×
Ad

ಶರಾವತಿ ಸಂತ್ರಸ್ತರ ಸಾಗುವಳಿ ಭೂಮಿ ಸಕ್ರಮಕ್ಕೆ ಆಗ್ರಹ; ಜೂ.23ರಂದು ಮಲೆನಾಡು ರೈತ ಹೋರಾಟ ಸಮಿತಿಯಿಂದ ಧರಣಿ

Update: 2025-06-18 22:56 IST

ಶಿವಮೊಗ್ಗ : ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆಯಲ್ಲಿ ಜಿಲ್ಲಾಡಳಿತ ಅನುಸರಿಸುತ್ತಿರುವ ನೀತಿ ಅವೈಜ್ಞಾನಿಕವಾಗಿದೆ. ಎಲ್ಲ ಸಂತ್ರಸ್ತರ ಸಾಗುವಳಿ ಭೂಮಿಯನ್ನೂ ಸಕ್ರಮಕ್ಕೆ ಪರಿಗಣಿಸಬೇಕೆಂದು ಆಗ್ರಹಿಸಿ ಜೂ.23 ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನ.ಶ್ರೀನಿವಾಸ್ ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ ಮತ್ತು ಕಂದಾಯ ಇಲಾಖೆಗಳು ಹಿಂದಿನ ಸರಕಾರದ ಅವಧಿಯಲ್ಲಿ 2022ರಂದು ಮಾಡಿರುವ ಬ್ಲಾಕ್‌ಗಳ ಅನುಸಾರ ಈಗಲೂ ಸರ್ವೇ ಮಾಡಲಾಗಿದೆ. ಆದರೆ ಆ ಬ್ಲಾಕ್‌ಗಳಲ್ಲಿ ಮೂಲ ಶರಾವತಿ ಸಂತ್ರಸ್ತರೇ ಬಿಟ್ಟು ಹೋಗಿದ್ದಾರೆ. ಕೆಲವು ಕಡೆ ದಟ್ಟ ಅರಣ್ಯವನ್ನೂ ಬ್ಲಾಕ್‌ಗೆ ಸೇರಿಸಲಾಗಿದೆ. 1960ರಲ್ಲೇ ಮಂಜೂರಾಗಿ ಸಾಗುವಳಿ ಮಾಡುತ್ತಿರುವ ರೈತರನ್ನು ಕೈಬಿಡಲಾಗಿದೆ. ಈ ಬಗ್ಗೆ ಸಂಸದರು, ಸಚಿವರು, ಅಧಿಕಾರಿಗಳ ಬಳಿ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಆದರೆ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಕಿವಿಮೇಲೆ ಹಾಕಿಕೊಳ್ಳುತ್ತಿಲ್ಲ. ಈಗಾಗಲೇ ಮಾಡಿರುವ ಬ್ಲಾಕ್‌ಗಳಿಂದ ದಾಖಲೆಗಳಿರುವ ಸಂತ್ರಸ್ತರ ಭೂಮಿಯನ್ನು ಕೈ ಬಿಟ್ಟಿದ್ದು, ಇದನ್ನು ಸರಿಪಡಿಸಿ ಸುಪ್ರೀಂ ಕೋರ್ಟ್‌ಗೆ ವರದಿ ನೀಡುವಂತೆ ಆಗ್ರಹಿಸಿ ಜೂ.23ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸುತ್ತೇವೆ ಎಂದು ಹೇಳಿದರು.

2017ರಲ್ಲಿ ಸಂತ್ರಸ್ತರ ಭೂಮಿಯನ್ನು ಜಂಟಿ ಸರ್ವೇ ಮಾಡಿ ಡಿನೋಟಿಫಿಕೇಶನ್ ಮಾಡಲಾಗಿತ್ತು. ಆದರೆ ಕೇಂದ್ರ ಸರಕಾರದ ಅನುಮತಿ ಪಡೆಯದೆ ಡಿನೋಟಿಫಿಕೇಶನ್ ಮಾಡಲಾಗಿದೆ ಎಂಬ ಕಾರಣಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಇದರಿಂದಾಗಿ ಹಿಂದಿನ ಬಿಜೆಪಿ ಸರಕಾರ ಎಲ್ಲ ಸರಕಾರಿ ಆದೇಶವನ್ನು ರದ್ದುಪಡಿಸಿತ್ತು ಎಂದರು.

ಪುನಃ ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರಿಂದಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳು ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡು ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಅದರಂತೆ ಈಗ ಜಿಲ್ಲೆಯಲ್ಲಿನ ಶರಾವತಿ ಮುಳುಗಡೆ ಸಂತ್ರಸ್ತರ ಸಾಗುವಳಿ ಭೂಮಿ ಜಂಟಿ ಸರ್ವೇ ಮಾಡಲಾಗುತ್ತಿದೆ. ಬಹುತೇಕ ಕಡೆಗಳಲ್ಲಿ ಸರ್ವೇ ಕಾರ್ಯ ಮುಗಿದಿದೆ ಎಂದು ಹೇಳಿದರು.

