡಪಕ್ಷಗಳು ತಮ್ಮ ಬೆಂಬಲವನ್ನು ಘೋಷಿಸಿವೆ. ವಿಡುದೆಲೈ ಚಿರುತೈಗಲ್ ಕಚ್ಚಿ (ವಿಸಿಕೆ)ಯು ಇನ್ನೂ ತನ್ನ ಬೆಂಬಲವನ್ನು ಅಧಿಕೃತಪಡಿಸಿಲ್ಲ. ಬೆಂಬಲ ನೀಡಲು ಅದು ಕೆಲವು ಬೇಡಿಕೆಗಳನ್ನು ಮುಂದಿಟ್ಟಿದೆ. ಸದ್ಯಕ್ಕೆ ಯಾರನ್ನಾದರೂ ಸರಕಾರ ರಚಿಸಲು ಆಹ್ವಾನಿಸಬಹುದು ಎಂದಾದರೆ ಟಿವಿಕೆಯನ್ನು ಬಿಟ್ಟು ಬೇರೆ ಆಯ್ಕೆ ರಾಜ್ಯಪಾಲರ ಬಳಿಯಿಲ್ಲ. ಇಷ್ಟಾದರೂ ಅವರು ಟಿವಿಕೆಗೆ ಸರಕಾರ ರಚಿಸಲು ಆಹ್ವಾನ ನೀಡಲು ಸಿದ್ಧವಾಗಿಲ್ಲ. ಟಿವಿಕೆ ಬಹುಮತವನ್ನು ಸಾಬೀತು ಪಡಿಸಬೇಕಾದುದು ಸದನದಲ್ಲಿ. ಅದಕ್ಕೆ ವೇದಿಕೆ ನಿರ್ಮಾಣ ಮಾಡಿಕೊಡುವುದಷ್ಟೇ ರಾಜ್ಯಪಾಲರ ಕೆಲಸ. ಆದರೆ ರಾಜ್ಯಪಾಲರು ತನ್ನ ಮುಂದೆಯೇ ಬಹುಮತವನ್ನು ಸಾಬೀತು ಪಡಿಸಿ ಎಂದು ಟಿವಿಕೆಯನ್ನು ಒತ್ತಾಯಿಸುತ್ತಿದ್ದಾರೆ. ಒಂದು ವೇಳೆ ಬಿಜೆಪಿ ಅಥವಾ ಎಡಿಎಂಕೆ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿ ರಾಜ್ಯಪಾಲರ ಮುಂದೆ ಬಂದಿದ್ದರೆ ಅವರು ಇಷ್ಟೇ ಕಠಿಣ ನಿಲುವನ್ನು ತಳೆಯುತ್ತಿದ್ದರೆ?

ಬಹುಶಃ ಎಡಿಎಂಕೆಯೊಂದಿಗೆ ಮೈತ್ರಿ ಮಾಡಲು ಮುಕ್ತರಾಗಿದ್ದರೆ ಟಿವಿಕೆ ಮುಖಂಡ ವಿಜಯ್‌ಗೆ ಈ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಎಡಿಎಂಕೆಯ ಬೆಂಬಲವನ್ನು ಯಾಚಿಸುವ ಅನಿವಾರ್ಯವನ್ನು ಸೃಷ್ಟಿಸುವುದಕ್ಕಾಗಿ ಕೇಂದ್ರ ಸರಕಾರ ರಾಜ್ಯಪಾಲರನ್ನು ಬಳಸಿಕೊಳ್ಳುತ್ತಿದೆ ಎನ್ನುವುದು ಸ್ಪಷ್ಟವಾಗಿದೆ. ಈ ಮೂಲಕ ಟಿವಿಕೆಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮೊದಲ ಪ್ರಯತ್ನ ಇದಾಗಿದೆ. ನಾಳೆ ಕಾಂಗ್ರೆಸ್, ಎಡ ಪಕ್ಷ ಮತ್ತು ಸಿವಿಕೆಯ ಶಾಸಕರ ಜೊತೆಗೆ ವಿಜಯ್ ಸರಕಾರವನ್ನು ರಚಿಸಬಹುದಾದರೂ, ಅವರ ಹಾದಿ ಸುಗಮವಿಲ್ಲ ಎನ್ನುವ ಎಚ್ಚರಿಕೆಯನ್ನೂ ಈ ಮೂಲಕ ರಾಜ್ಯಪಾಲರು