×
Ad

ಕಾಡಿನ ಒತ್ತುವರಿಗೆ ಕಡಿವಾಣ ಯಾವಾಗ?

Update: 2026-06-02 07:53 IST

ಸಾಂದರ್ಭಿಕ ಚಿತ್ರ (AI)

ತಾಪಮಾನ ಏರಿಕೆಯಿಂದ ಇಡೀ ಜೀವ ಸಂಕುಲವೇ ತತ್ತರಿಸಿ ಹೋಗತೊಡಗಿದೆ. ಇದಕ್ಕೆ ಉಳಿದೆಲ್ಲ ಕಾರಣಗಳಿಗಿಂತ ಅರಣ್ಯ ನಾಶವೇ ಬಹು ಮುಖ್ಯ ಕಾರಣವಾಗಿದೆ ಎಂಬುದು ಪರಿಸರವಾದಿಗಳ ಹಾಗೂ ವಿಜ್ಞಾನಿಗಳ ಅಭಿಪ್ರಾಯವಾಗಿದೆ. ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಬೇಸಾಯ ಮಾಡುವ ಪ್ರವೃತ್ತಿಗೆ ಮೊದಲು ಕಡಿವಾಣ ಹಾಕಬೇಕಾಗಿದೆ.ಅಷ್ಟೇ ಅಲ್ಲ, ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷಕ್ಕೆ ಕಾಡಿನ ಈ ಒತ್ತುವರಿಯೂ ಕಾರಣವಾಗಿದೆ. ಅರಣ್ಯವೆಂದರೆ ಜೀವ ಸಂಕುಲವನ್ನು ಪೊರೆಯುವ ತಾಯಿ ಇದ್ದಂತೆ. ಅದನ್ನು ಆಕ್ರಮಿಸುತ್ತಾ ಹೋದರೆ ಮಳೆ ಚಕ್ರ ಕೂಡ ಅಸ್ತವ್ಯಸ್ತಗೊಳ್ಳುತ್ತದೆ. ನದಿಗಳ ನೀರಿನ ಪ್ರಮಾಣ ಕ್ಷೀಣಿಸುತ್ತದೆ. ಮಣ್ಣಿನ ಸವಕಳಿಯಾಗುತ್ತದೆ. ಇದರಿಂದ ಮುಂದಿನ ತಲೆಮಾರು ತೊಂದರೆ ಪಡಬೇಕಾಗುತ್ತದೆ.

ಸರಕಾರವೇನೋ ಅರಣ್ಯ ಭೂಮಿ ಒತ್ತುವರಿ ತಡೆಯುವುದಾಗಿ ಹೇಳುತ್ತಲೇ ಇದೆ. ನಮ್ಮ ರಾಜ್ಯವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಇಲ್ಲಿ ಮಿತಿ ಮೀರಿ ಅರಣ್ಯ ಒತ್ತುವರಿ ನಡೆದಿದೆ. ಮಲೆನಾಡಿನ ಚಿಕ್ಕಮಗಳೂರಿನ ಜಿಲ್ಲೆಯೊಂದರಲ್ಲೇ 36,785 ಎಕರೆಯಷ್ಟು ಕಾಡಿನ ಒತ್ತುವರಿಯಾಗಿದೆ ಎಂದು ಅರಣ್ಯ ಇಲಾಖೆ ಗುರುತಿಸಿದೆ. ಇಷ್ಟು ದೊಡ್ಡ ಪ್ರಮಾಣದ ಒತ್ತುವರಿ ನಿಜಕ್ಕೂ ಆತಂಕಕಾರಿಯಾಗಿದೆ. ಒಂದೆಡೆ ಕಾಡಿನ ನಾಶ ನಿರಂತರವಾಗಿ ನಡೆದಿದೆ, ಇನ್ನೊಂದೆಡೆ ಅರಣ್ಯ ಪ್ರದೇಶ ಬಹುದೊಡ್ಡ ಪ್ರಮಾಣದಲ್ಲಿ ಒತ್ತುವರಿಯಾಗಿರುವುದು ಬೆಳಕಿಗೆ ಬಂದಿದೆ.

ಕಾಡನ್ನು ಕಬಳಿಸುವುದು ಕಾನೂನು ಉಲ್ಲಂಘನೆ ಮಾತ್ರವಲ್ಲ, ಅರಣ್ಯ ಮತ್ತು ಅಲ್ಲಿನ ಜೀವಿಗಳ ಸುರಕ್ಷತೆಯ ಪ್ರಶ್ನೆಯೂ ಆಗಿದೆ. ಇದು ಸಾಮಾನ್ಯ ಸಂಗತಿಯಲ್ಲ. ನಾಡಿನ ಪರಿಸರದ ಸುರಕ್ಷತೆ, ಜೀವ ವೈವಿಧ್ಯ, ಸಾಮಾಜಿಕ ಸ್ವಾಸ್ಥ್ಯ ಹಾಗೂ ಕಾನೂನು ಆಡಳಿತದ ಮೇಲೆ ನಡೆದ ಸಂಘಟಿತ ದಾಳಿ ಎಂದು ಇದನ್ನು ಸರಕಾರ ಮತ್ತು ಸಮಾಜ ನೋಡಬೇಕಾಗಿದೆ.

ಈ ಅನಾಹುತಕ್ಕೆ ಜೀವನೋಪಾಯಕ್ಕಾಗಿ ಕೃಷಿ ಮಾಡಿ ಬದುಕುವ ಬಡವರು ಕಾರಣವಲ್ಲ. ಅರಣ್ಯ ಪ್ರದೇಶದಲ್ಲಿ ನೂರಾರು ವರ್ಷಗಳಿಂದ ಈ ಅರಣ್ಯ ವಾಸಿಗಳು ಇದ್ದಾರೆ. ಇವರಿಂದ ಕಾಡು ನಾಶವಾಗಿಲ್ಲ. ವಾಸ್ತವವಾಗಿ ಅರಣ್ಯ ನಾಶಕ್ಕೆ ಹಣವಂತರು ಕಾರಣ. ಬಹುದೊಡ್ಡ ಭೂ ಮಾಲಕರು, ಪ್ಲಾಂಟರುಗಳು ತಮ್ಮ ಬಳಿ ಈಗಿರುವ ಭೂಮಿ ಸಾಲದೆಂಬಂತೆ ಅರಣ್ಯ ಭೂಮಿಯನ್ನು ಆಕ್ರಮಿಸುತ್ತಿದ್ದಾರೆ. ಇದಕ್ಕೆ ಭೂ ಮಾಫಿಯಾ ಕಾರಣವೆಂದು ಹೇಳಿದರೂ ಕೂಡ ಅಧಿಕಾರಿಗಳ ಶಾಮೀಲು ಇಲ್ಲದೆ ಇಷ್ಟು ದೊಡ್ಡ ಪ್ರಮಾಣದ ಸಾವಿರಾರು ಎಕರೆ ಭೂಮಿಯನ್ನು ನುಂಗಲು ಸಾಧ್ಯವಿಲ್ಲ. ಮೀಸಲು ಅರಣ್ಯ, ರಕ್ಷಿತ ಅರಣ್ಯ, ಗ್ರಾಮ ಅರಣ್ಯ, ಶೋಷಿತ ಅರಣ್ಯ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 2,12,942 ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಜಿಲ್ಲೆಯ ಮೂರು ಅರಣ್ಯ ವಿಭಾಗಗಳಲ್ಲಿ 9,807 ಅತಿಕ್ರಮಣದ ಪ್ರಕರಣಗಳನ್ನು ಅರಣ್ಯ ಇಲಾಖೆ ದಾಖಲಿಸಿದೆ. ಕೊಪ್ಪ ವಿಭಾಗದ ವ್ಯಾಪ್ತಿಯಲ್ಲಿ 28,630 ಎಕರೆ, ಚಿಕ್ಕಮಗಳೂರು ವಿಭಾಗದ ವ್ಯಾಪ್ತಿಯಲ್ಲಿ, 7,857 ಎಕರೆ ಮತ್ತು ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ 296 ಎಕರೆ ಒತ್ತುವರಿಯಾಗಿದೆ ಎಂದು ಅಧಿಕೃತವಾಗಿ ತಿಳಿದು ಬಂದಿದೆ.

