ಶಿವಮೊಗ್ಗ: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್), ಮಂಗಳೂರು ಕೇಂದ್ರ ಸಮಿತಿ ಹಾಗೂ ಶಿವಮೊಗ್ಗ ಜಿಲ್ಲಾ ಘಟಕದ ಸಹಯೋಗದಲ್ಲಿ, ಮಂಗಳೂರಿನ ಯೆನೆಪೋಯ ವಿದ್ಯಾಸಂಸ್ಥೆಯ ವತಿಯಿಂದ ಶಿವಮೊಗ್ಗದ ಮೀಫ್ ಸದಸ್ಯ ಶಾಲೆಗಳ ಶಿಕ್ಷಕಿಯರಿಗಾಗಿ ಎರಡು ದಿನಗಳ ಮೊಂಟೆಸರಿ (ಕೆ.ಜಿ.) ಶಿಕ್ಷಕರ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಯಿತು.

ಅ. 29 ಮತ್ತು 30ರಂದು ಶಿವಮೊಗ್ಗದ ಖಿದ್ವಾಯಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಕಾರ್ಯಾಗಾರವನ್ನು ಶಿವಮೊಗ್ಗದ ಗ್ಲೋಬಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಡಾ.ಇರ್ಫಾನ್ ಅಹ್ಮದ್ ಎಚ್.ಬಿ. ಉದ್ಘಾಟಿಸಿದರು. ವಿದ್ಯಾರ್ಥಿಗಳ ಭವಿಷ್ಯವನ್ನು ತಳಮಟ್ಟದಿಂದ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದ ಅವರು, ಶಿಕ್ಷಕರಿಗೆ ಅಮೂಲ್ಯ ಸಲಹೆಗಳನ್ನು ನೀಡಿದರು.

ಮೀಫ್ ಕೇಂದ್ರ ಸಮಿತಿಯ ಅಧ್ಯಕ್ಷ ಮೂಸಬ್ಬ ಪಿ.ಬ್ಯಾರಿ ಜೋಕಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿ, ಶಿವಮೊಗ್ಗ ಜಿಲ್ಲಾ ಘಟಕವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಹಲವು ಸಲಹೆಗಳನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೀಫ್ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಪರ್ವೀಜ್ ಅಹ್ಮದ್ ವಹಿಸಿದ್ದರು.

ಆರಂಭದಲ್ಲಿ ಶಿವಮೊಗ್ಗ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸೈಯದ್ ನೂರುಲ್ಲಾ ಸ್ವಾಗತಿಸಿದರು. ಅಲ್ ಹಬೀಬ್ ವಿದ್ಯಾಸಂಸ್ಥೆಯ ಇಫ್ತಿಕರ್ ವಂದನಾರ್ಪಣೆಗೈದರು. ಮೀಫ್ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಿಯಾಝ್‌ ಅಹ್ಮದ್ ಕೆ.ಬಿ. ಕಾರ್ಯಕ್ರಮ ನಿರೂಪಿಸಿದರು. ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳ 150ಕ್ಕೂ ಹೆಚ್ಚು ಶಿಕ್ಷಕಿಯರು ಕಾರ್ಯಾಗಾರದಲ್ಲಿ ಭಾಗವಹಿಸಿದರು.

ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಮೀಫ್ ಸದಸ್ಯ ಶಾಲೆಗಳ ಎಸೆಸೆಲ್ಸಿ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಸಿದ್ಧತೆ ಹಾಗೂ ವೃತ್ತಿ ಮಾರ್ಗದರ್ಶನ ಕುರಿತು ಒಂದು ದಿನದ ಕಾರ್ಯಾಗಾರವನ್ನು ಫ್ಯೂಚರ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಆಯೋಜಿಸಲಾಗಿತ್ತು. ವಿವಿಧ ವಿದ್ಯಾಸಂಸ್ಥೆಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಾಗಾರದ ಪ್ರಯೋಜನ ಪಡೆದರು. ಮೀಫ್ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಿಯಾಝ್‌ ಅಹ್ಮದ್ ಕೆ.ಬಿ. ಅವರು ವಿದ್ಯಾರ್ಥಿಗಳಿಗೆ ಲಭ್ಯವಿರುವ ವಿವಿಧ ವಿದ್ಯಾರ್ಥಿವೇತನಗಳ ಕುರಿತು ಮಾಹಿತಿ ನೀಡಿದರು.