ರವಾನಿಸಿದ್ದಾರೆ. ಸರಕಾರದಲ್ಲಿ ಭಾಗಿಯಾಗುವ ಮೊದಲೇ ಸಿವಿಕೆಯೂ ತನ್ನ ಬೇಡಿಕೆಯನ್ನು ಮುಂದಿಟ್ಟುಕೊಂಡು ಟಿವಿಕೆಯನ್ನು ಬ್ಲ್ಯಾಕ್‌ಮೇಲ್ ಮಾಡಲು ಮುಂದಾಗಿದೆ. ಸಣ್ಣ ಸಂಖ್ಯೆಯ ಶಾಸಕರನ್ನು ಹೊಂದಿದ ಪಕ್ಷ ಸಂದರ್ಭವನ್ನು ಬಳಸಿಕೊಂಡು ದೊಡ್ಡ ಬೇಡಿಕೆಯನ್ನು ಮುಂದಿಟ್ಟಾಗ ಸಹಜವಾಗಿಯೇ ಸಮಸ್ಯೆ ಸೃಷ್ಟಿಯಾಗುತ್ತದೆ. ಸಿವಿಕೆಯ ಶಾಸಕರು ಯಾವ ಹುದ್ದೆಯನ್ನು ಬಯಸುತ್ತಿದ್ದಾರೆ ಎನ್ನುವುದರ ಆಧಾರದಲ್ಲಿ ಸರಕಾರದ ಭವಿಷ್ಯ ನಿಂತಿದೆ. ಒಂದು ಮೂಲದ ಪ್ರಕಾರ ಉಪಮುಖ್ಯಮಂತ್ರಿ ಹುದ್ದೆಗೆ ಚೌಕಾಶಿ ನಡೆಯುತ್ತಿದೆ ಎನ್ನಲಾಗಿದೆ.

ಇದೇ ಸಂದರ್ಭದಲ್ಲಿ ಕೇಂದ್ರ ಸರಕಾರ ವಿಜಯ್‌ರನ್ನೇ ಗುರಿಯಾಗಿಸಿಕೊಂಡು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡರೆ ಅದನ್ನು ತಾಳಿಕೊಳ್ಳುವ ಗಟ್ಟಿತನ ಟಿವಿಕೆ ಬಳಿಯಿದೆಯೆ? ಈಗಾಗಲೇ ದಿಲ್ಲಿಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಒದಗಿದ ದುಸ್ಥಿತಿಯನ್ನು ನಾವು ನೋಡುತ್ತಿದ್ದೇವೆ. ಕೆಲವು ವಿಷಯಗಳಲ್ಲಿ ಟಿವಿಕೆ ಆಮ್ ಆದ್ಮಿಯನ್ನೇ ಹೋಲುತ್ತಿದೆ. ಕಾಲದ ತುರ್ತಿಗೆ ತಕ್ಕಂತೆ ಏಕಾಏಕಿ ತಲೆಯೆತ್ತಿ ಒಮ್ಮೆಲೆ ಅಧಿಕಾರ ಹಿಡಿದ ಪಕ್ಷ ಟಿವಿಕೆ. ಡಿಎಂಕೆಗೆ ಇರುವ ಹೋರಾಟದ ಹಿನ್ನೆಲೆ ಈ ಪಕ್ಷಕ್ಕಿಲ್ಲ. ಸೈದ್ಧಾಂತಿಕವಾಗಿಯೂ ಅಷ್ಟೊಂದು ಗಟ್ಟಿಯಾದ ಹಿನ್ನೆಲೆಯಿರುವ ಪಕ್ಷವಲ್ಲ. ನಿಜಕ್ಕೂ ತಾನು ನಡೆಸುತ್ತಿರುವ ಸಂಘರ್ಷ ರಾಜ್ಯಪಾಲರ ಜೊತೆಗಲ್ಲ, ಕೇಂದ್ರ ಸರಕಾರದ ಜೊತೆಗೆ ಎನ್ನುವ ಎಚ್ಚರಿಕೆಯೊಂದಿಗೆ ವಿಜಯ್ ಹೆಜ್ಜೆಯನ್ನು ಮುಂದಿಡಬೇಕಾಗಿದೆ. ಆಪತ್‌ಕಾಲದಲ್ಲಿ ರಾಜಕೀಯದಲ್ಲಿ ಡ್ಯೂಪ್‌ಗಳನ್ನು ಬಳಸಿ ಬಚಾವಾಗುವುದಕ್ಕಾಗುವುದಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News