×
Ad

ಶಿವಮೊಗ್ಗ| ನವವಿವಾಹಿತೆ ಆತ್ಮಹತ್ಯೆ : ಪತಿ ಪೊಲೀಸ್ ವಶಕ್ಕೆ

Update: 2025-10-24 19:38 IST

ಶಿವಮೊಗ್ಗ: ಮದುವೆಯಾದ ಕೇವಲ 6 ತಿಂಗಳಲ್ಲೇ ನವವಿವಾಹಿತೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ತಾಲೂಕಿನ ಕುರಂಬಳ್ಳಿ ಸಮೀಪದ ಗೂಜಾನುಮಕ್ಕಿಯಲ್ಲಿ ನಡೆದಿದೆ.

ಸಾಗರ ತಾಲೂಕು ಕಟ್ಟಿನಕಾರು ಗ್ರಾಮದ ಯಡಮನೆ ನಿವಾಸಿ ಮಾಲಾಶ್ರೀ (23) ಮೃತ ಮಹಿಳೆ.

ಪತಿ ಮತ್ತು ಅತ್ತೆಯ ಕಿರುಕುಳದಿಂದ ಮಾಲಾಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಯಡಮನೆ ಗ್ರಾಮದ ಮಾಲಾಶ್ರೀ ಅವರು ಕುರಂಬಳ್ಳಿಯ ಗೂಜಾನುಮಕ್ಕಿಯ ಅಶೋಕ್ ಎಂಬಾತನೊಂದಿಗೆ ಎಪ್ರಿಲ್ ನಲ್ಲಿ ವಿವಾಹವಾಗಿದ್ದರು. ಮದುವೆಯಾದ ಕೆಲವೇ ದಿನಗಳಿಂದ ಪತಿ ಅಶೋಕ್ ಪತ್ನಿ ಮಾಲಾಶ್ರೀಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ಪೋಷಕರು ಆರೋಪಿಸಿದ್ದಾರೆ.

ಮಾಲಾಶ್ರೀಯವರು ತಮ್ಮ ತವರು ಮನೆಯವರೊಂದಿಗೆ ಮಾತನಾಡಲು ಬಿಡದೆ ಅಶೋಕ್ ಕಿರುಕುಳ ನೀಡುತ್ತಿದ್ದ. ತವರು ಮನೆಗೆ ಹೋದರೂ, ಜೊತೆಯಲ್ಲಿಯೇ ಬಂದು ತಕ್ಷಣ ವಾಪಸ್ ಕರೆದುಕೊಂಡು ಹೋಗುತ್ತಿದ್ದ. ಗಂಡ ಮತ್ತು ಅತ್ತೆ ನೀಡುತ್ತಿದ್ದ ಕಿರುಕುಳದ ಕುರಿತು ಮಾಲಾಶ್ರೀ ಅವರು ತಮ್ಮ ಸಂಬಂಧಿಕರಿಗೆ ತಿಳಿಸಿದ್ದರು ಎನ್ನಲಾಗಿದೆ. ಕಿರುಕುಳಕ್ಕೆ ಬೇಸತ್ತು ಮಾಲಾಶ್ರೀ ಅ. 19 ರಂದು ವಿಷ ಸೇವಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಪತಿ ಅಶೋಕ್ ಅಂದೇ ಮಾಲಾಶ್ರೀಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ, ಪತ್ನಿ ವಿಷ ಸೇವಿಸಿರುವ ವಿಷಯವನ್ನು ಆಶೋಕ್, ಮಾಲಾಶ್ರೀಯ ಕುಟುಂಬಸ್ಥರಿಂದ 3 ದಿನಗಳ ಕಾಲ ಮುಚ್ಚಿಟ್ಟಿದ್ದ. ವಾಂತಿ-ಬೇಧಿ  ಕಾರಣ ಆಸ್ಪತ್ರೆಗೆ ಸೇರಿಸಿದ್ದಾಗಿ ಆಶೋಕ್ ಹೇಳಿದ್ದ ಎನ್ನಲಾಗಿದೆ.

ತಮ್ಮ ಮಗಳ ಸಾವಿಗೆ ಪತಿ ಅಶೋಕ್ ಮತ್ತು ಅತ್ತೆ ನೀಲಮ್ಮ ಅವರೇ ಕಾರಣ ಎಂದು ಮಾಲಾಶ್ರೀ ಕುಟುಂಬಸ್ಥರು ಆರೋಪಿಸಿ ಕುಂಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇರೆಗೆ ಅಶೋಕ್ ಮತ್ತು ಅತ್ತೆ ನೀಲಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ, ಕುಂಸಿ ಠಾಣೆಯ ಪೊಲೀಸರು ಪತಿ ಅಶೋಕ್‌ನನ್ನು ವಶಕ್ಕೆ ಪಡೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News