ಇದರೊಂದಿಗೆ ಶಿವಮೊಗ್ಗ ಜಿಲ್ಲಾ ಮೀಫ್ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಗಳ ಸಭೆಯನ್ನೂ ಪ್ರತ್ಯೇಕವಾಗಿ ನಡೆಸಲಾಯಿತು. ಸಭೆಯಲ್ಲಿ ಮೀಫ್ ವತಿಯಿಂದ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ವಿವಿಧ ಯೋಜನೆಗಳ ಕುರಿತು ಚರ್ಚಿಸಿ, ಅವುಗಳ ರೂಪುರೇಷೆಗಳನ್ನು ಸಿದ್ಧಪಡಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಚಾಲಕರಾದ ಅಝೀಝ್ ಅಂಬರ್‌ವಾಲಿ, ಬಿ.ಎ.ಇಕ್ಬಾಲ್, ಯೆನೆಪೋಯ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಆಂಟೋನಿ ಜೋಸೆಫ್ ಹಾಗೂ ಎಸೆಸೆಲ್ಸಿ ವಿದ್ಯಾರ್ಥಿಗಳ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ಪ್ರೊ.ಸಿನಾನ್ ಝಕರಿಯ್ಯಾ ಭಾಗವಹಿಸಿದ್ದರು.

ಯೆನೆಪೋಯ ತರಬೇತಿ ತಂಡದ ಸದಸ್ಯರಾದ ಶಿಲ್ಪಾ ಎಸ್.ಶೆಟ್ಟಿ, ಎಮಿಲಿನ್ನೇ ಪೈಸ್, ಸ್ಮಿತಾ, ಸರಿತಾ ಎಸ್., ಪಾಯಲ್, ದೀಪ್ತಿ ಕರ್ಕೇರ, ನಮ್ರತಾ ಜೆ. ಹಾಗೂ ಫಾತಿಮಾ ಶಮೀನ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಸೈಯದ್ ನೂರುಲ್ಲಾ (ಫ್ಯೂಚರ್ ಇಂಟರ್‌ನ್ಯಾಷನಲ್ ಸ್ಕೂಲ್, ಶಿವಮೊಗ್ಗ), ಮುಹಮ್ಮದ್ ಸಾದಿಕ್ (ಅಲ್ ಫಾರೂಕ್ ಆಂಗ್ಲ ಮಾಧ್ಯಮ ಶಾಲೆ), ಮುಫ್ತಿ ಮುಹಮ್ಮದ್ ಸಫಿವುಲ್ಲಾ ಖಾಸ್ಮಿ (ಖಿದ್ವಾಯಿ ಆಂಗ್ಲ ಮಾಧ್ಯಮ ಶಾಲೆ, ಶಿವಮೊಗ್ಗ), ನುಮಾನ್ ಬೈಗ್ (ಪ್ರಿವೇಲ್ ಸ್ಕೂಲ್), ಇಫ್ತೆಖಾರ್ ಅಹ್ಮದ್ ಖಾನ್ (ಅಲ್ ಹಬೀಬ್ ಶಾಲೆ), ಮುಖ್ತಾರ್ ಸಲೀಂ (ಅಲ್ ಹಿಲಾಲ್ ಶಾಲೆಯ ಅಧ್ಯಕ್ಷರು), ಇಲ್ಯಾಸ್ ಬೈಗ್ (ಅಲ್ ಫಾರೂಕ್ ಶಾಲೆ), ಎಸ್.ಆರ್. ಅಯೂಬ್ ಖಾನ್ (ಖಿದ್ವಾಯಿ ಶಾಲೆ) ಹಾಗೂ ಸಮೀನ್ ಖಾನಂ (ಅಂಬರ್‌ವ್ಯಾಲಿ ಶಾಲೆ) ಸೇರಿದಂತೆ ವಿವಿಧ ವಿದ್ಯಾಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor