×
Ad

ಹೊಸನಗರ | ಸರಕಾರಿ ಶಾಲೆಯ ನೀರಿನ ಟ್ಯಾಂಕ್‌ಗಳಿಗೆ ಕಳೆನಾಶಕ ಮಿಶ್ರಣ ಆರೋಪ

Update: 2025-07-31 23:29 IST

ಶಿವಮೊಗ್ಗ : ಜಿಲ್ಲೆಯ ಹೊಸನಗರ ತಾಲೂಕಿನ ಸರಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಕಿಡಿಗೇಡಿಗಳು ನೀರಿನ ಟ್ಯಾಂಕ್‌ಗಳಿಗೆ ಕಳೆನಾಶಕ ಮಿಶ್ರಣ ಮಾಡಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದ್ದು, ಶಿಕ್ಷಕರ ಮುಂಜಾಗ್ರತೆಯಿಂದ ಘೋರ ದುರಂತವೊಂದು ತಪ್ಪಿದೆ.

ಶಾಲೆಯಲ್ಲಿ ಎರಡು ನೀರಿನ ಟ್ಯಾಂಕ್ ಇದ್ದು, ಎರಡಕ್ಕೂ ಕಿಡಿಗೇಡಿಗಳು ಕಳೆನಾಶಕ ಮಿಶ್ರಣ ಮಾಡಿದ್ದಾರೆನ್ನಲಾಗಿದೆ. ಒಂದರಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಕಳೆ ನಾಶಕ ಸಿಂಪಡಿಸಲಾಗಿತ್ತು. ಆದರೆ, ಅದರಲ್ಲಿ ನೀರು ಕಡಿಮೆ ಇದ್ದ ಕಾರಣ ಇನ್ನೊಂದು ಸಿಂಟೆಕ್ಸ್ ಟ್ಯಾಂಕ್‌ನಿಂದ ನೀರನ್ನು ಬಿಡಲಾಗಿತ್ತು. ಈ ವೇಳೆ ಮಕ್ಕಳು ಕೈತೊಳೆಯುತಿದ್ದಂತೆ ವಾಸನೆ ಬಂದು ಮಕ್ಕಳಲ್ಲಿ ಅನುಮಾನ ಮೂಡಿ ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ಆ ನಂತರ ಕೈತೊಳೆದ ನಾಲ್ಕು ಮಕ್ಕಳು ಅಸ್ವಸ್ಥರಾದ ಹಿನ್ನಲೆಯಲ್ಲಿ ಹೊಸನಗರ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಮಕ್ಕಳ ಆರೋಗ್ಯ ಈಗ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.

ಘಟನೆಯ ಮಾಹಿತಿ ದೊರೆತ ತಕ್ಷಣ ತಹಶೀಲ್ದಾರ್ ರಶ್ಮೀ ಹಾಲೇಶ್ ಅವರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವರ ಜೊತೆ ಶಾಸಕ ಗೋಪಾಲಕೃಷ್ಣ ಬೇಳೂರು ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ತಾಪಂ ಕಾರ್ಯ ನಿರ್ವಹಣಾಧಿಕಾರಿ ನರೇಂದ್ರ, ಹೊಸನಗರ ಪಿಎಸ್ಸೈ ಶಂಕರ್ ಗೌಡ ಕೂಡ ಇದ್ದರು.

ಗ್ರಾಮಸ್ಥರು ಹಾಗೂ ಪೋಷಕರು ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥರನ್ನು ಕೂಡಲೇ ಪತ್ತೆಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News