×
Ad

ಸಾಗರ | ಬಾಲಕಿಯ ಗರ್ಭಪಾತ ಮಾಡಿದ ಆರೋಪ; ಸರಕಾರಿ ವೈದ್ಯೆ ಸೇರಿ 9 ಮಂದಿಯ ವಿರುದ್ಧ ಪ್ರಕರಣ ದಾಖಲು

Update: 2025-11-05 23:52 IST

ಸಾಗರ : ಬಾಲಕಿಯ ಗರ್ಭಪಾತ ಮತ್ತು ಪೊಕ್ಸೊ ಪ್ರಕರಣವನ್ನು ಗಮನಕ್ಕೆ ತರದ ಸರಕಾರಿ ವೈದ್ಯೆ ಸೇರಿದಂತೆ 9 ಜನರ ವಿರುದ್ಧ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಬೆನಕ ಪ್ರಸಾದ್, ಸರಕಾರಿ ಪ್ರಸೂತಿ ತಜ್ಞೆ ಡಾ.ಪ್ರತಿಮಾ ಅವರು ಖಾಸಗಿ ಆಸ್ಪತ್ರೆಯಲ್ಲಿ ಬಾಲಕಿಯ ಗರ್ಭಪಾತ ಮಾಡಿದ್ದಲ್ಲದೆ ಪೊಕ್ಸೊ ಪ್ರಕರಣವನ್ನು ಪೊಲೀಸರ ಗಮನಕ್ಕೆ ತಾರದ ಹಿನ್ನೆಲೆಯಲ್ಲಿ ಆರೋಪಿಯನ್ನಾಗಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದರು.

ಬಾಲಕಿಯ ಗರ್ಭಪಾತ ಪ್ರಕರಣದಲ್ಲಿ ಮಧ್ಯವರ್ತಿಗಳಾಗಿದ್ದ ಕುಮಾರ್, ದೂಗೂರು ಪರಮೇಶ್ವರ್ ಅವರ ಮೇಲೂ ದೂರು ದಾಖಲಿಸಲಾಗಿದೆ. ಅಲ್ಲದೇ, ಚಾಂದಿನಿ ಆಸ್ಪತ್ರೆಯ ವೈದ್ಯರೊಬ್ಬರ ಮೇಲೂ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರಿದ್ದು, ಇದುವರೆಗೂ ವೈದ್ಯರು, ಮಧ್ಯವರ್ತಿಗಳನ್ನು ಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಕೃತ್ಯ ನಡೆದ ಖಾಸಗಿ ಆಸ್ಪತ್ರೆಯ ಪಾತ್ರ ಎಷ್ಟಿದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ನಂತರವಷ್ಟೇ ಆ ಖಾಸಗಿ ಆಸ್ಪತ್ರೆ ಮೇಲೆ ದೂರು ದಾಖಲಿಸುವುದರ ಬಗ್ಗೆ ಕ್ರಮವಹಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಸಾಗರದ ಅಣಲೆಕೊಪ್ಪದ ವಿದ್ಯಾರ್ಥಿಯನ್ನು ಬಂಧಿಸಿ, ನ.11ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಕೋರಲಾಗಿದೆ. ಈತ ಅಪ್ರಾಪ್ತ ಅಲ್ಲ. ಆರೋಪಿ ಜತೆಗೆ ಆರೋಪಿಯ ತಂದೆ-ತಾಯಿ ಸೇರಿದಂತೆ ಬಾಲಕಿಯ ತಂದೆ-ತಾಯಿ ಮೇಲೂ ಪೊಕ್ಸೊ ಪ್ರಕರಣ ದಾಖಲಿಸಲಾಗಿದೆ. ಇದೇ ಪ್ರಕರಣದಲ್ಲಿ ಇನ್ನೂ ಹಲವರು ಇರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News