ದುಡ್ಡಿದ್ದವರ ದುರಾಸೆ ಕೇವಲ ಅರಣ್ಯಕ್ಕೆ ಸೀಮಿತವಾಗಿಲ್ಲ. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಸರಕಾರಿ ಭೂಮಿಯ ಕಬಳಿಕೆ ಅವ್ಯಾಹತವಾಗಿ ನಡೆದಿದೆ. ನಾಗಮಂಗಲ ತಾಲೂಕಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನೂರಾರು ಕೋಟಿ ರೂಪಾಯಿ ಮೌಲ್ಯದ ಸಾವಿರಾರು ಎಕರೆ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ಮಾತ್ರವಲ್ಲದೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಅರಣ್ಯವನ್ನು ಕಬಳಿಸುವ ಪ್ರಕರಣಗಳು ವರದಿಯಾಗಿವೆ.

ಕೋಲಾರ ಮತ್ತು ಹಾಸನ ಜಿಲ್ಲೆಗಳಲ್ಲಿ ಅರಣ್ಯ ಹಾಗೂ ಸರಕಾರಿ ಭೂಮಿ ಕಬಳಿಕೆ ಪ್ರಕರಣಗಳು ವರದಿಯಾಗಿವೆ. ರೆಸಾರ್ಟ್, ಹೋಮ್ ಸ್ಟೇ, ಅಕ್ರಮ ಗಣಿಗಾರಿಕೆ, ಕೃಷಿ ಭೂಮಿ ಒತ್ತುವರಿ ಮೊದಲಾದ ಹೆಸರಿನಲ್ಲಿ ಮಲೆನಾಡಿನಲ್ಲಿ ಕಾಡನ್ನು ಒತ್ತುವರಿ ಮಾಡಿಕೊಳ್ಳುವುದು ವ್ಯಾಪಕವಾಗಿ ನಡೆದಿದೆ. ರಾಜ್ಯದಲ್ಲಿ 50 ಸಾವಿರ ಕೋಟಿ ರೂ. ಮೌಲ್ಯದ ಒತ್ತುವರಿ ಮಾಡಿಕೊಳ್ಳಲಾದ ಅರಣ್ಯ ಭೂಮಿಯನ್ನು ಇಲಾಖೆಯ ವಶಕ್ಕೆ ಮರಳಿ ಪಡೆಯಲಾಗಿದೆ ಎಂದು ಅರಣ್ಯ ಮಂತ್ರಿ ಈಶ್ವರ್ ಖಂಡ್ರೆಯವರು ತಿಳಿಸಿದ್ದಾರೆ. ನಗರ ಮತ್ತು ಪಟ್ಟಣಗಳಿಗೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದ ಒತ್ತುವರಿ ತಡೆಯಲು ಬೇಲಿ ಹಾಕುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಅವರು ಸೂಚನೆಯನ್ನು ನೀಡಿದ್ದಾರೆ.

ಅರಣ್ಯ ಒತ್ತುವರಿ ತಡೆಯಲು ಕೈಗೊಂಡ ಹಲವಾರು ಕ್ರಮಗಳ ಬಗ್ಗೆ ಈಶ್ವರ್ ಖಂಡ್ರೆಯವರು ಹೇಳಿದ್ದಾರೆ. ಆದರೆ ಸರಕಾರ ಏನೇ ಕಾನೂನುಗಳನ್ನು ಮಾಡಿದರೂ ಅವು ಕಾಗದದಲ್ಲೇ ಉಳಿದ ಬಗ್ಗೆ ಹಲವಾರು ಉದಾಹರಣೆಗಳು ಇವೆ. ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳುವವರು ಸಾಕಷ್ಟು ಪ್ರಭಾವಶಾಲಿಗಳಾಗಿರುತ್ತಾರೆ. ಅಧಿಕಾರಿಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿರುತ್ತಾರೆ. ಸಚಿವರು ಇದನ್ನೆಲ್ಲ ಗಮನಿಸಿ ಅರಣ್ಯ ಭೂಮಿ ಒತ್ತುವರಿಯನ್ನು ತಡೆಯುವುದು ಮಾತ್ರವಲ್ಲ, ಒತ್ತುವರಿ ಮಾಡಿಕೊಂಡ ಅರಣ್ಯ ಭೂಮಿಯನ್ನು ಸರಕಾರದ ವಶಕ್ಕೆ ತೆಗೆದುಕೊಳ್ಳಲು ಕ್ರಮ ಕೈಗೊಳ್ಳಬೇಕು.

ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಅರಣ್ಯ ನಾಶ ಮತ್ತು ಒತ್ತುವರಿಯ ಬಗ್ಗೆ ಪರಿಸರ ಕಾಳಜಿಯನ್ನು ಹೊಂದಿರುವವರ ಆತಂಕದ ಆಕ್ರೋಶ ಅರಣ್ಯರೋದನವಾಗಿದೆ. ಹಾಗಾಗಿ ಒತ್ತುವರಿಯನ್ನು ತೆರವುಗೊಳಿಸಲು ಸರಕಾರ ತೋರಿಕೆಯ ಕ್ರಮ ಕೈಗೊಂಡರೆ ಸಾಲದು, ಅದಕ್ಕೆ ಪರಿಸರ ಪರವಾದ ಇಚ್ಛಾಶಕ್ತಿಯೂ ಬೇಕಾಗುತ್ತದೆ. ಅಷ್ಟು ಮಾತ್ರವಲ್ಲ ಸ್ಥಳೀಯ ಜನರ ಸಹ ಭಾಗಿತ್ವವೂ ಬೇಕಾಗುತ್ತದೆ. ರಾಜ್ಯದ ಅರಣ್ಯ ಪ್ರದೇಶವನ್ನು ಉಪಗ್ರಹ ಸಮೀಕ್ಷೆಗೆ ಒಳಪಡಿಸಿ ಅವುಗಳ ಗಡಿಗಳನ್ನು ಗೊತ್ತುಪಡಿಸಬೇಕು ಹಾಗೂ ಅರಣ್ಯ ಒತ್ತುವರಿಗೆ ಕಾರಣರಾದವರ ವಿರುದ್ಧ ನಿರ್ದಾಕ್ಷಿಣ್ಯವಾದ ಕ್ರಮವನ್ನು ಕೈಗೊಳ್ಳಬೇಕು.

ಲಂಗು ಲಗಾಮಿಲ್ಲದ ಅಭಿವೃದ್ಧಿ ಯೋಜನೆಗಳು ಮತ್ತು ರೆಸಾರ್ಟ್ ಹಾಗೂ ಹೋಮ್ ಸ್ಟೇಗಳಿಂದ ಅತ್ಯಂತ ಸೂಕ್ಷ್ಮವಾದ ಅರಣ್ಯ ಪ್ರದೇಶದಲ್ಲಿ ಎಂತಹ ಅನಾಹುತ ಉಂಟಾಗುತ್ತದೆ ಎಂಬುದಕ್ಕೆ ಐದಾರು ವರ್ಷಗಳ ಹಿಂದೆ ಕೊಡಗು ಜಿಲ್ಲೆಯಲ್ಲಿ ಅದರಲ್ಲೂ ಮಡಿಕೇರಿಯಲ್ಲಿ ಸಂಭವಿಸಿದ ಭೂ ಕುಸಿತದ ದುರಂತ ಹಾಗೂ ಕಳೆದ ವರ್ಷ ಕೇರಳದ ವಯನಾಡಿನಲ್ಲಿ ಸಂಭವಿಸಿದ ಅನಾಹುತವನ್ನು ಮರೆಯಬಾರದು. ಪ್ರವಾಸೋದ್ಯಮದ ಹೆಸರಿನಲ್ಲಿ ಅರಣ್ಯವನ್ನು ಒತ್ತುವರಿ ಮಾಡಿಕೊಂಡು ಐಷಾರಾಮಿ ರೆಸಾರ್ಟ್‌ಗಳನ್ನು ಮಾಡಲು ಅವಕಾಶ ಕೊಡಬಾರದು. ಸರಕಾರಕ್ಕೆ ಅರಣ್ಯ ಕಾಪಾಡಲು ಒಂದು ಸ್ಪಷ್ಟವಾದ ಅರಣ್ಯ ನೀತಿಯ ಅಗತ್ಯವಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News