2022ರಲ್ಲಿ ಸರ್ವೇ ಮಾಡಿ ಬ್ಲಾಕ್‌ಗಳನ್ನು ಸಿದ್ಧಪಡಿಸಲಾಗಿದೆ. ಈ ಬ್ಲಾಕ್‌ಗಳಲ್ಲಿ 1962-63 ರಲ್ಲಿ ಕಂದಾಯ ಇಲಾಖೆಯಿಂದ ಜಮೀನು ಮಂಜೂರು ಮಾಡಿದವರ ಹಾಗೂ ಆ ಬಳಿಕ ಖಾತೆ ಪಡೆದವರ ಸಾಗುವಳಿ ಭೂಮಿಯನ್ನು ವಿವಿಧ ಸರ್ವೇ ನಂಬರ್‌ಗಳಲ್ಲಿ ಕೈಬಿಡಲಾಗಿದೆ. ಬ್ಲಾಕ್‌ಗಳನ್ನು ಮಾರ್ಪಡಿಸುವಂತೆ ಮನವಿ ಮಾಡಿದರೂ ಜಿಲ್ಲಾಧಿಕಾರಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಡಿಡಿಎಲ್‌ಆರ್ ಸ್ಪಂದಿಸುತ್ತಿಲ್ಲ ಎಂದರು.

ಸಂತ್ರಸ್ತ ಕೆರೆಹಳ್ಳಿ ರಾಮಪ್ಪ ಮಾತನಾಡಿ, 1950ರ ದಶಕದಲ್ಲಿ ವಿವಿಧ ಸರಕಾರಿ ಆದೇಶಗಳಲ್ಲಿ ಬಿಡುಗಡೆ ಮಾಡಿರುವ 9,129 ಎಕರೆಯನ್ನು ಈಗ ಡಿನೋಟಿಫಿಕೇಶನ್ ಮಾಡಿ ಸಂತ್ರಸ್ತರಿಗೆ ಕೊಟ್ಟರೆ ಹೆಚ್ಚುವರಿಯಾಗಿ ಭೂಮಿ ಮಂಜೂರಾತಿ ಮಾಡಲು ಸಾಧ್ಯವೆಂದು ಹೇಳಲಾಗುತ್ತಿದೆ. ಹೀಗಾಗಿ ದಾಖಲೆ ಇರುವ ಸಂತ್ರಸ್ತರ ಭೂಮಿಯನ್ನು ಮೊದಲ ಆದ್ಯತೆಯಲ್ಲಿ ಬ್ಲಾಕ್ ಒಳಗೆ ಸೇರಿಸಬೇಕಿತ್ತು. ಆದರೆ ಆ ರೀತಿ ಮಾಡಿಲ್ಲ ಎಂದು ತಿಳಿಸಿದರು.

2022ರಲ್ಲಿ ಸಿದ್ಧಪಡಿಸಿರುವ ಬ್ಲಾಕ್‌ಗಳನ್ನು ಸರಕಾರಿ ಕಚೇರಿಯಲ್ಲಿ ಮಾಡಿದಂತಿಲ್ಲ. ಬದಲಾಗಿ ಯಾವುದೋ ಖಾಸಗಿ ಕಚೇರಿಯಲ್ಲಿ ಸಿದ್ಧಪಡಿಸಿದಂತಿದೆ. ಸರಕಾರವೇ ಕೊಟ್ಟಿರುವ ದಾಖಲೆಗಳನ್ನು ನೀಡಿದರೂ ಅಂತಹವರ ಭೂಮಿಯನ್ನು ಬ್ಲಾಕ್ ಮಾಡಿಲ್ಲ. ಬದಲಾಗಿ ದಾಖಲೆ ಇಲ್ಲದವರು ಜಮೀನು, ಕಾಡು ಇರುವ ಜಾಗವನ್ನು ಬ್ಲಾಕ್ ಒಳಗೆ ಸೇರಿಸಲಾಗಿದೆ. ಹೀಗಾಗಿ ಬ್ಲಾಕ್‌ಗಳನ್ನು ಸರಿಯಾಗಿ ಮಾರ್ಪಡಿಸಿ ದಾಖಲೆ ಇರುವವರಿಗೆ ಮೊದಲ ಆದ್ಯತೆ ನೀಡುವಂತೆ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂತ್ರಸ್ತರಾದ ಜಿ. ನಾರಾಯಣ ಗೌಡ, ಗೋವಿಂದಪ್ಪ ಹಾರೋಹಿತ್ತಲು, ಕೃಷ್ಣಪ್ಪ, ಷಣ್ಮುಖಪ್ಪ ಕಂಚಾಳಸರ, ಕೆ.ಸಿ.ನಾಗರಾಜ್, ರಮೇಶ್ ಮಲೆಶಂಕರ, ರಾಜು ಶೆಟ್ಟಿ, ಬ್ಯಾಡನಾಳ ಪ್ರವೀಣ್, ಸುಧಾಕರ್ ಶೆಟ್ಟಿಹಳ್ಳಿ, ಸುಧೀರ್ ಸಂಕ್ಲಾಪುರ, ಶ್ರೀನಿವಾಸ್, ಪ್ರವೀಣ್ ಬ್ಯಾಡನಾಳ ಮತ್ತಿತರರು ಇದ್ದರು.

ಶರಾವತಿ ಸಂತ್ರಸ್ತರು ಸರಕಾರದಿಂದ ಭಿಕ್ಷೆ ಕೇಳುತ್ತಿಲ್ಲ. ಅವರು ತಮ್ಮ ಹಕ್ಕು ಕೇಳುತ್ತಿದ್ದಾರೆ. ಜನಪ್ರತಿನಿಧಿಗಳು ಕ್ರೆಡಿಟ್‌ಗೆ ಹೋರಾಟ ಮಾಡದೆ, ಸಂತ್ರಸ್ತರಿಗೆ ನ್ಯಾಯ ಕೊಡಿಸಬೇಕು. ಸುಪ್ರೀಂ ಕೋರ್ಟ್ ಸಮಸ್ಯೆ ಬಗೆಹರಿಸಿ ಎಂದು ಹೇಳಿದೆಯೇ ವಿನ: ಬರೀ 9,200 ಎಕರೆ ಎಂದು ಹೇಳಿಲ್ಲ.

-ತೀ.ನಾ. ಶ್ರೀನಿವಾಸ್.

ಆರು ದಶಕಗಳ ಹಿಂದೆ ಆದ ಅನ್ಯಾಯ ಈಗ ಸರಿ ಮಾಡಲು ಪ್ರಾಮಾಣಿಕ ಪ್ರಯತ್ನ ಆಗಬೇಕಿದೆ. ಒಂಬತ್ತು ಸಾವಿರ ಎಕರೆ ಅಂದು ಸಾಗುವಳಿ ಆಗಿದ್ದು, ಈಗ ಅದರ ನಾಲ್ಕು ಪಟ್ಟು ಸಾಗುವಳಿಯನ್ನು ರೈತರು ಮಾಡಿಕೊಂಡಿದ್ದಾರೆ. ಎಲ್ಲ ಶರಾವತಿ ಸಂತ್ರಸ್ತರ ಕುಟುಂಬಗಳ ಗಣತಿ ಮತ್ತು ಜಿಪಿಎಸ್ ಸರ್ವೇ ಮಾಡಿ ಅವರ ಭೂಮಿಗೆ ಹಕ್ಕುದಾರಿಕೆ ಕೊಡಬೇಕು. ಈ ವಿಸ್ತೃತ ವರದಿಯನ್ನು ಸುಪ್ರೀಂ ಕೋರ್ಟಿಗೆ ಕಳಿಸಬೇಕು.

- ಕೆ.ಸಿ. ನಾಗರಾಜ್,ಸಂತ್ರಸ್ತ ರೈತ.

ಶರಾವತಿ ಸಂತ್ರಸ್ತರಿಗೆ ಮೀಸಲಾಗಿದ್ದ ಶಿಕಾರಿಪುರ ಮಾಸ್ತಿಬೈಲಿನ ಭೂಮಿಯನ್ನು ಯಾರೊ ಉಳುಮೆ ಮಾಡುತ್ತಿದ್ದಾರೆ. ಹಾಹೊಳೆಯಲ್ಲಿ ಶಿವಮೊಗ್ಗ ನಗರದ ಕೆಲವು ಜನ ಮತ್ತು ರಾಜಕಾರಣಿಗಳು ವಶಮಾಡಿಕೊಂಡಿದ್ದಾರೆ. ನಿಜವಾದ ಸಂತ್ರಸ್ತರು ಹೊಟ್ಟೆಪಾಡಿಗೆ ಉಳುಮೆ ಮಾಡಿಕೊಂಡು ಬಂದ ಭೂಮಿ ಸರ್ವೇ ಮಾಡಿಲ್ಲ. ನಾಡಿಗೆ ಬೆಳಕು ಕೊಡಲು ಎಲ್ಲವನ್ನೂ ಕಳೆದುಕೊಂಡ ಜನಕ್ಕೆ ಆಗಿರುವ ಘೋರ ಅನ್ಯಾಯ ಸರಿಮಾಡುವ ಜವಾಬ್ದಾರಿ ಎಲ್ಲ ಜನಪ್ರತಿನಿಧಿಗಳ ಮೇಲಿದೆ.

ಗೋವಿಂದಪ್ಪ ಹಾರೋಹಿತ್ತಲು, ಸಂತ್ರಸ್ತ ರೈತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News